ಹೊರಗುತ್ತಿಗೆ ನೌಕರರ ಏಜೆನ್ಸಿಗಳ ಮೂಲ ಮಾಲೀಕರು ಹಾಗೂ ಗುತ್ತಿಗೆದಾರರು ಕಡ್ಡಾಯವಾಗಿ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು: ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್

0
87

ಹೊಸಪೇಟೆ(ವಿಜಯನಗರ),ಅ.20: ಇಪ್ಪತ್ತಕ್ಕೂ ಹೆಚ್ಚಿನ ಸಂಖ್ಯೆಯ ಹೊರಗುತ್ತಿಗೆ ನೌಕರರನ್ನು ಹೊಂದಿರುವ ಏಜೆನ್ಸಿಗಳ ಮೂಲ ಮಾಲೀಕರು ಹಾಗೂ ಗುತ್ತಿಗೆದಾರರು ಕಡ್ಡಾಯವಾಗಿ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ತಿಳಿಸಿದರು.

ಗುರುವಾರದಂದು ಗುತ್ತಿಗೆ ಕಾರ್ಮಿಕರ(ನಿಯಂತ್ರಣ ಮತ್ತು ರದ್ದತಿ) ಕಾಯ್ದೆ, 1970 ಮತ್ತು ಕರ್ನಾಟಕ ನಿಯಮಗಳು 1974ರ ಮೇರೆಗೆ ಹಾಗೂ ಇತರೆ ಅನ್ವಯಿಸುವ ಕಾರ್ಮಿಕ ಕಾಯ್ದೆಗಳನ್ವಯ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾವಿರ ಗುತ್ತಿಗೆ ಕಾರ್ಮಿಕರನ್ನು ಹೊಂದಿರುವ ಏಜೆನ್ಸಿದಾರರು ನೌಕರರಿಗೆ ಪ್ರತಿ ತಿಂಗಳ 10ನೇ ತಾರೀಕಿನಂದು ಹಾಗೂ ಸಾವಿರಕ್ಕಿಂತ ಕಡಿಮೆ ಗುತ್ತಿಗೆ ಕಾರ್ಮಿಕರನ್ನು ಹೊಂದಿರುವ ಏಜೆನ್ಸಿದಾರರು ನೌಕರರಿಗೆ ಪ್ರತಿ ತಿಂಗಳ 7ನೇ ತಾರೀಕಿನಂದು ವೇತನವನ್ನು ಕಡ್ಡಾಯವಾಗಿ ಬ್ಯಾಂಕ್ ಖಾತೆಗಳಿಗೆ ಪಾವತಿ ಮಾಡಬೇಕು ಮತ್ತು ವೇತನವನ್ನು ಪಾವತಿಸಿದ ನಂತರ ಅವರಿಗೆ ವೇತನ ಚೀಟಿ(ಫೇ ಸ್ಲೀಪ್) ಅನ್ನು ಪ್ರತಿ ತಿಂಗಳು ನೀಡಬೇಕು ಎಂದರು.
ಏಜೆನ್ಸಿಯ ಮೂಲ ಮಾಲೀಕರು ಪ್ರತಿ ತಿಂಗಳು ಇ.ಎಸ್.ಐ ಮತ್ತು ಪಿ.ಎಫ್ ಅನ್ನು ಗುತ್ತಿಗೆದಾರರು ಪಾವತಿಸಿದ್ದಾರೆ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಮಹಿಳಾ ನೌಕರರಿಗೂ ಮತ್ತು ಪುರಷ ನೌಕರರಿಗೂ ಸಮಾನ ವೇತನ ಪಾವತಿ ಮಾಡುತ್ತಿರುವ ಕುರಿತು ಮೂಲ ಮಾಲೀಕರು ಖಾತರಿಪಡಿಸಿಕೊಳ್ಳಬೇಕು. ಕರ್ನಾಟಕ ಸರ್ಕಾರ, ಕಾರ್ಮಿಕ ಇಲಾಖೆಯಿಂದ ಕಾಲ ಕಾಲಕ್ಕೆ ಹೊರಡಿಸುವ ಅಧಿಸೂಚನೆಯನುಸಾರ ಪರಿಷ್ಕøತ ವೇತನ ದರಗಳನ್ನು ಕಾರ್ಮಿಕರಿಗೆ ಪಾವತಿಯಾಗುವಂತೆ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ಕಲಬುರಗಿ ಪ್ರಾದೇಶಿಕ ಉಪಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ್ ಅವರು ಮಾತನಾಡಿ, ಕಾರ್ಮಿಕ ಕಾಯ್ದೆಗಳನ್ವಯ ಹೊರಗುತ್ತಿಗೆ ನೌಕರರು ದಿನಕ್ಕೆ 8ಗಂಟೆ ಕಾಲ ಕೆಲಸವನ್ನು ಮಾಡಬೇಕಾಗಿದ್ದು, ಹೆಚ್ಚುವರಿ ಅವಧಿಗೆ ಹೆಚ್ಚುವರಿ ವೇತನವನ್ನು ಮೂಲಮಾಲೀಕರು, ಗುತ್ತಿಗೆದಾರರು ಪಾವತಿ ಮಾಡಬೇಕಾಗಿರುತ್ತದೆ ಎಂದರು.

ಹೊರಗುತ್ತಿಗೆ ನೌಕರರನ್ನು ನಿಯೋಜಿಸಿಕೊಂಡಿರುವ ಏಜೆನ್ಸಿಯ ಮೂಲ ಮಾಲೀಕರು, ಗುತ್ತಿಗೆದಾರರು 1948ಯ ಕಾಯ್ದೆಯ ಪ್ರಕಾರ ಸರ್ಕಾರವು ನಿಗದಿಡಿಸಿದ ಕನಿಷ್ಠ ವೇತನವನ್ನು ಪಾವತಿ ಮಾಡಬೇಕು. 1961ರ ಕಾಯ್ದೆಯ ಪ್ರಕಾರ ಮಹಿಳಾ ಕಾರ್ಮಿಕರಿಗೆ ಹೆರಿಗೆ ಸಮಯದಲ್ಲಿ 12ವಾರಗಳ ವೇತನ ಸಹಿತ ರಜೆಯನ್ನು ನೀಡಬೇಕು, ಇ.ಎಸ್.ಐ, ಹಾಗೂ ಪಿ.ಎಫ್ ಸೇರಿದಂತೆ ಇನ್ನಿತರೆ ಕಾರ್ಮಿಕ ಕಾಯ್ದೆಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಗುತ್ತಿಗೆ ಕಾರ್ಮಿಕರ ಏಜೆನ್ಸಿಗಳ ಮೂಲ ಮಾಲೀಕರು, ಗುತ್ತಿಗೆದಾರರು ಗುತ್ತಿಗೆ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನವನ್ನು ಪಾವತಿಸದಿದ್ದಲ್ಲಿ ನೌಕರರು ಕ್ಲೈಮ್‍ಗೆ ಸಲ್ಲಿಸಿದಲ್ಲಿ 3ಸಾವಿರವರೆಗೆ ವೇತನದ ಜೊತೆಗೆ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಳ್ಳಾರಿ ವಿಭಾಗದ ದಾವಣಗೆರೆಯ ಸಹಾಯಕ ಕಾರ್ಮಿಕ ಆಯುಕ್ತೆ ವೀಣಾ ಎಸ್.ಆರ್, ಬಳ್ಳಾರಿ ಉಪವಿಭಾಗ-1ರ ಜಿಲ್ಲಾ ಕಾರ್ಮಿಕ ಅಧಿಕಾರಿ ಅಲ್ತಾಫ್ ಅಹಮ್ಮದ್, ಬಳ್ಳಾರಿ ಉಪವಿಭಾಗ-2ರ ಜಿಲ್ಲಾ ಕಾರ್ಮಿಕ ಅಧಿಕಾರಿ ಮಾರಿಕಾಂಬ ಹುಲಿಕೋಟಿ, ಕಾರ್ಮಿಕ ನಿರೀಕ್ಷಕ ಎಂ.ಅಶೋಕ್, ಡಿ.ವೈ.ಎಸ್.ಪಿ. ವಿಶ್ವನಾಥ ಕುಲಕರ್ಣಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಶೇಖರ್, ಹೊಸಪೇಟೆ ನಗರಸಭೆ ಪೌರಾಯುಕ್ತ ಮನೋಹರ್ ನಾಗರಾಜ್, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಶರಣಪ್ಪ ಮುದುಗಲ್ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿ ಇದ್ದರು.

LEAVE A REPLY

Please enter your comment!
Please enter your name here