ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ವಾರ್ಡ್ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಆರಂಭ:ಆಯುಕ್ತೆ ಪ್ರೀತಿ ಗೆಹ್ಲೋಟ್

0
204

ಬಳ್ಳಾರಿ,ಜೂ.22 : ಬಳ್ಳಾರಿ ಮಹಾನಗರ ಪಾಲಿಕೆಯು ನಗರದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರ ದಾಯಿತ್ವವನ್ನು ತರಲು, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಹಾಗೂ ಜನರ ಸಹಭಾಗಿತ್ವವನ್ನು ಖಾತ್ರಿಪಡಿಸುವ ಉದ್ದೇಶದಿಂದ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ, 1976ರ ಪ್ರಕರಣ 13ರಲ್ಲಿ ಒದಗಿಸಲಾದ ವಾರ್ಡ್ ಸಮಿತಿಗಳನ್ನು ರಚಿಸಲು ನಿರ್ಧರಿಸಿ, ಮಹಾನಗರ ಪಾಲಿಕೆಯ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಪಾಲಿಕೆಯ ಅಧಿಸೂಚನೆಯ ಪ್ರಕಾರ ಸಾರ್ವಜನಿಕರಿಂದ ವಾರ್ಡ್ ಸಮಿತಿಯ ಸದಸ್ಯರಾಗಲು ಜೂ.04ರಂದು ಕೊನೆಯ ದಿನಾಂಕ ನೀಡಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಜೂ.05ರವರೆಗೆ ಬಳ್ಳಾರಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 39 ವಾರ್ಡ್‍ಗಳಿಂದ ಒಟ್ಟು 271 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ವರ್ಗದಲ್ಲಿ 77 ಅರ್ಜಿಗಳು (ಲಭ್ಯವಿರುವ 78 ಸ್ಥಾನಗಳಿಗೆ), 46 ಅರ್ಜಿಗಳು ಮಹಿಳಾ ವರ್ಗದಲ್ಲಿ (117 ಸ್ಥಾನಗಳಿಗೆ) ಮತ್ತು 15 ಅರ್ಜಿಗಳು ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ವರ್ಗದಲ್ಲಿ (78 ಸ್ಥಾನಗಳಿಗೆ) ಸ್ವೀಕರಿಸಲಾಗಿರುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ತಿಳಿಸಿದ್ದಾರೆ.
ಲಭ್ಯವಿರುವ ಸ್ಥಾನಗಳಲ್ಲಿ ಸುಮಾರು ಶೇ.70ರಷ್ಟು ಅರ್ಜಿಗಳನ್ನು ಸ್ವೀಕರಿಸಲಾಗಿರುವುದು ಉತ್ತೇಜನಕಾರಿ ಸಂಗತಿಯಾಗಿದೆ. ಆದಾಗ್ಯೂ, ಮಹಿಳೆಯರ ಮತ್ತು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳ ವರ್ಗದಲ್ಲಿ ಅರ್ಜಿಗಳು ನಿರೀಕ್ಷೆಗಿಂತ ಕಡಿಮೆ ಸ್ವೀಕೃತಗೊಂಡಿವೆ.
ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರ ಮೇಲ್ವಿಚಾರಣೆಯೊಂದಿಗೆ ಪಾಲಿಕೆಯ ಹಿರಿಯ ಅಧಿಕಾರಿಗಳು, ಸ್ವೀಕರಿಸಲ್ಪಟ್ಟ ಒಟ್ಟು 271 ಅರ್ಜಿಗಳನ್ನು ವಾರ್ಡ್‍ಗಳ ಪ್ರಕಾರ ವಿಂಗಡಿಸಿದಾಗ ಸದರಿ 39 ವಾರ್ಡ್‍ಗಳ ಪೈಕಿ 24 ವಾರ್ಡ್‍ಗಳಿಂದ 05 ಅಥವಾ ಅದಕ್ಕಿಂತ ಹೆಚ್ಚು ಅರ್ಜಿಗಳು ಸ್ವೀಕೃತಗೊಂಡಿದ್ದು, ಅವುಗಳನ್ನು ಮೊದಲನೇ ಹಂತದಲ್ಲಿ ವಾರ್ಡ್ ಸಮಿತಿಗಳ ರಚನೆಗೆ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ 24 ವಾರ್ಡ್‍ಗಳಲ್ಲಿ ಸ್ವೀಕೃತಗೊಂಡ ಅರ್ಜಿಗಳು ತಪ್ಪಾಗಿರುವುದು ಅಥವಾ ಕ್ರಮ ಬದ್ಧವಿಲ್ಲವೆಂದು ಕಂಡುಬಂದಲ್ಲಿ ಅಂಥಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ತಿಳಿಸಿದ ಅವರು, ಕನಿಷ್ಠ 05 ಅರ್ಹ ಅರ್ಜಿಗಳನ್ನು ಹೊಂದಿರುವ ವಾರ್ಡ್‍ಗಳಿಗೆ ವಾರ್ಡ್ ಸಮಿತಿ ಸದಸ್ಯರನ್ನು ಗುರುತಿಸಲು ಪಾರದರ್ಶಕ ಮತ್ತು ವ್ಯವಸ್ಥಿತ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗುವುದು. ಜೂ.29ರಿಂದ ಜು.02ರವರೆಗೆ ಅರ್ಹ ಅರ್ಜಿದಾರರನ್ನು 06 ವಾರ್ಡ್‍ಗಳ ಗುಂಪುಗಳನ್ನಾಗಿ ವಿಂಗಡಿಸಿ ಆಯುಕ್ತರ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಸಮಿತಿಯೊಂದಿಗೆ ಚರ್ಚೆಗಾಗಿ ಆಹ್ವಾನಿಸಲಾಗುತ್ತದೆ.
ಚರ್ಚೆಗೆ ಆಹ್ವಾನಿಸಲಾದ ಅರ್ಜಿದಾರರ ಪಟ್ಟಿಯನ್ನು ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯ ಸೂಚನಾ ಫಲಕದಲ್ಲಿ ಪ್ರಚುರಪಡಿಸಲಾಗುವುದು. ಅರ್ಜಿದಾರರು ತಮ್ಮ ವಾರ್ಡ್ ಹೊರತು ನೆರೆ ಹೊರೆಯ ಅಭಿವೃದ್ಧಿ, ಸಾಮಾಜಿಕ ವಲಯದಲ್ಲಿ ಅವರ ಕೊಡುಗೆಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ಪ್ರಸ್ತುತಪಡಿಸುವ ಅಗತ್ಯವಿರುತ್ತದೆ ಮತ್ತು ಇತರ ಅರ್ಜಿದಾರರೊಂದಿಗೆ ಚರ್ಚೆಯಲ್ಲಿ ಭಾಗವಹಿಸಬೇಕಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಸದರಿ ಅರ್ಜಿದಾರರ ಕೊಡುಗೆಗಳು, ಅವರ ದೃಷ್ಟಿಕೋನ, ಬದ್ಧತೆ ಮತ್ತು ನಾಯಕತ್ವ, ತಂಡದ ಕೆಲಸ ಮತ್ತು ಸಂವಹನದಂತಹ ನಿರ್ಣಾಯಕ ಕೌಶಲ್ಯಗಳ ಆಧಾರದ ಮೇಲೆ ಮಹಾನಗರ ಪಾಲಿಕೆಯ ಆಯುಕ್ತರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ವಾರ್ಡ್ ಸಮಿತಿಗಳ ಸದಸ್ಯರನ್ನು ಗುರುತಿಸಲಾಗುತ್ತದೆ.
ಅರ್ಜಿದಾರರು ನಿಗದಿತ ದಿನಾಂಕದಂದು ಆಯ್ಕೆ ಸಮಿತಿಯೊಂದಿಗೆ ಚರ್ಚೆಗೆ ಹಾಜರಾಗಲು ಸಾಧ್ಯವಾಗದ ಪಕ್ಷದಲ್ಲಿ, ಬಳ್ಳಾರಿ ಮಹಾನಗರಪಾಲಿಕೆಗೆ ಸೂಕ್ತ ಕಾರಣಗಳೊಂದಿಗೆ ಲಿಖಿತ ರೂಪದಲ್ಲಿ ನೀಡಿದ್ದಲ್ಲಿ, ಆಯ್ಕೆ ಸಮಿತಿಯೊಂದಿಗೆ ಸಭೆಗೆ ಹಾಜರಾಗಲು ಮತ್ತೊಂದು ಅವಕಾಶವನ್ನು ನೀಡಲಾಗುವುದು. ಹೀಗೆ ಗುರುತಿಸಲಾದ ಸದಸ್ಯರ ವಾರ್ಡ್‍ವಾರು ಪಟ್ಟಿಯನ್ನು ಪಾಲಿಕೆ ವತಿಯಿಂದ ಅನುಮೋದನೆಯನ್ನು ಪಡೆದ ನಂತರ ಪ್ರಕಟಿಸಲಾಗುವುದು.
ಈಗಾಗಲೇ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ 39 ವಾರ್ಡ್‍ಗಳ ಸಮಿತಿಗಳ ಕಾರ್ಯದರ್ಶಿಗಳನ್ನು ಮೇ 24ರಂದು ನೇಮಿಸಲಾಗಿರುತ್ತದೆ. ಜುಲೈ 2022 ರಿಂದ ಜಾರಿಗೆ ಬರುವಂತೆ ಪ್ರತಿ ಮಾಹೆಯ ಮೂರನೇ ಶನಿವಾರದಂದು ವಾರ್ಡ್ ಸಮಿತಿ ಮಾಸಿಕ ಸಭೆಯನ್ನು ಆಯೋಜಿಸಲು ಯೋಜಿಸಲಾಗಿದೆ. ಸದರಿ ಮಾಸಿಕ ವಾರ್ಡ್ ಸಮಿತಿ ಸಭೆಗಳಿಗೆ ಸ್ಥಳಗಳನ್ನು ಗುರುತಿಸಿ ಸೂಚಿಸಲಾಗುವುದು. ಬಳ್ಳಾರಿ ಮಹಾನಗರ ಪಾಲಿಕೆಯು ಜುಲೈ 2022 ರಿಂದ 05 ಕ್ಕಿಂತ ಕಡಿಮೆ ಸ್ವೀಕೃತಗೊಂಡ ಅರ್ಹ ಅರ್ಜಿಗಳನ್ನು ಹೊಂದಿರುವ ವಾರ್ಡ್‍ಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಹಾಗೂ ಸದರಿ ವಾರ್ಡ್‍ಗಳಲ್ಲಿಯೂ ವಾರ್ಡ್ ಸಮಿತಿಗಳನ್ನು ರಚಿಸಲು ಕಾರ್ಯಾಚರಣೆಯನ್ನು ಜರುಗಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here