ನವೀನ್ ಅಂತ್ಯಕ್ರಿಯೆಗೆ ತೆರಳುವ ಮುನ್ನ ದಾವಣಗೆರೆಯಲ್ಲಿ ಸಿ.ಎಂ ಹೇಳಿಕೆ
ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ವೆಚ್ಚ ಕಡಿತಕ್ಕೆ ಚಿಂತನೆ.

0
72

ದಾವಣಗೆರೆ ಮಾ.21: ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಶುಲ್ಕ ಕಡಿಮೆ ಮಾಡಲು ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಷ್ಯಾ-ಉಕ್ರೇನ್ ಯುದ್ದದಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿಯ ನವೀನ್ ಗ್ಯಾನಗೌಡರ್ ಅಂತ್ಯಕ್ರಿಯೆಗೆ ತೆರಳುವ ಸಲುವಾಗಿ ದಾವಣಗೆರೆ ಜಿ.ಎಂ.ಐ.ಟಿ ಹೆಲಿಪ್ಯಾಡ್‍ಗೆ ಬಂದಿಳಿದ ಮುಖ್ಯಮಂತ್ರಿಗಳು ಮಾಧ್ಯಮದವರೊಂದಿಗೆ ಮಾತನಾಡಿ, ವೈದ್ಯಕೀಯ ಶಿಕ್ಷಣದಲ್ಲಿ ಎ.ಬಿ.ಸಿ ಕೆಟಗರಿ ಮಾಡುವ ಮೂಲಕ ಶುಲ್ಕ ಇಳಿಕೆಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚಿಂತಿಸಲಾಗಿದೆ, ವೈದ್ಯಕೀಯ ಶಿಕ್ಷಣ ‘ನ್ಯಾಷನಲ್ ಮೆಡಿಕಲ್ ಕೌನ್ಸಿಲ್’ ವ್ಯಾಪ್ತಿಗೆ ಒಳಪಡುವುದರಿಂದ ದೇಶದಾದ್ಯಂತ ಏಕರೂಪ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದರು.
ಉಕ್ರೇನ್ ಯುದ್ಧದ ನಂತರ ಈ ಕುರಿತು ಹಲವಾರು ಬೆಳವಣಿಗೆಗಳಾಗಿದ್ದು ಉಕ್ರೇನ್ ದೇಶದ ವೈದ್ಯಕೀಯ ಕೋರ್ಸಿಗೂ, ನಮ್ಮ ಭಾರತ ದೇಶದ ವೈದ್ಯಕೀಯ ಕೋರ್ಸಿಗೂ ಭಿನ್ನತೆಯಿದ್ದು ಉಕ್ರೇನ್‍ನಲ್ಲಿ ಕೋರ್ಸ್ ಪೂರ್ಣಗೊಂಡಿದ್ದರೂ ಕೂಡ ನಮ್ಮ ದೇಶದಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ.
ಪರೀಕ್ಷೆಯಲ್ಲಿ ಶೇ.95 ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿಲ್ಲ, ಹಾಗಾಗಿ ಆ ವಿದ್ಯಾರ್ಥಿಗಳು ಮ್ಯಾನೇಜ್‍ಮೆಂಟ್ ಸೀಟ್, ಎನ್‍ಆರ್‍ಐ ಸೀಟ್ ಅರಸಿ ಹೋಗುತ್ತಾರೆ. ಪ್ರಥಮ, ದ್ವಿತೀಯ, ತೃತೀಯ ವರ್ಷದಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಹಿಂದಿರುಗಿ ಬಂದಿದ್ದಾರೆ. ಹಾಗಾಗಿ ಅವರ ಮುಂದಿನ ವಿದ್ಯಾಭ್ಯಾಸದ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದರು.
ಆಪರೇಷನ್ ಗಂಗಾ ಯೋಜನೆಗೂ ಮುನ್ನ ಕರ್ನಾಟಕದ 61 ವಿದ್ಯಾರ್ಥಿಗಳು ಉಕ್ರೇನ್‍ನಿಂದ ರಾಜ್ಯಕ್ಕೆ ಮರಳಿದ್ದರು. ‘ಆಪರೇಷನ್ ಗಂಗಾ’ ಮೂಲಕ 572 ವಿದ್ಯಾರ್ಥಿಗಳನ್ನು ವಾಪಸ್ಸು ಕರೆ ತರಲಾಗಿದೆ. ಒಟ್ಟಾರೆ ದೇಶದಲ್ಲಿ 19 ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮರಳಿ ದೇಶಕ್ಕೆ ಕರೆತರಲಾಗಿದೆ. ಈ ಎಲ್ಲಾ ವಿದ್ಯಾರ್ಥಿಗಳು ಉಕ್ರೇನ್ ಗಡಿಗೆ ಬರಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ, ನಮ್ಮ ದೇಶದ ರಾಷ್ಟ್ರ ಧ್ವಜವನ್ನು ಹಿಡಿದು ಬಂದುದರಿಂದ ಸುರಕ್ಷಿತವಾಗಿ ಗಡಿಗೆ ಬರಲು ಸಾಧ್ಯವಾಗಿದೆ. ಎಷ್ಟೋ ದೇಶಗಳ ವಿಧ್ಯಾರ್ಥಿಗಳು ಭಾರತ ದೇಶದ ಧ್ವಜವನ್ನು ಹಿಡಿದು ಬಂದಿದ್ದಾರೆ. ಹಾಗಾಗಿ ನಮ್ಮ ದೇಶದ ವರ್ಚಸ್ಸು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ವೃದ್ದಿಸಿದೆ. ಎರಡು ರಾಷ್ಟ್ರಗಳ ನಡುವೆ ಯುದ್ದ ನಡೆಯುವ ಸಂದರ್ಭದಲ್ಲಿ ಸೈನಿಕರ ಮೃತದೇಹ ತರುವುದೇ ಕಷ್ಟಕರವಾದ ಕೆಲಸ, ಇನ್ನು ನಾಗರಿಕರ ಮೃತದೇಹ ತರುವುದು ಬಹಳ ಕಷ್ಟ. ಪಾರ್ಥಿವ ಶರೀರವನ್ನು ಬಹಳ ದಿನ ಸಂರಕ್ಷಿಸಿ ಇಡಬೇಕಾಗುತ್ತದೆ. ಮೃತ ದೇಹವನ್ನು ಉಕ್ರೇನ್ ನಿಂದ ಪೋಲೆಂಡ್ ದೇಶಕ್ಕೆ ತಂದು ಅಲ್ಲಿಂದ ಸೌದಿ ಮೂಲಕ ನಮ್ಮ ದೇಶಕ್ಕೆ ತರುವಲ್ಲಿ ಹಲವರ ಪಾತ್ರ ಮಹತ್ವದ್ದಾಗಿದೆ, ಈ ಪ್ರಕ್ರಿಯೆಗೆ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಬೇಕಾಗುತ್ತದೆ. ಇಂತಹ ತುರ್ತು ವೇಳೆಯಲ್ಲಿಯೂ ನವೀನ್ ಮೃತದೇಹ ಮರಳಿ ತರಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವರು, ಉಕ್ರೇನ್ ಹಾಗೂ ಭಾರತದ ವಿದೇಶಾಂಗ ಅಧಿಕಾರಿಗಳು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಾತುಕತೆ ನಡೆಸಿದ ಫಲವಾಗಿ ನವೀನ್ ಮೃತದೇಹ ಮರಳಿ ತರಲು ಸಾಧ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಡಾ.ಜಿ.ಎಂ ಸಿದ್ದೇಶ್ವರ, ಶಾಸಕ ಎಸ್.ಎ ರವೀಂದ್ರನಾಥ್, ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್, ಜಿಪಂ ಸಿಇಒ ಚೆನ್ನಪ್ಪ, ಮೇಯರ್ ಗಾಯಿತ್ರಿಬಾಯಿ, ಧೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಹಾಗೂ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here