ಮನೆ ಮುಂದೆ ಬಂದು ಕುಳಿತ ಯುದ್ಧ ವಿಮಾನ

0
64

ನಿನ್ನೆ ಬೆಳಿಗ್ಗೆ ಮನೆಯ ಗಿಡಗಳ ಮೇಲೆಲ್ಲ ಕಣ್ಣಾಡಿಸುವಾಗ ಆಕಸ್ಮಾತ್ ಈ ಪತಂಗ ಕಣ್ಣಿಗೆ ಬಿತ್ತು. ತುಂಬಾ ಅಪರೂಪದ ನೋಡಲು ಥೇಟ್ ನಮ್ಮ ಮಿಲಿಟರಿ ಯುದ್ಧವಿಮಾನದಂತೆಯೇ ಕಾಣುವ ಈ ಪತಂಗ ಆಕರ್ಷಣೀಯ. ಅದರೆ ರೆಕ್ಕೆಗಳ ವಿನ್ಯಾಸ, ಹಸಿರು ಬಣ್ಣ ಎಲ್ಲವೂ ಯುದ್ಧ ವಿಮಾನವೇ. ಇದನ್ನು ನೋಡಿಯೇ ಯುದ್ಧವಿಮಾನಗಳನ್ನು ರೂಪಿಸಿದ್ದಾರೇನೋ ಎಂಬಂತೆ.

ನಮ್ಮ ತೋಟದ ಗಿಡಕ್ಕೆ ಅಂಟಿಕೊಂಡೇ ಕೂತಿದ್ದ ಇದು ತುಂಬಾ ಹೊತ್ತಿನವರೆಗೂ ಮಿಸುಕಾಡಲೇ ಇಲ್ಲ. ನಾನು ಒಳಗೆ ಹೋಗಿ ಕೆಮೆರಾ ತಂದು ಎಲ್ಲ ಸೆಟ್ ಮಾಡಿಕೊಳ್ಳುವವರೆಗೂ ಈ ಪತಂಗ ಹೇಗೆ ಕುಳಿತಿತ್ತೋ ಹಾಗೇ ಇತ್ತು. ಬದುಕಿದೆಯೋ ಸತ್ತಿದೆಯೋ ಎಂಬ ಅನುಮಾನ ಬರುವಂತೆ.

ಚಿಟ್ಟೆಗಳಿಗೂ ಪತಂಗಗಳಿಗೂ ವ್ಯತ್ಯಾಸವಿದೆ. ಚಿಟ್ಟೆಗಳು ಹಗಲು ಹೊತ್ತಿನಲ್ಲಿ ಹೂಗಳ ಮಕರಂದ ಹೀರಲು ಸಂಚರಿಸುತ್ತವೆ. ಅವುಗಳ ಕಾಲಿನ ರಚನೆ, ಮೀಸೆ ಎಲ್ಲವೂ ತೆಳು. ರೆಕ್ಕೆಗಳೂ ಸೂಕ್ಷ್ಮ ಹಾಗೂ ತೆಳು. ಪತಂಗಗಳು ನಿಶಾಚರಿಗಳು. ದೀಪದ ಬೆಳಕಿನಲ್ಲಿ ಸಂಚರಿಸುವ ಇವುಗಳೂ ಹೂಗಳ ಮಕರಂದವನ್ನೇ ಹೀರುತ್ತವೆ. ಆದರೆ ಇವುಗಳ ಮೀಸೆ, ಕಾಲುಗಳು ಚಿಟ್ಟೆಗಳಿಗಿಂತಲೂ ಗಾತ್ರದಲ್ಲಿ ಸ್ವಲ್ಪ ದೊಡ್ದವೇ. ರೆಕ್ಕೆಗಳು ಸೂಕ್ಷ್ಮವಾದರೂ ಅವುಗಳ ಮೇಲೆ ಸಣ್ಣಗೆ ಎಳೆಗಳಿರುತ್ತವೆ. ಸಾಮಾನ್ಯವಾಗಿ ಕತ್ತಲಲ್ಲಿಯೇ ದೀಪದ ಬೆಳಕಿನಲ್ಲಿ ಸಂಚರಿಸುವ ಇವು ಕೆಲವೊಮ್ಮೆ ಮನೆಯೊಳಗೂ ಹೊಕ್ಕುಬಿಡುತ್ತವೆ.

ಇಲ್ಲಿ ನಾನು ನೋಡಿದ ಪತಂಗದ ಹೆಸರು “ಸೇನಾ ಹಸಿರು ಪತಂಗ“ ಇಂಗ್ಲೀಷ್ ನಲ್ಲಿ Oleander Hawk Moth ಅಥವಾ Army Green Moth. ಇದರ ಬಣ್ಣ ಸೇನಾ ಹಸಿರು ಇದ್ದುದರಿಂದಲೇ ಇದಕ್ಕೆ Army Green Moth ಎಂಬ ಹೆಸರು ಬಂದದ್ದು. ಪತಂಗಗಳ Sphingidae ಎಂಬ ಕುಟುಂಬದ್ದು. ವಿಜ್ಞಾನಿಗಳ ಪ್ರಕಾರ ಪತಂಗಗಳಲ್ಲೇ 1,50000 ದಿಂದ 5,00,000ದವರೆಗೂ ವಿಧಗಳಿವೆ ಎಂದರೆ ಇವುಗಳ ವ್ಯಾಪ್ತಿಯನ್ನು ನಾವು ಊಹಿಸಬಹುದಾಗಿದೆ. ಈಗ ನಾನು ನೋಡಿರುವ ಪತಂಗಗಳು ಏಶಿಯಾ, ಆಫ್ರಿಕಾ, ಹವಾಯಿ ದ್ವೀಪಗಳಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ತೋಟಗಳಲ್ಲಿಯು ಇವನ್ನು ನೋಡಬಹುದಾಗಿದೆ. ಇದರ ವಿಶೇಷತೆಯೆಂದರೆ ಪತಂಗಗಳ ರೀತಿಯಲ್ಲಿ ರೆಕ್ಕೆಗಳಿರದೆ ವಿಮಾನದ ರೀತಿಯಲ್ಲಿ ರೆಕ್ಕೆಗಳಿರುವುದು.

ಇನ್ನು Oleander Hawk Moth ಎಂಬ ಹೆಸರು ಯಾಕೆ ಬಂತೆಂದರೆ ಇದು ಮೊಟ್ಟೆಗಳನ್ನಿಡಲು ಸಾಮಾನ್ಯವಾಗಿ ಕಣಗಿಲೆ ಗಿಡವನ್ನೇ ಆಶ್ರಯಿಸುವುದು. ಕಣಗಿಲೆ ಗಿಡದ ಎಲೆಯ ಎರಡೂ ಬದಿಗಳಲ್ಲಿ ಇದು ಮೊಟ್ಟೆ ಇಡುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಹುಳುಗಳು ವಿಷಕಾರಿಯಾದ ಕಣಗಿಲೆ ಎಲೆಯನ್ನು ತಿನ್ನುತ್ತವೆ. ವಿಷವನ್ನು ನುಂಗಿದ ವಿಷಕಂಠನಂತೆಯೇ ಇವು ದೇಹದೊಳಗೆಲ್ಲ ವಿಷವನ್ನು ಹೊಂದಿದ್ದರೂ ಜೀವನ ಚಕ್ರಕ್ಕೆ ಸಿದ್ಧಗೊಳ್ಳುತ್ತವೆ. ಪತಂಗಗಳಾಗಿ ಹೊರಹೊಮ್ಮುತ್ತವೆ. ಸಂಜೆಯಾದೊಡನೆ ಹೊರಹೊರಡುವ ಈ ಪತಂಗಗಳಲ್ಲಿ ವಯಸ್ಕ ಪತಂಗಗಳ ಭರ್ಜರಿ ಹಾರಾಟ ಮೇ ದಿಂದ ಸೆಪ್ಟೆಂಬರ್ ವರೆಗೆ.

ಚಿಟ್ಟೆಯ ಪೂರ್ವಜರಾದ ಪತಂಗಗಳು ಭೂಮಿಯಲ್ಲಿ ವಾಸಿಸುತ್ತಿದ್ದ ಹಳೆಯ ಕೀಟಗಳು. ಪತಂಗಗಳನ್ನು ಬಾವಲಿ, ಗೂಗೆ, ಕೆಲವು ಪಕ್ಷಿಗಳು, ಬೆಕ್ಕುಗಳು ಸಹ ತಿನ್ನುತ್ತವೆ. ಅದಿರಲಿ ಕೆಲವು ಪತಂಗಗಳ ಪ್ರಭೇದಗಳ ಲಾರ್ವಾಗಳನ್ನು ಆಫ್ರಿಕಾದಲ್ಲಿ ಪ್ರೊಟೀನ್ ಇರುವ ಆಹಾರವೆಂದು ತಿನ್ನಲಾಗುತ್ತದೆ. ಕಾಂಗೋದಂತಹ ದೇಶದಲ್ಲಿ ಪತಂಗಗಳ 30 ಪ್ರಭೇದಗಳ ಲಾರ್ವಾಗಳನ್ನು ಕೃಷಿ ಮಾಡಲಾಗುತ್ತದೆ. ಸ್ಥಳೀಯವಾಗಿ ಇವುಗಳನ್ನು ಆಹಾರವನ್ನಾಗಿ ಮಾರಾಟ ಮಾಡಲಾಗುತ್ತದೆ ಅಲ್ಲದೆ ಹೆಚ್ಚಿನ ಭಾಗವನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತದೆ.

ಈ ಹಸಿರು ಯುದ್ಧ ವಿಮಾನದಂಥ ಪತಂಗದ ಹಿಂದೆ ಏನೆಲ್ಲ ಅಚ್ಚರಿಗಳು ಅಡಗಿವೆ.

ಸಿದ್ಧರಾಮ ಕೂಡ್ಲಿಗಿ
ಮಾಹಿತಿ : ವಿವಿಧ ಮೂಲಗಳಿಂದ

LEAVE A REPLY

Please enter your comment!
Please enter your name here