ಹದಿಹರೆಯ ಮಕ್ಕಳಿಗೆ ಪೋಷಕರ ಹಾಗೂ ಶಿಕ್ಷಕರ ಮಾರ್ಗದರ್ಶನ ಅವಶ್ಯಕ
ಡಾ. ಶರಣಬಸಪ್ಪ ಗಣಜಲಖೇಡ

0
104

ಕಲಬುರಗಿ.ಮಾ.17 -ಹದಿಹರೆಯದ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬದಲಾವಣೆಯಿಂದ ಮನಸ್ಸಿನಲ್ಲಿ ಆತಂಕ, ಭಯ, ಖಿನ್ನತೆಯಿಂದ ಮಾನಸಿಕ ಚಂಚಲತೆಗೆ ಕಾರಣವಾಗಿ ದಾರಿ ತಪ್ಪುವ ಸಂಭವ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಪೋಷಕರು ಹಾಗೂ ಶಿಕ್ಷಕರ ಸೂಕ್ತ ಮಾರ್ಗದರ್ಶನ ನೀಡಿ ಅವರಲ್ಲಿ ಧೈರ್ಯ ತುಂಬಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ ಅವರು ತಿಳಿಸಿದರು.
ಗುರುವಾರದ ನಗರದ ಕನ್ನಡ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಹಾಗೂ ಪ್ರಗತಿ ಅಭಿವೃದ್ಧಿ ಸಂಸ್ಥೆ ಕಲಬುರಗಿ ಇವುಗಳ ಸಂಯಕ್ತಾಶ್ರಯದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹದಿಹರೆಯದ ವಯಸ್ಸಿನಲ್ಲಿಯೇ ಮಕ್ಕಳು ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಂಡರೆ ಜೀವನ ಪೂರ್ತಿ ಪಶ್ಚಾತಾಪ ಪಡಬೇಕಾಗುತ್ತದೆ. ಕೆಟ್ಟ ಚಟಗಳಿಗೆ ಬಲಿಯಾಗದೆ ಮುಂದಿನ ಜೀವನ ರೂಪಿಸಿಕೊಳ್ಳುವದರ ಕಡೆ ಹೆಚ್ಚಿನ ಗಮನಹರಿಸಬೇಕು ಎಂದರು.
ಜಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಡಾ. ಅಂಬಾರಾಯ ಎಸ್. ರುದ್ರವಾಡಿ ಅವರು ಮಾತನಾಡಿ, ಮಕ್ಕಳು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ತಲುಪುವ ಹಂತದಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಉಂಟಾಗುವುದರಿಂದ ಸಹಜವಾಗಿ ಮಕ್ಕಳಲ್ಲಿ ಕೆಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಮಕ್ಕಳು ಸೂಕ್ತ ಮಾರ್ಗದರ್ಶನ ಪಡೆಯುವುದು ಅವಶ್ಯಕವಾಗಿರುತ್ತದೆ. ಹೀಗಾಗಿ ಮಕ್ಕಳು ಯಾವುದೇ ಭಯವಿಲ್ಲದೆ ಪೋಷಕರಿಗೆ, ಶಿಕ್ಷಕರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಎಂದರು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಪ್ರಭುಲಿಂಗ ಕೆ. ಮಾನಕರ್ ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿ, ಹದಿಹರೆಯದ ವಯಸ್ಸಿನ ಮಕ್ಕಳು ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳುವುದಲ್ಲದೆ ಪೌಷ್ಟಿಕ ಆಹಾರ ಸೇವಿಸಬೇಕು. ದೈಹಿಕ, ಮಾನಸಿಕ ಸಮಸ್ಯೆಗಳು ಉಂಟಾದರೆ ಪ್ರಾಥಮಿಕ ಆರೋಗ್ಯ ಘಟಕಗಳಲ್ಲಿರುವ ಸ್ನೇಹ ಕ್ಲಿನಿಕ್‍ನಿಂದ ಉಚಿತವಾಗಿ ಮಾರ್ಗದರ್ಶನ ಪಡೆಯಬಹುದು ಎಂದು ಸಲಹೆ ನೀಡಿದರು.
ಕಲಬುರಗಿ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರೆಮ್ಮ ಢವಳಗಿ ಮಾತನಾಡಿ, ಪೌಷ್ಟಿಕಾಂಶ ಆಹಾರದ ಕೊರತೆಯಿಂದ ಮಕ್ಕಳು ಓದುವುದರಲ್ಲಿ ಹೆಚ್ಚು ಗಮನಹರಿಸುತ್ತಿಲ್ಲ. ಇದರಿಂದ ಶಾರೀರಿಕ ಬೆಳವಣಿಗೆಗೂ ತೊಂದರೆಯಾಗುತ್ತದೆ. ಪೋಷಕರು ಮಕ್ಕಳ ಊಟದ ಕಡೆ ಹೆಚ್ಚು ಗಮನ ಹರಿಸಬೇಕು. ಮಕ್ಕಳು ಶಾಲೆಯಲ್ಲಿ ನೀಡುವ ಹಾಲು, ಮೊಟ್ಟೆ ಹಾಗೂ ಬಾಳೆ ಹಣ್ಣು ಸೇವಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕಿ ದೀಪಾರೆಡ್ಡಿ, ಕಲಬುರಗಿ ಮಹಿಳಾ ಸೇವಾ ಸಮಾಜ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯಗುರು ಸಂತೋಷ ಹವಾಲ್ದಾರ, ಜೀವನಪ್ರಕಾಶ ಪ್ರೌಢ ಶಾಲೆಯ ಮುಖ್ಯಗುರು ಅಮರೇಶ್ವರ ಶಿಳ್ಳಿ, ರೋಟರಿ ಕ್ಲಬ್ ಪ್ರೌಢ ಶಾಲೆಯ ಪ್ರಭಾರಿ ಮುಖ್ಯಗುರು ಪಾಂಡುರಂಗ ಕಟಕೆ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಆಪ್ತ ಸಮಾಲೋಚಕ ಅಲ್ಲಮಪ್ರಭು ನಿಂಬರ್ಗಾ ನಿರೂಪಿಸಿದರು. ಆರ್.ಕೆ.ಎಸ್.ಕೆ ಜಿಲ್ಲಾ ಸಂಯೋಜಕ ಶಿವಕುಮಾರ ಕಾಂಬಳೆ ಸ್ವಾಗತಿಸಿದರೆ, ಜಿಮ್ಸ್ ಆಸ್ಪತ್ರೆಯ ಆಪ್ತ ಸಮಾಲೋಚಕಿ ರೇಣುಕಾ ಮಾಲಿಪಾಟೀಲ್ ವಂದಿಸಿದರು.

LEAVE A REPLY

Please enter your comment!
Please enter your name here