ಸುಗ್ಗೇನಹಳ್ಳಿ ಗ್ರಾಮಸ್ಥರ ಸಮಸ್ಯೆಗಳಿಗೆ ದನಿಯಾದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ.

0
87

ಬಳ್ಳಾರಿ,ಮಾ.21:ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದಲ್ಲಿ ಸೋಮವಾರ ಗ್ರಾಮವಾಸ್ತವ್ಯ ನಡೆಸಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದ ನಿಮಿತ್ತ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು ಮತ್ತು ಗ್ರಾಮದೆಲ್ಲೆಡೆ ಸಂಚರಿಸಿ ರಸ್ತೆಗಳು,ಚರಂಡಿ,ಸ್ವಚ್ಛತೆ ಹಾಗೂ ಇನ್ನೀತರ ಮೂಲಸೌಕರ್ಯ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದರು ಮತ್ತು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳು ನೀಡಿದ್ದು ಕಂಡುಬಂದಿತು.
ಈ ಗ್ರಾಮವಾಸ್ತವ್ಯ ನಡೆಸುವುದಕ್ಕಿಂತ 15 ದಿನಗಳ ಮುಂಚೆಯೇ ಗ್ರಾಮಕ್ಕೆ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಿ ಪಿಂಚಣಿ,ಪಹಣಿ,ದಾಖಲೆಗಳ ತಿದ್ದುಪಡಿ,ರೇಶನ್ ಕಾರ್ಡ್ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಬಗೆಹರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದರು.
ಸುಗ್ಗೇನಹಳ್ಳಿ ಗ್ರಾಮಕ್ಕೆ ಒಂದೂವರೆ ಎಕರೆ ಜಾಗವನ್ನು ಸ್ಮಶಾನಕ್ಕೆ ಮೀಸಲಿಟ್ಟು ಆದೇಶ ಹೊರಡಿಸಲಾಗಿದೆ. ಪಡಿತರ ಚೀಟಿ ಇರದ 58 ಜನರಿಗೆ ರೇಶನ್ ಕಾರ್ಡ್ ವಿತರಿಸಲಾಗಿದೆ. 6 ಜನ ರೈತರ ಪಹಣಿಯಲ್ಲಿ ಸರಕಾರ ಅಥವಾ ಇನಾಂ ಅಂತ ನಮೂದಾಗಿರುವುದನ್ನು ಸರಿಪಡಿಸಲಾಗಿದೆ. ಪಿಂಚಣಿ ಸೇರಿದಂತೆ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಈ ಗ್ರಾಮದಲ್ಲಿ ಬಗೆಹರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಸುಗ್ಗೇನಹಳ್ಳಿಯಲ್ಲಿ 220 ಜನರಿಗೆ ನಿವೇಶನ ಮತ್ತು ಮನೆ ಇರದಿರುವುದು ಗುರುತಿಸಲಾಗಿದ್ದು,ಅವರಿಗೆ ಆಶ್ರಯಮನೆಗಳನ್ನು ಒದಗಿಸುವ ನಿಟ್ಟಿನಲ್ಲಿ ಜಾಗ ಹುಡುಕಾಟ ನಡೆದಿದೆ;ಯಾರಾದರೂ ಜಮೀನು ನೀಡಲು ಮುಂದೆ ಬಂದಲ್ಲಿ ಅದನ್ನು ಖರೀದಿಸಿ ಅವರಿಗೆ ಸೂರಿಲ್ಲದವರಿಗೆ ಸೂರು ಒದಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಬಸ್‍ಗಳ ಸಂಚಾರ ಸಮಸ್ಯೆ ಕುರಿತು ಗ್ರಾಮಸ್ಥರು ಪ್ರಸ್ತಾಪಿಸಿದಕ್ಕೆ ಕೂಡಲೇ ಸ್ಥಳದಲ್ಲಿದ್ದ ಎನ್‍ಇಕೆಎಸ್‍ಆರ್‍ಟಿಸಿ ಡಿಟಿಒ ಚಂದ್ರಶೇಖರ ಅವರನ್ನು ಈ ಸಮಸ್ಯೆ ಬಗೆಹರಿಸಿ ವರದಿ ನೀಡುವಂತೆ ಸೂಚನೆ ನೀಡಿದರು.
ಸುಗ್ಗೇನಹಳ್ಳಿಯಿಂದ ಶಾರದಾನಗರ ಹೋಗುವ ಹಳ್ಳದ ಸೇತುವೆ ಎತ್ತರಿಸುವಂತೆ ಗ್ರಾಮಸ್ಥರು ಕೋರಿದ್ದಕ್ಕೆ ಡಿಸಿ ಅವರು ಇದು ಎತ್ತರಿಸುವುದಕ್ಕಾಗುವುದಿಲ್ಲ;ಇದರ ಸುತ್ತಮುತ್ತ ಒತ್ತುವರಿ ಮಾಡಿಕೊಂಡದನ್ನು ಸರಿಪಡಿಸಿ ಹಳ್ಳದ ನೀರು ಸರಾಗವಾಗಿ ಹರಿದುಹೋಗುವಂತೆ ನೋಡಿಕೊಳ್ಳಲಾಗುವುದು ಎಂದರು. ಗ್ರಾಮದ ಶಾಲೆಯ ದುರಸ್ತಿಯನ್ನು ಶೀಘ್ರ ಸರಿಪಡಿಸಲಾಗುವುದು ಎಂದರು.
ಗ್ರಾಮದಲ್ಲಿ ರಸ್ತೆ ದುರಸ್ತಿ, ಚರಂಡಿ ಸರಿಪಡಿಸುವಿಕೆ, ಗ್ರಾಮದಲ್ಲಿರುವ ಕ್ಯಾನೆಲ್‍ನಲ್ಲಿ ಹೂಳೆತ್ತುವುದು ಮತ್ತು ಚರಂಡ ನೀರು ಹೋಗದಂತೆ ವ್ಯವಸ್ಥೆ,ಬೀದಿದೀಪಗಳ ವ್ಯವಸ್ಥೆ, ವಿಕಲಚೇತನರಿಗೆ ತ್ರೀಚಕ್ರವಾಹನ, ಸ್ವಚ್ಛತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಗ್ರಾಮಸ್ಥರು ಜಿಲ್ಲಾಧಿಕಾರಿಗಳೆದುರು ಪ್ರಸ್ತಾಪಿಸಿದರು.
ಎಲ್ಲರ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಡಿಸಿ ಮಾಲಪಾಟಿ ಅವರು ತಮ್ಮ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು ಎಂದು ಜನರಿಗೆ ಅಶ್ವಾಸನೆ ನೀಡಿದರು.
*ಶ್ರೀರಾಮರಂಗಾಪುರ ಶೀಘ್ರ ಕಂದಾಯ ಗ್ರಾಮ: ಸುಗ್ಗೇನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಗೊಳಪಡುವ ಶ್ರೀರಾಮರಂಗಾಪುರದಲ್ಲಿ 800 ಮನೆಗಳಿದ್ದು, ಈ ಗ್ರಾಮವನ್ನು ಶೀಘ್ರ ಕಂದಾಯ ಗ್ರಾಮವನ್ನಾಗಿ ಮಾಡಲಾಗುವುದು ಎಂದು ಡಿಸಿ ಪವನಕುಮಾರ ಮಾಲಪಾಟಿ ಅವರು ಹೇಳಿದರು.
ಈಗಾಗಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಇನ್ನೊಂದು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳಿಗೆ ಅಹ್ವಾನಿಸಿದ ನಂತರ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು;ಇದೆಲ್ಲ ಪ್ರಕ್ರಿಯೆ ಮೂರು ತಿಂಗಳಲ್ಲಾಗಲಿದ್ದು, ಶ್ರೀರಾಮರಂಗಾಪುರ ಕಂದಾಯ ಗ್ರಾಮವಾಗಿ ಮಾರ್ಪಾಡಾಗಲಿದೆ ಎಂದರು.
03 ವರ್ಷಗಳ ಹಿಂದೆ ಓವರ್‍ಹೆಡ್ ಟ್ಯಾಂಕ್ ನಿರ್ಮಿಸಲಾಗಿದ್ದು,ಇದಕ್ಕೆ ನೀರಿನ ಸಂಪರ್ಕ ಕಲ್ಪಿಸಿಲ್ಲ ಮತ್ತು ಬೋರವೆಲ್ ಕೊರೆದರೇ ಉಪ್ಪು ನೀರು ಬರುತ್ತಿದೆ;ಹೀಗಾಗಿ ಕುಡಿಯುವ ನೀರಿಗಾಗಿ ದೂರ ಅಲೆದು ನೀರು ತರಬೇಕಿದೆ ಎಂದು ಶ್ರೀರಾಮರಂಗಾಪುರ ಗ್ರಾಮಸ್ಥರು ಡಿಸಿ ಎದುರು ಅಳಲು ತೋಡಿಕೊಂಡಿದ್ದಕ್ಕೆ ಡಿಸಿ ಅವರು ಈ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಗಮನಕ್ಕಿದ್ದು,ಅದನ್ನು ನೀಗಿಸುವ ನಿಟ್ಟಿನಲ್ಲಿ ಈಗಾಗಲೇ ಜಲಜೀವನಮಿಶನ್ ಯೋಜನೆ ಅಡಿ ಸಮೀಕ್ಷೆ ನಡೆಸಲಾಗಿದ್ದು,ಜೆಜೆಎಂ ಅಡಿ ಕೆರೆ ನಿರ್ಮಿಸಿ;ಅದರ ಮೂಲಕ ಪ್ರತಿ ಮನೆಗೂ ನಳದ ಮೂಲಕ ನೀರು ಪೂರೈಸಲಾಗುವುದು ಎಂದು ತಿಳಿಸಿದರು.
ಆರೋಗ್ಯ ಕ್ಷೇಮಕೇಂದ್ರಕ್ಕೆ ಅಗತ್ಯ ವೈದ್ಯರು ಮತ್ತು ಸಿಬ್ಬಂದಿ ಹಾಗೂ ಇನ್ನೀತರ ಸೌಕರ್ಯಗಳು ಹಾಗೂ ವಿದ್ಯುತ್‍ಚ್ಛಕ್ತಿ ಮತ್ತು ಬೀದಿದೀಪಗಳ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಜನರಿಗೆ ಭರವಸೆ ನೀಡಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಾಮಾಜಿಕ ಭದ್ರತಾ ಯೋಜನೆಗೆ ಸಂಬಂಧಿಸಿದ ವಿವಿಧ ಆದೇಶಗಳನ್ನು,ಸ್ಮಶಾನಭೂಮಿ ಮಂಜೂರು ಅದೇಶ ಸೇರಿದಂತೆ ವಿವಿಧ ಆದೇಶಗಳನ್ನು ವಿತರಿಸಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದ ನಿಮಿತ್ತ ವೇದಿಕೆ ಆವರಣದಲ್ಲಿ ಹಾಕಲಾಗಿದ್ದ ವಿವಿಧ ಇಲಾಖೆಗಳ ವಸ್ತುಪ್ರದರ್ಶನ ಗಮನಸೆಳೆಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಪ್ರೋಬೇಷನರಿ ಐಎಎಸ್ ಅಧಿಕಾರಿ ಅನ್ಮೋಲ್ ಜೈನ್, ತಹಸೀಲ್ದಾರ್ ಗೌಸಿಯಾಬೇಗಂ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here