ಕುಡತಿನಿಯಲ್ಲಿ ತಾಲ್ಲೂಕು ಮಟ್ಟದ ‘ಜನಸ್ಪಂದನ’, ಸಮಸ್ಯೆಗಳ ಮಹಾಪೂರ; ಬಗೆಹರಿಸಲು ಆಶ್ವಾಸನೆ

0
54

ಬಳ್ಳಾರಿ,ಜ.31: ಕುಡತಿನಿ ಪಟ್ಟಣದಲ್ಲಿ ವಿವಿಧ ವಾರ್ಡ್‍ಗಳಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ ಮತ್ತು ಒಳಚರಂಡಿ ವ್ಯವಸ್ಥೆ ಮಾಡಬೇಕು. ಪಟ್ಟಣದ ಸುತ್ತ ಮುತ್ತಲಿನ ಕಾರ್ಖಾನೆಗಳಿಂದ ಹೊರಸೂಸುವ ವಿಷ ಅನಿಲದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಜಿಲ್ಲಾಡಳಿತವು ನಿಯಂತ್ರಣ ಮಾಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.’
‘ಪಟ್ಟಣವು ಹೆಚ್ಚು ಜನಸಂಖ್ಯೆ ಹೊಂದಿದ್ದು, ಸ್ಮಶಾನಕ್ಕೆ ಭೂಮಿ ಸಮಸ್ಯೆಯಾಗುತ್ತಿದೆ. ಹೆಚ್ಚುವರಿಯಾಗಿ ಜಮೀನು ಮಂಜೂರು ಮಾಡಬೇಕು. ಪಟ್ಟಣವನ್ನು ಹಸೀರುಕರಣ ಮಾಡುವಲ್ಲಿ ಹೆಚ್ಚು ಗಿಡಗಳನ್ನು ನೆಟ್ಟು ಪರಿಸರ ಅಸಮತೋಲನ ಕಾಪಾಡಬೇಕು.’
‘ಕುಡತಿನಿ ಪಟ್ಟಣದ ಸುತ್ತ ಮುತ್ತ 10 ಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಅದರಲ್ಲಿ ಕೆಲಸ ಮಾಡಲು ತಾಂತ್ರಿಕ ತರಗತಿಗಳು ಅವಶ್ಯತೆ ಇದ್ದು, ಈ ಭಾಗದಲ್ಲಿ ಸರ್ಕಾರಿ ಡಿಪ್ಲೊಮಾ ಮತ್ತು ಪದವಿ ಪೂರ್ವ ಕಾಲೇಜು ಪ್ರಾರಂಭಿಸಬೇಕು.ಮುಖ್ಯವಾಗಿ ಸ್ಥಳೀಯರಿಗೆ ಕಾರ್ಖಾನೆಗಳಲ್ಲಿ ಉದ್ಯೋಗ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು.’
‘ಕುಡತಿನಿ ಮತ್ತು ಕುರುಗೋಡು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ರೇಲ್ವೆ ಮೇಲ್ಸೇತುವೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಕುಡತಿನಿ ಪಟ್ಟಣದ ಪಲ್ಲೇದ್ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಕುಡತಿನಿ ಪಟ್ಟಣಕ್ಕೆ ಸಂಬಂಧಿಸಿದಂತೆ ಮೂಲ ಸೌಲಭ್ಯಗಳ ಕುರಿತು ಸಾಲು ಸಾಲು ಸಮಸ್ಯೆಗಳ ಮಹಾಪೂರವೇ ಹರಿದುಬಂದ ಪ್ರಸಂಗ ನಡೆಯಿತು.

ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ಕುಡತಿನಿ ಪಟ್ಟಣ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ‘ಜನಸ್ಪಂದನ’ ಕಾರ್ಯಕ್ರಮವನ್ನು ಸಂಡೂರು ಶಾಸಕ ಈ.ತುಕರಾಂ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶಯದಂತೆ, ಸರ್ಕಾರವನ್ನೇ ಜನರ ಮನೆ ಬಾಗಿಲಿಗೆ ಕೊಂಡೊಯ್ದು ಅವರ ಸಮಸ್ಯೆಗಳನ್ನು ಅಲ್ಲಿಯೇ ಆಲಿಸಿ ಪರಿಹಾರ ಒದಗಿಸುವುದೇ ‘ಜನಸ್ಪಂದನ’ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ’ ಎಂದು ಹೇಳಿದರು.
ಸರ್ಕಾರಿ ಸಂಬಂಧಿತ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ, ಒಂದೇ ಸೂರಿನಡಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಅಹವಾಲುಗಳಿದ್ದಲ್ಲಿ ಸಲ್ಲಿಸಲು ಈ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಬರವಣಿಗೆಯ ಮೂಲಕ ಅಹವಾಲು ನೀಡಬಹುದು ಎಂದು ತಿಳಿಸಿದರು.

ಕುಡತಿನಿ ಪಟ್ಟಣದಲ್ಲಿ ಅನೇಕ ಸಮಸ್ಯೆಗಳಿವೆ, ಅವುಗಳನ್ನು ಹಂತ-ಹಂತವಾಗಿ ಬಗೆಹರಿಸಲು ರೂ.68 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಕಾಲಮಿತಿಯಲ್ಲಿ ಬಗೆಹರಿಸಲಾಗುವುದು. ನಮ್ಮ ಸರ್ಕಾರವು ಎಲ್ಲಾ ವರ್ಗದ ಜನರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ತಲುಪಿಸುತ್ತಿದೆ ಎಂದು ಹೇಳಿದ ಶಾಸಕ ಈ.ತುಕರಾಂ ಅವರು, ಸಾರ್ವಜನಿಕರು ‘ಜನಸ್ಪಂದನ’ ಕಾರ್ಯಕ್ರಮದ ಫಲಪ್ರದ ಮಾಡಿಕೊಳ್ಳಬೇಕು ಎಂದರು.

ಕುಡತಿನಿ ಪಟ್ಟಣದಲ್ಲಿ 408 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ರೈತರನ್ನು ಭೇಟಿ ಮಾಡಿದ ಅವರು, ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಾಗಿದೆ. ಸಮಸ್ಯೆ ಆಲಿಸಿ, ಬಗೆಹರಿಸುವ ಆಶ್ವಾಸನೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಪಂಚಾಯತ್ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಮತ್ತು ಉಪವಿಭಾಗ ಆಶ್ರಯದಲ್ಲಿ 2021-22 ನೇ ಸಾಲಿನ ಡಿ.ಎಂ.ಎಫ್ ಅನುದಾನದಡಿ ರೂ.99 ಲಕ್ಷ ವೆಚ್ಚದಲ್ಲಿ ಪಟ್ಟಣದ ವಾಲ್ಮೀಕಿ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಉದ್ಘಾಟಿಸಿದರು.

ತಾಲ್ಲೂಕು ಮಟ್ಟದ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಸಂಡೂರು ಶಾಸಕ ಈ.ತುಕರಾಂ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಾಳ್ಮೆಯಿಂದಲೇ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅಹವಾಲು ಸಲ್ಲಿಸಲು ಅನುಕೂಲಕ್ಕಾಗಿ ಒಟ್ಟು ಎಲ್ಲಾ ಇಲಾಖೆಗಳನ್ನೊಳಗೊಂಡ 15 ಮಳಿಗೆಗಳನ್ನು ಹಾಕಲಾಗಿತ್ತು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 124 ಅರ್ಜಿಗಳು ಸ್ವೀಕೃತಗೊಂಡವು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್.ಎನ್., ಎಎಸ್ಪಿ ಬಿ.ನವೀನ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್, ಅಬಕಾರಿ ಉಪ ಆಯುಕ್ತ ಮಂಜುನಾಥ, ಬಳ್ಳಾರಿ ತಾಲ್ಲೂಕು ತಹಶೀಲ್ದಾರ ಗುರುರಾಜ, ಕುರುಗೋಡು ತಾಲ್ಲೂಕು ತಹಶೀಲ್ದಾರ ರಾಘವೇಂದ್ರ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here