ಹಂಪಿಯ ಚಕ್ರತೀರ್ಥದ ಕಡೆಗೆ ಕಂಪಿಲ ಸ್ವಾಮಿಯ ನಡಿಗೆ..

0
699

-ಲೇಖಕರು: ಡಾ.ಸಿ.ಬಿ.ಅನ್ನಪೂರ್ಣಜೋಗೇಶ್,
ಪ್ರಾಂಶುಪಾಲರು, ನ್ಯಾಷನಲ್ ಕಾಲೇಜು, ಬಸವನಗುಡಿ,ಬೆಂಗಳೂರು-೦೪.

ಜಗತ್ತಿನ ಬೇರೆ ಬೇರೆ ಭಾಗಗಳ ನಡುವೆ ಇರುವ ಎಲ್ಲಾ ಅಡೆತಡೆಗಳನ್ನು ದಾಟಿ ಇಡೀ ಭೂಗೋಳ ಒಂದೇ ಎಂದು ಸಾರುತ್ತಾ ‘ಜಾಗತೀಕರಣ’ದ ಹೆಸರಿನಲ್ಲಿ ಆಧುನಿಕ ಅವಿಷ್ಕಾರಗಳಿಗೆ ಇಡೀ ವಿಶ್ವವನ್ನೇ ಅಣಿ ಮಾಡುವ ಧಾವಂತದ ನಡುವೆ ಇಂದು ನಾವಿದ್ದೇವೆ. ಇಂತಹ ವರ್ತಮಾನದಲ್ಲಿ ನಮ್ಮ ನಮ್ಮ ದೇಸೀ ನೆಲೆಗಳ ಕಡೆ, ಅದರ ವಿಶೇಷವಾದ ಸಾಂಸ್ಕೃತಿಕ ವಿನ್ಯಾಸಗಳ ಕಡೆ ನಾವು ತಿರುಗಿನೋಡುವಂತೆ ಮಾಡುವ ಅನೇಕ ಆಚರಣೆಗಳೂ ನಮ್ಮಲ್ಲಿವೆ. ಈ ಮೂಲಕ ಇತಿಹಾಸದ ಜಾಡನ್ನು ಮತ್ತೆ ಶೋಧಿಸುವಂತೆ, ಗುರುತಿಸುವಂತೆ ಮಾಡುವ, ಈ ಕುರಿತು ಆಸಕ್ತಿ ತಳೆಯುವಂತೆ ಹಾಗೂ ಸಾಂಸ್ಕೃತಿಕ ಎಚ್ಚರವನ್ನು ಉಂಟುಮಾಡುವ ಈ ಆಚರಣೆಗಳು ನಮ್ಮ ನಡುವೆ ಸದ್ದಿಲ್ಲದಂತೆ ಜರುಗಿ ಹೋಗುತ್ತಿರುತ್ತವೆ. ಹಾಗೆಯೇ ಮತ್ತೆ ಮತ್ತೆ ಇವುಗಳ ಆವರ್ತನವೂ ಆಗುತ್ತಿರುತ್ತದೆ. ಇಂತಹ ಅನೇಕ ದೇಸೀ ಆವರ್ತನಗಳು ಬಹಳ ಮುಖ್ಯವಾಗಿ ಬುಡಕಟ್ಟಿನ ಬದುಕಿನ ಸಾಂಸ್ಕೃತಿಕ ವಿನ್ಯಾಸಗಳಾದ ಆಚರಣೆಗಳು, ನಂಬಿಕೆಗಳನ್ನು ಸ್ಪಷ್ಟಪಡಿಸುತ್ತವೆ. ಸರಿಸುಮಾರು ಜಗತ್ತಿನ ಎಲ್ಲಾ ಆದಿಮ ಸಂಸ್ಕೃತಿಗಳಲ್ಲಿ ಇಂತಹ ಚಹರೆಗಳನ್ನು ಗುರುತಿಸಬಹುದಾಗಿದೆ. ಕನ್ನಡ ನೆಲದಲ್ಲಿ ಮಿಳಿತಗೊಂಡ ತೆಲುಗು ಭಾಷಿಕರಾಗಿರುವ ಮಧ್ಯಕರ್ನಾಟಕದಲ್ಲಿ ವ್ಯಾಪಕವಾಗಿ ನೆಲೆಸಿರುವ ಮ್ಯಾಸಬೇಡ/ಮ್ಯಾಸನಾಯಕ ಬುಡಕಟ್ಟು ಇದರಿಂದ ಹೊರತಾಗಿಲ್ಲ. ಇದು ದ್ರಾವಿಡ ಮೂಲದ ಬುಡಕಟ್ಟು ಎಂಬುದನ್ನು ಇವರಲ್ಲಿರುವ ಚಹರೆಗಳ ಮೂಲಕ ಗುರುತಿಸಬಹುದಾಗಿದೆ.

ಮ್ಯಾಸ ನಾಯಕ ಬುಡಕಟ್ಟು ಸಮುದಾಯವನ್ನು ದ್ರಾವಿಡ ಮೂಲದಿಂದ ಗುರುತಿಸುವುದಾದರೆ, ಈ ದ್ರಾವಿಡ ಪರಂಪರೆಯಲ್ಲಿ ಮುಖ್ಯವಾಗಿರುವ ನಿಸರ್ಗಾರಾಧನೆ ತದನಂತರದಲ್ಲಿ ಪಶುಪತಿ ಅರ್ಥಾತ್ ಶಿವನ ಆರಾಧನೆಯನ್ನು ಮಾಡುತ್ತಿದ್ದ ಸಮುದಾಯವಿದು ಎಂಬುದನ್ನು ಇಂದಿಗೂ ಇವರಲ್ಲಿರುವ ಆರಾಧನೆಗಳು ಸ್ಪಷ್ಟಪಡಿಸುತ್ತವೆ. ಒಂಟಿಕೊಂಬಿನ ಬಲ್ಲಾವಿನ ಗೊರಸಿನಲ್ಲಿ ಹುಟ್ಟಿದವನೇ, ನಮ್ಮ ಕುಲದ ಮೂಲಪುರುಷ ಎಂದು ಹೇಳಿಕೊಳ್ಳುವಲ್ಲಿ ಬುಡಕಟ್ಟು ಸಮುದಾಯದ ಶೈವಾರಾಧನೆ ಅರ್ಥಾತ್ ಪಶುಪತಿಯ ಆರಾಧಕರಿವರು ಎಂದು ಸ್ಪಷ್ಟವಾಗುತ್ತದೆ. ಬೇಟೆಯ ಮೂಲದಿಂದ ಬಂದವರಿವರು ಎಂಬುದಕ್ಕೂ ಅನೇಕ ನಿದರ್ಶನಗಳಿವೆ. ಬಿಲ್ಲು-ಬಾಣ, ಈಟಿ-ಬರ್ಜಿಗಳನ್ನೇ ತಮ್ಮ ದೇವರು ಎಂದು ಪೂಜಿಸುವ ಗುಂಪುಗಳೂ ಸಮುದಾಯದಲ್ಲಿವೆ. ಬೇಟೆ ಮೂಲದಿಂದ ಕ್ರಮೇಣ ಪಶುಪಾಲನೆಯ ಕಡೆ ಈ ಬುಡಕಟ್ಟು ಸಮುದಾಯ ಸ್ಥಿತ್ಯಂತರಗೊಂಡಿದೆ. ಮೂಲತ: ಉತ್ತರ ಭಾರತದಲ್ಲಿದ್ದು ಕ್ರಮೇಣ ದಕ್ಷಿಣಕ್ಕೆ ಚಲಿಸಿ, ಗೋದಾವರಿ ಪ್ರಾಂತ್ಯದಲ್ಲಿ ತಮ್ಮ ದನಕರುಗಳೊಂದಿಗೆ ತಮ್ಮ ಪೆಟ್ಟಿಗೆ ದೇವರುಗಳೊಂದಿಗೆ (ಬೆತ್ತದ ಬುಟ್ಟಿಯಲ್ಲಿ ಸಾಲಿಗ್ರಾಮವನ್ನೋ, ಅಥವಾ ತಮ್ಮ ಪೂರ್ವಿಕರು ಬಳಸುತ್ತಿದ್ದ ಅಮೂಲ್ಯ ವಸ್ತುವನ್ನೋ ಇಟ್ಟು ಅವರ ಹೆಸರಿನಲ್ಲೇ ಪೂಜಿಸುವ ಕ್ರಮವಿದು) ಅಲೆಯುತ್ತಾ ನಲಮಲೈ ಅರಣ್ಯ ಪ್ರದೇಶದಲ್ಲಿ ಅಲೆದಾಡಿ ನಂತರ ಆಂಧ್ರದ ಕಾಟಮರಾಜನ ಅನುಯಾಯಿಗಳಾಗಿದ್ದಿರಬಹುದು ಎಂದು ಊಹಿಸಲು ಪೂರಕ ಆಧಾರಗಳು ದೊರೆಯುತ್ತವೆ. ಬಹುದೊಡ್ಡ ದನಗಾಹಿ ಕಾಟಮರಾಜನ ಪತನಾನಂತರ ಇವರು ಶ್ರೀ ಶೈಲದ ನಲಮಲೈ ಗುಡ್ಡಗಾಡುಗಳಲ್ಲಿ, ತಿರುಪತಿ ಪ್ರಾಂತ್ಯದಲ್ಲಿ ಅಲೆದು ನಂತರ ಆನೆಗೊಂದಿಯ ಕಿರುಕಿಂಡಿಯ ಮೂಲಕ ಕರ್ನಾಟಕವನ್ನೇ ಪ್ರವೇಶಿಸಿದರು ಎಂದು ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದ ಬಖೈರುಗಳು, ಹೆಳವ ಸಮುದಾಯದವರು ಮತ್ತು ಮ್ಯಾಸಬೇಡ ಸಮುದಾಯದ ಹಿರಿಯರು ಹೇಳುವ ಮೌಖಿಕ ಕಥನಗಳು ಮತ್ತು ಆಚರಣೆಗಳು ಸ್ಪಷ್ಟಪಡಿಸುತ್ತವೆ.

ಶಿವನನ್ನು ಮತ್ತು ತಾವು ಸಾಕುತ್ತಿದ್ದ, ಈ ಮೂಲಕ ತಮಗೆ ಬದುಕನ್ನು ಕಟ್ಟಿ ಕೊಟ್ಟ ದನಕರುಗಳನ್ನು ಇವರು ದೈವವೆಂದೇ ಇಂದಿಗೂ ಪೂಜಿಸುತ್ತಾರೆ. ಮತ್ತು ತಮ್ಮ ಪೂರ್ವಿಕರನ್ನು ಅಂದರೆ ಹಿರಿಯರನ್ನು ‘ಮುತ್ತಯ್ಯಗಳು’’ ಎಂದು ಕರೆದು ತಮ್ಮ ದನಗಳ ಗುಂಪಿನೊಂದಿಗೆ ಸಮೀಕರಿಸಿ ದೈವವೆಂದೇ ನಂಬಿ ಪೂಜಿಸುವ ಪರಿಪಾಠ ಇಂದಿಗೂ ಇದೆ. ದಕ್ಷಿಣ ಕರ್ನಾಟಕದಲ್ಲಿ ರಾಮಾನುಜಾಚಾರ್ಯರು ಅನೇಕ ತಳ ಸಮುದಾಯಗಳಿಗೆ ವೈಷ್ಣವ ದೀಕ್ಷೆಯನ್ನು ಕೊಟ್ಟು, ಕಾವೇರಿ ನದಿಯ ಜಾಡಿನಲ್ಲಿ ಅಲ್ಲಲ್ಲಿ ರಂಗನಾಥಸ್ವಾಮಿಯ ದೇವಾಲಯಗಳನ್ನು ಸ್ಥಾಪಿಸಿದರು. ಈ ಎಲ್ಲಾ ದೇವಾಲಯಗಳಿಗೆ ಪ್ರವೇಶ ಪಡೆಯುವ ಅವಕಾಶವನ್ನು ವೈಷ್ಣವ ದೀಕ್ಷೆ ಅಂದರೆ ದಾಸ ದೀಕ್ಷೆ ಪಡೆದವರಿಗೆ ಒದಗಿಸಿಕೊಟ್ಟರು. ತದನಂತರ ಮತ್ತೆ ಜಾತಿ ವ್ಯವಸ್ಥೆಯೇ ಮೇಲುಗೈ ಸಾಧಿಸಿ ಈಗ ವರ್ಷದಲ್ಲಿ ಒಂದು ದಿನ ಮಾತ್ರ ಈ ದೇವಾಲಯಗಳಿಗೆ ಎಲ್ಲರಿಗೂ ಪ್ರವೇಶಕೊಟ್ಟು ಉಳಿದಂತೆ ದೂರವಿಡುವ ಸಂಪ್ರದಾಯ ಮುಂದುವರಿಯುತ್ತಿರುವುದು ಜಗತ್ ಜಾಹೀರಾಗಿರುವ ಸಂಗತಿಯಾಗಿದೆ. ಇಲ್ಲಿ ರಾಮಾನುಜಾಚಾರ್ಯರು ದೀಕ್ಷೆ ಕೊಟ್ಟಂತೆ ತಿರುಪತಿ, ಶ್ರೀ ಶೈಲಂನಲ್ಲಿ ಅಹೋಬಿಲಂ ಪ್ರಾಂತ್ಯದಲ್ಲಿ ಅಲೆಯುತ್ತಿದ್ದ ಈ ಮ್ಯಾಸ ಬೇಡರಲ್ಲಿ ಹಲವರಿಗೆ ಮುಖ್ಯವಾಗಿ ಮಂದಲ ಗೋತ್ರದವರಿಗೆ ರಾಮಾನುಜಾಚಾರ್ಯರ ಸಮಕಾಲೀನ ಮತ್ತು ಶಿಷ್ಯರಾಗಿದ್ದ ತಾತಾಚಾರ್ಯರು ದಾಸದೀಕ್ಷೆ ನೀಡುತ್ತಾರೆ.ಹೀಗೆ ದೀಕ್ಷೆ ಪಡೆದವರು ವೈಷ್ಣವರಂತೆಯೇ ನಾಮಧಾರಣೆ ಮಾಡಿಕೊಂಡು ಶಂಖ-ಜಾಗಟೆ, ಜೋಪಾಳ ಬುಟ್ಟಿ (ಚಾನಾಸಿ), ಗರುಡಗಂಭ ಇವುಗಳನ್ನು ಪೂಜಿಸುವ ಕ್ರಮವನ್ನು ಅಳವಡಿಸಿಕೊಳ್ಳುತ್ತಾರೆ. ತಮ್ಮ ಪೆಟ್ಟಿಯಲ್ಲಿ ನರಸಿಂಹ ಸಾಲಿಗ್ರಾಮಗಳನ್ನು ಇರಿಸಿ ತಮ್ಮ ಈ ದೇವರನ್ನು ಪೆದೋಬಲಯ್ಯ ಎಂದು ಕರೆದುಕೊಳ್ಳುತ್ತಾರೆ. ನಂತರ ಅಹೋಬಿಲಂನಲ್ಲಿ ಪ್ರಚಲಿತವಿರುವ ನರಸಿಂಹಸ್ವಾಮಿ ಮತ್ತು ಚಂಚಲಕ್ಷ್ಮಿಗೆ ಸಂಬಂದಿಸಿದ ಪ್ರೇಮ ಪುರಾಣವೇ ಪೆದೋಬಳೇಶನ ಪುರಾಣವಾಗಿ ಬಳಕೆಗೊಳ್ಳುತ್ತದೆ. ನರಸಿಂಹಸ್ವಾಮಿ ಸಾಲಿಗ್ರಾಮವನ್ನು ತಾವು ಹೊತ್ತು ಕೊಂಡೊಯ್ಯೊತ್ತಿದ್ದ ಬಿದಿರಿನ ಬುಟ್ಟಿಯಲ್ಲಿಟ್ಟು, ಆ ಬುಟ್ಟಿಗೊಂದು ರೇಷ್ಮೆ ವಸ್ತ್ರವನ್ನು ಸುತ್ತಿ ಅದನ್ನು ಬೆಳ್ಳಿಯ ಡಾಬು ಮತ್ತಿತರ ಆಭರಣಗಳಿಂದ ಅಲಂಕರಿಸಿ ತಾವು ವಸತಿಗೆ ನಿಂತ ಕಡೆ ಗುಡಿಸಲು ಹಾಕಿ (ಪದಿ) ಮಂದಾಸನದ ಮೇಲೆ ಇರಿಸಿ ಪೂಜಿಸುತ್ತಾ ಬಂದರು. ಇದನ್ನು ಅಹೋಬಿಲಂ ದೇವರು ಎಂದೇ ಕರೆದರು. ಇದೇ ಕ್ರಮೇಣ ಉಚ್ಛಾರಣಾ ಸೌಕರ್ಯಕ್ಕನುಗುಣವಾಗಿ ಸರಳೀಕರಣಗೊಂಡು ಓಬಳದೇವರಾಯಿತು. ಮೊದಲು ದಾಸದೀಕ್ಷೆ ಪಡೆದು ಸ್ಥಿತ್ಯಂತರಕ್ಕೊಳಗಾದ ಕಾರಣಕ್ಕಾಗಿ ಪೆದೋಬಳಯ್ಯ ಎಂದೇ ಕರೆದರು. ಈ ಗುಂಪಿನಿಂದ ಒಡೆದು ಹೋದ ಗುಂಪುಗಳು ಆಹಾರವನ್ನರಸುತ್ತಾ, ಕೆಲವೊಮ್ಮೆ ವೈಮನಸ್ಯ ಕಾರಣವಾಗಿ, ತಾವು ನೆಲೆಯನ್ನು ಕಂಡುಕೊಂಡ ಸ್ಥಳಕ್ಕನುಗುಣವಾಗಿ ತಮ್ಮ ಈ ದೇವರನ್ನು ನೆಲಜರುವೋಬಳದೇವರು, ಗೆದ್ದಲಕಟ್ಟಿ ಓಬಳದೇವರು ಎಂದು ಇತ್ಯಾದಿಯಾಗಿ ಕರೆದು ಇಂದಿಗೂ ಪೂಜಿಸುತ್ತಾರೆ. ಮಧ್ಯಕರ್ನಾಟಕದಾದ್ಯಂತ ಅನೇಕ ಮ್ಯಾಸರ ಹಟ್ಟಿಗಳಲ್ಲಿ ಓಬಳದೇವರ ಗುಡಿಗಳಿವೆ. ಪೆದೋಬಳೇಶನ ಈ ಮೂಲ ಮಂದಲ ಗುಂಪು ತಮ್ಮ ದನಕರುಗಳನ್ನು ಸಾಕುವ ನಿಮಿತ್ತ ಹುಲ್ಲುಗಾವಲುಗಳನ್ನು ಅರಸುತ್ತಾ, ಅಲೆಯುತ್ತಿದ್ದು, ತಮ್ಮೊಂದಿಗೆ ತಮ್ಮ ಈ ಪೆಟ್ಟಿಗೆ ದೇವರನ್ನು ಅಂದರೆ ಈ ಪೆದೋಬಳ ಸ್ವಾಮಿಯನ್ನು ಹೊತ್ತು ತಿರುಗುತ್ತಿದ್ದರು. ಅಹೋಬಿಲಂ ಪ್ರಾಂತ್ಯ ಅಂದರೆ ನಲಮಲೈ ಬೆಟ್ಟಕಾಡುಗಳಲ್ಲಿ ಚಲಿಸುತ್ತಾ ಬಂದು ಕುಮ್ಮಟದುರ್ಗದ ವೀರ ಕಂಪಿಲ ರಾಯನ ಪ್ರಾಂತ್ಯ ಪ್ರವೇಶಿಸುತ್ತಾರೆ. ಕುಮ್ಮಟದುರ್ಗದ ಅರಸರೂ ಕೂಡ ಬೇಡರೇ ಎಂಬುದನ್ನು ಅನೇಕ ಸಂಶೋಧನೆಗಳು ದೃಢಪಡಿಸಿವೆ. ಈತನ ಮಗನೇ ಕುಮಾರರಾಮ. ಕುಮ್ಮಟದುರ್ಗವೇ ಇವರ ರಾಜಧಾನಿಯಾಗಿತ್ತು. ಕುಮ್ಮಟದುರ್ಗದ ಅರಣ್ಯ ಪ್ರದೇಶಗಳಲ್ಲಿ ನದೀ ಬಯಲುಗಳಲ್ಲಿ ಈ ಪೆದೋಬಳೇಶನ ಕಂಪಳ ಅನೇಕ ವರ್ಷಗಳ ಕಾಲ ನೆಲೆಯೂರುತ್ತದೆ. ಕೇವಲ ದನಗಾಹಿಗಳಷ್ಟೇ ಅಲ್ಲದೆ ಮ್ಯಾಸಬೇಡರು ವೀರ ಯೋಧರೂ ಆಗಿದ್ದರು. ಅರಣ್ಯಗಳಲ್ಲಿ ಅರಸನ ಕಾಯ್ದಿಟ್ಟ ಬೇಡ ಪಡೆಯಾಗಿ ಅವಶ್ಯಕ ಸಂದರ್ಭಗಳಲ್ಲಿ ಇವರು ಯುದ್ಧಭೂಮಿಗೂ ಪ್ರವೇಶಿಸುತ್ತಿದ್ದರು. ಕಂಪಿಲರಾಯನಿಗೆ, ತದ ನಂತರ ಕುಮಾರರಾಮನಿಗೆ ನಿಷ್ಠೆಯಿಂದ ತಮ್ಮ ಸಹಕಾರ ನೀಡುತ್ತಾರೆ. ಈ ಸನ್ನ್ನದ್ಧ ಬೇಡಪಡೆಯನ್ನು ‘ಕಾಪುಕಂಪಳ’ ವೆಂದೇ (ಕಾಪು-ಕಂಪಳ ಎಂದರೆ ಸನ್ನದ್ಧ ರಕ್ಷಣಾ ಪಡೆ ಎಂದು ಅರ್ಥ) ಕರೆಯುತ್ತಿದ್ದರು.
ದೆಹಲಿ ಸುಲ್ತಾನರ ಆಕ್ರಮಣಕ್ಕೆ ತುತ್ತಾಗುತ್ತಿದ್ದು ಕುಮ್ಮಟದುರ್ಗವನ್ನು ಕಾಪಾಡುವುದಕ್ಕೆ ಇವರು ನೀಡಿದ ¸ಹಕಾರ ಅಪರಿಮಿತ.

“ಡೆಲ್ಲೇನ ಗಡ್ಡಕಿೆ ದಡ್ಡಿ ಪೆಟ್ಟಿನ ಸ್ವಾಮಿ. ಡೆಲ್ಲಿ ಸುಲ್ತಾನತ ವಂಗಲೇಪಿನ ಸ್ವಾಮಿ, ಉಂಡವನೆ ಲೇಮುರಯ್ಯ” ಎಂದು ಇಂದಿಗೂ ಪೆದೋಬಳೇಶನ ಸುತ್ತಿ ಪದ್ಯವನ್ನು ಹಾಡುತ್ತಾರೆ. ದೆಹಲಿಯ ಸುಲ್ತಾನರ ಧಾಳಿಗೆ ಸಿಲುಕಿ ಕಂಪಿಲರಾಯ ಯುದ್ದದಲ್ಲಿ ಮಡಿಯುತ್ತಾನೆ. ತದನಂತರ ಕುಮಾರರಾಮನ ಅಂತ್ಯವೂ ಆಗುತ್ತದೆ. ಆಗ ಕಂಪಿಲರಾಜರ ಆಶ್ರಯದಲ್ಲಿದ್ದ ಈ ಮ್ಯಾಸರೂ ಅತಂತ್ರಗೊಳ್ಳುತ್ತಾರೆ. ಬದುಕಿ ಉಳಿಯಲು ತಮ್ಮ ದನಕರುಗಳೊಂದಿಗೆ ಚಲಿಸುತ್ತಾ ಬಂದು ಚಿನ್ನಹಗರಿ ನದಿಯ ದಡದ ಮೇಲೆ ನೆಲೆಯೂರುತ್ತಾರೆ. ಕುಮ್ಮಟ ದುರ್ಗದಿಂದ ಬಂದ ಇವರು ತಾವು ಉಳಿದುಕೊಂಡ ಪ್ರದೇಶವನ್ನೇ ಚಿಕ್ಕ ಕುಮ್ಮಟ ಎಂದು ಕರೆದುಕೊಳ್ಳುತ್ತಾರೆ. ಕುಮ್ಮಟವೇ, ಕುಮ್ಮತಿ, ಕುಂತಿ ಎಂದು ಸಂಕ್ಷಿಪ್ತಗೊAಡಿದೆ. ಕಂಪಿಲನ ರಾಜ್ಯದಲ್ಲಿದ್ದ ಕಾರಣಕ್ಕಾಗಿಯೂ ಈ ಸ್ಥಳನಾಮ ಸೇರ್ಪೆಡೆಗೊಂಡು ಮೂಲತಹ ಇದ್ದ ಪೆದೋಬಳೇಶ ಕಂಪಿಲಿಸ್ವಾಮಿ, ಕಂಪಿಲೋಬಯ್ಯ ಎಂಬ ಸಿತ್ಯಂತರಕ್ಕೆ ಒಳಗಾಯಿತು. ಇದರೊಂದಿಗೆ ಬುಡಕಟ್ಟು ಸಮುದಾಯದಲ್ಲಿರುವ ಐತಿಹ್ಯಗಳೂ, ಮೌಖಿಕ ಕಥನಗಳೂ ಹೇಳುವಂತೆ ವೀರ ಕಂಪಿಲರಾಯನ ಸೇವೆಯಲ್ಲಿ ಈ ಬುಡಕಟ್ಟು ಸಮುದಾಯದಿಂದ ಒಬ್ಬ ಮಹನೀಯ ಅಹೋಬಲ-ಅಂದರೆ ಓಬಲಯ್ಯ (ಅಹೋಬಲಿನ ಭಕ್ತರಲ್ಲಿ ಓಬಲಯ್ಯ ಹೆಸರು ಸಾಮಾನ್ಯ) ಬಹಳ ದಿಟ್ಟತನದಿಂದ ಕಾದಾಡಿದ ನೆನಪಿಗಾಗಿ ಅರಸನಿಂದ ಬಿರುದು ಬಾವಲಿಗಳನ್ನು ಪಡೆಯುತ್ತಾನೆ. ಇಂತಹ ಒಂದು ವಿಶೇಷ ಬಹುಮಾನಿತ ಆಭರಣವೇ ‘ಮುತ್ತಿನ ಕಾಲುಪೆಂಡೆಯ’. ಅರಸನೇ ತಮಗಾಗಿ ಹೋರಾಡಿದ ವೀರನ ಕಾಲಿಗೆ ತೊಡಿಸಿದ ಚಿನ್ನ ಮತ್ತು ಮುತ್ತುಗಳಿಂದ ಮಾಡಿದ ಪೆಂಡೆಯವಿದು. ಇದನ್ನು ವಿಶೆಷವಾಗಿ ಆಚರಿಸುವ ಹೆಡೆಕಟ್ಟಿದ ಹಬ್ಬ- ಪೆಡಗಟ್ಟು ಪಂಡುಗ-ದಲ್ಲಿ ಸಾರ್ವಜನಿಕರಿಗೆ ಪ್ರರ್ದಶಿಸಲಾಗುತ್ತದೆ. ತಮ್ಮ ಈ ಸನ್ಮಾನಿತ ಹಿರಿಯ ವೀರನನ್ನು ಈ ಕಂಪಿಲಿಸ್ವಾಮಿ ಅಂದರೆ ಪೆದೋಬಳೇಶನೊಂದಿಗೆ ಸಮೀಕರಿಸಿ ಆರಾಧಿಸಲಾಗುತ್ತದೆ. ಈ ವೀರನಿಗೆ ಇದ್ದ ಬಿರುದೇ ‘ಕಾಪುಕಂಪಳದಯ್ಯ’ ಎಂದು. ಅಂದರೆ ಮೀಸಲಿಟ್ಟ ಪಡೆಗೆ ನಾಯಕ ಎಂದರ್ಥ.

ಮಂದಲ ಗೋತ್ರದ ಈ ಮ್ಯಾಸರು ಮೂಲತಃ ತಮ್ಮ ದೇವರನ್ನು ತೆಲುಗಿನ ಪೆದೋಬಲಯ್ಯ ಎಂದು ಕರೆದು ಸ್ಥಳ ಸ್ಥಿತ್ಯಂತರ ಕಾರಣವಾಗಿ ಕಂಪಿಲಿಸ್ವಾಮಿ, ಕಂಪಲೋಬಯ್ಯ ಎಂದು ಕರೆಯತೊಡಗಿದರು, ಇದನ್ನು ‘ಪೆದ್ದತಿರುಮಲಿ ದ್ಯಾವರಿ’ ಎಂದೂ ಕರೆಯುತ್ತಾರೆ.ಅಂದರೆ ಹಿರಿಯ ತಿರುಪತಿ ದೇವರು ಇದು ಎಂದು ಹೆಮ್ಮಯಿಂದ ಹೇಳಕೊಳ್ಳುತ್ತಾರೆ. ತಿರುಪತಿ ಪ್ರಾಂತ್ಯದಲ್ಲಿ ಅಲೆಯುತ್ತಿದ್ದ ಮ್ಯಾಸಬೇಡ ದನಗಾಹಿಗಳ ಗುಂಪು ವೆಂಕಟರಮಣನ ಭಕ್ತರಾಗಿದ್ದರು. ಎಂದು ಥರ್ಸ್ಟನ್ರವರ ಬರಹಗಳಲ್ಲಿ ನಮೂದಿತವಾಗಿದೆ. ತಿರುಪತಿಯ ವೆಂಕಟರಮಣ ಮತ್ತು ಪೆದೋಬಳೇಶನ ಸಮೀಕರಣವಿದು. ತಿರುಪತಿಯಿಂದ ಶಂಖ, ಜಾಗಟೆ, ಬಲಮುರಿ ಶಂಖ, ಎಡಮುರಿ ಶಂಖ ಇವುಗಳನ್ನು ತಂದ ಕಾರಣಕ್ಕಾಗಿಯೂ ಈ ಹೆಸರು ಬಂದಿರುವ ಸಾದ್ಯತೆಯಿದೆ.
ಮೂಲತಃ ಪೆದೋಬಲಯ್ಯನಾಗಿದ್ದು ನಂತರ ಸ್ಥಳೀಕರಣಕ್ಕಾನುಗುಣವಾಗಿ ತೆಲುಗಿನ ಕಂಪಲಿಸ್ವಾಮಿ, ಕಂಪಿಲೋಬಯ್ಯನಾದ. ವಿಷ್ಣು, ರಂಗನಾಥ, ನರಸಿಂಹ, ವೆಂಕಟೇಶ ಇವೆಲ್ಲವುಗಳ ಅರ್ಥ ಒಟ್ಟಾರೆ ವಿಷ್ಣು, ರಂಗನಾಥ ಒಂದೇ. ಕನ್ನಡ ನೆಲದಲ್ಲಿ ಕ್ರಮೇಣ ಕಂಪಿಲಿದೇವರು ಕಂಪಳದೇವರಾಯಿತು. ಶಿಷ್ಟೀಕರಣಗೊಳ್ಳುತ್ತಾ ಕಂಪಳ ರಂಗಸ್ವಾಮಿಯಾಯಿತು. ಅಹೋಬಲ ನರಸಿಂಹನ ಪತ್ನಿ ಚಂಚುಲಕ್ಷ್ಮಿಯ ಹೆಸರೂ ಶಿಷ್ಟೀಕರಣಗೊಂಡು ಭಾಗ್ಯದಲಕ್ಷö್ಮಮ್ಮ ಎಂದಾಯಿತು.

ತಾವಿರುವ ನೆಲೆಗಳಲ್ಲಿ ತಮ್ಮೊಂದಿಗೆ ತಮ್ಮ ಅಪ್ತ ಸಮುದಾಯವನ್ನು ಮುನ್ನಡೆಸಿಕೊಂಡು ಬರುವಾಗ ಅವರ ದೇವರುಗಳಾದ ಜಗಲೂರು ಪಾಪನಾಯಕ ಗಾದ್ರಿಪಾಲನಾಯಕ, ಜೋಗಿದೇವರು ಇವರನ್ನು ಜೊತೆಗೆ ಕರೆತಂದ ಕಾರಣವಾಗಿ ಇಂದಿಗೂ ಕಂಪಳದೇವರ ಹಟ್ಟಿಯಲ್ಲಿ ಈ ಎಲ್ಲಾ ದೇವರುಗಳೂ ಇದೆ. ಆದ್ದರಿಂದಲೇ ಎಲ್ಲರನ್ನು ಒಳಗೊಂಡ ಬದುಕುತ್ತಿದ್ದ ಕಂಪಳವಿದು ಎಂದು ಗುಣ ನಿರ್ದೇಶಿತ ಕಾರಣವಾಗಿಯೂ ಕಂಪಳದೇವರು ಎಂಬ ಹೆಸರೇ ಇಂದು ಬುಡಕಟ್ಟು ಸಮುದಾಯದಿಂದ ಒಪ್ಪಿತಗೊಂಡಿದೆ. ಹೀಗೆ ಅನೇಕ ಸ್ಥಿತ್ಯಂತರಗಳಿಗೆ ಒಳಗಾಗುತ್ತಾ ಕಾಲದ ಅನಿವಾರ್ಯಕ್ಕೆ ತನ್ನನ್ನು ಒಪ್ಪಿಸಿಕೊಳ್ಳುತ್ತಿರುವ ಬುಡಕಟ್ಟು ಸಮುದಾಯವಿದು.
ಕಾಲ ಪ್ರವಾಹದಲ್ಲಿ ಎಷ್ಟೇ ಮುಂದೆ ಸಾಗಿ ಬಂದರೂ ಸಮುದಾಯದ ನಂಬಿಕೆಯೆ ಆದರೆ ತಮಗೆ ಹಿಂದೆ ಬದುಕನ್ನು ಕಟ್ಟಿಕೊಟ್ಟಿದ್ದ ಪರಿಸರಕ್ಕೆ ಮತ್ತೆ ಭೇಟಿಕೊಡುವುದು. ಇಡೀ ಮ್ಯಾಸಮಂಡಲದಲ್ಲಿ ಇಂತಹ ಯಾನಗಳು ನಡೆಯುತ್ತಿರುತ್ತವೆ. ಗಾದ್ರಿಪಾಲನಾಯಕ ಹಿಂದೆ ಮಿಂಚೇರಿ ಕಾವಲಿನಲ್ಲಿ ವಾಸಿಸಿದ್ದ ಎಂಬ ಕಾರಣಕ್ಕಾಗಿ ಈತನ ಪರಂಪರೆಯವರು ದೇವರೊಂದಿಗೆ ಮಿಂಚೇರಿ ಗುಡ್ಡಕ್ಕೆ ಹೋಗಿ ಬರುತ್ತಾರೆ.

ದಡ್ಡಿಸೂರನಾಯಕನ ಪರಂಪರೆಯವರು ಗುಡೇಕೋಟೆಯ ಶರಣರ ಗುಡ್ಡಕ್ಕೆ ಹೋಗಿಬರುತ್ತಾರೆ. ತಮ್ಮ ನಾಯಕ / ನಾಯಕಿಯರೆ ಈಗ ದೈವೀಕ ಸ್ಥಾನದಲ್ಲಿರುವಾಗ ಅವರು ಹಿಂದೆ ವಾಸಿಸಿದ್ದ ಸ್ಥಳಗಳಗೆ ಹೋಗಿ ಪೂಜೆಸಲ್ಲಿಸಿ ಬರುವುದು ತಮ್ಮ ದೈವಕ್ಕೆ ಸಲ್ಲಿಸುವ ಬಾವನಾತ್ಮಕ ಭಕ್ತಿಯಾಗಿರುತ್ತದೆ.

ಇದೇ ರೀತಿ ಹಿಂದೆ ಕುಮ್ಮಟ ದುರ್ಗದ ಪ್ರಾಂತ್ಯದಲ್ಲಿ ಹಂಪಿಯ ಪರಿಸರದಲ್ಲಿ ತಮ್ಮ ಪೂರ್ವಿಕರು ಇದ್ದ ಕಾರಣ ತಮ್ಮ ದೇವರೊಂದಿಗೆ ತಾವೆಲ್ಲರೂ ಹೋಗಿ ತುಂಗಭದ್ರೆಯ ಗಂಗೆಯಲ್ಲಿ ದೇವರಿಗೆ ಅಭಿಷೇಕ ಮತ್ತು ನದಿಗೂ ಗಂಗೆ ಪೂಜೆ ಸಲ್ಲಿಸುವ ಕ್ರಮವನ್ನು ಅಪರೂಪಕ್ಕಾದರೂ ನಡೆಸಿಕೊಂಡು ಬರಲಾಗುತ್ತದೆ. ಇಂದಿನ ಚಿಕ್ಕ ಕುಮತಿಯ ಹೊರವಲಯದಲ್ಲಿರುವ ಕಂಪಳದೇವರ ಹಟ್ಟಿಯಿಂದ ತಮ್ಮ ದೇವರನ್ನು ದನಗಂಪಳವನ್ನು ಛತ್ರಿ, ಛಾಮರಗಳ ಗೌರವದೊಂದಿಗೆ, ಶಂಖ, ಜಾಗಟೆಗಳ ಭೋರ್ಗರೆತದೊಂದಿಗೆ ಉರುಮೆ, ಕಹಳೆ, ತಮ್ಮಟೆಗಳ ವಾದ್ಯಗಳೊಂದಿಗೆ ಒಪ್ಪತ್ತಿನ ಉಪವಾಸ ವ್ರತ ಹಿಡಿದು ನೇಮನಿಷ್ಠೆಗಳಿಂದ ಬರಿಗಾಲಲ್ಲಿ ಸುಮಾರು ಎಪ್ಪತ್ತು ಕಿಲೋಮೀಟರ್ ದೂರದ ಹಂಪಿಗೆ ಕಾಲ್ನಡಿಗೆಯಿಂದ ಪಯಣಿಸುತ್ತಾರೆ. ಹೀಗೆ ನಡೆಯುವುದು ಸಾಮಾನ್ಯ ಸಂಗತಿಯಲ್ಲ. ಪಯಣದ ಉಸ್ತುವಾರಿಯನ್ನು ಸಮಸಹೋದರರು ಮತ್ತು ನೆಂಟರಿಷ್ಠರೂ ವಹಿಸಿಕೊಂಡಿರುತ್ತಾರೆ. ತಮ್ಮ ಈ ಭಕ್ತಿ ಮತ್ತು ಶಕ್ತಿಗೆ ಇಡೀ ಸಮುದಾಯವನ್ನೇ ಒಂದು ಕಡೆ ಬೆಸೆಯುವಂತಹ ಸಾಮರ್ಥ್ಯವಿದ್ದು ಈ ಆರಾಧನೆ ಬುಡಕಟ್ಟಿನ ಸಾಮುದಾಯಿಕ ಬದುಕಿಗೆ ಬಹುದೊಡ್ಡ ನಿದರ್ಶನವಾಗುತ್ತದೆ.

ಕಂಪಿಲದೇವರೊಂದಿಗೆ ಇದೇ ಹಟ್ಟಿಯಲ್ಲಿಯೇ ನೆಲೆಗೊಂಡಿರುವ ಜಗಲೂರು ಪಾಪನಾಯಕ, ಗಾದ್ರಿಪಾಲನಾಯಕ, ಜೋಗಿದೇವರುಗಳನ್ನು ಹಂಪಿಗೆ ಕರೆದೊಯ್ಯಲಾಗುತ್ತಿದೆ. ಪ್ರಯಾಣದ ದಾರಿಯಲ್ಲಿ ಹಿಂದೆ ಮ್ಯಾಸರ ಹಟ್ಟಿಗಳಾಗಿದ್ದು ಇಂದು ಊರುಗಳ ಸ್ವರೂಪ ಪಡೆದಿರುವ ಸ್ಥಳಗಳಲ್ಲಿ ನೆಲೆಸಿರುವ ಈ ಸ್ವಾಮಿಯನ್ನು ಪೂಜಿಸುವ ಮಂದಲ ಗುಂಪಿನವರು ಮತ್ತು ಇವರೊಂದಿಗೆ ವೈವಾಹಿಕ ಸಂಬಂಧ ಬೆಳೆಸಿರುವ ‘ಎನುಮಲ’ ಗುಂಪಿನವರು ಭೇದವಿಲ್ಲದೆ ಒಟ್ಟಾಗಿ ಸೇರಿ ಸಂಭ್ರಮದಿಂದ ಈ ಪೆದೋಬಳೇಶ ಮತ್ತು ಇತರ ದೈವಗಳನ್ನು ಸ್ವಾಗತಿಸಿ ವಸತಿ ನೀಡಿ, ಜೊತೆಗೆ ನಡೆದು ಬಂದವರಿಗೆ ಊಟೋಪಚಾರ ನೀಡಿ ಸಂಭ್ರಮಿಸುವಲ್ಲಿ ಇವರಲ್ಲಿರುವ ಬಾಂಧವ್ಯದ ಬೆಸುಗೆಯನ್ನು ಗುರುತಿಸಬಹುದಾಗಿದೆ. ಹಿಂದೆ ವಾಹನ ಸೌಕರ್ಯವಿಲ್ಲದಿದ್ದಾಗ ಹೀಗೆ ಅಪರೂಪಕ್ಕೆ ಬಂದು ಮಿತ್ರರು ಭೇಟಿಯಾಗುವುದೇ ಒಂದು ದೊಡ್ಡ ಸಂಭ್ರಮವಾಗಿತ್ತು. ಅದರೆ ಇಂದು ನಾನಾ ಬಗೆಯ ಸಂಪರ್ಕ ಸಾಧನಗಳು ಅಭ್ಯವಿದೆ. ಅದರೂ ಹೀಗೆ ತಮ್ಮ ದೇವರೊಂದಿಗೆ ಬರುವವರನ್ನು ಸಹೋದರದೆಂದೋ, ನೆಂಟರೆಂದೋ ಸಂಭ್ರಮಿಸಿ ಒಟ್ಟಾಗಿ ಸೇರಿ ದೈವಾರಾಧನೆಯಲ್ಲಿ ಭಾಗಿಯಾಗುವುದು ಆದಿಮ ಸಂಸ್ಕೃತಿಯ ಸಾಮುದಾಯಿಕ ಬದುಕಿನ ಸಾಮರಸ್ಯಕ್ಕೆ ಸಂಕೇತವಾಗುತ್ತದೆ.

ಸಮಯ, ದೈಹಿಕಶ್ರಮ ಮತ್ತು ಹಣಕಾಸಿನ ಕೊರತೆ ಕಾರಣವಾಗಿ ಈ ಆಚರಣೆಯನ್ನು ಪದೇ ಪದೇ ಮಾಡಲು ಸಾಧ್ಯವಾಗುವುದಿಲ್ಲ. ನಲವತ್ತು ವರ್ಷಗಳ ಹಿಂದೆ ಶ್ರೀಯುತ ಪಟೀಲ್ ಪಾಪನಾಯಕರು ಮೊಳಕಾಲ್ಮುರು ಕ್ಷೇತ್ರದ ಶಾಸಕರಾಗಿದ್ದಾಗ ಈ ಕಾರ್ಯಕ್ರಮವನ್ನು ಮಾಡಿಸಿದ್ದರು. ಈಗ ಮತ್ತೆ ಈ ವಿಶೇಷ ಘಟಿಸುತ್ತಿದೆ. ಒಟ್ಟು ಸಮುದಾಯ ಇದರ ಹೊಣೆಯನ್ನು ಹೊತ್ತು ನಿರ್ವಹಿಸುತ್ತಿರುವುದು ಬುಡಕಟ್ಟಿನ ಸ್ವಾಭಿಮಾನ, ಸ್ವಂತಿಕೆ, ಭಕ್ತಿಗೆ ಸಾಕ್ಷೀಭೂತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ದಿನಾಂಕ ೨-೩-೨೦೨೨ರ ಬುಧವಾರ ಬೆಳಿಗ್ಗೆ ಆರಂಭಗೊಂಡ ಈ ಪಯಣ ಹಂಪಿಯ ತುಂಗ ಭದ್ರೆಯ ಚಕ್ರತೀರ್ಥದ ತೀರಕ್ಕೆ ದಿನಾಂಕ ೫-೩-೨೦೨೨ರ ಶನಿವಾರ ತಲುಪುತ್ತದೆ. ಅಲ್ಲಿ ಪೂಜೆಯ ಕೈಂಕರ್ಯವನ್ನು ನೆರವೇರಿಸಿಕೊಂಡು ವಿರೂಪಾಕ್ಷ ಗುಡಿಯ ಮುಂದೆ ದೇವರುಗಳು ಮತ್ತು ದೇವರೆತ್ತುಗಳನ್ನು ಹರಿಯಿಸಿ ಒಂದು ದಿನ ಈ ಹಂಪಿಯಲ್ಲಿಯೇ ತಂಗಿ ಮತ್ತೆ ಮರಳಿ ನಡೆದು ಹಟ್ಟಿಯನ್ನು ಸೇರುವ ಕಾರ್ಯಕ್ರಮ ನಡೆಯುತ್ತಿದೆ. ಅಪರೂಪಕ್ಕೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಲು, ಭಕ್ತಿ ಸಮರ್ಪಣೆ ಮಾಡಲು ಹರಿದು ಬರುತ್ತಿರುವ ಮ್ಯಾಸ ನಾಯಕ ಬುಡಕಟ್ಟು ಸಮುದಾಯದ ಭಾವನಾತ್ಮಕತೆ ಇಲ್ಲಿ ಗಮನಿಸುವಂತಹುದು.
ಅದಿಮ ಸಂಸ್ಕೃತಿ ತನ್ನ ವಿಶಿಷ್ಟತೆಯನ್ನು ಸಂರಕ್ಷಿಸಿಕೊಳ್ಳಲು ಹಿಂಜರಿಯದೆ ತನ್ನ ಸಾಂಸ್ಕೃತಿಕ ಜಗತ್ತನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇರುತ್ತದೆ ಎಂಬುದಕ್ಕೆ ಈ ಬಗೆಯ ಆಚರಣೆಗಳು ಬಹು ದೊಡ್ಡ ಉದಾಹರಣೆಗಳಾಗುತ್ತವೆ. ಪುರಾಣ ಮತ್ತು ಇತಿಹಾಸ ಇವೆರಡನ್ನು ಈ ದೈವಾರಾಧನೆಗಳಲ್ಲಿ ಗುರುತಿಸುವುದು ಮತ್ತು ವರ್ತಮಾನದಲ್ಲಿ ಸಂಘಟಿತರಾಗುವುದು ಇದೆಲ್ಲವೂ ಈ ಮೂಲಕ ಸಾಧ್ಯವಾಗುವುದಾದರೆ ನಾಡಿನಲ್ಲಿ ಸಮುದಾಯಕ್ಕೆ ಇದು ಬಹಳ ಗೌರವವನ್ನು ತಂದು ಕೊಡುವುದರಲ್ಲಿ ಸಂಶಯವಿಲ್ಲ. ಮ್ಯಾಸಬೇಡರ ಜಗತ್ತಿನಲ್ಲಿ ದೇವರು / ಸಾಂಸ್ಕೃತಿಕ ನಾಯಕ, ನಾಯಕಿಯರು ಮತ್ತು ದೇವರ ಎತ್ತುಗಳು ಬಹುದೊಡ್ಡ ಸಂಘಟಕ ಶಕ್ತಿಗಳು ಎಂಬುದನ್ನು ಮರೆಯುವಂತಿಲ್ಲ. ಈ ಮೂಲಕವಾಗಿ ಬುಡಕಟ್ಟು ಸಮುದಾಯದ ಐತಿಹಾಸ, ಸಾಂಸ್ಕೃತಿಕ, ಸಾಮಾಜಿಕ ಹೀಗೆ ಹಲವು ಮುಖಗಳನ್ನು ಕುರಿತು ಅರ್ಥಮಾಡಿಕೊಳ್ಳುವ ಅವಕಾಶವನ್ನು ಪಡೆಯಬಹುದಾಗಿದೆ.

ಜೈ ಮ್ಯಾಸ ಮಂಡಲ

LEAVE A REPLY

Please enter your comment!
Please enter your name here