ಸಂಡೂರು ತಾಲೂಕಿನಾದ್ಯಂತ ಪ್ರತಿ ಗ್ರಾಪಂ ಮಟ್ಟದಲ್ಲಿ ಇವಿಎಂ ಪ್ರಾತ್ಯಕ್ಷಿಕೆ: ತಹಸೀಲ್ದಾರ್ ಕೆ ಎಂ ಗುರುಬಸವರಾಜ್

0
85

ಸಂಡೂರು,ಫೆ.06 : ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ ಎಲ್ಲಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಪ್ರತಿ ಹಳ್ಳಿ ಹಾಗೂ ವಾರ್ಡ್‍ಗಳಿಗೆ ತೆರಳಿ ಮತಯಂತ್ರ ಇವಿಎಂ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಹಾಗೂ ತಾಲೂಕು ಚುನಾವಣಾಧಿಕಾರಿ ಕೆಎಂ ಗುರುಬಸವರಾಜ್ ಅವರು ತಿಳಿಸಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, 2023ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣಾ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಚುನಾವಣಾ ಮತಯಂತ್ರಗಳ ಪ್ರಾತ್ಯಕ್ಷಿಕೆ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

249 ಮತದಾನ ಕೇಂದ್ರಗಳಿವೆ. ಚುನಾವಣೆಗೆ ಒಂದೂವರೆ ತಿಂಗಳು ಬಾಕಿಯಿದ್ದು, ಈ ನಿಟ್ಟಿನಲ್ಲಿ ತಾಲೂಕಿನಲ್ಲಿರುವ ಪ್ರತಿಯೊಂದು ಗ್ರಾಮ ಪಂಚಾಯಿತಿ, ಶಾಲಾ ಕಾಲೇಜುಗಳು ಒಳಗೊಂಡಂತೆ ಈ ಎಲ್ಲಾ ಸ್ಥಳಗಳಲ್ಲಿ ಅಣುಕು ಪ್ರದರ್ಶನ ಕೈಗೊಳ್ಳಲಾಗುವುದು ಎಂದರು.

ಭಾರತ ಚುನಾವಣಾ ಆಯೋಗವು ಸಹ ಹೊಸ ಮತಯಂತ್ರಗಳ ಬಳಕೆಗೆ ಸಜ್ಜಾಗಿದೆ. ಹೈದರಾಬಾದ್ ಮೂಲದ ಇಸಿಐಎಲ್ (ಎಲೆಕ್ಟ್ರಾನಿಕ್ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್) ಹೊಸ ಮತ ಯಂತ್ರಗಳನ್ನು ತಯಾರಿಸಿದ್ದು, ಹೊಸ ಇ.ವಿ.ಎಂ.ಗಳ ವಿಶೇಷವೆಂದರೆ ಒಂದು ಮತ ಯಂತ್ರದಲ್ಲಿ 384 ಅಭ್ಯರ್ಥಿಗಳ ಹೆಸರು ದಾಖಲಿಸಲು ಅವಕಾಶವಿದೆ. ಜತೆಗೆ ವಿ.ವಿ. ಪ್ಯಾಟ್‍ಗಳು ಸಹ ತ್ವರಿತವಾಗಿ ಮಾಹಿತಿ ನೀಡುವ ತಂತ್ರಜ್ಞಾನ ಅಳವಡಿಸಲಾಗಿದೆ ಎಂದರು.

ತಾಲೂಕಿನ ಮತಗಟ್ಟೆಗಳಿಗೆ ಅವಶ್ಯವಿರುವ 249 (ಬ್ಯಾಲೆಟ್ ಯುನಿಟ್), 249 (ಕಂಟ್ರೋಲ್ ಯುನಿಟ್) ಮತ್ತು 249 (ವಿ.ವಿ.ಪ್ಯಾಟ್)ಗಳು ಸರಬರಾಜು ಆಗಿದ್ದು,
ಈ ಇ.ವಿ.ಎಂ.ಗಳನ್ನು ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ ತಂತ್ರಜ್ಞರಿಂದ ರಾಜಕೀಯ ಪಕ್ಷಗಳ ಉಪಸ್ಥಿತಿಯಲ್ಲಿ ಪ್ರಥಮ ಹಂತದ ಪರಿಶೀಲನಾ ಕಾರ್ಯವನ್ನು ಮಾಡಲಾಗಿದೆ ಎಂದು ಹೇಳಿದರು.

ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳ ಸಮಕ್ಷಮ ಭಾರತ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಅಣುಕು ಮತದಾನ ಮಾಡಲಾಗಿದ್ದು, ಮತಯಂತ್ರಗಳ ಪ್ರಾತ್ಯಕ್ಷಿತೆ ಕುರಿತು ಸಂಪೂರ್ಣ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಚುನಾವಣಾ ಮತಯಂತ್ರಗಳ ಪ್ರಾತ್ಯಕ್ಷಿಕೆ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮತದಾನ ಮಾಡುವುದರ ಮೂಲಕ ಹೊಸ ಇವಿಎಂ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆಎಂ ಗುರುಬಸವರಾಜ್, ಕಚೇರಿಯ ಇನ್ನಿತರ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here