ತಪ್ಪಿತಸ್ಥರಿಗೆ ಕಾನೂನಿನಡಿ ಶಿಕ್ಷೆ ಜನತೆ ಭಾವೋದ್ವೇಗಕ್ಕೆ ಒಳಗಾಗಬಾರದು -ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್

0
99

ಹುಬ್ಬಳ್ಳಿ : ಏ.21:ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದರೆ, ಸಂವಿಧಾನದ ಮೇಲೆ ಕಲ್ಲು ತೂರಿದಂತೆ ಇಂತಹ ತಪ್ಪುಗಳನ್ನು ಎಸೆಗಿದವರ ಮೇಲೆ ಕಾನೂನಿನಡಿಯಲ್ಲಿ ಶಿಕ್ಷೆಯಾಗಲಿದೆ. ಜನತೆ ಭಾವೋದ್ವೇಗಕ್ಕೆ ಒಳಗಾಗಬಾರದು, ಹುಬ್ಬಳ್ಳಿಯಲ್ಲಿ ಶಾಂತಿ ನೆಲೆಸಲು ಪೊಲೀಸರು ಶ್ರಮವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು.

ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸರ ಜೊತೆ ಸಭೆ ನಡೆಸಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ, ಟ್ರಸ್ಟಿಗಳಿಗೆ ಧೈರ್ಯ ತುಂಬಲಾಗಿದೆ. ಪೊಲೀಸ್ ಆಯುಕ್ತ ಲಾಬೂರಾಮ್ ಅವರಿಂದ ಘಟನೆ ಬಗ್ಗೆ ಸವಿವರವಾಗಿ ಮಾಹಿತಿ ಪಡೆದುಕೊಳ್ಳಲಾಗಿದೆ. ವಿವಿಧ ಸಮುದಾಯಗಳ ನಾಯಕರ ಜೊತೆ ಮಾತುಕತೆ ನಡೆಸಲಾಗಿದೆ. 2001 ರಲ್ಲಿ ಹುಬ್ಬಳ್ಳಿಯಲ್ಲಿ ಇಂತಹ ಘಟನೆ ನಡೆದಿತ್ತು.‌ 20 ವರ್ಷಗಳ ನಂತರ ಈಗ ಮರುಕಳಿಸಿದೆ. ಹುಬ್ಬಳ್ಳಿ ಧಾರವಾಡದ ಪ್ರಸಿದ್ಧಿ,ಜನಪ್ರಿಯತೆಗೆ ಧಕ್ಕೆ ಉಂಟಾಗಬಾರದು. ದೇಶದಲ್ಲಿ ಶಾಂತಿ ನೆಲೆಸಬೇಕು. ಸರ್ವ ಜನಾಂಗದ ಶಾಂತಿಯ ತೋಟ ಎಂಬ ನಾಡಗೀತೆಯ ಧ್ಯೇಯದಂತೆ ಎಲ್ಲರೂ ಒಂದಾಗಿ ಬಾಳಬೇಕು. ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ಭೇದಭಾವ ಮಾಡಬಾರದು. ದೇಶ ಅಭಿವೃದ್ಧಿ ಸಾಧಿಸಲು ಎಲ್ಲರೂ ಒಗ್ಗಟ್ಟಾಗಿರಬೇಕು. ಪ್ರೀತಿ, ವಿಶ್ವಾಸ ಹಂಚಿಕೊಂಡು ಬಾಳೋಣ.ಜನರು ಮುಗ್ಧರಾಗಿರುತ್ತಾರೆ ಭಾವನಾತ್ಮಕ ಹೇಳಿಕೆಗಳಿಗೆ ಬೇಗ ಉದ್ವೇಗಕ್ಕೆ ಒಳಗಾಗುತ್ತಾರೆ. ಅಂತಹ ಘಟನೆಗೆ ಆಸ್ಪದ ನೀಡಬಾರದು.ವಿವಿಧ ಧರ್ಮೀಯರು ತಮ್ಮ ಹಬ್ಬಗಳಂದು ಸಹ ಧರ್ಮಗಳ, ಜಾತಿಯ ಜನರನ್ನು ಪರಸ್ಪರ ಆಹ್ವಾನ ಮಾಡಬೇಕು. ಜನರು ಶಾಂತಿಯಿಂದ ಜೀವನ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ತಿಳಿಸಲಾಗಿದೆ ಎಂದರು.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಹಾಗೂ ಪ್ರಭಾರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಡಾ.ಎನ್.ಆರ್.ಪುರುಷೋತ್ತಮ, ಆಯೋಗದ ಕಾರ್ಯದರ್ಶಿ ಮೊಹಮದ್ ನಜೀರ್, ಹುಬ್ಬಳ್ಳಿ ಶಹರ ತಹಶೀಲ್ದಾರ ಶಶಿಧರ್ ಮಾಡ್ಯಾಳ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here