ನ್ಯಾಯಯುತ ಧರಕ್ಕೆ ಆಗ್ರಹಿಸಿ ರೈತರಿಂದ ಪ್ರತಿಭಟನೆ.

0
219

ಕೊಟ್ಟೂರು: ಸೂರ್ಯಕಾಂತಿ ಬೆಳೆಗೆ ಕಡಿಮೆ ಧರವನ್ನು ನಿಗದಿಪಡಿಸಿದ ಖರೀದಿದಾರರ ವಿರುದ್ಧ ರೈತರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಪಟ್ಟಣದ ಎಪಿಎಂಸಿಯಲ್ಲಿ ನಡೆದಿದೆ.

ಮಾರುಕಟ್ಟೆಗೆ ಇಂದು 2607 ಕ್ವಿಂಟಲ್ ಸೂರ್ಯಕಾಂತಿ ಮಾಲು ಅವಕವಾಗಿತ್ತು. ಕನಿಷ್ಟ 4129 ರೂ ಗರಿಷ್ಟ 6709 ರೂ ಧರವನ್ನು ಖರೀದಿದಾರರು ನಿರ್ಧರಿಸಿದ್ದರು. ಕಳೆದ ವಾರ 4550 ರಿಂದ 6909 ರೂ ಮಾರಾಟವಾಗಿದ್ದರಿಂದ ಧರ ಕಡಿಮೆಯಾಯಿತು ಎಂದು ರೈತರು ಇದ್ದಕ್ಕಿದ್ದಂತೆ ಮಾರುಕಟ್ಟೆಯ ಕಚೇರಿಯ ಮುಂದೆ ಪ್ರತಿಭಟನೆಗಿಳಿದರು.

ಪ್ರತಿಭಟನೆ ವಿಷಯ ತಿಳಿದು ಎಪಿಎಂಸಿ ಅಧ್ಯಕ್ಷ ಪೂಜಾರ್ ಉಮೇಶ್ , ಉಪಾಧ್ಯಕ್ಷ ಮಂಗಾಪುರ ಸಿದ್ದೇಶಣ್ಣ, ಹಾಗೂ ಸಿಪಿಐ. ಟಿ.ವೆಂಕಟಸ್ವಾಮಿ ಆಗಮಿಸಿ ರೈತರ ಸಮ್ಮುಖದಲ್ಲಿ ಖರೀದಿದಾರರನ್ನು ವಿಚಾರಿಸಿದಾಗ ಎಣ್ಣೆ ಧರ ಕಡಿಮೆಯಾಗಿರುವುದರಿಂದ ಸಹಜವಾಗಿ ಸೂರ್ಯಕಾಂತಿ ಬೆಲೆಯು ಸಹ ಕಡಿಮೆಯಾಗುತ್ತದಲ್ಲದೇ ಮಾಲಿನ ಗುಣಮಟ್ಟಕ್ಕೆ ತಕ್ಕಂತೆ ಧರವನ್ನು ನಿಗದಿಪಡಿಸುತ್ತೇವೆ ಎಂದು ಸಮರ್ಥಿಸಿಕೊಂಡರು.

ದುಬಾರಿ ಬೆಲೆಯ ಬೀಜ ಗೊಬ್ಬರಗಳನ್ನು ಖರೀದಿಸಿ ಕಷ್ಟ ಪಟ್ಟು ದುಡಿದ ಬೆಳೆಯನ್ನು ಮಾರಲು ತಂದರೆ ನ್ಯಾಯಯುತವಾದ ಬೆಲೆ ಸಿಗುತ್ತಿಲ್ಲ, ಅಲ್ಲದೆ ಹಮಾಲರು ಬಾಜು ಎಂದು ಹೇಳಿ 2 ಕೆಜಿ ತಗೆಯುತ್ತಾರೆ. ಚೀಲದ ತೂಕ ಮತ್ತು ವೇಸ್ಟೇಜ್ ಎಂದು ತೂಕದಲ್ಲಿಯು ಸಹ ತಗೆಯುತ್ತಾರೆ, ಒಟ್ಟಾರೆ ಎಲ್ಲಾ ರೀತಿಯಿಂದಲೂ ಅನ್ಯಾಯವಾಗುತ್ತದೆ ಎಂದು ಹಿರೇಮಲ್ಲನಕೆರೆ ಗ್ರಾಮದ ಅರಸನಾಳ ಶಂಕ್ರಪ್ಪ, ತಳವಾರ ಗಂಗಪ್ಪ ಹಾಗೂ ಶಿವಬಸಪ್ಪ ಮುಂತಾದ ರೈತರು ನೋವನ್ನು ವ್ಯಕ್ತಪಡಿಸಿದರು.

ಎಪಿಎಂಸಿ ಅಧ್ಯಕ್ಷ ಪೂಜಾರ ಉಮೇಶ್ ಮಾತನಾಡಿ ಕೊಟ್ಟೂರು ಎಪಿಎಂಸಿ ರೈತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಹೆಸರುವಾಸಿಯಾಗಿದ್ದು ಉತ್ಪನ್ನಗಳ ಗುಣಮಟ್ಟಕ್ಕೆ ತಕ್ಕಂತೆ ಖರೀದಿದಾರರು ಧರ ನಿಗದಿಪಡಿಸಿರುತ್ತಾರೆ. ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ಬೇರೆ ಊರುಗಳ ಖರೀದಿದಾರರು ಖರೀದಿಸಲು ಬಂದರೆ ಸ್ಪರ್ಧಾತ್ಮಕ ಬೆಲೆ ದೊರೆಯುತ್ತದೆ ಆದರೆ ಸ್ಥಳೀಯ ಖರೀದಿದಾರರೆ ಖರೀದಿಸುವುದರಿಂದ ಹೆಚ್ಚಿನ ಬೆಲೆ ಸಿಗುವುದಿಲ್ಲ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಭರಮಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿ ನಿರ್ದೇಶಕ ಎಚ್.ಗುರುಬಸವರಾಜ್, ಪಿಎಸ್ಐ ಎಂ.ವೆಂಕಟೇಶ್,ಕಾರ್ಯದರ್ಶಿ ಎ.ಕೆ.ವೀರಣ್ಣ ಹಾಗೂ ಬಸವರಾಜ್ ಮುಂತಾದವರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here