ಪುಣ್ಯಕೋಟಿ ದತ್ತು ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಸಹಕಾರ : ಸಿ.ಎಸ್.ಷಡಾಕ್ಷರಿ

0
40

ಶಿವಮೊಗ್ಗ : ಅಕ್ಟೋಬರ್ 14: ರಾಜ್ಯದಲ್ಲಿನ ನಿರ್ಗತಿಕ, ಅನಾರೋಗ್ಯದಿಂದ ಬಳಲುತ್ತಿರುವ, ಅಶಕ್ತ ಹಾಗೂ ವಯಸ್ಸಾದ ಜಾನುವಾರುಗಳನ್ನು ಹಾಗೂ ರೈತರು ಸಾಕಲಾಗದ ಹಸು-ಕರುಗಳನ್ನು ಪೋಷಿಸಲು ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಪುಣ್ಯಕೋಟಿ ದತ್ತು ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಸಂಘವು ಅಗತ್ಯವಿರುವ ತನು-ಮನ-ಧನ ಸಹಕಾರದೊಂದಿಗೆ ಯೋಜನೆಯ ಯಶಸ್ಸಿಗೆ ಅಗತ್ಯ ಸಹಕಾರ ನೀಡಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಹೇಳಿದರು.
ಅವರು ಇಂದು ಬೆಂಗಳೂರಿನ ರಾಜ್ಯ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸರ್ಕಾರದ ಇತರೆ ಸಂಘ-ಸಂಸ್ಥೆಗಳ ನೌಕರರು ದೇಣಿಗೆ ನೀಡುವ ಒಪ್ಪಿಗೆ ಪತ್ರವನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಮಧೇನು, ಪುಣ್ಯಕೋಟಿ ಸಂತತಿ ರಕ್ಷಣೆಗೆ ಸ್ವ-ಇಚ್ಚೆಯಿಂದ ಒಂದು ಬಾರಿಗೆ ದೇಣಿಗೆ ನೀಡಿ ಗೋವುಗಳನ್ನು ಪೋಷಿಸುವ ಕಾರ್ಯದಲ್ಲಿ ರಾಜ್ಯದ ಎಲ್ಲಾ ಇಲಾಖೆಗಳ ಸರ್ಕಾರಿ ನೌಕರರು ಹಾಗೂ ಇತರೆ ಸಂಸ್ಥೆಗಳ ನೌಕರರು ಸಹಕರಿಸುವಂತೆ ಮಾನ್ಯ ಮುಖ್ಯಮಂತ್ರಿಗಳು ನೌಕರರಿಗೆ ಮಾಡಿದ್ದ ಮನವಿಗೆ ಸಂಘವು ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.
ಪುಣ್ಯಕೋಟಿ ದತ್ತು ಯೋಜನೆಯ ಸಂಬಂಧ ಇತ್ತೀಚಿಗೆ ಏರ್ಪಡಿಸಲಾಗಿದ್ದ ನೌಕರರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ನಿಗಮ-ಮಂಡಳಿ ಮತ್ತು ಇತರೆ ಸಂಸ್ಥೆಗಳ ವೃಂದ ಸಂಘಗಳ ಸಭೆಯಲ್ಲಿ ವಿವರವಾಗಿ ಸಮಾಲೋಚನೆ ನಡೆಸಿದ ನಂತರ ‘ಎ’ ವೃಂದದ ಅಧಿಕಾರಿಗಳು ಒಂದು ಬಾರಿಗೆ 11,000/-ರೂ.ಗಳನ್ನು, ‘ಬಿ’ ವೃಂದದ ಅಧಿಕಾರಿಗಳು 4,000/-ರೂ.ಗಳನ್ನು ಹಾಗೂ ‘ಸಿ’ವೃಂದದ ನೌಕರರು 400/-ರೂ.ಗಳನ್ನು ದೇಣಿಗೆಯಾಗಿ ನೀಡಲು ಸರ್ವಾನುಮತದ ನಿರ್ಣಯ ಕೈಗೊಂಡಿರುತ್ತದೆಂದು ತಿಳಿಸಿದರು.
ಇದಲ್ಲದೇ ಈ ಹಿಂದೆಯೂ ನೌಕರರ ಸಂಘವು ಅನೇಕ ಸಾಮಾಜಿಕ ಜವಾಬ್ದಾರಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿರುವುದನ್ನು ನೆನಪಿಸಿದ ಅವರು, 1997ರಲ್ಲಿ ಆಂಧ್ರಪ್ರದೇಶದಲ್ಲಿ ಸಂಭವಿಸಿದ ಚಂಡಮಾರುತ ಪರಿಹಾರ ನಿಧಿ, 1999ರಲ್ಲಿ ಒರಿಸ್ಸಾದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ, 1999ರಲ್ಲಿ ನಡೆದ ಕಾರ್ಗಿಲ್ ಯುದ್ಧಕ್ಕೆ ಪರಿಹಾರ ನಿಧಿ, 2001ರಲ್ಲಿ ಗುಜರಾತ್‍ನಲ್ಲಿ ಭೂಕಂಪ ಸಂಭವಿಸಿದಾಗಿ ಭೂಕಂಪ ಪರಿಹಾರ ನಿಧಿಗಾಗಿ ಪ್ರತಿಬಾರಿಯೂ ತಲಾ ಒಂದು ದಿನದ ವೇತನವನ್ನು ನೀಡಲಾಗಿದೆ. 2001ರಲ್ಲಿ ರಾಜ್ಯಕ್ಕೆ ಬರಗಾಲ ಸಂಭವಿಸಿದಾಗ ಜಾನುವಾರುಗಳಿಗೆ ಮೇವು ಮತ್ತು ನೀರು ಪೂರೈಕೆಗಾಗಿ ನೌಕರರ ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು ಸರ್ಕಾರಕ್ಕೆ ನೀಡಲಾಗಿದೆ ಎಂದರು.
2003ರಲ್ಲಿ ಉತ್ತರ ಕರ್ನಾಟಕ ರೈತರ ಶ್ರೇಯೋಭಿವೃದ್ಧಿಗಾಗಿ ಕೃಷ್ಣ ಮೇಲ್ದಂಡೆ ಯೋಜನೆಯ ನೀರಾವಿ ಕಾಮಗಾರಿಗೆ ಒಂದು ದಿನದ ವೇತನ, ಮಹಾರಾಷ್ಟ್ರದ ಲಾತೂರ್‍ನಲ್ಲಿ ಸಂಭವಿಸಿದ ಭೂಕಂಪ ಸಂತ್ರಸ್ಥರ ನೆರವಿಗಾಗಿ ಒಂದು ದಿನದ ವೇತನವನ್ನು ಹಾಗೂ 2005ರಲ್ಲಿ ಸುನಾಮಿ ನೆರೆಹಾವಳಿಗೆ ತುಟ್ಟಿಭತ್ಯೆಯ ಬಾಕಿ ಮೊತ್ತ, 2019ರಲ್ಲಿ ನೆರೆಹಾವಳಿಯಿಂದ ಸಂತ್ರಸ್ಥರಾದವರಿಗೆ ಪರಿಹಾರ ಒದಗಿಸಲು ಒಂದು ದಿನದ ವೇತನ, 2018ರಲ್ಲಿ ರಾಜ್ಯದ ಕೊಡಗು ಮತ್ತು ಮಂಗಳೂರಿನಲ್ಲಿ ಸಂಭವಿಸಿದ ನೆರೆಹಾವಳಿ ಸಂತ್ರಸ್ಥರ ಪರಿಹಾರ ಕಾರ್ಯಕ್ಕಾಗಿ ಒಂದು ದಿನದ ವೇತನ, 2020ರಲ್ಲಿ ಅತೀವೃಷ್ಠಿಯಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಸಂತ್ರಸ್ಥರ ನೆರವಿಗಾಗಿ ಒಂದು ದಿನದ ವೇತನ, 2021ರಲ್ಲಿ ಕೋವಿಡ್ ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಸರ್ಕಾರಕ್ಕೆ ಒಂದು ದಿನದ ವೇತನ, 2020-21ರಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡಬೇಕಾಗಿದ್ದ ಮೂರು ಕಂತುಗಳ ತುಟ್ಟಿಭತ್ಯೆ ಬಾಕಿ ಮೊತ್ತವನ್ನು ಕೋವಿಡ್-19ರ ಸರ್ಕಾರದ ನಿಧಿಗೆ ಅರ್ಪಿಸಲಾಗಿದೆ ಅಲ್ಲದೇ ಪ್ರತಿವರ್ಷ ಹಮ್ಮಿಕೊಳ್ಳುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯಾ ಜಿಲ್ಲೆಗಳ ಸರ್ಕಾರಿ ನೌಕರರಿಂದ ಒಂದು ದಿನದ ವೇತನವನ್ನು ನೀಡಲಾಗುತ್ತಿದೆ. ಇಷ್ಟೇ ಅಲ್ಲದೇ ಇಂತಹ ಅನೇಕ ಜನಪರ ಕಾರ್ಯಕ್ರಮಗಳಲ್ಲಿ ಆರ್ಥಿಕ ಸಹಕಾರ ನೀಡಿದೆ ಎಂದವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ನೌಕರರ ಸಂಘದ ಜಿಲ್ಲಾಧ್ಯಕ್ಷರು, ವೃಂದ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here