ಎಸ್ ಡಿ ಎಂ ಕೋವಿಡ್ ನಿಯಂತ್ರಣಕ್ಕೆ ಕಂಟೇನ್‌ಮೆಂಟ್ ವಲಯದಲ್ಲಿ ಇನ್ನಷ್ಟು ಬಿಗಿ ಕ್ರಮ,ಓಪಿಡಿ ಸೇವೆಗಳ ಸ್ಥಗಿತತೆ ಮುಂದುವರಿಕೆ.

0
112

ಧಾರವಾಡ: ನ.27: ಇಲ್ಲಿನ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಹರಡಿರುವ ಕೋವಿಡ್ ಸೋಂಕನ್ನು ಆ ವಲಯದಲ್ಲಿಯೇ ನಿಯಂತ್ರಿಸಲು ಕಂಟೇನ್‌ಮೆಂಟ್ ವಲಯದಲ್ಲಿ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಜೊತೆಗೆ ಎರಡನೇ ಡೋಸ್ ಲಸಿಕಾಕರಣ ಕಾರ್ಯ ಚುರುಕುಗೊಳಿಸಲಾಗುತ್ತಿದೆ,ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಹೇಳಿದರು.

ಮುಖ್ಯಮಂತ್ರಿಗಳ ವಿಡಿಯೋ ಸಂವಾದ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ತಮ್ಮ ಕಚೇರಿಯಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು,

ಮುಖ್ಯಮಂತ್ರಿಯವರು ಇಂದು ಧಾರವಾಡ,ದಕ್ಷಿಣ ಕನ್ನಡ,ಮೈಸೂರು,ಚಾಮರಾಜನಗರ,ಕೊಡಗು ಮತ್ತಿತರ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿ, ಕೋವಿಡ್ ನಿಯಂತ್ರಣ ಹಾಗೂ ಲಸಿಕಾಕರಣ ಹೆಚ್ಚಳಕ್ಕೆ ಹಲವು ಸೂಚನೆಗಳನ್ನು ನೀಡಿದ್ದಾರೆ. ಸತ್ತೂರಿನ ಎಸ್ ಡಿ ಎಂ ವೈದ್ಯಕೀಯ ಕಾಲೇಜಿನಲ್ಲಿ ಹರಡಿರುವ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಅವರಿಗೆ ವಿವರವಾದ ಮಾಹಿತಿ ನೀಡಲಾಗಿದೆ.

ಕಂಟೇನ್‌ಮೆಂಟ್ ವಲಯದಲ್ಲಿ ಕೋವಿಡ್ ತಪಾಸಣೆ ಹೆಚ್ಚಿಸಲಾಗುವುದು. ಎಸ್ ಡಿ ಎಂ ಆಸ್ಪತ್ರೆಯ ಹೊರರೋಗಿಗಳ ವಿಭಾಗದ ಸೇವೆಗಳ ಸ್ಥಗಿತತೆ,ಸಾರ್ವಜನಿಕರ ಪ್ರವೇಶ ನಿರ್ಬಂಧ ಮುಂದುವರೆಸಲಾಗುವುದು ಎಂದರು.

ಜಿಲ್ಲೆಯಲ್ಲಿ ಮದುವೆ ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ಕೈಬಿಡಲು ಸಾರ್ವಜನಿಕರಿಗೆ ಸಲಹೆ ನೀಡಲಾಗುತ್ತಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸುವ ಹೊಸ ಮಾರ್ಗಸೂಚಿಗಳು,ನಿರ್ದೇಶನಗಳನ್ನು ಜಾರಿಗೊಳಿಸಲಾಗುವುದು‌.ಕೋವಿಡ್ ನಿರೋಧಕ ಲಸಿಕೆಯ ಎರಡನೇ ಡೋಸ್ ಬಾಕಿ ಇರುವವರಿಗೆ ಎಸ್ ಎಂ ಎಸ್ ಮೂಲಕ ಮಾಹಿತಿ ನೀಡಿ,ಲಸಿಕೆ ಪಡೆಯಲು ಸೂಚಿಸಲಾಗುತ್ತಿದೆ ಎಂದರು.

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್, ಜಿಲ್ಲಾ ಪಂಚಾಯತ್ ಸಿಇಓ ಡಾ.ಬಿ.ಸುಶೀಲ,ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ,ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ್ ಮದೀನಕರ್, ಜಿಲ್ಲಾ ಸಮೀಕ್ಷಣಾಧಿಕಾರಿ (dist survelleince officer) ಡಾ.ಸುಜಾತಾ ಹಸವಿಮಠ, ಡಾ.ಲಕ್ಷ್ಮೀಕಾಂತ ಲೋಕರೆ,ಡಾ.ಎಸ್.ಎಂ.ಹೊನಕೇರಿ,
ಡಾ.ಶಶಿ ಪಾಟೀಲ ಸೇರಿದಂತೆ ಜಿಲ್ಲೆಯ ತಹಸೀಲ್ದಾರರು ,ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here