ಕೈ ಪಾಳೆಯದ ಸುತ್ತ ಬಿಜೆಪಿ ಎಬ್ಬಿಸಿದೆ ಹುತ್ತ

0
176

ಅಷ್ಟೊತ್ತಿಗಾಗಲೇ 1991 ರ ಲೋಕಸಭಾ ಚುನಾವಣೆಗಳು ಘೋಷಣೆಯಾಗಿದ್ದವು.
ಆ ಸಂದರ್ಭದಲ್ಲಿ ಕರ್ನಾಟಕದ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜನತಾ ಪರಿವಾರದ ಹಿರಿಯ ನಾಯಕ ರಾಮಕೃಷ್ಣ ಹೆಗಡೆ ನಿರ್ಧರಿಸಿದ್ದರು.
ಹೆಗಡೆ ಅವರಂತಹ ಪ್ರಭಾವಿ ನಾಯಕ,ಅದರಲ್ಲೂ ಲಿಂಗಾಯತ ಸಮುದಾಯದ ಪಾಲಿಗೆ ಐಕಾನ್ ಅನ್ನಿಸಿಕೊಂಡ ನಾಯಕ ಬಾಗಲಕೋಟೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದಾಗ ಇಲ್ಲಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರಿಗೆ ಚಿಂತೆ ಶುರುವಾಯಿತು.
ಅಂದ ಹಾಗೆ 1983 ರಲ್ಲಿ ತಾವು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದವರು ಹೆಗಡೆ ಎಂಬ ಸಿಟ್ಟು ಬಂಗಾರಪ್ಪ ಅವರಲ್ಲಿ ಉಳಿದಿತ್ತಲ್ಲ?ಹೀಗಾಗಿ ಹೆಗಡೆ ಅವರನ್ನು ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಸೋಲಿಸಬೇಕು ಎಂಬ ಹಠ ಬಂಗಾರಪ್ಪ ಅವರಿಗಿತ್ತು.
ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರಿಯರಾಗಿದ್ದ ಹೆಗಡೆ ಅವರನ್ನು ಸೋಲಿಸುವುದು ಸುಲಭದ ಮಾತಾಗಿರಲಿಲ್ಲ.ಹೀಗಾಗಿ ಬಂಗಾರಪ್ಪ ಅವರು ಇಂಟಲಿಜೆನ್ಸ್ ಅಧಿಕಾರಿಗಳಿಗೆ ಸೂಚನೆ ನೀಡಿ:ಆ ಕ್ಷೇತ್ರದಲ್ಲಿ ಪಕ್ಷದಿಂದ ಯಾರನ್ನು ಕಣಕ್ಕಿಳಿಸಿದರೆ ಲಾಭವಾಗುತ್ತದೆ?ಎಂಬ ಬಗ್ಗೆ ವರದಿ ಕೊಡಿ ಎಂದು ಹೇಳಿದರು.
ಸರಿ,ಬಂಗಾರಪ್ಪ ಅವರ ಸೂಚನೆಯಂತೆ ಕ್ಷೇತ್ರದಲ್ಲಿ ತಮ್ಮ ಬಾಹುಗಳನ್ನು ಚಾಚಿದ ಇಂಟಲಿಜೆನ್ಸ್ ಅಧಿಕಾರಿಗಳು:ಬಾಗಲಕೋಟೆ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಿದರೂ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸುವುದು ಕಷ್ಟ.ಆದರೂ ಬ್ಯಾರೇಜ್ ನಿರ್ಮಾಣದ ಮೂಲಕ ಇತ್ತೀಚಿನ ದಿನಗಳಲ್ಲಿ ಸಿದ್ಧು ನ್ಯಾಮಗೌಡ ಎಂಬ ಯುವಕ ಜನರ ಗಮನ ಸೆಳೆದಿದ್ದಾರೆ.ಹೀಗಾಗಿ ಅವರನ್ನು ಕಣಕ್ಕಿಳಿಸಿದರೆ ಪೈಪೋಟಿ ನೀಡಬಹುದು ಎಂದು ವರದಿ ಕೊಟ್ಟರು.
ಇದರ ಆಧಾರದ ಮೇಲೆ ಬಂಗಾರಪ್ಪ ಅವರು ಸಿದ್ಧು ನ್ಯಾಮಗೌಡ ಅವರನ್ನು ಸಂಪರ್ಕಿಸಿ:ರಾಮಕೃಷ್ಣ ಹೆಗಡೆ ಅವರ ಎದುರು ಕಾಂಗ್ರೆಸ್ ಅಭ್ಯರ್ಥಿಯಾಗಿ ನೀವು ಕಣಕ್ಕಿಳಿಯಬೇಕು ಎಂದಾಗ ಸಿದ್ಧು ನ್ಯಾಮಗೌಡ ಒಪ್ಪಲಿಲ್ಲ.
ಹೆಗಡೆ ಅವರಂತಹ ದೊಡ್ಡ ನಾಯಕರ ವಿರುದ್ಧ ನಾನು ಸ್ಪರ್ಧಿಸುವುದೇ?ಇಲ್ಲ,ಇಲ್ಲ,ಸಾಧ್ಯವಿಲ್ಲ ಎಂಬುದು ಸಿದ್ಧು ನ್ಯಾಮಗೌಡರ ಪ್ರತಿಕ್ರಿಯೆಯಾಗಿತ್ತು.ಆದರೆ ಬಂಗಾರಪ್ಪ ಪಟ್ಟು ಬಿಡದೆ:ನೀವು ನಾಮಪತ್ರ ಸಲ್ಲಿಸಿ ಸಾಕು,ಉಳಿದಂತೆ ನಾವು ನಿಮ್ಮ ಬೆನ್ನಿಗಿದ್ದೇವೆ ಎಂದರು.
ಸರಿ,ಹೆಗಡೆ ಮತ್ತು ಸಿದ್ಧು ನ್ಯಾಮಗೌಡರ ಮಧ್ಯೆ ತುರುಸಿನ ಪೈಪೋಟಿ ಶುರುವಾಯಿತು.ಇಂತಹ ಕಾಲದಲ್ಲೇ ಬಾಗಲಕೋಟೆಯಲ್ಲಿ ರಾಮಕೃಷ್ಣ ಹೆಗಡೆ ಅವರ ಪ್ರಚಾರ ಸಭೆ ಏರ್ಪಾಟಾಯಿತು.
ಸಭೆಗೆ ಆಗಮಿಸಿದ್ದ ಜನಸ್ತೋಮ ಹೇಗಿತ್ತೆಂದರೆ ಹೆಗಡೆ ಅವರ ಜನಪ್ರಿಯತೆಯ ಎದುರು ಸಿದ್ದು ನ್ಯಾಮಗೌಡ ಸೋಲುವುದು ನಿಶ್ಚಿತ ಎಂಬ ಮಾತು ಕೇಳಿ ಬಂತು.ಇಂತಹ ಮಾತುಗಳ ನಡುವೆಯೇ ಸಭೆ ಆರಂಭವಾದಾಗ ವೇದಿಕೆಯಲ್ಲಿದ್ದ ರಾಮಕೃಷ್ಣ ಹೆಗಡೆ ಅವರಿಗೆ ಬಾಯಾರಿಕೆಯಾಯಿತು.
ಹಾಗಂತಲೇ ಕುಡಿಯಲು ನೀರು ಕೊಡಿ ಎಂದು ಪಕ್ಕದಲ್ಲಿದ್ದವರಿಗೆ ಸನ್ನೆ ಮಾಡಿದರು.ಕಾರ್ಯಕರ್ತರ ಪೈಕಿ ಯಾರೋ ಒಂದು ಗ್ಲಾಸಿನಲ್ಲಿ ನೀರು ತಂದುಕೊಟ್ಟರೂ ಹೆಗಡೆ ಅದನ್ನು ಮುಟ್ಟಲಿಲ್ಲ.ಕಾರಣ?ತೀವ್ರ ಗಂಟಲು ಬೇನೆಯಿಂದ ಬಳಲುತ್ತಿದ್ದ ಅವರಿಗೆ ಬಿಸಿ ನೀರು ಬೇಕಾಗಿತ್ತು.ಹೀಗಾಗಿ ತಮ್ಮ ಕೈಗೆ ಬಂದ ನೀರಿನ ಗ್ಲಾಸನ್ನು ಬದಿಗಿಟ್ಟು ತಮ್ಮ ಹಿಂದಿದ್ದ ಸಹಾಯಕನ ಕಡೆ ನೋಡಿದರು.
ಆ ಸಹಾಯಕ ತನ್ನ ಬಳಿಯಿದ್ದ ಬ್ಯಾಗಿನಿಂದ ಬಿಸಿ ನೀರಿನ ಪ್ಲಾಸ್ಕ್ ಕೊಟ್ಟಾಗ ಹೆಗಡೆಯವರು ಅದನ್ನೆತ್ತಿ ಗಟಗಟನೆ ನೀರು ಕುಡಿದರು.ಆದರೆ ಅಲ್ಲೇ ಸಭೆಯಲ್ಲಿದ್ದವರೊಬ್ಬರು:ಯೇ,ಅವರಿಗೆ ನಮ್ಮೂರಿನ ನೀರು ಬೇಡ,ವೋಟು ಯಾಕೆ ಬೇಕು?ಎಂದು ಕೂಗಿದರು.
ಈ ಮಾತು ಹೇಗಿತ್ತೆಂದರೆ ಇಡೀ ಸಭೆಯಲ್ಲಿ ಹೆಗಡೆ ಅವರ ನಡವಳಿಕೆಯ ಬಗ್ಗೆ ಅಪಸ್ವರ ಶುರುವಾಯಿತು.ಆರಂಭದ ಈ ಅಪಸ್ವರ ಹೇಗೆ ಕೆಲಸ ಮಾಡಿತು ಎಂದರೆ ಎಷ್ಟೇ ಆದರೂ ಹೆಗಡೆ ನಮ್ಮವರಲ್ಲ,ಆದರೆ ಸಿದ್ಧು ನ್ಯಾಮಗೌಡ ನಮ್ಮವರು ಎಂಬ ಮಾತು ಜನಜನಿತವಾಗತೊಡಗಿತು.ಕ್ಷೇತ್ರದಾದ್ಯಂತ ಹರಡಿಕೊಂಡಿತು.
ಪರಿಣಾಮ?ಹೆಗಡೆ ಅವರ ವಿರುದ್ಧ ಸಿದ್ದು ನ್ಯಾಮಗೌಡರು ಗೆಲುವು ಸಾಧಿಸಲು ಅದು ನೆರವಾಯಿತು.


ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕನಕಪುರ ಲೋಕಸಭಾ ಸದಸ್ಯ ಚಂದ್ರಶೇಖರ ಮೂರ್ತಿ ನಿಧನರಾದರು.
ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾದಾಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೃಷ್ಣ ಸಂಪುಟದ ಪ್ರಭಾವಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಸ್ಪರ್ಧಿಸಿದರು.
ಅದೇ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ.ಸರಿ,ಚುನಾವಣೆಯ ಪ್ರಚಾರ ಕಾರ್ಯ ಶುರುವಾಯಿತು.ಎಷ್ಟೇ ಆದರೂ ಡಿ.ಕೆ.ಶಿವಕುಮಾರ್ ಕನಕಪುರದ ವ್ಯಾಪ್ತಿಯಲ್ಲಿ ಆನೆಯಂತಿದ್ದವರು.ಕೃಷ್ಣರ ಸಂಪುಟದ ಪ್ರಭಾವಿ ಸಚಿವರು ಬೇರೆ.
ಹೀಗಾಗಿ ದೇವೇಗೌಡರ ವಿರುದ್ದ ಡಿ.ಕೆ.ಶಿವಕುಮಾರ್ ಅವರನ್ನು ಗೆಲ್ಲಿಸಲು ಎಸ್.ಎಂ.ಕೃಷ್ಣರ ಸಂಪುಟವೇ ಬೀದಿಗಿಳಿಯಿತು.ಆದರೆ ಪ್ರಚಾರ ಕಾರ್ಯ ಶುರುವಾಗುತ್ತಿದ್ದಂತೆಯೇ ಕನಕಪುರ ಲೋಕಸಭಾ ಕ್ಷೇತ್ರದ ಹಳ್ಳಿಗಳಲ್ಲಿ ಒಂದು ಮಾತು ವ್ಯಾಪಕವಾಗಿ ಹಬ್ಬತೊಡಗಿತು.
ಲೇ,ಆ ಡಿ.ಕೆ.ಶಿವಕುಮಾರುಂಗೆ ಮಾಡೋಕೆ ಕೆಲಸ ಇದೆ.ಆದ್ರೆ ದೇವೇಗೌಡ್ರಿಗೆ ಏನೈತೆ ಕೆಲಸ?ಹೀಗಾಗಿ ಶಿವಕುಮಾರು ಇಲ್ಲೇ ಮಿನಿಸ್ಟ್ರಾಗಿರಲಿ,ದೇವೇಗೌಡರು ಡೆಲ್ಲಿಗೆ ಹೋಗಲಿ ಎಂಬುದು ಈ ಮಾತು.
ಈ ಮಾತಿನ ತೀವ್ರತೆ ಹೇಗಿತ್ತೆಂದರೆ ಅದನ್ನು ಕಾಯಿನ್ ಮಾಡಿದವರು ಯಾರು?ಎಂಬುದನ್ನು ಯೋಚಿಸದೆ ಜನ ಈ ಮಾತನ್ನೇ ಎತ್ತಿ ಆಡತೊಡಗಿದರು.ಪರಿಣಾಮ?ಡಿ.ಕೆ.ಶಿವಕುಮಾರ್ ಅವರು ಅದೇನೇ ಸರ್ಕಸ್ಸು ಮಾಡಿದರೂ ಕನಕಪುರ ಲೋಕಸಭಾ ಕ್ಷೇತ್ರದ ಕಣದಲ್ಲಿ ದೇವೇಗೌಡರ ಜಯಭೇರಿಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.
ಅಂದ ಹಾಗೆ ಇಂತಹ ಮಾತು ಬಿರುಗಾಳಿಯಂತೆ ಹಬ್ಬಲು ಕಾರಣರಾದವರು ಜೆಡಿಎಸ್ ನಾಯಕರೇ ಆದರೂ ಅದು ಯಾರಿಗೂ ಮುಖ್ಯವಾಗಲಿಲ್ಲ.ಬದಲಿಗೆ ಆ ಮಾತೇ ಮತದಾರರಿಗೆ ಇಷ್ಟವಾಗಿ ಕಂಡಿತ್ತು.


ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತಿದ್ದ ಕಾಂಗ್ರೆಸ್ ನಾಯಕ ಡಿ.ಕೆ.ನಾಯ್ಕರ್ ಅವರು ತಮ್ಮ ಊರಿನಲ್ಲಿ ಒಂದು ಮನೆ ಕಟ್ಟಿದರು.
ಈ ಮನೆಗೆ ಕಟ್ಟುವ ಸಂದರ್ಭದಲ್ಲಿ ಅವರ ಆಪ್ತರು ಕೆಲವು ಗಂಧದ ತುಂಡುಗಳನ್ನು ಕೊಟ್ಟರು.ಹೀಗೆ ಆಪ್ತರು ಕೊಟ್ಟ ಗಂಧದ ತುಂಡುಗಳನ್ನು ಏನು ಮಾಡಬೇಕು?ಎಂದು ಯೋಚಿಸುವಾಗ ಅವರಿಗೆ ಮನೆಯ ದ್ವಾರಬಾಗಿಲಿಗೆ ಅದನ್ನು ಬಳಸಿಕೊಳ್ಳಬಹುದು ಅನ್ನಿಸಿತು.
ಅದರ ಪ್ರಕಾರವೇ ಗಂಧದ ತುಂಡುಗಳನ್ನು ಬಳಸಿ ಅವರು ಮನೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದರು.ಆದರೆ ಅವರು ಮನೆ ಪೂರ್ಣಗೊಳಿಸಿ ಗೃಹ ಪ್ರವೇಶ ಮಾಡಿದ ಸಂದರ್ಬದಲ್ಲಿ ಬಂದವರ ಪೈಕಿ ಯಾರೋ ಒಬ್ಬರು:ವೋಟು ಕೊಟ್ಟವರು ನಾವು.ಗಂಧದ ಮನೆ ಕಟ್ಟಿಸಿಕೊಂಡವರು ಇವರು ಎಂದು ಎತ್ತಿ ಆಡಿದರು.
ಈ ಮಾತುಗಳು ಸುನಾಮಿಯಂತೆ ಪಸರಿಸಿದ್ದಷ್ಟೇ ಅಲ್ಲ,ಡಿ.ಕೆ.ನಾಯ್ಕರ್ ಅವರ ರಾಜಕೀಯ ಭವಿಷ್ಯವೇ ಮಂಕಾಗಿ ಹೋಗುವಂತೆ ಮಾಡಿದವು.


ಇನ್ನು 2006 ರಲ್ಲಿ ದೇವೇಗೌಡರ ಮೇಲಿನ ಮುನಿಸಿನಿಂದ ಹಿರಿಯ ನಾಯಕ ಸಿದ್ಧರಾಮಯ್ಯ ಅವರು ಜೆಡಿಎಸ್ ಪಾಳೆಯದಿಂದ ಹೊರಬಿದ್ದಿದ್ದರು.
ಹೀಗೆ ಅವರು ಪಕ್ಷದಿಂದ ಹೊರಬಿದ್ದ ಕಾರಣಕ್ಕಾಗಿ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು.
ಉಪಚುನಾವಣೆ ಘೋಷಣೆಯಾದ ಕಾಲದಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಸರ್ಕಾರ ಅಸ್ತಿತ್ವದಲ್ಲಿತ್ತಲ್ಲ?ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಸಿದ್ಧರಾಮಯ್ಯ ಅವರ ವಿರುದ್ಧ ಉಭಯ ಪಕ್ಷಗಳ ನಾಯಕರ ದಂಡು ಚಾಮುಂಡೇಶ್ವರಿಯ ರಣಾಂಗಣಕ್ಕಿಳಿಯಿತು.
ಪರಿಣಾಮ?ಪ್ರಚಾರ ಕಣದಲ್ಲಿ ಸಿದ್ಧರಾಮಯ್ಯ ಅವರ ಶಕ್ತಿ ಕುಗ್ಗಿದಂತೆ,ಅವರ ವಿರೋಧಿಗಳ ಶಕ್ತಿ ಹೆಚ್ಚಾಗುತ್ತಾ ಹೋಗುತ್ತಿರುವಂತೆ ಭಾಸವಾಗತೊಡಗಿತ್ತು.
ಇನ್ನೇನು ಮತದಾನಕ್ಕೆ ಎರಡು ದಿನಗಳಿವೆ ಅನ್ನುವಾಗ ಚುನಾವಣಾಧಿಕಾರಿಗಳು ಪ್ರಚಾರ ಕಾರ್ಯಕ್ಕೆ ಬ್ರೇಕ್ ಹಾಕಿದರು.ಯಾವ ಪಕ್ಷದವರೂ ಕ್ಷೇತ್ರದಲ್ಲಿರಕೂಡದು ಎಂದು ಕಟ್ಟಪ್ಪಣೆ ವಿಧಿಸಿದರು.ಅಷ್ಟೇ ಅಲ್ಲ,ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರತೊಡಗಿದರು.
ಇಂತಹ ಸಂದರ್ಭದಲ್ಲೇ ಮಾಧ್ಯಮಗಳ ವರದಿಗಾರರು ತಮಗೆ ಎದುರಾದ ವಾಹನವೊಂದರ ಬೆನ್ನು ಹತ್ತಿದರು.
ಅದರಲ್ಲಿ ರಾಜಕೀಯ ಪಕ್ಷವೊಂದರ ಪ್ರಚಾರ ಸಾಮಾಗ್ರಿಗಳಿವೆ ಎಂಬುದು ಅವರ ಅನುಮಾನ.
ಅಂದ ಹಾಗೆ ಈ ವಾಹನ ಒಂದು ಸ್ಥಳಕ್ಕೆ ಹೋದಾಗ ಅಲ್ಲಿ ಜನ ಗುಂಪುಗೂಡಿದರು.
ಅಷ್ಟೇ ಆಗಿದ್ದರೆ ಎಲ್ಲವೂ ತಣ್ಣಗಾಗುತ್ತಿತ್ತೇನೋ?ಆದರೆ ಅಲ್ಲೇ ಸಮೀಪದ ಅತಿಥಿಗೃಹವೊಂದರಲ್ಲಿ ತಂಗಿದ್ದವರೊಬ್ಬರು ಏನು ಗಲಾಟೆಯಾಗುತ್ತಿದೆ ಎಂಬುದನ್ನು ನೋಡಲು ಹೊರಬಂದರು.ಹೀಗೆ ಹೊರಬಂದವರನ್ನು ನೋಡಿದ್ದೇ ತಡ,ವರದಿಗಾರರು ಥ್ರಿಲ್ ಆಗಿ ಹೋದರು.
ಅಷ್ಟೇ ಅಲ್ಲ,ತಮ್ಮ ಕ್ಯಾಮೆರಾವನ್ನು ಆ ಕಡೆ ತಿರುಗಿಸಿ ಶೂಟ್ ಮಾಡತೊಡಗಿದರು.ಅವರು ಹೀಗೆ ಶೂಟ್ ಮಾಡತೊಡಗಿದ್ದೇ ತಡ,ನೋಡಲು ಹೊರಬಂದವರ ಹಿಂದಿದ್ದವರು ಅದೇನು ಕಿತ್ಕೋತೀಯೋ ಕಿತ್ಕೋ ಎಂಬಂತೆ ಸನ್ನೆ ಮಾಡಿದರು.
ಹೀಗಾಗಿ ಹೊರಬಂದವರ ಜತೆ ಸನ್ನೆ ಮಾಡಿದ ಆ ವ್ಯಕ್ತಿಯೂ ಕ್ಯಾಮೆರಾದಲ್ಲಿ ಸೆರೆಯಾಗಿ ಇಡೀ ರಾಜ್ಯವೇ ಧಿಗ್ಭ್ರಮೆಯಿಂದ ನೋಡುವಂತಾಯಿತು.ಅಂದ ಹಾಗೆ ಹೊರಗೆ ನಡೆಯುತ್ತಿರುತ್ತದೆ ಗಲಾಟೆ ಏನು ಅಂತ ನೋಡಲು ಅವತ್ತು ಅತಿಥಿಗೃಹದಿಂದ ಹೊರಬಂದವರು ಬೇರೆ ಯಾರೂ ಅಲ್ಲ,ಖುದ್ದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ.
ಪರಿಣಾಮ?ಕ್ಷೇತ್ರದಾದ್ಯಂತ ಈ ವಿಷಯ ಮಿಂಚಿನಂತೆ ಹರಡಿತು.ಅಷ್ಟೇ ಅಲ್ಲ,ಸಿದ್ಧರಾಮಯ್ಯ ಅವರನ್ನು ಸೋಲಿಸಲು ಇಡೀ ಸರ್ಕಾರವೇ ಕುಳಿತಿದೆ ಎಂಬ ಭಾವನೆ ದಟ್ಟವಾಗಿ ಹರಡಿ, ಮತದಾರರಲ್ಲಿ ಸಿದ್ಧರಾಮಯ್ಯ ಅವರ ಪರವಾದ ಒಲವು ಶುರುವಾಯಿತು.
ನೋಡನೋಡುತ್ತಿದ್ದಂತೆಯೇ ಈ ಒಲವು ಗೆಲುವಿನ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಮುಗ್ಗರಿಸಿ ಬೀಳಲು,ಸಿದ್ಧರಾಮಯ್ಯ ಗೆಲುವಿನ ನಗೆ ಬೀರಲು ಕಾರಣವಾಯಿತು.


2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಅಷ್ಟೊತ್ತಿಗಾಗಲೇ ಅಸ್ತಿತ್ವಕ್ಕೆ ಬಂದಿದ್ದ ಮೈತ್ರಿಕೂಟ ಸರ್ಕಾರದಲ್ಲಿ ಕಾಂಗ್ರೆಸ್ ಪಾಲುದಾರನಾಗಿತ್ತಾದ್ದರಿಂದ ಆ ಪಕ್ಷದಿಂದ ಬೇರೆಯವರು ಸ್ಪರ್ಧಿಸದೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಿಸಿದ್ದರು.
ಇಂತಹ ಕಾಲದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದವರು ದಿವಂಗತ ಅಂಬರೀಶ್ ಅವರ ಪತ್ನಿ ಶ್ರೀಮತಿ ಸುಮಲತಾ.
ಸರಿ,ಪ್ರಚಾರ ಕಾರ್ಯ ಶುರುವಾಯಿತು.ಇನ್ನೇನು ಅದು ಬಿರುಸು ಪಡೆಯಬೇಕು ಎಂಬ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ದೊಡ್ಡಪ್ಪ,ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಹೆಚ್.ಡಿ.ರೇವಣ್ಣ ಅವರು:ಗಂಡ ಸತ್ತು ಇನ್ನೂ ನಾಲ್ಕು ದಿನಗಳಾಗಿಲ್ಲ,ಆಗಲೇ ರಾಜಕೀಯ ಶುರು ಮಾಡಿದ್ದಾರೆ ಎಂಬರ್ಥದಲ್ಲಿ ಸುಮಲತಾ ಅವರ ವಿರುದ್ದ ವಾಗ್ಧಾಳಿ ನಡೆಸಿದರು.
ಯಾವಾಗ ರೇವಣ್ಣ ಅವರು ಇಂತಹ ಮಾತುಗಳನ್ನಾಡಿದರೋ?ಆಗ ಮಂಡ್ಯ ಲೋಕಸಭಾ ಕ್ಷೇತ್ರದುದ್ದ ಆ ಧ್ವನಿಯಲ್ಲಿದ್ದ ಕ್ರೌರ್ಯ ಮಾರ್ದನಿಸಿತು.ಅಷ್ಟೇ ಅಲ್ಲ,ಪ್ರಚಾರ ಕಾರ್ಯ ನಡೆದಂತೆಯಲ್ಲ ಸುಮಲತಾ ಪರವಾದ ಅನುಕಂಪದ ಅಲೆ ಕ್ಷೇತ್ರವನ್ನು ಆವರಿಸಿತು.
ಅಂದ ಹಾಗೆ ಸುಮಲತಾ ಅವರಿಗೆ ತೆರೆಯ ಹಿಂದಿನಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಬೆಂಬಲ ನೀಡಿದ್ದರಾದರೂ ರೇವಣ್ಣ ಅವರು ಒಂದು ಮಾತು ಈ ಬೆಂಬಲವನ್ನು ಗೆಲುವಿನ ದಡಕ್ಕೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿತು.


ಅಂದ ಹಾಗೆ ಇದನ್ನೆಲ್ಲ ಏಕೆ ನೋಡಬೇಕೆಂದರೆ ರಾಜಕೀಯದಲ್ಲಿ ಬಾಯಿ ತಪ್ಪಿ ಆಡುವ ಒಂದು ಮಾತು,ಎಚ್ಚರ ತಪ್ಪಿ ಇಡುವ ನಡೆ ವಿನಾಶಕಾರಿ ಅಸ್ತ್ರಗಳಂತಾಗಿ ಬಿಡುತ್ತವೆ.ಹೀಗಾಗಿ ರಾಜಕಾರಣದಲ್ಲಿರುವವರು ಯಾವ ಕ್ಷಣದಲ್ಲೂ ಮೈ ಮರೆಯುವ ಹಾಗೆಯೇ ಇಲ್ಲ.
ಪರಿಸ್ಥಿತಿ ಹೀಗಿರುವಾಗಲೇ ರಾಜ್ಯ ಕಾಂಗ್ರೆಸ್ ಪಕ್ಷದ ಮುಂದೆ ಆಡಳಿತಾರೂಢ ಬಿಜೆಪಿ ಡಜನ್ನುಗಟ್ಟಲೆ ಸಮ್ಮೋಹನಾಸ್ತ್ರಗಳನ್ನು ಬಳಸಿ ಕುಳಿತಿದೆ.
ಅದು ಪ್ರಯೋಗಿಸಿರುವ ಹಿಜಬ್ ಅಸ್ತ್ರವೇ ಇರಬಹುದು,ಮತಾಂತರ ನಿಷೇಧ ಕಾಯ್ದೆ ಇರಬಹುದು,ಲವ್ ಜೆಹಾದ್ ವಿಷಯವೇ ಇರಬಹುದು,ಕೇಸರಿ ಧ್ವಜವೇ ಇರಬಹುದು.ಕೇಂದ್ರದ 370 ನೇ ವಿಧಿಯೇ ಇರಬಹುದು,ಒಟ್ಟಿನಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿ ಪ್ರಯೋಗಿಸಿರುವ ಅಸ್ತ್ರಗಳು ಕಾಂಗ್ರೆಸ್ ನಾಯಕರ ನಿದ್ದೆಗೆಡುವಂತೆ ಮಾಡಿದೆ.

ಈ ಪೈಕಿ ಯಾವ ವಿಷಯವೇ ಇರಬಹುದು,ಅದಕ್ಕೆ ಉತ್ತರಿಸದೆ ಇದ್ದರೆ ಕೈಲಾಗದವರು ಎಂಬ ದೂಷಣೆಗೆ ಗುರಿಯಾಗಬೇಕು,ಉತ್ತರಿಸಿದರೆ ಹಿಂದೂ ವಿರೋಧಿ ಎಂಬ ಹಣೆ ಪಟ್ಟಿ ಕಟ್ಟಿಕೊಳ್ಳಬೇಕು ಎಂಬಂತಿದೆ.
ಹೀಗಾಗಿ ಏನು ಮಾತನಾಡಿದರೆ ಏನು ತಪ್ಪಾಗುತ್ತದೋ ಎಂದು ಕಾಂಗ್ರೆಸ್ ನಾಯಕರು ಅಂಜಿಕೊಳ್ಳುವ ಸ್ಥಿತಿ ಬಂದಿದೆ.
ಹೀಗಾಗಿ ಬಿಜೆಪಿ ಪ್ರಯೋಗಿಸಿರುವ ಇಂತಹ ಸಮ್ಮೋಹನಾಸ್ತ್ರಗಳಿಂದ ಹೇಗೆ ಬಚಾವಾಗಬೇಕು ಎಂದು ಯೋಚಿಸುವುದರಲ್ಲೇ ಕಾಂಗ್ರೆಸ್ ನಾಯಕರು ಹಣ್ಣಾಗಿದ್ದಾರೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here