ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಸಿ, ಟ್ಯಾಬ್ಲೆಟ್ ವಿತರಣೆ.

0
153

ದಾವಣಗೆರೆ ಜೂ.23 -ನಗರ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಯಲ್ಲಿ ತಾರತಮ್ಯ ನಿವಾರಣೆ ಹಾಗೂ ಡಿಜಿಟಲ್ ಅಂತರವನ್ನು ಅಳಿಸಿಹಾಕಬೇಕೆಂಬ ಉದ್ದೇಶದಿಂದ ಸರ್ಕಾರ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಿಸಿ ಟ್ಯಾಬ್ಲೆಟ್ ವಿತರಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತ ಪಿಸಿ ಟ್ಯಾಬ್ಲೆಟ್ ವಿತರಣಾ ಕಾರ್ಯಕ್ರಮ ಮತ್ತು ಸ್ಮಾರ್ಟ್ ಕ್ಲಾಸ್ ಕೊಠಡಿಯ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಿಸಿ ಟ್ಯಾಬ್ಲೆಟ್‍ಗಳನ್ನು ಆಟಿಕೆಗಳಾಗಿ ಬಳಸದೆ ಶೈಕ್ಷಣಿಕವಾಗಿ ಬಳಸಿಕೊಂಡು ಉನ್ನತ ಮಟ್ಟದ ಶಿಕ್ಷಣವನ್ನು ಪಡೆದು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹಣಕಾಸು ತೊಂದರೆಯಿಂದ ಖಾಸಗಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಲಾಗುತ್ತಿಲ್ಲ. ಈ ಕಾರಣದಿಂದ ಶೇ.80 ರಷ್ಟು ಬಡವರು, ಹಿಂದುಳಿದ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದು, ಅವರ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದೆಂದು ಸರ್ಕಾರ ಪಿಸಿ ಟ್ಯಾಬ್ಲೆಟ್ ನೀಡಿ ಪ್ರೋತ್ಸಾಹಿಸುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಈಗಾಗಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತೀ ಹೆಚ್ಚು ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳನ್ನು ಬೆಳೆಸುತ್ತಿರುವುದು ಸ್ವಾಗತಾರ್ಹ. ಈ ಹಿರಿಮೆ ರಾಜ್ಯದಾದ್ಯಂತ ಪಸರಿಸಬೇಕೆಂದರೆ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್ ಮಾತನಾಡಿ, ನಾನಾ ಹೋರಾಟಗಳ ತಳಪಾಯದಿಂದ ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯದಲ್ಲೆ ಎರಡನೆ ಅತೀ ದೊಡ್ಡ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸ್ತುತ 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮೊದಲ ಹಂತಕ್ಕೆ ತಲುಪಬೇಕೆಂದರೆ ವಿದ್ಯಾರ್ಥಿಗಳ ಸಹಕಾರ ಬೆಟ್ಟದಷ್ಟಿದೆ. ವಿದ್ಯಾರ್ಥಿಗಳು ಅಮೂಲ್ಯ ಸಮಯವನ್ನು ಅನಾವಶ್ಯಕವಾಗಿ ವ್ಯರ್ಥ ಮಾಡದೇ ಸರ್ಕರದ ಸವಲತ್ತುಗಳನ್ನು ಬಳಸಿಕೊಂಡು ಕಾಲೇಜಿಗೂ, ಜಿಲ್ಲೆಗೂ ಕೀರ್ತಿ ತಂದುಕೊಡಬೇಕು ಎಂದರು.
ಈ ವೇಳೆ ಕಾಲೇಜಿನ ಪ್ರಾಚಾರ್ಯ ಪ್ರೊ.ಶಂಕರ್.ಆರ್. ಶೀಲಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ, ದಿನ ಕಳೆದಂತೆ ಕಾಲೇಜು ಕೂಡ ಬೆಳೆಯುತ್ತಲೇ ಇದೆ. ಈ ಬಾರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶವಾಗುವ ಸಾಧ್ಯತೆ ಇರುವುದರಿಂದ, ಶಾಸಕರು ಹಾಗೂ ಮಹಾಪೌರರು ಕಾಲೇಜಿಗೆ ಬೇಕಾದ ಪೀಠೋಪಕರಣ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ವಲಯ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ವೀರಭದ್ರಯ್ಯ.ಕೆ.ಸಿ., ಮಹಾನಗರ ಪಾಲಿಕೆ ಸದಸ್ಯ ಜಿ.ಮಂಜುನಾಥ ಗೌಡ, ಐ.ಕ್ಯೂ.ಎ.ಸಿ ಸಂಚಾಲಕ ಪ್ರೊ.ಟಿ.ವೀರೇಶ, ಐ.ಟಿ. ಸಂಚಾಲಕ ಡಾ.ಮಂಜುನಾಥ ಜೆ.ಎಮ್ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here