ಚಳಿಗಾಲ ಅಧಿವೇಶನ; ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಸಭೆ, ಕಾಲಮಿತಿಯಲ್ಲಿ ಸಿದ್ಧತೆ ಪೂರ್ಣಗೊಳಿಸಲು ಸೂಚನೆ

0
103

ಬೆಳಗಾವಿ, ನ.27: ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಮಂಡಳದ ಚಳಿಗಾಲ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ವಸತಿ, ಊಟೋಪಹಾರ ಹಾಗೂ ಸಾರಿಗೆ ಮತ್ತಿತರ ವ್ಯವಸ್ಥೆಯನ್ನು ನಿಗದಿತ ಸಮಯದಲ್ಲಿ ಸಮರ್ಪಕವಾಗಿ ಮಾಡಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್ ಸೂಚನೆ ನೀಡಿದರು.

ಅಧಿವೇಶನದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ನ.27) ನಡೆದ ಪೂರ್ವಸಿದ್ಧತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಧಿವೇಶನದಲ್ಲಿ ಭಾಗವಹಿಸುವ ಎಲ್ಲ ಸಚಿವರು, ಉನ್ನತ ಅಧಿಕಾರಿಗಳಿಗೆ ಶಿಷ್ಟಾಚಾರದ ಪ್ರಕಾರ ಅವರಿಗೆ ವಸತಿ ಹಾಗೂ ವಾಹನ ವ್ಯವಸ್ಥೆಯನ್ನು ಮಾಡಬೇಕು.
ಸುವರ್ಣ ಗಾರ್ಡನ್ ಮತ್ತಿತರ ಕಡೆಗಳಲ್ಲಿ ನಿಗದಿಪಡಿಸಲಾಗಿರುವ ಪ್ರತಿಭಟನಾ ಸ್ಥಳದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಬೇಕು.

ಪ್ರತಿಭಟನೆ ವೇಳೆ ಹೆದ್ದಾರಿಯಲ್ಲಿ ರಸ್ತೆತಡೆಯಾದರೆ ಸಂಚಾರ ಅಸ್ತವ್ಯಸ್ತವಾಗಲಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಮುಂಚಿತವಾಗಿಯೇ ಮಾಹಿತಿಯನ್ನು ಸಂಗ್ರಹಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರೇಕ್ಷಕರ ಗ್ಯಾಲರಿಯಲ್ಲಿ ಸಾರ್ವಜನಿಕರಿಗೆ ಯಾವ ರೀತಿ ಅವಕಾಶ ಕಲ್ಪಿಸಬಹುದು ಮತ್ತು ಕೋವಿಡ್ ಮಾರ್ಗಸೂಚಿ ಪಾಲಿಸುವುದಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನಸಭಾ ಅಧ್ಯಕ್ಷರು ಹಾಗೂ ಮಾನ್ಯ ಸಭಾಪತಿಯವರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಅತೀಕ್ ತಿಳಿಸಿದರು.
ಸುವರ್ಣ ವಿಧಾನಸೌಧದಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಪರಿಶೀಲಿಸಬೇಕು. ಪ್ರತಿಯೊಂದು ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಬೇಕು.

ಇ-ಆಫೀಸ್; ಮೂಲಸೌಕರ್ಯ ‌ಒದಗಿಸಲು ನಿರ್ದೇಶನ:

ಬೆಂಗಳೂರಿನ ವಿಧಾನಸೌಧದಲ್ಲಿ ಸಂಪೂರ್ಣ ಇ-ಆಫೀಸ್ ವ್ಯವಸ್ಥೆ ಜಾರಿಯಲ್ಲಿದೆ. ಆದ್ದರಿಂದ ಅಧಿವೇಶನ ವೇಳೆ ಸುವರ್ಣ ವಿಧಾನಸೌಧದಲ್ಲಿ ಕೂಡ ಇ-ಆಫೀಸ್ ಕಾರ್ಯನಿರ್ವಹಣೆಗೆ ಅಗತ್ಯವಿರುವ ಕೆಸ್ವಾನ್, ಅಂತರ್ಜಾಲ ಸಂಪರ್ಕ, ಕಂಪ್ಯೂಟರ್ ಮತ್ತಿತರ ಅತ್ಯಾಧುನಿಕ ತಾಂತ್ರಿಕ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಅತೀಕ್ ನಿರ್ದೇಶನ ನೀಡಿದರು.

ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸಾರಿಗೆ, ವಸತಿ, ಊಟೋಪಹಾರ ಇತ್ಯಾದಿ ಸಮಿತಿಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದರು.

ಈ ಬಾರಿ ದೂರು ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ. ಸಾರ್ವಜನಿಕರ ಅಹವಾಲು ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದರು.

ಅಧಿವೇಶನ ಸಂದರ್ಭದಲ್ಲಿ ಭದ್ರತೆ ಮತ್ತು ಸಂಚಾರ ನಿರ್ವಹಣೆಗಾಗಿ ಐದು ಸಾವಿರಕ್ಕೂ ಅಧಿಕ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಇವರೆಲ್ಲರಿಗೂ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ ಎಂದು ಡಿಸಿಪಿ ಸ್ನೇಹ ಪಿ.ವಿ. ಅವರು ವಿವರಿಸಿದರು.

ಎಲ್ಲ ಸಿಬ್ಬಂದಿಗೆ ಪ್ರತ್ಯೇಕವಾಗಿ 14 ಕಡೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಇದಲ್ಲದೇ ತಾತ್ಕಾಲಿಕ ಟೌನ್ ಷಿಪ್ ಕೂಡ ‌ನಿರ್ಮಿಸಲಾಗುತ್ತಿದೆ. ಅಲ್ಲಿಯೇ ಊಟೋಪಹಾರ, ವಸತಿ, ಶೌಚಾಲಯ ಮತ್ತಿತರ ಮೂಲಸೌಕರ್ಯವನ್ನು ಒದಗಿಸಲಾಗುತ್ತಿದೆ ಎಂದು ವಿವರಿಸಿದರು.

ಅಧಿವೇಶನದ ವಿಶೇಷ ಅಧಿಕಾರಿಯಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಸುರೇಶ್ ಇಟ್ನಾಳ ಅವರು, ಮುಖ್ಯಮಂತ್ರಿಗಳು, ಸಭಾಧ್ಯಕ್ಷರು, ಸಭಾಪತಿ, ಸಚಿವರು, ಶಾಸಕರು, ಎಲ್ಲ ಗಣ್ಯರು ಮತ್ತು ಉನ್ನತ ಅಧಿಕಾರಿಗಳು, ಇಲಾಖೆಯ ಮುಖ್ಯಸ್ಥರುಗಳು ಸೇರಿದಂತೆ ಎಲ್ಲರಿಗೂ ಶಿಷ್ಟಾಚಾರದ ಪ್ರಕಾರ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಊಟ, ವಸತಿ, ಸಾರಿಗೆ ಮತ್ತಿತರರ ಸಮಿತಿಗಳು ಉಸ್ತುವಾರಿ ವಹಿಸಲಿವೆ ಎಂದರು.

ಆಹಾರ ಸಮಿತಿಯ ಉಸ್ತುವಾರಿ ಅಧಿಕಾಯಾಗಿರುವ ಕಾಡಾ ಆಡಳಿತಾಧಿಕಾರಿ ಅಧಿಕಾರಿ ಶಶಿಧರ್ ಕುರೇರ್, ಸುವರ್ಣ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಹಾಗೂ ನೆಲಮಹಡಿಯಲ್ಲಿ ಪ್ರತಿಸಲದಂತೆ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಮೆನು ಹಾಗೂ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ವಸತಿ ಸಮಿತಿಯ ಉಸ್ತುವಾರಿ ಅಧಿಕಾರಿಯಾಗಿರುವ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ್ ಘಾಳಿ, ಈಗಾಗಲೇ ನಗರದಲ್ಲಿ ಇರುವ ಎಲ್ಲ ಹೋಟೆಲ್ ಹಾಗೂ ವಸತಿಗೃಹಗಳ ಮಾಲೀಕರ ಸಭೆಯನ್ನು ನಡೆಸಲಾಗಿದೆ ಎಂದು ತಿಳಿಸಿದರು.

ತುರ್ತು ಚಿಕಿತ್ಸೆಗೆ ವೈದ್ಯಕೀಯ ತಂಡ ನಿಯೋಜನೆ:

ಅಧಿವೇಶನ ನಡೆಯುವ ಅವಧಿಯಲ್ಲಿ ತುರ್ತು ಚಿಕಿತ್ಸೆ ಒದಗಿಸಲು ವೈದ್ಯಕೀಯ ತಂಡಗಳು, ಆ್ಯಂಬ್ಯುಲೆನ್ಸ್ ಮತ್ತಿತರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ತಿಳಿಸಿದರು.
ಇದಲ್ಲದೇ ಕೋವಿಡ್ ಹಿನ್ನೆಲೆಯಲ್ಲಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಮಾಸ್ಕ್, ಸ್ಯಾನಿಟೈಸರ್ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಬೇರೆ ಬೇರೆ ಜಿಲ್ಲೆಗಳಿಂದ ಸರಕಾರಿ ಕಚೇರಿಯ ವಾಹನಗಳನ್ನು ಬಳಸಿಕೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗ್ದುಮ್ ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಅಪರ ಜಿಲ್ಲಾಧಿಕಾರಿ ಡಾ.ಶಂಕರಪ್ಪ ವಣಕ್ಯಾಳ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಅಪರ ಪ್ರಾದೇಶಿಕ ಆಯುಕ್ತರಾದ ಗೀತಾ ಕೌಲಗಿ, ಬುಡಾ ಆಯುಕ್ತ ಪ್ರೀತಂ‌ ನಸಲಾಪುರೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ‌ ನಿರ್ದೇಶಕ ಸಿ.ಬಿ.ಕೊಡ್ಲಿ ಸೇರಿದಂತೆ ಎಲ್ಲ ಉಪ ಸಮಿತಿಯ ಉಸ್ತುವಾರಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here