ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ (ದೌರ್ಜನ್ಯ ಪ್ರತಿಬಂಧ) ಸಮಿತಿ ಸಭೆ.ಪ.ಜಾತಿ ಮತ್ತು ವರ್ಗದವರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ-ಪರಿಹಾರಕ್ಕೆ ಡಿಸಿ ಸೂಚನೆ

0
79

ಶಿವಮೊಗ್ಗ, ಅಕ್ಟೋಬರ್ 28 : ಪರಿಶಿಷ್ಟ ಜಾತಿ ಹಾಗೂ ವರ್ಗದವರ ಸವಲತ್ತುಗಳು ಮತ್ತು ಯಾವುದೇ ರೀತಿಯ ಸಮಸ್ಯೆಗಳಿಗೆ ಸಂಬಂಧಿತ ಇಲಾಖೆಗಳು ತ್ವರಿತವಾಗಿ ಸ್ಪಂದಿಸಿ, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು.
ಅ.27 ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ(ದೌರ್ಜನ್ಯ ಪ್ರತಿಬಂಧ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೂಡ ನಿಯಮಾನುಸಾರವಾಗಿ ನಿಗದಿತ ಅವಧಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ಪರಿಹಾರ ನೀಡಬೇಕೆಂದರು.
ಕಳೆದ ಸಮಿತಿ ಸಭೆಯ ಅನುಪಾಲನಾ ವರದಿ ಚರ್ಚೆ ವೇಳೆ ಅವರು ಮಾತನಾಡಿ ಜುಲೈ ನಲ್ಲಿ ನಡೆದ ಸಭೆಯಲ್ಲಿ ಸಮಿತಿ ಸದಸ್ಯರು ಸಭೆಯ ಗಮನಕ್ಕೆ ತಂದ ಪರಿಶಿಷ್ಟ ಜಾತಿ, ವರ್ಗದವರ ಸಮಸ್ಯೆಗಳು, ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ವಹಿಸಲಾಗಿದ್ದು, ಕೆಲವು ಪ್ರಕರಣಗಳು ಚಾರ್ಚ್‍ಶೀಟ್, ತನಿಖೆ ಹಂತದಲ್ಲಿವೆ ಎಂದರು.
ಸಮಿತಿ ಸದಸ್ಯರಾದ ಜಗದೀಶ್‍ರವರು ಮಾತನಾಡಿ, ಶಿವಮೊಗ್ಗ ತಾಲ್ಲೂಕು ಹಸೂಡಿ ಗ್ರಾಮದಲ್ಲಿ ಸ್ಮಶಾನ ಭೂಮಿಗಾಗಿ ಕಳೆದ ಸಭೆಯಲ್ಲಿ ಮನವಿ ಮಾಡಲಾಗಿದ್ದು, ಅಲ್ಲಿ ಸೂಕ್ತ ಸರ್ಕಾರಿ ಜಮೀನು ಇಲ್ಲವಾಗಿದ್ದು ಖಾಸಗಿ ಜಮೀನನ್ನು ಸ್ಮಶಾನದ ಉದ್ದೇಶಕ್ಕೆ ಕ್ರಮಕ್ಕೆ ನೀಡಲು ಮುಂದೆ ಬಂದಲ್ಲಿ ಕ್ರಮ ವಹಿಸಲಾಗುವುದು ಎಂದು ತಹಶೀಲ್ದಾರರು ತಿಳಿಸಿದ್ದಾರೆ. ಆದರೆ ಹಸೂಡಿ ಗ್ರಾಮದಿಂದ 2 ಕಿ.ಮೀ ದೂರದಲ್ಲಿ ಗ್ರಾಮಾಠಾಣಾ ಇದ್ದು ಅದನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಅದನ್ನು ತೆರವುಗೊಳಿಸಿ ಸ್ಮಶಾನದ ಉದ್ದೇಶಕ್ಕಾಗಿ ನೀಡುವಂತೆ ಮನವಿ ಮಾಡಿದರು.
ಹಾಗೂ ಸರ್ಕಾರದಿಂದ ನಿರ್ಮಾಣವಾಗುತ್ತಿರುವ ವಸತಿ ಯೋಜನೆಗಳಿಗೆ, ಜನಸಾಮಾನ್ಯರಿಗೆ ಮರಳು ಕೊರತೆಯಾಗುತ್ತಿದೆ. ಈ ಬಗ್ಗೆ ಜಿ.ಪಂ ಸಿಇಓ ಮತ್ತು ಡಿಸಿ ಯವರು ಪರಿಶೀಲನೆ ನಡೆಸಿ ಮರಳು ಲಭಿಸುವಂತೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಕೋವಿಡ್ 19 ರಿಂದ ಮೃತಪಟ್ಟ ಪರಿಶಿಷ್ಟ ಜಾತಿ ಹಾಗೂ ವರ್ಗದ ಕುಟುಂಬದ ಅವಲಂಬಿತರಿಗೆ ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ವತಿಯಿಂದ ಸಹಾಯಧನಕ್ಕಾಗಿ ಹಲವು ಅರ್ಜಿಗಳನ್ನು ನಿಗಮಕ್ಕೆ ಕಳುಹಿಸಿದ್ದೇವೆ. ಇದೀಗ ಹರಮಘಟ್ಟ, ಬೀರನಹಳ್ಳಿ ಹಸೂಡಿಯ ವೀರಭದ್ರ ಕಾಲೋನಿಯ ಸಂತ್ರಸ್ತರಿಗೆ ಸಂಬಂಧಿಸಿದ ಅರ್ಜಿಗಳನ್ನು ನೀಡಿದ್ದು ಶೀಘ್ರವಾಗಿ ವಿಲೇ ಮಾಡುವಂತೆ ಹಾಗೂ ಶಿವಮೊಗ್ಗ ತಾಲ್ಲೂಕಿನ ಸದಾಶಿವಪುರ ಹಕ್ಕಿಪಿಕ್ಕಿ ಕ್ಯಾಂಪ್ ಬುಡಕಟ್ಟು ಸಮುದಾಯದವರಿಗೆ ವಸತಿ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಹಸೂಡಿ ಗ್ರಾಮ ಸ್ಮಶಾನಕ್ಕಾಗಿ ಗ್ರಾಮಠಾಣಾ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ವಹಿಸಲಾಗುವುದು. ಮರಳು ನೀಡಲು ನಿರಾಕರಿಸುತ್ತಿರುವ ಬಗ್ಗೆ ನಿಖರವಾಗಿ ತಿಳಿಸಿದಲ್ಲ್ಲಿ ಕ್ರಮ ವಹಿಸಲಾಗುವುದು ಎಂದ ಅವರು ಅಂಬೇಡ್ಕರ್ ನಿಗಮದಡಿ ಅರ್ಜಿಗಳನ್ನು ಶೀಘ್ರ ವಿಲೇವಾರಿಗೆ ಅಧಿಕಾರಿಗೆ ಸೂಚಿಸಿದ ಅವರು ಹಕ್ಕಿಪಿಕ್ಕಿ ವಸತಿ ಸೌಕರ್ಯದ ಬಗ್ಗೆ ಕೂಡ ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದರು.
ಶಿಕಾರಿಪುರ ತಾಲ್ಲೂಕು ಉಡುಗಣಿ ಗ್ರಾಮದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಭೂಮಿ ಮಂಜೂರು ಮಾಡಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಪ.ಜಾತಿಗೆ ಸರಿದ ರೈತರ ಅಡಿಕೆ ಮತ್ತು ಬಾಳೆ ಗಿಡಗಳನ್ನು ಕಿತ್ತುಹಾಕಿರುವ ಬಗ್ಗೆ ಜಗದೀಶ್‍ರವರ ಪ್ರಸ್ತಾಪದ ಬಗ್ಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಅಲ್ಲಿ ಸರ್ವೇ ಕಾರ್ಯ ನಡೆಯಬೇಕಿದೆ. ಸರ್ವೇ ವರದಿ ಬಂದ ನಂತರ ಈ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಸಮಿತಿ ಸದಸ್ಯರಾದ ನಾಗರಾಜ್ ಮಾತನಾಡಿ, ಶಿವಮೊಗ್ಗ ತಾಲ್ಲೂಕು ಮಂಜರಿಕೊಪ್ಪ ಸಿರಿಗೆರೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಕೊರಮ ಜನಾಂಗಕ್ಕೆ ಸೇರಿದ ಪರುಶುರಾಮ್ ಎಂಬವವರಿಗೆ ವಿದ್ಯುತ್ ಸಂಪರ್ಕ ನೀಡಲು ಪಿಡಿಓ ಅಧಿಕಾರಿಗಳು ನಿರಾಕ್ಷೇಪಣಾ ಪತ್ರ ನೀಡಿರುವುದಿಲ್ಲ. ಅಕ್ಕಪಕ್ಕದವರಿಗೆ ನೀಡಿದ್ದು ಇವರಿಗೆ ಸಹ ನೀಡಲು ಕ್ರಮ ವಹಿಸುವಂತೆ ಆಗ್ರಹಿಸಿದರು. ಜಿ.ಪಂ ಸಿಇಓ, ಈ ಕುರಿತು ತಾವೇ ಖುದ್ದು ಪರಿಶೀಲಿಸಿ ಸೂಕ್ತ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕುಗಳಲ್ಲಿ ಪರಿಶಿಷ್ಟ ಜಾತಿ ಅಲ್ಲದವರು ನಕಲಿ ದಾಖಲಿ ಸೃಷ್ಟಿಸಿ ಪ.ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಕಂಡು ಬಂದಿದ್ದು ಈ ಬಗ್ಗೆ ಶಿಸ್ತಿನ ಕ್ರಮ ಜರುಗಿಸಬೇಕು. ಹಾಗೂ ಭದ್ರಾವತಿ ತಾಲ್ಲೂಕಿನ ಕಲ್ಲೇಪುರದಲ್ಲಿ ಆರ್‍ಎಫ್‍ಓ ಗಳು ಜಮೀನಿಗೆ ಸಂಬಂಧಿಸಿದಂತೆ ದಲಿತರ ಮೇಲೆ ಎಫ್‍ಐಆರ್ ದಾಖಲಿಸಿದ್ದು, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ದಲಿತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ನಾಗರಾಜ್ ಆಗ್ರಹಿಸಿದರು.
ಸಮಿತಿ ಸದಸ್ಯರೋರ್ವರು ಸೊರಬ ತಾಲ್ಲೂಕಿನ ಬೆನ್ನೂರೂ ಗ್ರಾ.ಪಂ ಯಲ್ಲಿ ಗೋಮಾಳ ಇದ್ದು ಇಲ್ಲಿ ಸ್ಮಶಾನಕ್ಕೆ ಅವಕಾಶ ಮಾಡಿಕೊಡಬೇಕೆಂದು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಗೋಮಾಳವನ್ನು ಸ್ಮಶಾನ ಜಾಗಕ್ಕೆ ನೀಡಲಾಗುವುದು. ಹಾಗೂ ಪ.ಜಾತಿ ಮತ್ತು ವರ್ಗದ ಜನರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಎಲ್ಲ ಅಗತ್ಯ ಕ್ರಮ ವಹಿಸುತ್ತಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್, 2021 ರಲ್ಲಿ ಒಟ್ಟು 63 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 6 ಬಿ ರಿಪೋರ್ಟ್ ಆಗಿದ್ದು, 35 ಪ್ರಕರಣಗಳು ಛಾರ್ಜ್‍ಶೀಟ್ ಆಗಿವೆ. ಈ ವರ್ಷ 36 ಪ್ರಕರಣಗಳಿಗೆ ಪರಿಹಾರ ಒಟ್ಟು ರೂ.44.42 ಲಕ್ಷ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಎಡಿಸಿ ನಾಗೇಂದ್ರ ಹೊನ್ನಳ್ಳಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಅಜ್ಜಪ್ಪ, ಜಾಗೃತಿ ಮತ್ತು ಉಸ್ತುವಾರಿ(ದೌರ್ಜನ್ಯ ಪ್ರತಿಬಂಧ) ಸಮಿತಿ ಸದಸ್ಯರಾದ ಬಸವರಾಜ್, ನಾಗರಾಜ್, ನಾಮನಿರ್ದೇಶಿತ ಸದಸ್ಯರಾದ ಮಲ್ಲೇಶ್, ಕಿರಣ್‍ಕುಮಾರ್ ಇತರೆ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here