ಆಯ್ದ ಪಾರಂಪರಿಕ ಕಟ್ಟಡಗಳಿಗೆ ವಿಶೇಷ ದೀಪಾಲಂಕಾರ: ದೀಪಾಲಂಕಾರದಲ್ಲಿ ಬಳ್ಳಾರಿ ಅಂಚೆ ಅಧೀಕ್ಷಕರ ಕಾರ್ಯಾಲಯ ಝಗಮಗ!

0
97

ಬಳ್ಳಾರಿ,ಜ.25 :ಭಾರತ ಸ್ವಾತಂತ್ರ‍್ಯ ಅಮೃತ ಮಹೋತ್ಸವ ನಿಮಿತ್ತ ದೇಶಾದ್ಯಂತ ಆಯ್ದ ಪಾರಂಪರಿಕ ಕಟ್ಟಡಗಳನ್ನು ಗಣ ರಾಜ್ಯೋತ್ಸವದ ಸಂದರ್ಭದಲ್ಲಿ ವಿಶೇಷವಾಗಿ ದೀಪಾಲಂಕಾರ ಮಾಡಲು ಹಾಗೂ ಕಟ್ಟಡದ ಮೆರುಗನ್ನು ಡ್ರೋಣ್ ಕ್ಯಾಮೆರಾ ಬಳಸಿ ಸೆರೆಹಿಡಿಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಸಂಬಂದ ಬಳ್ಳಾರಿಯ ಕೋಟೆ ಪ್ರದೇಶದಲ್ಲಿ ವಿಶ್ವ ಪ್ರಸಿದ್ಧ ಏಕಶಿಲಾ ಬೆಟ್ಟದ ಪಾದದಲ್ಲಿರುವ ಅಂಚೆ ಅಧೀಕ್ಷಕರ ಕಾರ್ಯಾಲಯವನ್ನು ದೀಪಾಲಂಕಾರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಈ ಕಟ್ಟಡವು ಸುಮಾರು ಕ್ರಿಸ್ತಶಕೆ 1870ರಲ್ಲಿ ನಿರ್ಮಾಣಗೊಂಡಿರಬಹುದೆಂದು ಅಂದಾಜಿಸಲಾಗಿದ್ದು, ಈ ಕಟ್ಟಡವು ಪ್ರಾರಂಭಿಕ ಸಮಯದ ವಸಾಹತುಶಾಹಿ ವಾಸ್ತುಶಿಲ್ಪದ ಕಟ್ಟಡ ನಿರ್ಮಾಣ ಶೈಲಿಯ ಉತ್ತಮ ಉದಾಹರಣೆಯಾಗಿದೆ, ಒಟ್ಟು ಮೂವತ್ತು ಕಮಾನುಗಳಿರುವ ಈ ಕಟ್ಟಡಕ್ಕೆ ಒಂದೇ ಒಂದು ಆಧಾರ ಸ್ಥಂಬವೂ ಇಲ್ಲವೆಂಬುದು ಅಚ್ಚರಿಯೇ ಸರಿ. ಈ ಕಟ್ಟಡ ಬ್ರಿಟಿಷರ ಆಡಳಿತಾವಧಿಯಿಂದಲೂ ಅಂಚೆ ಕಛೇರಿಗಾಗಿ ಬಳಸಲ್ಪಟ್ಟಿದ್ದು, ಕಳೆದ ದಶಕದಲ್ಲಿ ಪುನರ್ ನವೀಕರಣಗೊಂಡಿದೆ. ಈ ಕಟ್ಟಡದ ಮೇಲಿರುವ ಧ್ವಜ ಸ್ಥಂಭ ಮೊದಲು ಬ್ರಿಟಿಷರ ಧ್ವಜಕ್ಕಾಗಿ ನಿರ್ಮಿಸಲಾಗಿದ್ದು ಈಗ ವರ್ಷಕ್ಕೆರಡು ಬಾರಿ ಭಾರತೀಯ ತ್ರಿವರ್ಣಧ್ವಜ ಹಾರಾಡುತ್ತದೆಂಬುದು ಹೆಮ್ಮೆಯ ವಿಷಯ.
ಈ ಕಟ್ಟಡದ ಅಂದಕ್ಕೆ ಕುಂದಣವಿಟ್ಟAತೆ ಜ.22ರಿಂದ ಜ.27ವರೆಗೆ ದೀಪಾಲಂಕಾರ ಮಾಡಲಾಗಿರುತ್ತದೆ. ಸಾರ್ವಜನಿಕರು ಬಳ್ಳಾರಿ ನಗರ ಪ್ರದೇಶದಲ್ಲಿರುವ ಈ ಅಪರೂಪದ ಕಟ್ಟಡದ ಸೌಂದರ್ಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ ವೇಳೆಯಲ್ಲಿ ವೀಕ್ಷಿಸಬೇಕು ಎಂದು ಅಂಚೆ ಅಧೀಕ್ಷಕ ಚಿದಾನಂದ ಕೋರಿದ್ದಾರೆ.

LEAVE A REPLY

Please enter your comment!
Please enter your name here