ಆಗಸ್ಟ್ 19 ಇನ್ಫೋಸಿಸ್ ಸುಧಾಮೂರ್ತಿಯವರ ಹುಟ್ಟಿದ ದಿನ,

0
96

ಸುಧಾಮೂರ್ತಿಯವರು ಹುಟ್ಟಿದ ದಿನ ಆಗಸ್ಟ್ 19. ಶಾಲೆಯ ದಿನಗಳಿಂದ ಉನ್ನತ ದರ್ಜೆಯಲ್ಲಿ ಶಿಕ್ಷಣ ಸಾಧನೆ ಮಾಡಿದ ಸುಧಾ ಮೂರ್ತಿಯವರು ಹುಬ್ಬಳ್ಳಿಯ ಬಿ.ವಿ.ಬಿ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಬೆಂಗಳೂರಿನ ‘ಇಂಡಿಯನ್ ಇನ್ಸ್ತಿಟ್ಯೂಟ್ ಆಫ್ ಸೈನ್ಸ್’ನಲ್ಲಿ ಕಂಪ್ಯೂಟರ್ ವಿಜ್ಞಾನದ ಅಧ್ಯಯನ ನಡೆಸಿ, ಟಾಟಾ ಉದ್ಯಮದಲ್ಲಿ ಪ್ರಥಮ ಮಹಿಳಾ ತಂತ್ರಜ್ಞರಾಗಿ ಕೆಲಸ ಮಾಡಿದವರು. ಅದೂ ಹೇಗೆ?

ಸೂಚನಾ ಫಲಕದಲ್ಲಿ ಟಾಟಾ ಸಂಸ್ಥೆ ಹುಡುಗರಿಗೆ ಮಾತ್ರ ಎಂದು ಬರೆದಿದ್ದ ವೃತ್ತಿ ಆಹ್ವಾನ ನೋಡಿ, ‘ಹುಡುಗಿಯರಿಗೆ ಏಕಿಲ್ಲ?’ ಅಂತ ಸುಧಾ ಅವರು ಟಾಟಾ ಮುಖ್ಯಸ್ಥರಿಗೆ ಅಂತ ವಿಳಾಸದಲ್ಲಿ ಬರೆದು ಒಂದು ಪೋಸ್ಟ್ ಕಾರ್ಡ್ ಹಾಕಿದರು. ಅದು ತಲುಪಿದ್ದು ಜೆ.ಆರ್.ಡಿ ಟಾಟಾ ಅವರ ಕೈಯಲ್ಲಿ. ಹಾಗಾಗಿ ಸುಧಾ ಮೂರ್ತಿ ಅವರಿಗೆ ಸಂದರ್ಶನಕ್ಕೆ ಆಹ್ವಾನ ಬಂತು. ಅಲ್ಲಿ ಸಂದರ್ಶನದಲ್ಲಿ ಕಾರ್ಖಾನೆಯ ವಾತಾವರಣದಲ್ಲಿ ಕೆಲಸ ಮಾಡುವುದು ಸ್ತ್ರೀಯರಿಗೆ ಯಾವ ರೀತಿಯಲ್ಲಿ ಕಷ್ಟ ಎಂದು ಸೌಜನ್ಯದಿಂದ ಟಾಟಾ ಸಂಸ್ಥೆಯ ಅಧಿಕಾರಿಗಳು ಸುಧಾ ಅವರಿಗೆ ಮನವರಿಕೆ ಮಾಡಿಕೊಟ್ಟರು. ಅದು ಸರಿ ಎಂದ ಸುಧಾ ಮೂರ್ತಿ ಅವರು “ಹೇಗಾದರೂ ಸ್ತ್ರೀಯರಿಗೂ ಇಂತಹ ಬದುಕು ಒಂದು ದಿನ ಆರಂಭ ಆಗಲೇಬೇಕಲ್ಲ ಎಂದು ಆತ್ಮವಿಶ್ವಾಸದಿಂದ ನುಡಿದಾಗ”, ಆ ಆರಂಭವನ್ನು ಸುಧಾ ಮೂರ್ತಿ ಅವರಿಂದಲೇ ಟಾಟಾ ಸಂಸ್ಥೆ ಪ್ರಾರಂಭಿಸುವ ದಿನ ಕೂಡಿಬಂತು.

ಹಲವಾರು ಬಾರಿ ಜೆ. ಆರ್. ಡಿ ಟಾಟಾ ಅವರೊಂದಿಗೆ ಮುಖಾಮುಖಿ ಮಾತುಕತೆ ನಡೆಸಿದ್ದ ಸುಧಾ ಮೂರ್ತಿ ಒಂದು ದಿನ “ನಾನು, ನನ್ನ ಪತಿ ಬೆಂಗಳೂರಿನಲ್ಲಿ ನಮ್ಮದೇ ಆದ ಒಂದು ಸಂಸ್ಥೆ ಮಾಡುತ್ತಿದ್ದೇವೆ” ಎಂದಾಗ ಜೆ.ಆರ್.ಡಿ ಅವರು “ನೀವು ಖಂಡಿತ ಯಶಸ್ವಿಯಾಗುತ್ತೀರ, ಆಗ ನೀವು ದೇಶದ ಅಭಿವೃದ್ಧಿಗೂ ಕೆಲಸ ಮಾಡಿ” ಎಂದು ಹೇಳಿದರಂತೆ. ಮುಂದೆ ನಡೆದದ್ದು ಇತಿಹಾಸ. ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿಗಳು ಇಂದು ದೇಶಕ್ಕೆ ತಂದ ಹೊಸ ರೀತಿಯ ಅಭಿವೃದ್ಧಿಯ ಮುಖ, ಇಡೀ ಲೋಕವೇ ಬಲ್ಲ ವಿಷಯ.

ಇದು ಒಂದು ಮಾತಿನಲ್ಲಿ ಮೂಡುವ ಸಣ್ಣ ವಿಚಾರವಲ್ಲ. ಒಬ್ಬ ಪುರುಷನ ಯಶಸ್ಸಿನ ಹಿಂದೆ ಒಂದು ಹೆಣ್ಣಿನ ಸ್ಥಾನ ಬಹುಮುಖ್ಯವಾದದ್ದು. ಅಂದು ತಮ್ಮದೇ ಚಿಂತನೆಯಲ್ಲಿ ಏನನ್ನಾದರೂ ಮಾಡಬೇಕೆಂದು ಇಚ್ಚಿಸಿದ ನಾರಾಯಣ ಮೂರ್ತಿ ಅವರ ಕೈಯಲ್ಲಿ ಬಂದ ಬಂಡವಾಳ ಸುಧಾ ಮೂರ್ತಿ ಅವರ ಕೈಯಲ್ಲಿದ್ದ ಹತ್ತು ಸಾವಿರ ರೂಪಾಯಿ ಬೆಲೆ ಬಾಳುವ ಚಿನ್ನದ ಬಳೆ. ಇಂದು ಆ ಬಳೆಗಳು ಎಷ್ಟೊಂದು ಜನರ ಭವಿಷ್ಯವನ್ನು, ದೇಶದ ಪ್ರತಿಷ್ಠೆಯನ್ನು ಮೆರೆಸಿವೆ ಎಂದು ಹೇಳುವುದು, ಈ ನಾಡು ಸುಧಾ ಮೂರ್ತಿ ಅವರ ಬಗೆಗೆ ಹೇಳುವ ಕೃತಜ್ಞತೆಯ ಮಾತಾಗುತ್ತದೆ.

ಇಂದು ಅದೆಷ್ಟೆಷ್ಟೋ ಊರುಗಳಲ್ಲಿನ ಗ್ರಂಥಾಲಯಗಳು, ಶಾಲೆಗಳಲ್ಲಿನ ಕಲಿಕೆಯ ವ್ಯವಸ್ಥೆಗಳು, ನೈಸರ್ಗಿಕ ಸ್ವಚ್ಚತೆಯ ಸೌಲಭ್ಯಗಳು ಹೀಗೆ ಹಲವನ್ನು ಸುಧಾ ಮೂರ್ತಿ ಅವರು ಇನ್ಫೋಸಿಸ್ ಫೌಂಡೇಷನ್ ಮೂಲಕ ಸಂಚಲನಗೊಳ್ಳಲು ನೀಡಿರುವ ಕೊಡುಗೆ ಮಹೋನ್ನತವಾದದ್ದು. ಅವರು ಕೂಡಾ ಇನ್ಫೋಸಿಸ್ ಸಂಸ್ಥೆಯ ಒಂದು ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಲು ಎಲ್ಲ ರೀತಿಯಲ್ಲೂ ಅರ್ಹರಾಗಿದ್ದರು ಎಂಬುದು ಕೂಡಾ ನಮಗೆಲ್ಲಾ ತಿಳಿದ ವಿಚಾರವೇ ಆಗಿದೆ. ಆದರೂ ತನ್ನ ಸಂಗಾತಿಯ ಯಶಸ್ಸಿನಲ್ಲಿ ತಮ್ಮ ಯಶಸ್ಸನ್ನು ಕಂಡುದು ಮಾತ್ರವಲ್ಲದೆ, ಲೋಕವನ್ನು ತಮ್ಮ ಹೃದಯ ಸಂವೇದನೆಯಲ್ಲಿ ಕಂಡ ಮಾತೃ ಹೃದಯ ಕೂಡಾ ಸುಧಾ ಅವರದ್ದು.

ಸುಧಾ ಮೂರ್ತಿ ಅವರ ಅಂಕಣಗಳನ್ನು ಒಮ್ಮೊಮ್ಮೆ ಓದಿದಾಗಲೂ ಇದು, ನಾವು ಮಾರುಕಟ್ಟೆಯಲ್ಲಿ ಹೋದಾಗ, ಬಸ್ಸಿನಿಂದ ಇಳಿದಾಗ, ಆಟೋ ಹತ್ತಿದಾಗ, ಹೋಟೆಲಿನಲ್ಲಿ ತಿಂಡಿ ತಿಂದಾಗ, ಅವರಿವರು ಆಡಿದ ಮಾತಿನಂತೆಯೇ ಆತ್ಮೀಯವಾಗಿದೆಯೆಲ್ಲಾ ಎಂದು ಸನಿಹ ಬರುತ್ತಿರುವಂತೆಯೇ, ಯಾವುದೋ ಸತ್ಯತೆಯ ಅನುಭಾವ, ಹೃದಯಸ್ಪರ್ಶಿ ಸಂವೇದನೆಗಳ ಬಳಿ ನಮಗರಿವಿಲ್ಲದಂತೆ ಸುಧಾ ಮೂರ್ತಿಯವರು ನಮ್ಮನ್ನು ಕೈಹಿಡಿದು ನಡೆಸಿರುತ್ತಾರೆ. ಹೀಗಾಗಿ ಅವರ ಅಭಿಮಾನಿಗಳ ವ್ಯಾಪ್ತಿ ಅಬ್ದುಲ್ ಕಲಾಂ ಆಜಾದ್ ಅವರಿಂದ ಮೊದಲ್ಗೊಂಡು ಹಳ್ಳಿಯಲ್ಲಿ ಪತ್ರಿಕೆ ಹಿಡಿದು ಕುಳಿತ ರೈತನವರೆಗೆ ಎಲ್ಲರನ್ನೂ ಸಂವೇದಿಸುವಂತದ್ದಾಗಿದೆ. ಹೀಗಾಗಿ ಈ ‘ಸಾಫ್ಟ್ ಮನದ’ ಹೃದಯಸ್ಪರ್ಶಿ ಸೂಕ್ಷ್ಮತೆಗೆ ನಾವುಗಳು ನಿರಂತರ ಕಾಯುವಂತೆ ಮಾಡುತ್ತವೆ.

ಬರಹಗಾರರಾಗಿ ಸುಧಾ ಮೂರ್ತಿಯವರು ಬರೆದಿರುವ ‘ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್’, ‘Wise and otherwise’, ‘ಡಾಲರ್ ಸೊಸೆ’, ‘ಮಹಾಶ್ವೇತಾ’, ‘Sweet Hospitality,’ ಮೊದಲಾದ ಕೃತಿಗಳು ‘ಕನ್ನಡ’ ಹಾಗು ‘ಇಂಗ್ಲಿಷ್’ನಲ್ಲಿ ಪ್ರಕಟವಾಗಿವೆ. ‘ಸುಧಾಮೂರ್ತಿ’ಯವರು ಕೆಲವೊಂದು ಪ್ರವಾಸ ಕಥನಗಳನ್ನೂ ಬರೆದಿದ್ದಾರೆ.

ಸುಧಾಮೂರ್ತಿ ಅವರ ಬರವಣಿಗೆ, ಸಮಾಜಸೇವೆ ಮುಂತಾದ ಕಾರ್ಯಗಳಿಗೆ ಹಲವಾರು ಪ್ರಶಸ್ತಿಗಳು ಸಂದಿದ್ದು ಅದು ಪದ್ಮಶ್ರೀ ಪ್ರಶಸ್ತಿಯವರೆಗೆ ವ್ಯಾಪ್ತಿ ಹೊಂದಿದೆ. ಇವೆಲ್ಲವನ್ನೂ ಮೀರಿದ್ದು ಅವರ ಸರಳತೆ. ಲಾಲ್ಬಾಗಿನಲ್ಲಿ ವಾಕ್ ಮಾಡುವುದಿರಲಿ, ದೂರದರ್ಶನದಲ್ಲಿ ಚಿತ್ರ ತಾರೆ ನಡೆಸುವ ಸಂದರ್ಶನವಿರಲಿ, ಮಜಾ ಟಾಕೀಸ್ ಭಾಗವಹಿಕೆ ಇರಲಿ, ದೂರದರ್ಶನದ ಧಾರಾವಾಹಿಯಲ್ಲಿ ಅಭಿನಯವಿರಲಿ, ದೇಶದ ವಿವಿಧ ಪ್ರಸಿದ್ಧ ಪತ್ರಿಕೆಗಳಲ್ಲಿನ ಅಂಕಣಗಳಿರಲಿ, ಯಾವುದೇ ಸಮಾರಂಭದಲ್ಲಿ ಮಾತನಾಡುವಲ್ಲಿನ ಆವರಣವಿರಲಿ, ಯಾವೊಂದೂ ದಿನ ನಿತ್ಯದ ಚಟುವಟಿಕೆಗಳಿರಲಿ, ಎಲ್ಲೂ ಅದು ತನ್ನ ಸರಳ, ಸೌಜನ್ಯತೆ, ಮೂಡಿ ಬಂದ ಮೊಳಕೆಯ ಹಾದಿ ಇವ್ಯಾವುದರ ಸಂಪರ್ಕವನ್ನು ಕಿಂಚಿತ್ತೂ ಕಳೆದುಕೊಳ್ಳುವುದಿಲ್ಲ.

ಈ ಸಾಫ್ಟ್ ಮನದ ಸೌಜನ್ಯತೆಗೆ, ಸಮಾಜದ ಜೊತೆ ನಿರಂತರವಾಗಿರುವ ಸುಧಾ ಮೂರ್ತಿ ಎಂಬ ಅಕ್ಕರೆಯ ಸಂವೇದನೆಗೆ ನಮನಗಳು ಮತ್ತು ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು. ಇವರ ಮತ್ತು ಇವರ ಕುಟುಂಬದವರ ಬದುಕು ನಿತ್ಯ ಸಂತಸ, ಅಭಿವೃದ್ಧಿ ಮತ್ತು ಸುಂದರ ಸಂವೇದನೆಗಳಿಂದ ನಿರಂತರ ಶೋಭಿಸುತ್ತಿರಲಿ.

ಕೃಪೆ:- ‘ಕನ್ನಡ ಸಂಪದ’

LEAVE A REPLY

Please enter your comment!
Please enter your name here