ಕಲ್ಯಾಣ ಕರ್ನಾಟಕದಲ್ಲಿ ಈ ತನಕ ಗೆಲ್ಲದ ಕ್ಷೇತ್ರಗಳಲ್ಲಿ ಕಮಲ ಆರಳಿಸಲು ಸಿದ್ದವಾಗಿದೆ ಮಾಸ್ಟರ್ ಪ್ಲಾನ್

0
248

-ಹುಳ್ಳಿಪ್ರಕಾಶ, ಹಿರಿಯ ಪತ್ರಕರ್ತರು

ನಲವತ್ತೆರಡು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕಲ್ಯಾಣ ಕರ್ನಾಟಕದಲ್ಲಿ 2023ರ ಚುನಾವಣೆಯಲ್ಲಿ ಮುವತ್ತು ಪ್ಲಸ್ ಸ್ಥಾನಗಳನ್ನು ಗೆಲ್ಲಲ್ಲು ಕೇಸರಿ ಪಾಳೆಯದಲ್ಲಿ ಗಂಭೀರವಾದ ಚಿಂತನೆಗಳು ನಡೆದಿದ್ದು, ಬಹು ಮುಖ್ಯವಾಗಿ ಈ ಪ್ರಾಂತ್ಯದಲ್ಲಿ ಈ ತನಕವೂ ಬಿಜೆಪಿ ಗೆಲ್ಲದಿರುವ ಕ್ಷೇತ್ರಗಳಲ್ಲಿ ಈ ಸಲ ಕಮಲ ಆರಳಿಸಲೇಬೆಕೆನ್ನುವ ಖಡಕ್ ಟಾರ್ಗೆಟ್ ವೊಂದು ರಾಷ್ಟ್ರೀಯ ವರಿಷ್ಠ ರಿಂದ ಈಗಾಗಲೇ ರಾಜ್ಯಕ್ಕೆ ರವಾನೆಕೂಡ ಆಗಿದೆ.

2023ರಲ್ಲಿ ಕಲ್ಯಾಣ ಕರ್ನಾಟಕವನ್ನು ಪ್ರಮುಖ ಟಾರ್ಗೆಟ್ ಮಾಡಿಕೊಂಡಿರುವ ರಾಷ್ಟ್ರೀಯ ವರಿಷ್ಠರು ಜಯದ ಬರ ಎದುರಿಸುತ್ತಿರುವ ಕ್ಷೇತ್ರಗಳಲ್ಲಿ ಈ ಸಲ ಬಂಪರ್ ಫಸಲು ತೆಗೆದು,ವಪಕ್ಷವನ್ನು ವಿಜಯ ವೇದಿಕೆ ಮೇಲೆ ಹತ್ತಿಸ ಬೇಕೆನ್ನುವ ಗಂಭೀರವಾದ ಟಾಸ್ಕ್ ನ್ನು ರಾಜ್ಯದ ವರಿಷ್ಠರಿಗೆ ಕೊಟ್ಟಿದ್ದಾರೆನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.

ಆಗೇನೆ, ಕಲ್ಯಾಣ ಕರ್ನಾಟಕದಲ್ಲಿ ಒಂದು ಸಲ ಗೆದ್ದು ಸತತ ಸೋತಿರುವಂತಹ ಹಾಗೂ ಒಂದು ಸಲ ಸೋಲುವುದು, ಮರು ಚುನಾವಣೆಯಲ್ಲಿ ಗೆಲ್ಲುವುದು, ಪುನಃ ಸೋಲುವಂತಹ ವಿಧಾನಸಭಾ ಕ್ಷೇತ್ರಗಳನ್ನು ರಾಷ್ಟ್ರೀಯ ನಾಯಕರು ಈಗಾಗಲೇ ವಿಂಗಡಣೆ ಮಾಡಿಕೊಂಡು ಅದಕ್ಕೆ ತಕ್ಕಂತೆಯೇ ಕಾರ್ಯತಂತ್ರಗಳನ್ನು ರೂಪಿಸಿದ್ದಾರೆನ್ನುವ ಸುದ್ದಿಗಳು ಕಮಲ ಪಾಳೆಯ ದಿಂದ ಜೋರಾಗಿ ಕೇಳಿ ಬರುತ್ತಿವೆ.

2023ರಲ್ಲಿ ಕಲ್ಯಾಣ ದಿಂದಲೇ ಭರ್ಜರಿ ಫಸಲು ಎತ್ತಬೇಕೆನ್ನುವ ಮಾಸ್ಟರ್ ಪ್ಲಾನ್ ಸಿದ್ದಪಡಿಸಿಕೊಂಡಿರುವ ಕಮಲ ವರಿಷ್ಠರು ಈಗಿನಿಂದಲೇ ಚುನಾವಣಾ ರಣಾತಂತ್ರಗಾರಿಕೆ ಹೆಣೆಯುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಮಾನವಿ, ಸಿಂಧನೂರು, ಸಂಡೂರು, ಗುಲಬರ್ಗಾ ಉತ್ತರ ಈ ಕ್ಷೇತ್ರಗಳನ್ನು ಈ ತನಕವೂ ಬಿಜೆಪಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ 2023ರಲ್ಲಿ ಈ ಕ್ಷೇತ್ರಗಳನ್ನೆ ಪ್ರಮುಖ ಟಾರ್ಗೆಟ್ ಆಗಿ ಬಿಜೆಪಿ ತೆಗೆದುಕೊಂಡಿದ್ದು, ಈ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲುವಿನ ದಡ ಹತ್ತಿಸಲು ಗೆಲುವಿಗೆ ಅಗತ್ಯವಾದ ಎಲ್ಲ ತಂತ್ರಗಾರಿಕೆಗಳನ್ನು, ವ್ಯೂಹಗಳನ್ನು ಈಗಾಗಲೇ ಹೆಣೆದಿದ್ದು ಅದನ್ನು ಪರಿಣಾಮಕಾರಿ ಆಗಿ ಹೇಗೆ ಜಾರಿಗೊಳಿಸಬೇಕೆನ್ನುವುದರ ಕುರಿತಂತೆ ಮೇಲಿಂದ, ಮೇಲೆ
ರಾಜ್ಯದ ನಾಯಕರಿಗೆ ತರಬೇತಿ ನೀಡುತ್ತಲೆ ಬರುತ್ತಿದ್ದಾರೆನ್ನುವುದು ವರ್ತಮಾನದ ವಿಶ್ಲೇಷಣೆಯ ಹೌದಾಗಿದೆ.

ಪ್ರಸ್ತುತ ಮಾನವಿ ಮತ್ತು ಸಿಂಧನೂರು ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಶಾಸಕರಿದ್ದಾರೆ. ಇತ್ತ ಸಂಡೂರು, ಗುಲಬರ್ಗಾ ಉತ್ತರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಈ ನಾಲ್ಕು ಕ್ಷೇತ್ರಗಳಲ್ಲಿ ಈ ತನಕವೂ ಕಮಲ ಆರಳಿಲ್ಲ. ಈ ವಿಚಾರವೇ ಈಗ ರಾಷ್ಟ್ರೀಯ ನಾಯಕರಿಗೆ ಪ್ರತಿಷ್ಠೆಯಾಗಲು ಮೂಲ ಕಾರಣ. ನೀವು ಏನು ಮಾಡುತ್ತೀರೋ ಗೊತ್ತಿಲ್ಲ 2023ರಲ್ಲಿ ಈ ನಾಲ್ಕು ಕ್ಷೇತ್ರಗಳಲ್ಲಿ ಕಮಲ ಆರಳಬೇಕು. ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನು ಗಂಭೀರವಾಗಿ ಮಾಡಬೇಕೆಂದಿದ್ದಾರೆ ವರಿಷ್ಠರು.

ಇದರ ಜೊತೆಗೆ
ಕಲ್ಯಾಣ ಕರ್ನಾಟಕದಲ್ಲಿ ಕನಿಷ್ಠ ಮುವತ್ತೈದು ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕು. ಈ ಸಾಧನೆ ಆದರೇ ನಾವು ಅಂದುಕೊಂಡಿರುವ ಮಿಷನ್ 150 ಮುಟ್ಟಲು ಸಾಧ್ಯ ಎಂದು ವರಿಷ್ಠರು ಖಡಾಖಡಿಯಾಗಿ ಹೇಳಿರುವ ಮಾತುಗಳು ರಾಜ್ಯ ನಾಯಕರನ್ನು ಈ ಮಳೆಗಾಲದಲ್ಲೂ ಕಡು ಬೇಸಿಗೆಯಂತೆ ಬೇವರುವಂತೆ ಮಾಡಿದೆ.

ಕಲ್ಯಾಣ ಕರ್ನಾಟಕದಲ್ಲಿ ಪ್ರಸ್ತುತ ಹತ್ತೊಂಭತ್ತು ಬಿಜೆಪಿ ಶಾಸಕರಿದ್ದಾರೆ. ಈ ಸಂಖ್ಯೆ ಮುವತ್ತರ ಗಡಿ ಧಾಟಿಸಬೇಕೆನ್ನುವ ಟಾರ್ಗೆಟ್ ಕಠಿಣ ಸಹ. ಇದು ಕಮಲ ನಾಯಕರಿಗೆ ಗೊತ್ತಿದೆ ಕೂಡ. ಡಬ್ಬಲ್ ಎಂಜಿನ್ ಸರ್ಕಾರ ಇಟ್ಟುಕೊಂಡು ಈ ಗಡಿ ಧಾಟಲು ಕಷ್ಟವಾಗದು ಎನ್ನುವುದು ದೆಹಲಿ ಕೇಸರಿ ನಾಯಕರ ಮನಸ್ಸಿನಾಳದಲ್ಲಿದೆ. ಅಲ್ಲದೆ ಕಲ್ಯಾಣದಲ್ಲಿ ವೀರೇಶ್ವರ ಜೊತೆಗೆ ವಾಲ್ಮೀಕಿ, ಗಂಗಾಮತ, ಎಸ್ಸಿ ಎಡಗೈ ಸೇರಿದಂತೆ ಅಹಿಂದ ವರ್ಗಗಳಲ್ಲಿ ಬರುವಂತಹ ಸಣ್ಣ,ಪುಟ್ಟ ಜಾತಿಗಳು ಬಿಜೆಪಿ ಜೊತೆಗೆ ಬಲಯುತವಾಗಿ ನಿಂತಿವೆ. ಈ ಕಾರಣಕ್ಕೇನೆ 2019ರ ಸಂಸತ್ತಿನ ಚುನಾವಣೆಯಲ್ಲಿ ಈ ಪ್ರಾಂತ್ಯದ ವ್ಯಾಪ್ತಿಗೆ ಬರುವ ಐದು ಲೋಕಸಭಾ ಕ್ಷೇತ್ರಗಳನ್ನು ಕ್ಲಿನ್ ಸ್ವೀಪ್ ಮಾಡಲು ಬಿಜೆಪಿಗೆ ಸಾಧ್ಯವಾಯ್ತು.

ಈ ಪ್ರಾಂತ್ಯಕ್ಕೆ 371ಜೆ ಸೌಲಭ್ಯ ಕಲ್ಪಿಸಿಕೊಡುವಂತಹ ಮಹತ್ವದಾಯಕ ಕೆಲಸ ಮಾಡಿದ್ರೂ ಮಲ್ಲಿಕಾರ್ಜುನ ಖರ್ಗೆಯವರು ಬಿಜೆಪಿ ಸುನಾಮಿಗೆ ಸಿಕ್ಕು ಸೋಲು ಅನುಭವಿಸುವಂತಾಯ್ತು. ಆ ಮಟ್ಟಿಗೆ ಕಲ್ಯಾಣದ ಪರಿಸರದಲ್ಲಿ ಬಿಜೆಪಿ ಪರವಾದ ಆಲೆ ನಿರ್ಮಾಣಗೊಂಡಿದೆ. ಇದೇ ಆಲೆಯನ್ನೆ ಬರಲಿರುವ ಅಸೆಂಬ್ಲಿ ಎಲೇಕ್ಷನ್ ನಲ್ಲಿ ಪಕ್ಷದ ಪರವಾಗಿಸಿಕೊಂಡರೇ ಮುವತ್ತು ಪ್ಲಸ್ ಸಾಧನೆ ಅಸಾಧ್ಯವಾಗದು ಎನ್ನುವುದು ಕಮಲ ನಾಯಕರ ಮನದಾಳ.

ಹೀಗಾಗಿ ಬಿಜೆಪಿ 2023ರ ಚುನಾವಣೆಯಲ್ಲಿ
ಟಾರ್ಗೆಟ್ ಮಾಡಿರುವ ಈ ತನಕವು ಗೆಲ್ಲದ ಕ್ಷೇತ್ರಗಳಾದ ಸಂಡೂರು, ಮಾನವಿ, ಸಿಂಧನೂರು, ಗುಲಬರ್ಗಾ ಉತ್ತರ, ಆಗೇನೆ ಒಂದು ಸಲ ಗೆದ್ದು ಸತತ ಎರಡು ಸಲ ಸೋತಿರುವ ಚಿತ್ತಾಪುರ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ರಾಯಚೂರು ಗ್ರಾಮೀಣ ಸೇರಿದಂತೆ ಹದಿನೈದಕ್ಕೂ ಅಧಿಕ ಕ್ಷೇತ್ರಗಳಲ್ಲಿ ಚುನಾವಣಾ ಕಣ ರಣಾರಂಗವಾಗುವ ಸಾಧ್ಯತೆಗಳು ಕಾಣಿಸುತ್ತಿವೆ.

LEAVE A REPLY

Please enter your comment!
Please enter your name here