ಉಜ್ಜಯಿನಿ ಸದ್ದರ್ಮ ಪೀಠ ಭವ್ಯ ಇತಿಹಾಸವುಳ್ಳದ್ದು: ಸಚಿವೆ ಶಶಿಕಲಾ ಜೊಲ್ಲೆ

0
182

ವಿಜಯನಗರ:30:-ಕೊಟ್ಟೂರು ತಾಲೂಕಿನ ಉಜ್ಜಯಿನಿಯಲ್ಲಿರುವ ಸದ್ದರ್ಮ ಪೀಠ ಪಂಚ ಪೀಠಗಳಲ್ಲಿ ಒಂದಾಗಿದ್ದು ಪೀಠ ಮತ್ತು ಮಠ 8ನೇ ಶತಮಾನದಲ್ಲಿ ಸ್ಥಾಪನೆಗೊಂಡ ಭವ್ಯ ಇತಿಹಾಸ ಹೊಂದಿದೆ. ಇತಿಹಾಸಕ್ಕೆ ತಕ್ಕಂತೆ ದೇವಸ್ಥಾನದ ಭವ್ಯ ಕೆತ್ತನೆಗಳಿಂದ ಸುಂದರವಾಗಿ ನಿರ್ಮಾಣಗೊಂಡಿರುವುದು ನೋಡಲು ನಿಜಕ್ಕೂ ಅದ್ಬುತ ಅನುಭವವಾಗುತ್ತದೆ. ಇಂತಹ ಮಹತ್ವದ ಪೀಠ ಮತ್ತು ಮಠಕ್ಕೆ ಇದುವರೆಗೂ ಬರಲಾಗಿರಲಿಲ್ಲ. ಇದೀಗ ಬಂದಿರುವೆ. ಇಂತಹ ಅದ್ಬುತ ಮತ್ತು ಮಹೋನ್ನತ ಪೀಠದ ದರ್ಶನ ಮತ್ತು ಉಜ್ಜಯಿನಿ ಜಗದ್ಗುರುಗಳಿಂದ ಶುಭಾರ್ಶಿರ್ವಾದ ಪಡೆದುಕೊಂಡ ಹೆಮ್ಮೆ ನನ್ನದಾಗಿದೆ ಎಂದು ಮಜುರಾಯಿ, ಹಜ್ ವಕ್ಪ್ ಖಾತೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.


ಗುರುವಾರ ರಾತ್ರಿ ಸದ್ದರ್ಮ ಪೀಠಕ್ಕೆ ಪತಿ ಅಣ್ಣಸಾಹೇಬ್ ಜೊಲ್ಲೆಯವರೊಂದಿಗೆ ಆಗಮಿಸಿ ಆರಾಧ್ಯ ದೈವ ಶ್ರೀಮರುಳಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡ ಅವರು ನಂತರ ಸದ್ದರ್ಮ ಪೀಠದ ಜಗದ್ಗುರು ಶ್ರೀಮರುಳಸಿದ್ದ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸನ್ಮಾನಿತಗೊಂಡು ಆರ್ಶಿರ್ವಾದ ಪಡೆದುಕೊಂಡು ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸದ್ದರ್ಮ ಪೀಠದ ಅಭಿವೃದ್ದಿಗೆ ಪೂರಕವಾದ ಯೋಜನೆಯನ್ನು ಕೈಗೊಳ್ಳುವಂತೆ ಜಗದ್ಗುರುಗಳು ತಮಗೆ ತಿಳಿಸಿದ್ದು ಈ ಸಂಬಂಧ ಮುಂಬರುವ ದಿನಗಳಲ್ಲಿ ಧಾರ್ಮಿಕ ಧತ್ತಿ ಇಲಾಖೆ ವತಿಯಿಂದ ಅಭಿವೃದ್ದಿ ಕೈಗೊಳ್ಳಲು ಮುಂದಾಗುವುದಾಗಿ ಅವರು ಹೇಳಿದರಲ್ಲದೆ ಜಿಲ್ಲೆಯವರೇ ಯಾದ ಪ್ರವಾಸೋದ್ಯಮ ಖಾತೆ ಸಚಿವ ಆನಂದ್ ಸಿಂಗ್‌ರು ಸಹ ಉಜ್ಜಯಿನಿ ಸದ್ದರ್ಮ ಪೀಠ ಅಭಿವೃದ್ದಿ ಪಡಿಸುವಂತೆ ಸೂಚಿಸಿರುವ ಹಿನ್ನಲೆಯಲ್ಲಿ ಅವರೊಂದಿಗೆ ಮಾತನಾಡಿ ಯಾವ ರೀತಿ ಅಭಿವೃದ್ದಿ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಯೋಚನೆ ನಡೆಸುವೆ ಎಂದರು.


ಪೀಠದ ಶ್ರೀಸ್ವಾಮಿಯ ರಥೋತ್ಸವ ಮತ್ತು ಶಿಖರ ತೈಲಾಭಿಷೇಕ ಸಮಾರಂಭಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು ಅವರುಗಳಿಗೆ ವಸತಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆ ಇದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಶೌಚಾಲಯ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಗಮನ ಹರಿಸುವುದಾಗಿ ಸಚಿವರು ಹೇಳಿದರು.
ಪತಿ ಅಣ್ಣಸಾಹೇಬ್ ಜೊಲ್ಲೆ, ಪೀಠದ ಮ್ಯಾನೇಜರ್ ವೀರೇಶ್, ಸಿದ್ದಲಿಂಗಸ್ವಾಮಿ, ಅಳವರ ಮರುಳಸಿದ್ದಪ್ಪ ಮತ್ತಿತರರು ಹಾಜರಿದ್ದರು.

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here