ಹರಿ ಇಲ್ಲದ ಸಂಪುಟದಲ್ಲಿ ಶಿವನ ಪವರ್ರು ಕಡಿಮೆ

0
146

ಕಳೆದ ವಾರ ಸಂಪುಟ ವಿಸ್ತರಣೆಯ ಕುರಿತು ಚರ್ಚಿಸಲು ದಿಲ್ಲಿಗೆ ಹೋಗಿದ್ದ ಸಿದ್ಧರಾಮಯ್ಯ ನೆಮ್ಮದಿಯಿಂದ ವಾಪಸ್ಸಾದರಂತೆ.
ಅವರ ನೆಮ್ಮದಿಗೆ ಸಚಿವ ಸಂಪುಟದ ಸ್ವರೂಪ ಕಾರಣವಲ್ಲ,ಬದಲಿಗೆ ತಮಗೆ ಪ್ರಬಲ ಪ್ರತಿರೋಧ ಒಡ್ಡಬಲ್ಲ ಒಬ್ಬ ನಾಯಕ ಮಂತ್ರಿಯಾಗದಂತೆ ನೋಡಿಕೊಂಡಿದ್ದೇ ಕಾರಣ.ಅಂದ ಹಾಗೆ ಅವರು ತಡೆಗಟ್ಟಿದ ಈ ನಾಯಕರ ಹೆಸರು-
ಬಿ.ಕೆ.ಹರಿಪ್ರಸಾದ್.
ಹಲ ದಶಕಗಳ ಕಾಲ ದಿಲ್ಲಿಯ ರಾಜಕಾರಣದಲ್ಲಿ ಪಳಗಿರುವ ಬಿ.ಕೆ.ಹರಿಪ್ರಸಾದ್ ಕಟ್ಟಾ ಕಾಂಗ್ರೆಸ್ಸಿಗ.ಇವತ್ತು ಪಕ್ಷ ನಿಷ್ಟೆಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಎಷ್ಟು ಹೆಸರುವಾಸಿಯೋ?ಬಿ.ಕೆ.ಹರಿಪ್ರಸಾದ್ ಕೂಡಾ ಅಷ್ಟೇ ಹೆಸರುವಾಸಿ.
ಕರ್ನಾಟಕದಲ್ಲಿ ಯಾವಾಗ ಬಿಜೆಪಿಯ ಹಿಂದುತ್ವದ ಬಿಸಿಗಾಳಿ ರಾಚತೊಡಗಿತೋ?ಆಗ ಅದನ್ನೆದುರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಣ್ಣಿಗೆ ಕಂಡ ಏಕೈಕ ಹೆಸರು ಬಿ.ಕೆ.ಹರಿಪ್ರಸಾದ್.
ಹಾಗೆ ನೋಡಿದರೆ ಡಿ.ಕೆ ಮತ್ತು ಬಿ.ಕೆ ನಡುವಣ ಸಂಬಂಧ ಯಾವತ್ತೂ ಮಧುರವಾಗಿರಲಿಲ್ಲ.ಎಲ್ಲಕ್ಕಿಂತ ಮುಖ್ಯವಾಗಿ ಬಿ.ಕೆ.ಹರಿಪ್ರಸಾದ್ ಅವರಿಗೆ ಒಬ್ಬ ನಾಯಕರ ಕ್ಯಾಂಪಿನಲ್ಲಿ ಲೆಫ್ಟಿನೆಂಟ್ ಆಗುವ ಜೀ ಹುಜೂರ್ ಗುಣವಿಲ್ಲ.ಬದಲಿಗೆ ಅವರದೇನಿದ್ದರೂ ಪಕ್ಷನಿಷ್ಟೆ.ಇಂತಹ ಪಕ್ಷ ನಿಷ್ಟೆಯ ಕಾರಣಕ್ಕಾಗಿಯೇ ಅವರು ಯಾವುದೇ ಒಬ್ಬ ವ್ಯಕ್ತಿಯ ಹಿತಕ್ಕಾಗಿ ಬಡಿದಾಡುವುದಿಲ್ಲ.ಒಂದರ್ಥದಲ್ಲಿ ಅವರು ಟ್ರಾಯ್ ಚಿತ್ರದ ಯೋಧ ಅಕಿಲಿಸ್ ಇದ್ದಂತೆ.ಅರ್ಥಾತ್,ತಮಗಿಷ್ಟವಾದ ಕಾರಣಕ್ಕೆ ಹೋರಾಡುವುದು.
ಇಂತಹ ಗುಣವಿರುವ ಕಾರಣದಿಂದಲೇ ಬಿ.ಕೆ ಅವರು ಡಿ.ಕೆಯ ಜತೆ ಸೇರಲು ನಿರ್ಧರಿಸಿದರು.ಹೀಗೆ ಅವರು ರಾಜ್ಯ ಕಾಂಗ್ರೆಸ್ಸಿನ ಎರಡು ಬಣಗಳ ಪೈಕಿ ಒಂದು ಬಣದ ಜತೆ ಕಾಣಿಸಿಕೊಳ್ಳಲು ಎರಡು ಕಾರಣಗಳೂ ಇದ್ದವು.ಅದೆಂದರೆ ಡಿಕೆಶಿ ಹೇಳಿ ಕೇಳಿ ಮೂಲ ಕಾಂಗ್ರೆಸ್ಸಿಗ.ಆದರೆ ಸಿದ್ಧರಾಮಯ್ಯ ವಲಸಿಗ ಕಾಂಗ್ರೆಸ್ಸಿಗ.ಇದೇ ರೀತಿ ಅವರಿಗೆ ಡಿಕೆಶಿ ಪರಿಚಿತ ಶತ್ರು.ಅದರೆ ಸಿದ್ಧರಾಮಯ್ಯ ಅಪರಿಚಿತ ಗೆಳೆಯ.
ಹೀಗೆ ಪರಿಚಿತ ಶತ್ರು ಮತ್ತು ಅಪರಿಚಿತ ಗೆಳೆಯನ ಪೈಕಿ ಹರಿಪ್ರಸಾದ್ ಅವರು ಪರಿಚಿತ ಶತ್ರು ಡಿಕೆಶಿಯನ್ನೇ ಆರಿಸಿಕೊಂಡರು.ಕಾರಣ?ಪರಿಚಿತ ಶತ್ರು ಯಾವ ಹಂತದಲ್ಲಿ ತಮ್ಮ ವಿರುದ್ಧ ನಿಲ್ಲಬಹುದು ಎಂಬ ಅಂದಾಜು ಇರುತ್ತದೆ.ಆದರೆ ಅಪರಿಚಿತ ಗೆಳೆಯ ಹಾಗಲ್ಲ.ಆತನ ನಡೆಯೇ ನಿಗೂಢ.ಹಾಗಂತಲೇ ಡಿಕೆ ಜತೆ ನಿಲ್ಲಲು ಬಿಕೆ ನಿರ್ಧರಿಸಿದರು.
ಇದಕ್ಕೆ ಪ್ರತಿಯಾಗಿ ಬಿಕೆ ಕರ್ನಾಟಕದ ರಾಜಕಾರಣಕ್ಕೆ ಬಂದು ಎಮ್ಮೆಲ್ಸಿಯಾಗಲು,ವಿಧಾನಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಲು ಡಿಕೆ ಒತ್ತಾಸೆ ನೀಡಿದ್ದೂ ನಿಜ.
ಹೀಗೆ ಬಿ.ಕೆ ಮತ್ತು ಡಿ.ಕೆ ಪರಸ್ಪರ ಕೈ ಜೋಡಿಸಿದ ಪರಿಣಾಮವಾಗಿ ಮೊದಲ ಹೊಡೆತ ಬಿದ್ದಿದ್ದು ಸಿದ್ಧರಾಮಯ್ಯ ಬಣಕ್ಕೆ.ಯಾಕೆಂದರೆ ಆ ಸಂದರ್ಭದಲ್ಲಿ ವಿಧಾನಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಲು ಸಿ.ಎಂ.ಇಬ್ರಾಹಿಂ ಟವೆಲ್ಲು ಹಾಕಿಕೊಂಡು ಕೂತಿದ್ದರು.ಸಿದ್ದರಾಮಯ್ಯ ಕೂಡಾ ಅವತ್ತು ದಿಲ್ಲಿ ಲೆವೆಲ್ಲಿನಲ್ಲಿ ಇಬ್ರಾಹಿಂ ಪರ ಲಾಬಿ ಮಾಡಿದರು.ಆದರೆ ಅದು ವರ್ಕ್ ಔಟ್ ಆಗಲಿಲ್ಲ.ಕಾರಣ? ಬಿ.ಕೆ.ಹರಿಪ್ರಸಾದ್ ಅವರಿಗೆ ದಿಲ್ಲಿಯ ರಾಜಕಾರಣ ಮೇಲಿದ್ದ ಪ್ರಭಾವ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿಯ ಒತ್ತಾಸೆ.ಇವೆರಡೂ ಸೇರಿ ತಕ್ಕಡಿ ಬಿ.ಕೆ ಪರ ವಾಲಿತು.
ಈ ಬೆಳವಣಿಯಿಂದ ಕುಪಿತರಾದ ಇಬ್ರಾಹಿಂ ಅಂಬೋ ಅನ್ನುತ್ತಾ ಕಾಂಗ್ರೆಸ್ ಪಕ್ಷವನ್ನು,ಆ ಮೂಲಕ ಸಿದ್ಧರಾಮಯ್ಯ ಕ್ಯಾಂಪನ್ನು ತೊರೆದರು.
ಯಾವಾಗ ಈ ಬೆಳವಣಿಗೆ ನಡೆಯಿತೋ?ಅವತ್ತು ಹರಿಪ್ರಸಾದ್ ಅವರ ವಿರುದ್ದ ಸಿದ್ಧರಾಮಯ್ಯ ಕತ್ತಿ ಮಸೆಯತೊಡಗಿದರು.ಅಂದ ಹಾಗೆ ಕರ್ನಾಟಕದ ಬ್ಯಾಕ್ ವರ್ಡ್ ಕ್ಲಾಸ್ ರಾಜಕಾರಣದ ವಿಷಯ ಬಂದಾಗ ಹರಿಪ್ರಸಾದ್ ಅವರನ್ನು ಸಿದ್ದರಾಮಯ್ಯ ಇಷ್ಟಪಡುವುದಿಲ್ಲ.ಯಾಕೆಂದರೆ ಒಂದು ಕಾಲದಲ್ಲಿ ರಾಜ್ಯ ರಾಜಕಾರಣದ ಮೇಲೆ ಹಿಂದುಳಿದ ವರ್ಗದ ಈಡಿಗರು ಲಿಟರಲಿ ಹಿಡಿತ ಸಾಧಿಸಿದ್ದರು.ಬಂಗಾರಪ್ಪ,ಜನಾರ್ಧನ ಪೂಜಾರಿ,ಆರ್.ಎಲ್.ಜಾಲಪ್ಪ, ರಾಮುಲು,ಬಿ.ಕೆ.ಹರಿಪ್ರಸಾದ್ ಸೇರಿದಂತೆ ಪ್ರಭಾವಿ ಈಡಿಗ ನಾಯಕರ ದಂಡು ಇಲ್ಲಿಂದ ದಿಲ್ಲಿಯವರೆಗೆ ಹೆಸರು ಮಾಡಿತ್ತು.
ಹೀಗಾಗಿ ಕರ್ನಾಟಕದಲ್ಲಿ ಪುನ: ಈಡಿಗರ ರಾಜಕೀಯಕ್ಕೆ ಬಲ ಬಂದರೆ ತಮಗಿರುವ ಬ್ಯಾಕ್ ವರ್ಡ್ ಕ್ಲಾಸ್ ಚಾಂಪಿಯನ್ ಎಂಬ ಇಮೇಜಿಗೆ ಧಕ್ಕೆಯಾಗುತ್ತದೆ ಎಂಬುದು ಸಿದ್ಧರಾಮಯ್ಯ ಅವರ ಯೋಚನೆ.
ಸಿದ್ದರಾಮಯ್ಯ ಅವರ ಈ ಯೋಚನೆಗೆ ಕೆಲ ದಿನಗಳ ಹಿಂದೆ ಸಿಎಂ ಆಯ್ಕೆಗೆ ನಡೆದ ಎಪಿಸೋಡೂ ಪುಷ್ಟಿ ನೀಡಿದ್ದು ನಿಜ.ಮೇ ಹದಿನಾಲ್ಕರಂದು ಆರಂಭವಾದ ಈ ಎಪಿಸೋಡಿನಲ್ಲಿ ಸಿದ್ಧರಾಮಯ್ಯ ಅವರಿಗೆ ಡಿಕೆಶಿ ಟೈಟ್ ಫೈಟು ನೀಡಿದ್ದರೆ ಅದಕ್ಕೆ ಹರಿಪ್ರಸಾದ್ ಕಾರಣ.
ಆ ಸಂದರ್ಭದಲ್ಲಿ ಡಿಕೆಶಿಗೆ ದಿಲ್ಲಿ ಹೋರಾಟದ ರಣತಂತ್ರಗಳನ್ನು ಹೇಳಿಕೊಟ್ಟ ಹರಿಪ್ರಸಾದ್,ಈ ಸಲ ಹೈಕಮಾಂಡ್ ನಿಮ್ಮನ್ನು ಮುಖ್ಯಮಂತ್ರಿ ಮಾಡುವುದಿಲ್ಲ.ಹೀಗಾಗಿ ಇಂತಿಂತಹ ಪಟ್ಟು ಹಾಕಿ ನಾಲ್ಕು ದಿನ ಆಟ ಬೆಳೆಸಿಕೊಂಡು ಹೋಗಿ.ಆಗ ಎರಡನೇ ಕಂತಿನಲ್ಲಾದರೂ ಗ್ಯಾರಂಟಿ ಸಿಎಂ ಆಗುತ್ತೀರಿ ಎಂದಿದ್ದರು.
ಮತ್ತದರ ಪರಿಣಾಮವಾಗಿಯೇ ಸಿಎಂ ಆಯ್ಕೆ ಎಪಿಸೋಡು ಕ್ಷಣಕ್ಕೊಂದು ತಿರುವು ಪಡೆಯುತ್ತಾ ತಲಾ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಸೂತ್ರದೊಂದಿಗೆ ಮುಕ್ತಾಯ ಕಂಡಿತ್ತು.
ಇಂತಹ ಎಲ್ಲ ಕಾರಣಗಳಿಗಾಗಿ ಹರಿಪ್ರಸಾದ್ ಅವರನ್ನು ಕರ್ನಾಟಕದ ರಾಜಕಾರಣದಲ್ಲಿ ಅಪ್ರಸ್ತುತಗೊಳಿಸಲು ಬಯಸಿದ ಸಿದ್ಧರಾಮಯ್ಯ ಮೊನ್ನೆ ಸಚಿವ ಸಂಪುಟ ವಿಸ್ತರಣೆಯ ಆಟ ಶುರುವಾದಾಗ ಮೊದಲ ಹೊಡೆತ ಕೊಟ್ಟಿದ್ದಾರೆ.
ಮೇ ಇಪ್ಪತ್ತರಂದು ಮೊದಲ ಕಂತಿನ ಸಂಪುಟ ವಿಸ್ತರಿಸಿದ ಸಂದರ್ಭದಲ್ಲಿ ಹರಿಪ್ರಸಾದ್ ಹೆಸರು ಒಳನುಸುಳದಂತೆ ಅವರು ನೋಡಿಕೊಂಡರೂ,ಎರಡನೇ ಕಂತಿನಲ್ಲಿ ಹರಿಪ್ರಸಾದ್ ಅವರನ್ನು ಸಂಪುಟದೊಳಕ್ಕೆ ಸೇರಿಸಲು ಡಿಕೆಶಿ ವರಿಷ್ಟರ ಮೇಲೆ ಒತ್ತಡ ಹೇರಿದರು.
ಆದರೆ ಈಡಿಗರ ಕೋಟಾದಲ್ಲಿ ಯಾರನ್ನು ಮಂತ್ರಿ ಮಾಡಬೇಕು ಎಂಬ ವಿಷಯ ಬಂದಾಗ ಸಿದ್ಧರಾಮಯ್ಯ ಅವರ ಮುಂದೆ ಸೊರಬದ ಮಧುಬಂಗಾರಪ್ಪ ಅವರ ಹೆಸರೊಂದೇ ಇದ್ದರೆ,ಡಿಕೆಶಿ ಪಟ್ಟಿಯಲ್ಲಿ ಬಿ.ಕೆ.ಹರಿಪ್ರಸಾದ್ ಮತ್ತು ಮಧುಬಂಗಾರಪ್ಪ ಅವರಿಬ್ಬರ ಹೆಸರುಗಳಿದ್ದವು.
ಈ ಸಂದರ್ಭದಲ್ಲಿ ಸೋನಿಯಾಗಾಂಧಿ ಅವರ ಬಳಿ ಪ್ಲೇ ಕಾರ್ಡು ಹಾಕಿದ ಸಿದ್ಧರಾಮಯ್ಯ,ಮೇಡಂ ಇವತ್ತು ಈಡಿಗರ ಕೋಟಾದಲ್ಲಿ ಮಧುಬಂಗಾರಪ್ಪ ಅವರನ್ನು ಮಂತ್ರಿ ಮಾಡುವುದೇ ಬೆಸ್ಟು.ಯಾಕೆಂದರೆ ಮೊದಲನೆಯದಾಗಿ ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗ.ಹೀಗಾಗಿ ಈಡಿಗ ಮತ ಬ್ಯಾಂಕಿನ ಪವರ್ ಫುಲ್ ನಾಯಕರಾಗಿ ಬೆಳೆಯಲು ಅವರಿಗೆ ಅವಕಾಶವಾಗುತ್ತದೆ ಎಂದರು.
ಹಾಗೆಯೇ ಮುಂದುವರಿದು,ಇದೇ ರೀತಿ ಶಿವಮೊಗ್ಗ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ.ಅವರನ್ನು ಈಗಲೇ ಕಟ್ಟಿ ಹಾಕುವ ಕೆಲಸ ಮಾಡದಿದ್ದರೆ ಮುಂದೆ ಪ್ರಬಲ ಲಿಂಗಾಯತ ವೋಟ್ ಬ್ಯಾಂಕಿನ‌ ಮುಂದೆ ಅವರು ನಿಲ್ಲುತ್ತಾರೆ.ಹಾಗಾಗದಂತೆ ನೋಡಿಕೊಳ್ಳಬೇಕು ಎಂದರೆ ನಾವು ಅದೇ ಜಿಲ್ಲೆಯ ಮಧುಬಂಗಾರಪ್ಪ ಅವರಿಗೆ ಪ್ರಾಮಿನೆನ್ಸು ನೀಡಲೇಬೇಕು ಎಂದು ಬಿಟ್ಟರು.
ಹೀಗೆ ಸಿದ್ಧರಾಮಯ್ಯ ಉರುಳಿಸಿದ ಎಫೆಕ್ಟೀವ್ ಪ್ಲೇ ಕಾರ್ಡನ್ನು ಹಿಡಿದುಕೊಂಡ ಸೋನಿಯಾಗಾಂಧಿ ಅವರು ಡಿಕೆಶಿ ಕಡೆ ತಿರುಗಿ:ಈಡಿಗರ ಪೈಕಿ ಯಾರನ್ನು ಮಂತ್ರಿ ಮಾಡೋಣ ಅಂತ ಕೇಳಿದರು.
ಆಗ ಇದ್ದಕ್ಕಿದ್ದಂತೆ ಕಕ್ಕಾಬಿಕ್ಕಿಯಾದ ಡಿಕೆಶಿ ಅರೆಕ್ಷಣ ಏನೂ ಮಾತನಾಡಲಿಲ್ಲವಂತೆ.ಕಾರಣ?ಅವರಿಗೆ ಹರಿಪ್ರಸಾದ್ ಮಂತ್ರಿಯಾಗುವುದು ಬೇಕಿತ್ತು.ಆದರೆ ಮಧುಬಂಗಾರಪ್ಪ ಅವರನ್ನು ತಿರಸ್ಕರಿಸುವ ಸ್ಥಿತಿಯಲ್ಲೂ ಅವರಿರಲಿಲ್ಲ.
ಯಾಕೆಂದರೆ ಮಧು ಬಂಗಾರಪ್ಪ ಅವರ ತಂದೆ ಬಂಗಾರಪ್ಪ ತಮ್ಮ ರಾಜಕೀಯ ಗುರು.ಅದೇ ರೀತಿ ಈ ಸಲ ಬಂಗಾರಪ್ಪ ಅವರ ಅಳಿಯ,ರಾಜಕುಮಾರ್ ಪುತ್ರರಾದ ನಟ ಶಿವರಾಜ್ ಕುಮಾರ್ ಅವರನ್ನು ಈ ಸಲ ಸಕ್ರಿಯ ಪ್ರಚಾರಕ್ಕಾಗಿ ಬೀದಿಗಿಳಿಸಿದ್ದೇ ತಾವು.ಹೀಗಿರುವಾಗ ಮಧು ಬಂಗಾರಪ್ಪ ಬೇಡ,ಹರಿಪ್ರಸಾದ್ ಇರಲಿ ಎನ್ನುವುದು ಹೇಗೆ?
ಹಾಗಂತಲೇ ಸಿದ್ಧರಾಮಯ್ಯ ಅವರು ಸೂಚಿಸಿದ ಹೆಸರಿಗೆ ಸಹಮತ ಸೂಚಿಸಿ ಡಿಕೆಶಿ ಮೌನವಾಗಿ ಬಿಟ್ಟರು.
ಪರಿಣಾಮ?ಸಿದ್ಧರಾಮಯ್ಯ ಅವರ ಸಂಪುಟದಲ್ಲಿ ಡಿಕೆಶಿ ಪರವಾಗಿ ಫೋರ್ಸ್ ಆಗಬೇಕಿದ್ದ ಹರಿಪ್ರಸಾದ್ ಪಟ್ಟಿಯಿಂದ ಹೊರಗುಳಿದರು.ಹೀಗಾಗಿ ಇನ್ನು ಸಂಪುಟದಲ್ಲಿ ಡಿಕೆಶಿ ಎಸೆಯುವ ಅಸ್ತ್ರಕ್ಕೆ ಒಂದಷ್ಟು ಶಕ್ತಿ ತುಂಬುವವರು ಅಂತಿದ್ದರೆ ಅದು ಕೆ.ಹೆಚ್.ಮುನಿಯಪ್ಪ ಮಾತ್ರ.
ಉಳಿದಂತೆ ಲಕ್ಷ್ಮಿ ಹೆಬ್ಬಾಳ್ಕರ್,ಡಿ.ಸುಧಾಕರ್ ಸೇರಿದಂತೆ ಡಿಕೆ ಕ್ಯಾಂಪಿನಲ್ಲಿ ಮೂರ್ನಾಲ್ಕು ಜನ ಇದ್ದಾರಾದರೂ,ಅವರು ಹರಿಪ್ರಸಾದ್ ಅವರಂತೆ ಆಗ್ನೇಯಾಸ್ತ್ರ ಪ್ರಯೋಗಿಸುವಷ್ಟು ಅನುಭವಿಗಳೂ ಅಲ್ಲ,ಪವರ್ ಫುಲ್ಲೂ ಅಲ್ಲ.
ಇದೇ ರೀತಿ ಕೆಲ ಹಿರಿಯ ಸಚಿವರು ಡಿಕೆಶಿ ಜತೆ ಇದ್ದಾರಾದರೂ,ಅದೇ ಕಾಲಕ್ಕೆ ಅವರು ಹೈಕಮಾಂಡ್ ಕ್ಯಾಂಡಿಡೇಟುಗಳಾಗಿ ಗುರುತಿಸಿಕೊಂಡಿದ್ದಾರೆ.ಹೆಚ್ಚೆಂದರೆ ಇವರೆಲ್ಲ ಸನ್ನಿವೇಶದ ತಾಪಮಾನ ಕಡಿಮೆ ಮಾಡಬಲ್ಲವರೇ ವಿನ: ಡಿಕೆಶಿಗಾಗಿ ಬೀದಿ ಬಡಿದಾಟಕ್ಕೆ ಇಳಿಯುವವರಲ್ಲ.
ಆ ದೃಷ್ಟಿಯಿಂದ ಹಾಲಿ ಕ್ಯಾಬಿನೆಟ್ಟಿನಲ್ಲಿ ಸಿದ್ಧರಾಮಯ್ಯ ಅವರ ಕೈ ಮೇಲಾಗಿರುವುದು ನಿಜ.
ಹೀಗಾಗಿ ಹರಿಪ್ರಸಾದ್ ಅವರ ಜತೆ ನಿಲ್ಲಲಾಗದ ಕಾರಣಕ್ಕಾಗಿ ಡಿಕೆಶಿ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡುವ ಸ್ಥಿತಿ ಬಂದರೆ ಅದರಲ್ಲೇನೂ ಅಚ್ಚರಿಯಿಲ್ಲ.

ಬಿಜೆಪಿಗೆ ನಾಯಕನೇ ಸಿಗುತ್ತಿಲ್ಲ

ಅಂದ ಹಾಗೆ ಪಕ್ಷ ಅಧಿಕಾರಕ್ಕೆ ಬಂದ ಹದಿನೈದೇ ದಿನಗಳಲ್ಲಿ ಸಿದ್ಧರಾಮಯ್ಯ ಅವರು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚಿಸಿಕೊಂಡಿದ್ದರೆ,ಪ್ರತಿಪಕ್ಷ ಬಿಜೆಪಿಗೆ ಇನ್ನೂ ಶಾಸಕಾಂಗ ನಾಯಕನೇ ಸಿಕ್ಕಿಲ್ಲ.
ಕಾರಣ?ಪಕ್ಷದ ಶಾಸಕಾಂಗ ನಾಯಕರಾಗಲು,ಆ ಮೂಲಕ ಪ್ರತಿಪಕ್ಷ ನಾಯಕರಾಗಲು ಬಿಜೆಪಿಯಲ್ಲಿ ಹಲವರು ಬಡಿದಾಡತೊಡಗಿದ್ದಾರೆ.
ಬಸವರಾಜ ಬೊಮ್ಮಾಯಿ,ಬಸವನಗೌಡ ಪಾಟೀಲ್ ಯತ್ನಾಳ್,ಡಾ.ಅಶ್ವಥ್ಥನಾರಾಯಣ ಸೇರಿದಂತೆ ಹಲವರಿಗೆ ಈ ಪಟ್ಟದ ಮೇಲೆ ಕಣ್ಣಿದೆ.
ಈ ಪೈಕಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ತರುವುದು ಬೆಸ್ಟು ಅಂತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರಂತೆ.
ಅವರ ಈ ಹೇಳಿಕೆಯ ಹಿಂದೆ ಕೆಲ ಟ್ವಿಸ್ಟುಗಳೂ ಇವೆ.ಅದೆಂದರೆ,ಭವಿಷ್ಯದ ಲಿಂಗಾಯತ ನಾಯಕರಾಗುವತ್ತ ಹೆಜ್ಜೆ ಇಟ್ಟಿರುವ ತಮ್ಮ ಪುತ್ರ ವಿಜಯೇಂದ್ರ ಅವರು ಯತ್ನಾಳ್ ಹಿಂದೆ ಕುಳಿತು ಜಿಂದಾಬಾದ್ ಅಂತ‌ ಕೂಗುವುದು ಅವರಿಗಿಷ್ಟವಿಲ್ಲ.
ಇದೇ ರೀತಿ ಒಕ್ಕಲಿಗ ಸಮುದಾಯದ ಡಾ.ಅಶ್ವಥ್ಥನಾರಾಯಣ ಪ್ರತಿಪಕ್ಷ ನಾಯಕರಾದರೆ,ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಾವು ಇಷ್ಟಪಡದ ಲಿಂಗಾಯತ ನಾಯಕ ವಿ.ಸೋಮಣ್ಣ ಬಂದು ಕೂರಬಹುದು ಎಂಬುದು ಯಡಿಯೂರಪ್ಪ ಅವರ ಚಿಂತೆ.
ಹೀಗಾಗಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಬಂದು ಕುಳಿತರೆ,ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನಕ್ಕೆ ಆರ್.ಅಶೋಕ್ ಅವರನ್ನು ತಂದು ಕೂರಿಸಬಹುದು ಎಂಬುದು ಅವರ ಯೋಚನೆ.
ಈ ಮಧ್ಯೆ ಕುಸಿದ ಬಿಜೆಪಿಯನ್ನು ಬಲಪಡಿಸಲು ಹಿಂದುತ್ವದ ಝಂಡಾ ಎತ್ತಿ ಹಿಡಿಯುವ ಸಂಸದ ಅನಂತಕುಮಾರ್ ಹೆಗ್ಡೆ ಅವರನ್ನು ತಂದು ಕೂರಿಸಲು ಪರಿವಾರದ ಕೆಲ ನಾಯಕರು ಪ್ಲಾನು ಮಾಡಿದ್ದಾರಂತೆ.
ಅದೇನೇ ಇದ್ದರೂ ಈವರೆಗೆ ದಿಲ್ಲಿಯ ನಾಯಕರು ಈ ವಿಷಯದ ಕುರಿತು ಚಕಾರ ಎತ್ತದಿರುವುದು ಮಾತ್ರ ಬಿಜೆಪಿ ಪಾಳಯದ ಚಿಂತೆಗೆ ಕಾರಣವಾಗಿದೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here