ಅವೈಜ್ಞಾನಿಕ ಆಚರಣೆಗಳಿಂದ ಹೊರಬಂದು ವೈಚಾರಿಕ ಮನೋಭಾವ ಮೂಡಿಸಿಕೊಳ್ಳಿ

0
55

ಅಜ್ಞಾನ ಹಾಗೂ ಅವೈಜ್ಞಾನಿಕ ಆಚರಣೆಗಳಿಂದ ಮುಕ್ತರಾಗಿ ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ನಿಜವಾದ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಸುಶೀಲನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕಿ, ಸಂಡೂರು ತಾಲೂಕು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷೆ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬಳ್ಳಾರಿಯ ಜಿಲ್ಲಾ ಸಂಯೋಜಕಿ ಎಚ್ ಡಿ ರಾಜೇಶ್ವರಿ ಅಭಿಪ್ರಾಯಪಟ್ಟರು.

ಸೋಮವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಶೀಲನಗರದಲ್ಲಿ ನಡೆದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ವತಿಯಿಂದ ನಡೆಸಲಾದ ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದ ಇವರು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ರಾಜ್ಯದಾದ್ಯಂತ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವ ಸಲುವಾಗಿ ಅನೇಕ ಕಾರ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು 2022-23 ನೇ ಸಾಲಿನಲ್ಲಿ ನಡೆಸಲಾದ
“ನೀರು, ನೈರ್ಮಲ್ಯ, ಆರೋಗ್ಯ ರಸಪ್ರಶ್ನೆ ಸ್ಪರ್ಧೆಯಲ್ಲಿ” ಸುಶೀಲ ನಗರ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಎಚ್.ಅಮೂಲ್ಯ ಪ್ರಥಮ ಬಹುಮಾನದೊಂದಿಗೆ ಎರಡು ಸಾವಿರ ರೂಪಾಯಿಗಳ ನಗದು ಬಹುಮಾನ ಹಾಗೂ ಇದೇ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಪವನ್ ನಾಯ್ಕ ದ್ವಿತೀಯ ಬಹುಮಾನದೊಂದಿಗೆ 1000 ರೂಪಾಯಿಗಳ ನಗದು ಬಹುಮಾನವನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ವತಿಯಿಂದ ಪಡೆದಿದ್ದು ಈ ಇಬ್ಬರು ವಿದ್ಯಾರ್ಥಿಗಳ ಸಾಧನೆ ಇತರರಿಗೂ ಮಾದರಿಯಾಗಿದ್ದು ಶಾಲೆಗೆ ಕೀರ್ತಿ ತಂದಿದೆ ಎಂದು ತಿಳಿಸಿದರು.

ಇದೇ ಆಗಸ್ಟ್ ತಿಂಗಳಿನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ಇತಿಹಾಸ- ಸಮಾಜ ವಿಜ್ಞಾನ ಕುರಿತು ಆನ್ಲೈನ್ ರಸಪ್ರಶ್ನೆ ಸ್ಪರ್ಧೆ ಇದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವಂತೆ ತಾಲೂಕಿನ ಶಾಲಾ ಮುಖ್ಯ ಗುರುಗಳು ಮತ್ತು ವಿಜ್ಞಾನ ಶಿಕ್ಷಕರು ಸಹಕರಿಸುವಂತೆ ಕೋರಿದರು…

ಇದೇ ಸಂದರ್ಭದಲ್ಲಿ ಸದರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಾಲೆಯ ಉಳಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಜು ನಾಯ್ಕ, ಪ್ರಭಾರಿ ಮುಖ್ಯಗುರುಗಳಾದ ಷಣ್ಮುಖಪ್ಪ, ಶಾಲೆಯ ಹಿರಿಯ ಶಿಕ್ಷಕರಾದ ಗಾಳೆಪ್ಪ,ಶಿಕ್ಷಕ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

LEAVE A REPLY

Please enter your comment!
Please enter your name here