ಮಹಾರಾಷ್ಟ್ರದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ಸುದ್ದಿ: ಶಾಲಾ ಶುಲ್ಕದಲ್ಲಿ ಶೇ.15 ಕಡಿತ

0
673

ಈ ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ಸುದ್ದಿಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ. ಕೋವಿಡ್ -19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಶುಲ್ಕವನ್ನು ಶೇಕಡ 15 ರಷ್ಟು ಕಡಿಮೆ ಮಾಡಲು ಎಲ್ಲಾ ಮಂಡಳಿಗಳಿಗೆ ಸಂಯೋಜಿತವಾಗಿರುವ ಎಲ್ಲಾ ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮಹಾರಾಷ್ಟ್ರ ಶಾಲಾ ಶಿಕ್ಷಣ ಸಚಿವೆ ವರ್ಷಾ ಗಾಯಕವಾಡ್, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿ, ”ಶಾಲಾ ಶುಲ್ಕವನ್ನು ಶೇಕಡ 15 ರಷ್ಟು ಕಡಿತಗೊಳಿಸುವ ಬಗ್ಗೆ ಅಧಿಸೂಚನೆ ಹೊರಡಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಇದು ಎಲ್ಲಾ ಶಿಕ್ಷಣ ಮಂಡಳಿಗಳಿಗೆ ಅನ್ವಯವಾಗಲಿದೆ ಮತ್ತು ಅಧಿಸೂಚನೆ ಇರುತ್ತದೆ. ಮುಂದಿನ ಎರಡು ದಿನಗಳಲ್ಲಿ ಅಧಿಸೂಚನೆ ನೀಡಲಾಗುತ್ತದೆ,” ಎಂದು ತಿಳಿಸಿದ್ದಾರೆ.

ರಾಜಸ್ಥಾನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ (ಎಸ್‌ಸಿ) ಆದೇಶದ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಈ ವೇಳೆಯೇ ಸಚಿವೆ ಹೇಳಿದರು. ಮೇ ಮೊದಲ ವಾರದಲ್ಲಿ, ರಾಜಸ್ಥಾನದ ವಿಷಯದಲ್ಲಿ ತನ್ನ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕವನ್ನು ಶೇಕಡ 15 ರಷ್ಟು ಕಡಿಮೆ ಮಾಡುವಂತೆ ತಿಳಿಸಿದೆ. ಏಕೆಂದರೆ ಈ ಸಂಸ್ಥೆಗೆ ಈಗ ಖರ್ಚು ಕಡಿಮೆಯಾಗಿದೆ. ಕ್ಯಾಂಪಸ್‌ನಲ್ಲಿ ವಿವಿಧ ಸೌಲಭ್ಯಗಳನ್ನು ಮುಚ್ಚಲಾಗಿದೆ ಎಂದು ಸುಪ್ರೀಂ ಕೋರ್ಟ್ ಉಲ್ಲೇಖ ಮಾಡಿದೆ.

ಶುಲ್ಕ ಬಾಕಿ ಅಥವಾ ಪಾವತಿಸದ ಕಾರಣ ಯಾವುದೇ ವಿದ್ಯಾರ್ಥಿಗಳನ್ನು ಆನ್‌ಲೈನ್ ತರಗತಿಗಳು ಅಥವಾ ದೈಹಿಕ ತರಗತಿಗಳಿಗೆ ಹಾಜರಾಗುವುದನ್ನು ತಡೆಯದಿರಲು ನ್ಯಾಯಾಲಯ ಶಾಲೆಗಳಿಗೆ ನಿರ್ದೇಶನ ನೀಡಿದೆ. ಇನ್ನು ”ಶುಲ್ಕ ಪಾವತಿಸದ ಪೋಷಕರಿಗೆ ಪಾವತಿಸುವಾಗ ಶೇಕಡ 15 ರಷ್ಟು ರಿಯಾಯಿತಿ ಸಿಗುತ್ತದೆ. ಈಗಾಗಲೇ ಶುಲ್ಕವನ್ನು ಪಾವತಿಸಿದ ಪೋಷಕರ ಬಗ್ಗೆ ರಾಜ್ಯವು ಸ್ಪಷ್ಟೀಕರಣವನ್ನು ನೀಡಲಿದೆ,” ಎಂದು ಸಚಿವರು ಹೇಳಿದರು. ”ಶಾಲಾ ಶುಲ್ಕವನ್ನು ಹೆಚ್ಚಿಸದಂತೆ ಕಳೆದ ವರ್ಷ ಆದೇಶ ಹೊರಡಿಸಿದಂತೆ ಯಾವುದೇ ಶಾಲೆ ಶುಲ್ಕವನ್ನು ಶೇಕಡ 15 ರಷ್ಟು ಹೆಚ್ಚಿಸಲು ಪ್ರಯತ್ನಿಸುವುದಿಲ್ಲ ಎಂದು ಆಶಿಸಿದ್ದೇನೆ,” ಎಂದು ಕೂಡಾ ಹೇಳಿದ್ದಾರೆ.

”ಎಲ್ಲಾ ಶಾಲೆಗಳು ಮಹಾರಾಷ್ಟ್ರ ಸರ್ಕಾರ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಲಿದೆ. ಶಾಲೆಗಳು ಆದೇಶಗಳನ್ನು ಪಾಲಿಸದಿದ್ದಲ್ಲಿ ಶಾಲೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಕೆಯನ್ನು ಕೂಡಾ ಮಹಾರಾಷ್ಟ್ರ ಶಾಲಾ ಶಿಕ್ಷಣ ಸಚಿವೆ ವರ್ಷಾ ಗಾಯಕವಾಡ್‌ ನೀಡಿದ್ದಾರೆ. ಪಠ್ಯೇತರ ಚಟುವಟಿಕೆಗಳಾದ ಗ್ರಂಥಾಲಯಗಳು, ಕ್ರೀಡೆಗಳು ಮತ್ತು ಶಾಲಾ ಬಸ್ ಸೌಲಭ್ಯಗಳನ್ನು ಒದಗಿಸದೆ ಶಾಲೆಗಳ ಶುಲ್ಕವನ್ನು ವಿಧಿಸುವ ಶಾಲೆಗಳ ಬಗ್ಗೆ ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವಿನ ಸಂಘರ್ಷ ನಡೆಯುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಸಾಕಷ್ಟು ದೂರುಗಳು ಬಂದವು. ಈ ನಡುವೆ ಒಂದು ಪ್ರಮುಖ ಸಮಿತಿ, ವಿಭಾಗೀಯ ಶುಲ್ಕ ನಿಯಂತ್ರಣ ಸಮಿತಿ (ಡಿಎಫ್‌ಆರ್‌ಸಿ) ಒಂದು ವರ್ಷದಿಂದ ಕಾರ್ಯರೂಪಕ್ಕೆ ಬಂದಿಲ್ಲ. ಸಾರ್ವಜನಿಕ ಪ್ರತಿನಿಧಿಗಳು, ಶಿಕ್ಷಣ ಅಧಿಕಾರಿಗಳು ಮತ್ತು ನ್ಯಾಯಾಂಗದ ಮುಂದೆ ಶುಲ್ಕದ ಬಗ್ಗೆ ಪೋಷಕರು ಮತ್ತು ಶಾಲೆಗಳು ಘರ್ಷಣೆ ನಡೆಸಿದೆ. ಶೇ.15 ಕಡಿಮೆ ಶುಲ್ಕವನ್ನು ಸಂಗ್ರಹಿಸಲು ರಾಜಸ್ಥಾನ ಶಾಲೆಗಳಿಗೆ ನೀಡಿದ ಮೇ ತೀರ್ಪನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಕಳೆದ ವಾರ ರಾಜ್ಯಕ್ಕೆ ನಿರ್ದೇಶನ ನೀಡುವ ಮೂಲಕ ಪೋಷಕರ ರಕ್ಷಣೆಗೆ ಬಂದಿತ್ತು.

LEAVE A REPLY

Please enter your comment!
Please enter your name here