ಉಪನೋಂದಣಾಧಿಕಾರಿಗಳ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ: ಕಾರ್ಯನಿರ್ವಹಣೆ ಪರಿಶೀಲನೆ ಸಾರ್ವಜನಿಕ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಸೂಚನೆ

0
83

ಧಾರವಾಡ : ಫೆ.24; ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಗೆ ಜಿಲ್ಲಾಧಿಕಾರಿಗಳಾದ ನಿತೇಶ್ ಕೆ.ಪಾಟೀಲ ಅವರು ಇಂದು ಬೆಳಿಗ್ಗೆ ಆಕಸ್ಮಿಕವಾಗಿ ಭೇಟಿ ನೀಡಿ ಕಚೇರಿಯ ಕಾರ್ಯನಿರ್ವಹಣೆ ಪರಿಶೀಲಿಸಿ, ಸಾರ್ವಜನಿಕ ಸ್ನೇಹಿಯಾದ ವಾತಾವರಣ ನಿರ್ಮಿಸಲು ಸೂಚಿಸಿದರು.

ಮಿನಿವಿಧಾನಸೌಧದ ನೆಲಮಹಡಿಯಲ್ಲಿ ನೋಂದಣಾಧಿಕಾರಿಗಳ ಕಚೇರಿಗೆ ಆಗಮಿಸಿ, ನೋಂದಣಿ ಸರದಿಯ ಟೋಕನ್ ಪಡೆದಿರುವ ಸಾರ್ವಜನಿಕರಿಗಾಗಿ ಕಲ್ಪಿಸಿರುವ ಆಸನ ವ್ಯವಸ್ಥೆಗಳನ್ನು ವೀಕ್ಷಿಸಿ, ಸ್ಥಳದಲ್ಲಿದ್ದ ಜನರೊಂದಿಗೆ ಮಾತನಾಡಿ ಅವರು ಬಂದಿರುವ ಕಾರ್ಯದ ಕಾರಣ, ಕಚೇರಿಯಿಂದ ಅವರಿಗೆ ದೊರೆತಿರುವ ಸ್ಪಂದನೆಯ ಕುರಿತು ಮಾಹಿತಿ ಪಡೆದರು.

ಮೊದಲ ಮಹಡಿಯಲ್ಲಿರುವ ಕಚೇರಿಗೆ ಪ್ರವೇಶಿಸಿದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಅವರ ಕಾರ್ಯವಿಧಾನಗಳ ವಿವರ ಪಡೆದರು. ನೋಂದಣಿಗೆ ಆಗಮಿಸುವ ಸಾರ್ವಜನಿಕರು, ಜನಸಾಮಾನ್ಯರಿಗೆ ಸುಲಭವಾಗಿ, ಸರಳವಾಗಿ ಮಾರ್ಗದರ್ಶನ ನೀಡುವ ಏರ್ಪಾಡುಗಳನ್ನು ಮಾಡಬೇಕು. ನೋಂದಣಿಗೆ ಅಗತ್ಯವಿರುವ ದಾಖಲೆಗಳ ಮಾಹಿತಿಯ ಫಲಕಗಳನ್ನು ಅಲ್ಲಲ್ಲಿ ಅಳವಡಿಸಬೇಕು. ಸಾರ್ವಜನಿಕರಿಂದ ದಾಖಲೆಗಳನ್ನು ಸ್ವೀಕರಿಸಿ, ಪರಿಶೀಲಿಸುವ ಕೌಂಟರನ್ನು ಕಚೇರಿಯ ಕಿಟಕಿ ಬಳಿಯೇ ತೆರೆಯಬೇಕು. ಸರದಿ ಅನುಸಾರ ಬರಲು ಅಲ್ಲಿಯೂ ಕ್ರಮವಾಗಿ ಟೋಕನ್‍ಗಳನ್ನು ನೀಡಬೇಕು. ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ನೋಂದಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಒದಗಿಸಲು ಸೂಚಿಸಿದರು.

ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಮಾರ್ಟ್‍ಗೇಜ್ ನೋಂದಣಿ ಕಾರ್ಯಕ್ಕೆ ಆಗಮಿಸಿದ್ದ ಬಸವರಾಜ ಕುಂದಗೋಳ ಎಂಬುವರ ದಾಖಲೆಗಳನ್ನು ತಮ್ಮ ಸಮ್ಮುಖದಲ್ಲಿಯೇ ಪರಿಶೀಲಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು ಸ್ವತಃ ನೋಂದಣಿ ಟೋಕನ್
ವಿತರಿಸಿದ್ದು ವಿಶೇಷವಾಗಿತ್ತು.

ನಿಯಮಿತವಾಗಿ ವಿವಿಧ ಇಲಾಖೆಗಳ ಕಚೇರಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ನೋಂದಣಿ ಕಚೇರಿಗೆ ಇನ್ನಷ್ಟು ವಿಶಾಲವಾದ ಸ್ಥಳಾವಕಾಶ ಕಲ್ಪಿಸಲು ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್, ಜಿಲ್ಲಾ ನೋಂದಣಾಧಿಕಾರಿ ಕೆ.ಅಶೋಕ, ತಹಸೀಲ್ದಾರ ಡಾ.ಸಂತೋಷಕುಮಾರ ಬಿರಾದಾರ ಉಪನೋಂದಣಾಧಿಕಾರಿ ಜಿ.ಐ.ಅರಮನಿ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here