ಹಗರಿಬೊಮ್ಮನಹಳ್ಳಿ: ಬಿಜೆಪಿ ಯಿಂದ ಒಂದೂವರೇ ಕಿಮಿ ಉದ್ದದ ಬೃಹತ್ ಬೈಕ್ ರ್ಯಾಲಿ. ಸ್ವಯಂ ಪ್ರೇರಿತರಾಗಿ ಸಾವಿರ ಬೈಕ್ ಏರಿ ಬಂದು ರಾಷ್ಟ್ರಪ್ರೇಮ ಮೆರೆದ ಕಮಲ ಕಾರ್ಯಕರ್ತರು

0
852

–ಹುಳ್ಳಿಪ್ರಕಾಶ, ಹಿರಿಯ ಪತ್ರಕರ್ತರು

ಹಗರಿಬೊಮ್ಮನಹಳ್ಳಿ;ಆ;14:-
ಭಾನುವಾರ ಮುಂಜಾನೆ ಹಗರಿಬೊಮ್ಮನಹಳ್ಳಿ ಪಟ್ಟಣದ ಮೂಲಕ ಹಾದು ಹೋಗಿರುವ ಹೊಸಪೇಟೆ-ಹರಿಹರ ರಾಜ್ಯ ಹೆದ್ದಾರಿ ಸಹಿತ ಪಟ್ಟಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕಣ್ಣೆತ್ತಿ ನೋಡಿದರತ್ತ ಸಾವಿರಾರು ಬೈಕ್ ಗಳಿಗೆ ರಾಷ್ಟ್ರಧ್ವಜವನ್ನು ಕಟ್ಟಿಕೊಂಡು ಮೆರವಣಿಗೆ ಮಾಡುವ ದೃಶ್ಯ ವೈಭವದ ಸಡಗರ, ಸಂಭ್ರಮವೇ ಮನೆಮಾಡಿತ್ತು.

ಸ್ವಾತಂತ್ರ್ಯಕ್ಕೆ ಅಮೃತ ಮಹೋತ್ಸವದ ನಿಮಿತ್ತ ಭಾನುವಾರ ಮುಂಜಾನೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಭಾರತೀಯ ಜನತಾಪಕ್ಷ ಪಟ್ಟಣದಲ್ಲಿ ಆಯೋಜಿಸಿದ್ದ ಬೈಕ್ ರ್ಯಾಲಿಗೆ ಕ್ಷೇತ್ರದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ತಮ್ಮ ಬೈಕ್ ಏರಿಕೊಂಡು ಬಂದು ಪಟ್ಟಣದಲ್ಲಿ ರಾಷ್ಟ್ರಧ್ವಜದ ಮೆರವಣಿಗೆಯಲ್ಲಿ ಭಾಗಿಯಾದರು.

ಸುಮಾರು ಒಂದೂವರೆ ಕಿಮಿ ಉದ್ದದಷ್ಟಿದ್ದ ರಾಷ್ಟ್ರಧ್ವಜಧಾರಿ ಬೈಕ್ ರ್ಯಾಲಿ ಪಟ್ಟಣದಲ್ಲಿ ಹೊಸದಾದ ಇತಿಹಾಸಕ್ಕೆ ನಾಂದಿ ಹಾಡಿತು.
ಪಟ್ಟಣದ ಬಿ.ಮುತ್ಕೂರು ಬಳಿಯ ಹೆಲಿಪ್ಯಾಡ್ ಬಳಿ ಕ್ಷೇತ್ರದ ಮಾಜಿ ಶಾಸಕ ಕೆ.ನೇಮಿರಾಜನಾಯ್ಕ್ ರವರು ತಮ್ಮ ಬುಲೇಟ್ ಏರಿ ಬೈಕ್ ಕೀ ಚಾಲು ಮಾಡಿ ರ್ಯಾಲಿಗೆ ಚಾಲನೆ ನೀಡುತ್ತಿದ್ದಂತೆಯೇ ” ಭಾರತ ಮಾತಾ ಕೀ ಜೈ, ಬೋಲೋ ಭಾರತ್ ಮಾತಾ ಕೀ ಜೈ” ಎನ್ನುವ ಘೋಷಣೆಗಳು ಮುಗಿಲು ಮುಟ್ಟುವ ರೀತಿಯಲ್ಲಿಯೇ ಮಾರ್ದನಿಸಿದವು.

ಸಾವಿರಕ್ಕೂ ಮಿಕ್ಕಿ ಸಂಖ್ಯೆಯಲ್ಲಿದ್ದ ಬೈಕ್ ಗಳು ಒಂದರ,ಹಿಂದೊಂದರಂತೆ ಸಾಗುತ್ತಿದ್ದಂತೆಯೇ ಹೆಲಿಪ್ಯಾಡ್ ಬಳಿ ಹಾಯ್ದು ಹೋಗಿರುವ ಹೊಸಪೇಟೆ-ಹರಿಹರ ರಾಜ್ಯ ಹೆದ್ದಾರಿ ಪೂರ್ತಿ ತ್ರೀವರ್ಣ ಧ್ವಜ ಮಯವಾಗಿ, ಸುಮಾರು ಒಂದೂವರೇ ಕಿಮಿಗೂ ಉದ್ದಕ್ಕೂ ಕಣ್ಣೆತ್ತಿ ನೋಡಿದತ್ತ ರಾಷ್ಟ್ರಧ್ವಜಗಳು ಹಾರಾಡುವ ದೃಶ್ಯ ಕಣ್ಣಮನತಣಿಸುವಂತಿತ್ತು. ಆ ಹೆದ್ದಾರಿ ಮೇಲೆ ಪ್ರಯಾಣಿಸುವರು ಬೈಕ್ ರ್ಯಾಲಿ ಸಾಗಲು ಸ್ವಯಂ ಪ್ರೇರಣೆಯಿಂದ ದಾರಿ ಮಾಡಿ ಕೊಡುವ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ನಮನ ಸಲ್ಲಿಸಿದ ದೃಶ್ಯಗಳು ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ತುಂಬಿಸಿತು.

ಹೆಲಿಪ್ಯಾಡ್ ನಿಂದ ಆರಂಭವಾದ ಬೈಕ್ ರ್ಯಾಲಿ ನೀರಾವರಿ ಇಲಾಖೆ, ಕೋರ್ಟ್ ಏರಿಯಾ, ತಂಬ್ರಹಳ್ಳಿ ಸರ್ಕಲ್, ಹಾಲಸ್ವಾಮಿ ಮಠ, ಬಸವಪುತ್ಥಳಿ, ಬಸವೇಶ್ವರ ಬಜಾರ್, ಬೈ ಪಾಸ್, ನೇತಾಜಿ ರಸ್ತೆ, ಸಿನಿಮಾ ಸರ್ಕಲ್, ಕೂಡ್ಲಿಗಿ ಸರ್ಕಲ್, ರಾಷ್ಟ್ರೋತ್ಥಾನ ಶಾಲೆ ಸರ್ಕಲ್, ಪಾದಗಟ್ಟಿ ಗುಡಿ ಸರ್ಕಲ್, ಹೌಸಿಂಗ್ ಬೊರ್ಡ್, ಪಾಂಡುರಂಗ ದೇವಸ್ಥಾನ, ರಾಮನಗರ ರೈತರ ಓಣಿ, ವಾಲ್ಮೀಕಿ ಸರ್ಕಲ್, ರೈಲ್ವೆಗೇಟ್ , ಶ್ರೀ ಈಶ್ವರ ದೇವಸ್ಥಾನದ ಮೂಲಕ ಸಾಗಿ ಬಂದು ಹಗರಿ ಶ್ರೀ ಅಂಜನೇಯಸ್ವಾಮಿ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು.

ಮಾಜಿ ಶಾಸಕ ಕೆ.ನೇಮಿರಾಜ್ ನಾಯ್ಕ್ ನೇತೃತ್ವದಲ್ಲಿ ಜರುಗಿದ ಬೃಹತ್ ಬೈಕ್ ರ್ಯಾಲಿಯಲ್ಲಿ ಬಿಜೆಪಿ ಕ್ಷೇತ್ರದ ಅಧ್ಯಕ್ಷ ವೀರಯ್ಯ, ರಾಜ್ಯ ಕಾರ್ಯಕಾರಣಿ ಸದಸ್ಯ ಕಿನ್ನಾಳ ಸುಭಾಷ್, ಎಸ್ಸಿ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ನಾಯ್ಕ್, ಮುಖಂಡರಾದ ನರೆಗಲ್ ಕೊಟ್ರೇಶ್, ಭದ್ರವಾಡಿ ಚಂದ್ರಶೇಖರ, ಬಾದಾಮಿ ಮೃತ್ಯುಂಜಯ, ಬಿ.ಗಂಗಣ್ಣ, ಜಗದೀಶ್ವರಯ್ಯ, ಬಡಿಗೆರ್ ಬಸವರಾಜ, ಜಾತಯ್ಯ, ಬಿಜಿ.ಬಡಿಗೆರ್, ಸಂದೀಪ್, ಬಿ.ಶ್ರೀನಿವಾಸ, ಬಂಟರ್ ಹುಲುಗಪ್ಪ, ಪಿ.ರಾಜಲಿಂಗಪ್ಪ, ಸೊಬಟಿ ಹರೀಶ್, ಮಾಲ್ವಿ ಹನುಮಂತಪ್ಪ, ಪೂಜಾರಿ ಸಿದ್ದಪ್ಪ, ಎಕೆ.ರಾಮಣ್ಣ, ರಾಜು ಪಾಟೀಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

–ಹುಳ್ಳಿಪ್ರಕಾಶ,
ಹಿರಿಯಪತ್ರಕರ್ತರು

LEAVE A REPLY

Please enter your comment!
Please enter your name here