ಶ್ರೀಮೇದಾ ಕಾಲೇಜಿನಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ, ದುರ್ಬಲರಿಗೆ ಉಚಿತ ಕಾನೂನು ಸೇವೆ;ಕಾನೂನು ಸೇವಾ ಪ್ರಾಧಿಕಾರದ ಧ್ಯೇಯ:ನ್ಯಾ.ಸದಾನಂದ ದೊಡ್ಡಮನಿ

0
89

ಬಳ್ಳಾರಿ,ನ.12 : ನಿಮ್ಮ ತಂದೆ-ತಾಯಿಗಳು ತಮ್ಮ ಮೇಲೆ ಬಹಳಷ್ಟು ಕನಸುಗಳನ್ನಿಟ್ಟುಕೊಂಡಿದ್ದಾರೆ. ಅವರು ಅನೇಕ ಕಷ್ಟಗಳನ್ನು ಅನುಭವಿಸುತ್ತಾ ತಮಗೆ ಶಿಕ್ಷಣ ಒದಗಿಸಿಕೊಡುವ ಮೂಲಕ ಒಳ್ಳೆಯ ಭವಿಷ್ಯ ರೂಪಿಸುವುದಕ್ಕೆ ಮುಂದಾಗಿದ್ದಾರೆ. ತಾವಿಟ್ಟುಕೊಂಡಿರುವ ಗುರಿಗಳನ್ನು ಸಾಧಿಸುವುದರ ಮೂಲ ಅವರ ಕನಸುಗಳನ್ನು ಈಡೇರಿಸುವುದಕ್ಕೆ ಮುಂದಾಗಬೇಕು ಎಂದು 1ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಸದಾನಂದ ದೊಡ್ಡಮನಿ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀಮೇಧಾ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಒಳ್ಳೆಯ ಗುರಿಯನ್ನಿಟ್ಟುಕೊಂಡು ಅದನ್ನು ಸಾಧಿಸಲು ಪ್ರಯತ್ನಿಸಿ;ಈ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಿ ಎಂದು ಅವರು ಹೇಳಿದರು.
ಕಾನೂನು ಸೇವಾ ಪ್ರಾಧಿಕಾರವು ತಾಲೂಕು ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಕಾರ್ಯನಿರ್ವಹಿಸುತ್ತಿದ್ದು, ಇದರಡಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ, ಮತಿಯ ಗಲಭೆಯಲ್ಲಿ ತುತ್ತಾದವರಿಗೆ, ಪ್ರವಾಹ ಬಾಧೀತರಿಗೆ ಮತ್ತು ಮಹಿಳೆಯರಿಗೆ ಹಾಗೂ 3ಲಕ್ಷ ರೂ.ಗಳೊಳಗೆ ವಾರ್ಷಿಕ ಆದಾಯ ಹೊಂದಿರುವವರೆಗೆ ಕೆಳಹಂತದ ನ್ಯಾಯಾಲಯದಿಂದ ಸುಪ್ರೀಂಕೋರ್ಟ್‍ವರೆಗೆ ಉಚಿತವಾಗಿ ಕಾನೂನು ಸೇವೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಜನರಲ್ಲಿ ಕಾನೂನಿನ ಕುರಿತು ಅರಿವು ಮೂಡಿಸುವುದು, ಬಡವರು ಹಾಗೂ ಹಿಂದುಳಿದವರಿಗೆ ಉಚಿತ ಕಾನೂನು ಸೇವೆ ಒದಗಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಪ್ರಮುಖ ಉದ್ದೇಶವಾಗಿದೆ. ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಎಲ್ಲಾ ಸಾರ್ವಜನಿಕರಿಗೆ ಕಾನೂನುಗಳ ಕುರಿತು ಅರಿವು ಮೂಡಿಸಿಲು ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ಕಾನೂನು ಅರಿವು-ನೆರವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅ.2ರಿಂದ ಶುರುವಾಗಿದ್ದು, ನ.14ರವರೆಗೆ ಜಿಲ್ಲೆಯ ಹಲವು ಕಡೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ಹೇಳಿದರು.
ಕಾನೂನು ಸೇವಾ ಪ್ರಾಧಿಕಾರದಲ್ಲಿ ಕಾನೂನು ರಥ ಎಂಬ ಬಸ್ ಇದ್ದು;ಇದರಲ್ಲಿ ಸಂಪೂರ್ಣ ನ್ಯಾಯಾಲಯದ ವ್ಯವಸ್ಥೆ ಇದೆ. ಈ ಬಸ್ಸಿನಲ್ಲಿ ಹೋಗಿ ಹಳ್ಳಿಭಾಗದಲ್ಲಿ ದಾಖಲಾದ ಪ್ರಕರಣಗಳಲ್ಲಿ ರಾಜಿಯಾಗಬಹುದಾದ ಪ್ರಕರಣಗಳನ್ನು ಆಯ್ಕೆ ಮಾಡಿಕೊಂಡು ನಂತರ ಆ ಪ್ರಕರಣಗಳಿಗೆ ಸಂಬಂಧಿಸಿದ ಎರಡು ಪಾರ್ಟಿಗಳಿಗೆ ಹಾಗೂ ವಕೀಲರಿಗೆ ಮುಂಚಿತವಾಗಿ ನೊಟೀಸ್ ನೀಡಿ ಮತ್ತು ದಿನಾಂಕವನ್ನು ನಿಗದಿಪಡಿಸಿ ಒಬ್ಬ ನ್ಯಾಯಾಧೀಶರು ಮತ್ತು ವಕೀಲರ ವ್ಯವಸ್ಥೆ ಹೊಂದಿರುವ ಕಾನೂನು ರಥದಲ್ಲಿ ತೆರಳಿ ಇತ್ಯರ್ಥ ಮಾಡಲಾಗುತ್ತಿದೆ ಈ ವ್ಯವಸ್ಥೆಯನ್ನು ಮನೆ ಬಾಗಿಲಿಗೆ ನ್ಯಾಯ, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬುದಾಗಿದ್ದು,ಸುಪ್ರೀಂಕೋರ್ಟ್‍ನ ಕಾರ್ಯಕ್ರಮವಾಗಿದೆ ಎಂದು ಅವರು ತಿಳಿಸಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ನ್ಯಾಯಾಧೀಶರು ಅರಿವು ಮೂಡಿಸಿದರು.
ಬಳ್ಳಾರಿ ನಗರ ಉಪ ವಿಭಾಗದ ಡಿವೈಎಸ್ಪಿ ರಮೇಶ ಕುಮಾರ್ ಅವರು ಮಾತನಾಡಿದರು
ಶ್ರೀಮೇಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಕೀಲರಾದ ಸದನ್‍ಬಾಷ, ಪೊಲೀಸ್ ಅಧಿಕಾರಿ ಸುಭಾಷ್‍ಚಂದ್ರ, ಪೊಲೀಸ್ ಸಿಬ್ಬಂದಿ, ಶ್ರೀಮೇಧಾ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

LEAVE A REPLY

Please enter your comment!
Please enter your name here