ಸೈಟ್ ಓಪನ್ ಆಗದ ಕಾರಣ ತಹಸೀಲ್ದಾರ್ ಕಚೇರಿ ಮುಂದೆ ರೈತರು ದಿಢೀರ್ ಮುಷ್ಕರ

0
323

ಕೊಟ್ಟೂರು:-ರೈತರು ರಾಗಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡಲು ಹೆಸರು ನೋಂದಾಯಿಸಲು ಇಲ್ಲಿನ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಕಚೇರಿಗೆ ಮೂರು ನಾಲ್ಕು ದಿನದಿಂದ ಅಲೆದು ಸೈಟ್ ಓಪನ್ ಆಗದ ಕಾರಣ ರೈತರು ದಿಢೀರೆಂದು ತಹಸೀಲ್ದಾರ್ ಕಚೇರಿ ಮುಂದೆ ಮುಷ್ಕರ ನಡೆಸಿದರು.

ಅರ್ಧ ಗಂಟೆಗೂ ಹೆಚ್ಚು ಕಾಲ ತಹಸೀಲ್ದಾರ್ ಕಚೇರಿ ಮುಂದೆ ಕುಳಿತ ಸುಮಾರು ನೂರಕ್ಕೂ ಹೆಚ್ಚು ರೈತರು ಸರ್ಕಾರ ಎರಡನೇ ಹಂತದಲ್ಲಿ ರಾಗಿ ಖರೀದಿ ಮಾಡಲಾಗುತ್ತದೆ ಎಂದು ಮಾಧ್ಯಮದಲ್ಲಿ ಹೇಳಿದೆ, ಆದರೆ ದಿನವೂ ಆಹಾರ ನಿಗಮದ ಕಚೇರಿಗೆ ಬಂದರೆ ಸೈಟ್ ಓಪನ್ ಆಗಿಲ್ಲವೆಂದು ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಣ್ಣ ರೈತನೇ ಆಗಿರಲಿ, ದೊಡ್ಡ ರೈತನೇ ಆಗಿರಲಿ ಒಂದು ಕುಟುಂಬದಿಂದ 2೦ ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆ 3377 ರೂ. ಖರೀದಿಸಬೇಕು. ಹಿಂಗಾರು ಮುಂಗಾರು ಎಂಬ ತಾರತಮ್ಯ ಮಾಡಬಾರದು, ಯಾವಾಗ ಸೈಟ್ ಓಪನ್ ಆಗುತ್ತದೆ ಎಂದು ರೈತರು ತಹಸೀಲ್ದಾರ್ ಅವರಲ್ಲಿ ಖಾರವಾಗಿಯೇ ಪ್ರಶ್ನೆಮಾಡಿದರು.

ತಹಸೀಲ್ದಾರ್ ಎಂ. ಕುಮಾರ್ ಸ್ವಾಮಿ, ಸರ್ಕಾರದಿಂದ ಇನ್ನೂ ರಾಗಿ ಖರೀದಿಸಲು ಇಲ್ಲಿನ ಆಹಾರ ನಿಗಮಕ್ಕೆ ಆದೇಶ ಬಂದಿಲ್ಲ. ಮೇಲಾಗಿ ಸೈಟ್ ಸಹಾ ಓಪನ್ ಆಗಿಲ್ಲ. ಸರ್ಕಾರ ಸೈಟ್ ಓಪನ್ ಮಾಡಿದಾಕ್ಷಣ ರೈತರ ಹೆಸರನ್ನು ನೋಂದಾಯಿಸಲಾಗುವುದು ಎಂದು ಉತ್ತರಿಸಿದರು.

ಕರ್ನಾಟಕ ನಾಗರೀಕ ಆಹಾರ ನಿಗಮದ ಇಲ್ಲಿನ ವ್ಯವಸ್ಥಾಪಕ ಈಶ್ವರಪ್ಪ ಅವರನ್ನು ಮುಷ್ಕರ ನಿರತ ಸ್ಥಳಕ್ಕೆ ಕರೆಸಿದ ತಹಸೀಲ್ದಾರ್ ಕುಮಾರ ಸ್ವಾಮಿ, ರೈತರ ಹೆಸರುಗಳನ್ನು ಬರೆದುಕೊಂಡು ಗ್ರೂಪ್ ಮಾಡಿಕೊಂಡು ಸೈಟ್ ಓಪನ್ ಆದ ತಕ್ಷಣ ಮಾಹಿತಿ ನೀಡುವಂತೆ ಆದೇಶಿಸಿದರು.

ನಂತರ ರೈತರು ಮನವಿಯನ್ನು ತಹಸೀಲ್ದಾರ್ ಕುಮಾರ ಸ್ವಾಮಿ ಅವರಿಗೆ ಸಲ್ಲಿಸಿದರು. ರೈತ ಮುಖಂಡ ಭರಮಪ್ಪ, ಪರುಶಪ್ಪ, ಕೊಟ್ರೇಶಪ್ಪ, ನಾಗೇಂದ್ರಪ್ಪ, ರಾಮಪ್ಪ, ಮರುಳಸಿದ್ದಪ್ಪ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಸೇರಿದ್ದರು.

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here