ಸಿಎಂ ಬೊಮ್ಮಾಯಿ ದಾವೋಸ್ ನಿಂದ ಬಂದ ಮೇಲೆ ಏನಾಗುತ್ತದೆ?

0
104

ಕಳೆದ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ದೆಹಲಿಗೆ ಹೋದರು.
ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಲು ಅವರು ದಾವೋಸ್ ಗೆ ತೆರಳಲು ಎರಡು ದಿನವಷ್ಟೇ ಬಾಕಿ ಇರುವಾಗ ಪಕ್ಷದ ವರಿಷ್ಟರು ಅವರನ್ನು ದೆಹಲಿಗೆ ಕರೆಸಿದ್ದು ಸಹಜವಾಗಿಯೇ ಚರ್ಚೆಗೆ ಗ್ರಾಸವಾಯಿತು.
ಅಂದ ಹಾಗೆ ಬಸವರಾಜ ಬೊಮ್ಮಾಯಿ ಯಾವತ್ತೇ ದೆಹಲಿಗೆ ತೆರಳಲಿ,ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಅವರ ದೆಹಲಿ ಪ್ರವಾಸದ ಬಗ್ಗೆ ಒಂದು ಗುಂಪು,ಸಂಪುಟ ವಿಸ್ತರಣೆ ಇಲ್ಲವೇ ಪುನರ್ರಚನೆಗೆ ವರಿಷ್ಟರ ಒಪ್ಪಿಗೆ ಪಡೆಯಲು ಹೋಗಿದ್ದಾರೆ ಎನ್ನುತ್ತದೆ.
ಅದೇ ಕಾಲಕ್ಕೆ ಮತ್ತೊಂದು ಗುಂಪು:ಏನೇ ಮಾಡಿದರೂ ಸಿಎಂ ಹುದ್ದೆಯಲ್ಲಿ ಬೊಮ್ಮಾಯಿ‌ ಉಳಿಯುವುದು ವರಿಷ್ಟರಿಗೆ ಇಷ್ಟವಿಲ್ಲ.ಇದನ್ನು ಸರಿ ಮಾಡಿಕೊಳ್ಳಲು ಬೊಮ್ಮಾಯಿ ದಿಲ್ಲಿಗೆ ಹೋಗಿದ್ದಾರೆ ಎನ್ನುತ್ತದೆ.
ಅರ್ಥಾತ್,ಈ‌ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಚಾಲ್ತಿಯಲ್ಲಿದ್ದ ತೋಳ ಬಂತು ತೋಳ ಕತೆ ಬೊಮ್ಮಾಯಿ ವಿಷಯದಲ್ಲೂ ರಿಪೀಟ್ ಆಗುತ್ತಿದೆ.
ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ತಿಂಗಳಿಗೆ ಒಂದು ಬಾರಿಯಾದರೂ ಈ ತೋಳ ಬಂತು ತೋಳ ಕತೆ ಪುನರಾವರ್ತನೆಯಾಗುತ್ತಿತ್ತು.
ಈ ಕತೆಯನ್ನು ಯಡಿಯೂರಪ್ಪ ಬಣ ಅದೆಷ್ಟೇ ನಿರಾಕರಿಸುತ್ತಾ ಬಂದರೂ ಅಂತಿಮವಾಗಿ ಆ ಕತೆಯೇ ನಿಜವಾಯಿತು.
ಈಗ ಬಸವರಾಜ ಬೊಮ್ಮಾಯಿ ಪದಚ್ಯುತಿ ಖಂಡಿತ ಎನ್ನುತ್ತಿರುವವರು ಇದನ್ನೇ ಉದಾಹರಣೆಯಾಗಿ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.
ಹೀಗಾಗಿ ಈ ಸಲವೂ ಬೊಮ್ಮಾಯಿ ಅವರ ದೆಹಲಿ ಭೇಟಿ ಇಂಟರೆಸ್ಟಿಂಗ್ ಚರ್ಚೆಗೆ ಕಾರಣವಾಗಿದೆ.
ಯಥಾಪ್ರಕಾರ ಒಂದು‌ ಗುಂಪು:ಮುಖ್ಯಮಂತ್ರಿಗಳ ದೆಹಲಿ ಭೇಟಿಗೆ ವಿಶೇಷ ಅರ್ಥ‌ ಕಲ್ಪಿಸುವ ಅಗತ್ಯವಿಲ್ಲ.ಯಾಕೆಂದರೆ ಈ ಸಲ ಅವರು ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಯಾರಾಗಬೇಕು ಎಂಬುದನ್ನು ನಿರ್ಧರಿಸಲು ದೆಹಲಿಗೆ ಹೋಗಿದ್ದರು ಎನ್ನುತ್ತಿದೆ.
ಆದರೆ ಮತ್ತೊಂದು‌ ಗುಂಪು:ಇದೆಲ್ಲ ಕಾಗಕ್ಕ-ಗುಬ್ಬಕ್ಕನ ಕತೆ.ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯಸಭೆ,ವಿಧಾನಪರಿಷತ್ತಿಗೆ ಯಾರು ಅಭ್ಯರ್ಥಿಗಳಾಗಬೇಕು ಅಂತ ವರಿಷ್ಟರು ಒಂದು ತೀರ್ಮಾನಕ್ಕೆ ಬಂದಾಗಿದೆ ಎನ್ನುತ್ತಿದೆ.
ಅಷ್ಟೇ ಅಲ್ಲ,ಬೊಮ್ಮಾಯಿ ಅವರ ದೆಹಲಿ ಭೇಟಿಯ ಬಗ್ಗೆ ತನ್ನದೇ ಕಾರಣಗಳನ್ನು ವಿವರಿಸುತ್ತಾ:ಸಿಎಂ ಹುದ್ದೆಗೆ ಬಸವರಾಜ ಬೊಮ್ಮಾಯಿ‌ ಕೈಲಿ ರಾಜೀನಾಮೆ ಪಡೆಯಲು ವರಿಷ್ಟರು ಕರೆಸಿಕೊಂಡಿದ್ದರು.ಹೀಗೆ ರಾಜೀನಾಮೆ ಪತ್ರವನ್ನು ಅವರು ಅರುಣ್ ಸಿಂಗ್ ಅವರಿಗೆ ತಲುಪಿಸುವಾಗ ಜೂನ್ ಹದಿಮೂರನೇ ತಾರೀಕಿನ ತನಕ ನನಗೆ ಟೈಮು ಕೊಡಿ ಅಂತ ಕೇಳಿಕೊಂಡಿದ್ದಾರೆ.
ಆದರೆ ಅರುಣ್ ಸಿಂಗ್ ಅವರು,ಈ ಬಗ್ಗೆ ಮೋದಿ,ಅಮಿತ್ ಶಾ ನಿರ್ಧರಿಸುತ್ತಾರೆ ಅಂತ ವಾಪಸು ಕಳಿಸಿದ್ದಾರೆ.
ವರಿಷ್ಟರ ಈಗಿನ ಲೆಕ್ಕಾಚಾರದ ಪ್ರಕಾರ,ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆ ಪ್ರಕ್ರಿಯೆ ಮುಗಿದ ಕೂಡಲೇ ಬೊಮ್ಮಾಯಿ ಅಧಿಕಾರ ತ್ಯಾಗಕ್ಕೆ ಸಜ್ಜಾಗಬೇಕಾಗುತ್ತದೆ.
ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದವರು ದಡ ಸೇರಿದ ದಿನವೇ ಬೊಮ್ಮಾಯಿ ಸಿಎಂಗಿರಿಗೆ ಡೆಡ್ ಲೈನು ಎಂಬುದು ಈ ಗುಂಪಿನ ವಾದ.
ಅಂದ ಹಾಗೆ ಬೊಮ್ಮಾಯಿ ಅವರನ್ನು ಇಳಿಸುವ ತೀರ್ಮಾನಕ್ಕೆ ವರಿಷ್ಟರು ಬಂದಿದ್ದಾರೆಂಬುದೇ ನಿಜವಾದರೆ ಅವರನ್ನೇಕೆ ದಾವೋಸ್ ಗೆ ಕಳಿಸಲು ಒಪ್ಪಿದರು ಎಂದು ಕೇಳಿದರೆ,ಅಲ್ಲಿ ಬಿಜೆಪಿ ಸರ್ಕಾರಗಳಿಗೆ ಬಿಲ್ಡ್ ಅಪ್ ಕೊಡಲು ಬೇರೆಯವರಿಲ್ಲ.ಹೋದವರ ಪೈಕಿ ಇಂತಹ ಬಿಲ್ಡಪ್ಪು ಕೊಡುವವರು ಬೊಮ್ಮಾಯಿ ಮಾತ್ರ.ಹೀಗಾಗಿ ಅವರ ವಿದೇಶ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ತೋರಿಸಲಾಗಿದೆ ಎಂದು ಈ ಗುಂಪು ಹೇಳುತ್ತಿದೆ.

ಅಂದ ಹಾಗೆ ಬಸವರಾಜ ಬೊಮ್ಮಾಯಿ ಅವರು ಕೆಳಗಿಳಿಯಲಿದ್ದಾರೆ ಎನ್ನುತ್ತಿರುವ ಗುಂಪು:ಬೊಮ್ಮಾಯಿ ಹೇಗೆ ಅಪ್ ಸೆಟ್ ಆಗಿದ್ದಾರೆ ಎಂಬುದನ್ನು ಹೆಕ್ಕಿ ತೋರಿಸುತ್ತಿದೆ.
ಅದರ ಪ್ರಕಾರ,ತಾವು ಅಧಿಕಾರದಿಂದ ಕೆಳಗಿಳಿಯುವ ಘಳಿಗೆ ಹತ್ತಿರವಾಗುತ್ತಿದೆ ಎಂಬುದನ್ನು ಅರಿತ ಬೊಮ್ಮಾಯಿ ತಮಗಿಂತ ಮುಂಚೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರನ್ನು ದಿಲ್ಲಿಗೆ ಕಳಿಸಿದ್ದರು.ಹೀಗೆ ದಿಲ್ಲಿಗೆ ಹೋದ ಸುಧಾಕರ್ ತಮ್ಮ ಪರವಾಗಿ ವರಿಷ್ಟರ ಬಳಿ ಲಾಬಿ ಮಾಡಲಿ ಎಂದು ಬೊಮ್ಮಾಯಿ ಬಯಸಿದ್ದರು.
ಆದರೆ ಬೊಮ್ಮಾಯಿ ಅವರಿಗಿಂತ ಮುಂಚಿತವಾಗಿ ದಿಲ್ಲಿಯಲ್ಲಿ ಬೀಡು ಬಿಟ್ಟ ಡಾ.ಸುಧಾಕರ್ ಏನು ಲಾಬಿ ಮಾಡಿದರು ಎಂಬುದು ಈವರೆಗೂ ಚಿದಂಬರ ರಹಸ್ಯ.
ಹೀಗೆ ಹೋದವರು ಬೊಮ್ಮಾಯಿ ಖುರ್ಚಿ ಉಳಿಸಲು ಲಾಬಿ ಮಾಡಿದರೋ?ತಮಗೆ ಡಿಸಿಎಂ ಹುದ್ದೆ ಕೊಡಿ ಎಂದು ಲಾಬಿ ಮಾಡಿದರೋ?ಅಥವಾ ಬೊಮ್ಮಾಯಿ ಕೆಳಗಿಳಿಯುವುದು ಗ್ಯಾರಂಟಿ ಎಂದಾದರೆ ತಮಗೇ ಸಿಎಂ ಹುದ್ದೆಯ ಚಾನ್ಸು ಕೊಡಿ ಅಂತ ಲಾಬಿ ಮಾಡಿ ಬಂದರೋ?ಗೊತ್ತಿಲ್ಲ.
ಆದರೆ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಹಳೆ ಮೈಸೂರಿನಲ್ಲಿ ಸಧೃಢವಾಗಿ ಕಟ್ಟುವ ಬಗ್ಗೆ ಅವರು ಬಿಲ್ಡಪ್ಪು ಕೊಡುತ್ತಿರುವುದಂತೂ ನಿಜ.
ಅರ್ಥಾತ್,ಬೊಮ್ಮಾಯಿ‌ ನಿರ್ಗಮನ ಹತ್ತಿರವಾಗುತ್ತಿದೆ ಎಂಬುದಕ್ಕೆ ಈ ಬೆಳವಣಿಗೆ ಒಂದು ಸಿಗ್ನಲ್ ಎಂಬುದು ಈ ಗುಂಪಿನ ವಾದ.

ಇನ್ನು ತಮಗೆ ಗೇಟ್ ಪಾಸ್ ಸಿಗಲಿದೆ ಎಂಬ ಸುಳಿವು ಸಿಗುತ್ತಿದ್ದಂತೆಯೇ ಬೊಮ್ಮಾಯಿ ಎಷ್ಟು ಹತಾಶರಾಗಿದ್ದಾರೆ ಎಂದರೆ ಇತ್ತೀಚೆಗೆ ಅಧಿಕಾರಿಗಳ ಜತೆ ಸಭೆ ನಡೆಸುವಾಗ ಅವರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ.
ಕೆಲ ದಿನಗಳ ಹಿಂದೆ ನೀರಾವರಿಗೆ ಸಂಬಂಧಿಸಿದಂತೆ ಬೊಮ್ಮಾಯಿ ಒಂದು ಸಭೆ ನಡೆಸಿದರು.
ಈ ಸಭೆಯ ಮಧ್ಯೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಯೊಬ್ಬರ ವಿವರಣೆಯಿಂದ ತೃಪ್ತರಾಗದ ಬೊಮ್ಮಾಯಿ,ಯೇ..ಏನ್ರೀ ಹೀಗೆ ಇರ್ರೆಸ್ಪಾನ್ಸಿಬಲ್ ಆಗಿ ಮಾತಾಡ್ತೀರಿ ಎಂದಿದ್ದಾರೆ.
ಅದಕ್ಕೆ ಆ ಅಧಿಕಾರಿ:ಅದು ಹಾಗಲ್ಲ ಸಾರ್ ಎಂದು‌ ಹೇಳಲು ಪ್ರಯತ್ನಿಸಿದಾಗ;ಯೇ ಹೋಗ್ರೀ..ಹೋಗಿ ‘ಡಿ’ ಕಾಯ್ರಿ ಎಂದಿದ್ದಾರೆ.
ಇದೇ ರೀತಿ ತಮ್ಮ ಸರ್ಕಾರದ ಮುಖಕ್ಕೆ ಕಪ್ಪು‌ ಮಸಿ ಬಳಿದ ಪಿ.ಎಸ್.ಐ ನೇಮಕಾತಿ ಹಗರಣದ ಬಗ್ಗೆ ಮೊನ್ನೆ ಪೋಲೀಸ್ ಅಧಿಕಾರಿಗಳ ಸಭೆ ನಡೆಸಿದಾಗ ಉನ್ನತಾಧಿಕಾರಿಯೊಬ್ಬರಿಗೆ ವಿವರಣೆ ಕೇಳಿದ್ದಾರೆ.
ಇದಕ್ಕುತ್ತರಿಸಿದ ಆ ಅಧಿಕಾರಿ,ಈ ವಿಷಯ ಹೇಗೆ ಹಗರಣದ ರೂಪ ಪಡೆಯಿತೋ ನಮಗೆ‌ ಗೊತ್ತಿಲ್ಲ ಸಾರ್ ಎಂದರಂತೆ.
ಅವರು ಹಾಗೆ ಹೇಳಿದ್ದೇ ತಡ,ಬೊಮ್ಮಾಯಿ ಕೆಂಡಾಮಂಡಲರಾಗಿ:ಏನ್ರೀ ಮಾತಾಡ್ತೀರಿ?ಲಿಖಿತ ಪರೀಕ್ಷೆ ಮಾಡಿದವರು ನೀವು.ಸದರಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಮಾಡಿಸಿದವರು ನೀವು.ಈಗ ನಮಗೇನೂ ಗೊತ್ತಿಲ್ಲ ಅಂದರೆ?ಯೂ ಆರ್ ಅನ್ ಫಿಟ್ ಎಂದು ಗುಡುಗಿದರಂತೆ.
ಹೀಗೆ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳ ಸಭೆಯಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿರುವ ಎಪಿಸೋಡುಗಳನ್ನು ಸದರಿ ಗುಂಪು ಉದಾಹರಣೆಯಾಗಿ ತೋರಿಸುತ್ತಿದೆ.
ಈ ಮಧ್ಯೆ ಬೊಮ್ಮಾಯಿ ಅವರಿಗೆ ದಿಲ್ಲಿಗೆ ಹೋಗುವ. ಮುನ್ನ ತ್ರಿಪುರಾ ಮುಖ್ಯಮಂತ್ರಿಯ ರಾಜೀನಾಮೆ ಎಪಿಸೋಡು ಆತಂಕ ಹುಟ್ಟಿಸಿದ್ದು ಸಹಜವೇ.
ಅಂದ ಹಾಗೆ ಮುಖ್ಯಮಂತ್ರಿಗಳನ್ನು ಬದಲಿಸುವಾಗ ತಮಗೆ ಬೇಕಾದಂತೆ ಸ್ಕ್ರೀನ್ ಪ್ಲೇ,ಸ್ಟೋರಿ,ಡೈರೆಕ್ಷನ್ನುಗಳ ರೂಪವನ್ನು ನಿರ್ಧರಿಸುವ ಬಿಜೆಪಿ ಹೈಕಮಾಂಡ್ ಇತ್ತೀಚೆಗೆ ತ್ರಿಪುರಾ ಮುಖ್ಯಮಂತ್ರಿಯ ವಿಷಯದಲ್ಲೂ‌ ಅದನ್ನೇ ಮಾಡಿತ್ತು.
ಅಮಿತ್ ಶಾ,ಜೆ.ಪಿ.ನಡ್ಡಾ ಸೇರಿದಂತೆ ವರಿಷ್ಟರು ರೂಪಿಸಿದ ಗೇಮ್ ಪ್ಲಾನಿನ ಪ್ರಕಾರ ರಾಜೀನಾಮೆ ಕೊಟ್ಟ ತ್ರಿಪುರಾ ಸಿಎಂ ತದ ನಂತರ,ನನ್ನ ಸ್ವ ಇಚ್ಚೆಯಿಂದ ರಾಜೀನಾಮೆ ಕೊಟ್ಟಿದ್ದೇನೆ ಎಂದು ಜನರ‌ ಮುಂದೆ ಡೈಲಾಗು ಹೊಡೆಯಬೇಕಿತ್ತು.
ಆದರೆ ಅವರು ವರಿಷ್ಟರು ತಮ್ಮಿಂದ ರಾಜೀನಾಮೆ ಪಡೆದರು ಎಂದು ನೇರವಾಗಿಯೇ ಹೇಳಿಬಿಟ್ಟರು.
ಅರ್ಥಾತ್,ಇದು ತಮಗೂ‌ ಕಾದಿರುವ ಪರಿಸ್ಥಿತಿ ಎಂಬುದು ಬಸವರಾಜ ಬೊಮ್ಮಾಯಿ ಅವರಿಗೆ ಕನ್ ಫರ್ಮ್ ಆಗಿದೆ.
ಅಂದ ಹಾಗೆ ಯಡಿಯೂರಪ್ಪನವರು ಸಿಎಂ ಹುದ್ದೆಯಿಂದ ಕೆಳಗಿಳಿಯುವಾಗ ಕಣ್ಣೀರು‌ ಹಾಕಿ:ನನ್ನ ಸ್ವಂತ ಇಚ್ಚೆಯ ಮೇಲೆ ರಾಜೀನಾಮೆ ಕೊಡುತ್ತಿರುವುದಾಗಿ ಹೇಳಿದ್ದರು.
ಹಾಗಿದ್ದ ಮೇಲೆ ಕಣ್ಣೀರೇಕೆ ಎಂದರೆ,ಇದು‌ ಕಣ್ಣೀರಲ್ಲ,ಆನಂದ ಭಾಷ್ಪ ಎಂದಿದ್ದರು.
ಅಂದ ಹಾಗೆ ಯಡಿಯೂರಪ್ಪನವರು ಇತ್ತೀಚಿನ ವರ್ಷಗಳಲ್ಲಿ ಆನಂದ ಭಾಷ್ಪ ಸುರಿಸಿದ್ದು ಮೂರು ಬಾರಿ.
ಮೊದಲ ಬಾರಿ ಅವರು ಆನಂದ ಭಾಷ್ಪ ಸುರಿಸಿದ್ದು 2008-11 ರ ಮಧ್ಯೆ.ಆ ಸಂದರ್ಭದಲ್ಲಿ ಗಣಿರೆಡ್ಡಿಗಳ ಬಂಡಾಯ ಶಮನಗೊಳಿಸಲು ಅವರು ತಮ್ಮ ಸಂಪುಟದಲ್ಲಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರನ್ನು ಕೈ ಬಿಡಬೇಕಾಯಿತು.
ಎರಡನೇ ಬಾರಿ ಅವರು ಆನಂದ ಭಾಷ್ಪ ಸುರಿಸಿದ್ದು 2018 ರಲ್ಲಿ.ಆ ಸಂದರ್ಭದಲ್ಲಿ ಅವರು ತಮ್ಮ ಕೈಗೆ ಬಂದ ಅಧಿಕಾರವನ್ನು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಡಬೇಕಾಗಿ ಬಂದಿತ್ತು.
ಹೀಗಾಗಿ ಅವತ್ತು ತುಂಬಿದ ವಿಧಾನಸಭೆಯಲ್ಲಿ:ರಾಜ್ಯದ ರೈತರ ಕಣ್ಣೊರೆಸುವುದು ನನ್ನ ಗುರಿ.ಅದಕ್ಕಾಗಿ ಅಧಿಕಾರ ಉಳಿಯಲಿ ಎಂಬುದು ನನ್ನ ಆಸೆಯಾಗಿತ್ತು ಅಂತ ಹೇಳುತ್ತಲೇ ಗದ್ಗದಿತರಾಗಿದ್ದರು.
ಅದಾದ ನಂತರ ಅವರು 2021 ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಬೇಕಾಗಿ ಬಂದಾಗ ಆನಂದ ಭಾಷ್ಪ ಸುರಿಸಿದ್ದರು.
ಆದರೆ ತ್ರಿಪುರಾ ಮುಖ್ಯಮಂತ್ರಿ ಮೊನ್ನೆ ರಾಜೀನಾಮೆ ಕೊಡುವಾಗ ತೆರೆಯ ಹಿಂದೆ ನಡೆದದ್ದೇನು ಅಂತ ಹೇಳಿದರಲ್ಲ?ಅದಾದ ನಂತರ ಯಡಿಯೂರಪ್ಪ ಅವತ್ತು ಸುರಿಸಿದ್ದು ಆನಂದ ಭಾಷ್ಪವಲ್ಲ.ಸಂಕಟದ ಅಳು ಎಂಬುದು ಎಲ್ಲರಿಗೂ ಅರ್ಥವಾಗಿದೆ.
ಹೀಗಾಗಿ ತಮಗೂ ತ್ರಿಪುರಾ ಸಿಎಂ ಅವರಿಗಾದ ಗತಿಯೇ ಕಾದಿದೆ ಎಂಬುದು ಬೊಮ್ಮಾಯಿ ಅವರಿಗೆ ಕಳೆದ ವಾರ ದಿಲ್ಲಿಗೆ ಹೋಗುವ ಮುನ್ನವೇ ಗೊತ್ತಾಗಿತ್ತು.
ಅಂದ ಹಾಗೆ ಇದಕ್ಕೂ ಮುನ್ನ ದಿಲ್ಲಿಗೆ ಹೋಗಿದ್ದಾಗ ಅವರು ಅಮಿತ್ ಶಾ ಅವರ ಬಳಿ:ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ವಿಧಾನಪರಿಷತ್ ಚುನಾವಣೆಯ ಟಿಕೇಟು ಕೊಡೋಣ ಸಾರ್ ಎಂದು ಮನವಿ ಮಾಡಿಕೊಂಡಿದ್ದರು.
ಹೀಗೆ ಮಾಡುವುದರಿಂದ ತಮ್ಮ ಖುರ್ಚಿಯ ಮೇಲಿರುವ ಕೆಟ್ಟ ಕಣ್ಣುಗಳು ಮಾಯವಾಗುತ್ತವೆ ಎಂಬುದು ಅವರ ಯೋಚನೆಯಾಗಿತ್ತು.
ಆದರೆ ಈಗಿನ ಪರಿಸ್ಥಿತಿ ನೋಡಿದರೆ ಎಲ್ಲವೂ ಅವರ ಕಂಟ್ರೋಲು ಮೀರಿ ಹೋಗಿದೆ ಅನ್ನುವುದು ಅನ್ನುವುದು ಒಂದು ಗುಂಪಿನ ವಾದ.
ಹೀಗಾಗಿ ತೋಳ ಬಂತು ತೋಳ ಕತೆ ಬೊಮ್ಮಾಯಿ ಅವರ ವಿಷಯದಲ್ಲೂ ರಂಗು ರಂಗಾಗಿ ಕಾಣುತ್ತಿದೆ.
ಈ ಕತೆ ಮುಂದುವರಿಯುತ್ತದೋ?ಅಂತ್ಯವಾಗುತ್ತದೋ?ಎಂಬುದು ಬೊಮ್ಮಾಯಿ ದಾವೋಸ್ ನಿಂದ ಮರಳಿದ ನಂತರ ನಿಕ್ಕಿಯಾಗುತ್ತದೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here