ತಾಲೂಕು ಘೋಷಣೆಯಾಗಿ ಐದು ವರ್ಷವಾದರೂ..!! ತಲೆಯೆತ್ತದ ಸಮಾಜ ಕಲ್ಯಾಣ ಇಲಾಖೆ..?

0
159

ಕೊಟ್ಟೂರು:ಜು:11:-2018ನೇ ವರ್ಷ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಘೋಷಣೆಯಾದ ಕೊಟ್ಟೂರು ಬರೀ ನೆಪಮಾತ್ರಕ್ಕೆ ತಾಲ್ಲೂಕಾಗಿದೆ. ತಾಲ್ಲೂಕಿಗೆ ಬೇಕಾದ ವಿವಿಧ ಇಲಾಖೆಗಳ ತಾಲ್ಲೂಕು ಕಛೇರಿಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಪ್ರತಿದಿನವೂ ಕೂಡ್ಲಿಗಿಗೇ ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ. ಸರ್ಕಾರ ಬರೀ ತಾಲ್ಲೂಕು ಘೋಷಣೆ ಮಾಡಿದರಷ್ಟೇ ಸಾಲದು ಅದಕ್ಕೆ ಬೇಕಾದ ಎಲ್ಲ ರೂಪುರೇಷೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕೇ ಹೊರತು ಈ ರೀತಿ ಅರ್ಧಂಬರ್ಧ ತಾಲ್ಲೂಕು ಘೋಷಣೆ ತಹಶೀಲ್ದಾರರ ಕಛೇರಿ ತೆರೆದರಷ್ಟೇ ತಾಲ್ಲೂಕೆಂದೆ ಹೇಗೆ ಭಾವಿಸಬೇಕು ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಕೊಟ್ಟೂರನ್ನು ಒಳಗೊಂಡಿರುವ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವಿಶೇಷವಾಗಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿನ ಬಹುಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ್ದರೂ ಸಹ ಕೊಟ್ಟೂರಿನಲ್ಲಿ ಪರಿಶಿಷ್ಟ ಜಾತಿಯವರಿಗೆಂದೇ ಇರುವ ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಮಟ್ಟದಲ್ಲಿ ಇನ್ನೂ ಪ್ರಾರಂಭವಾಗಿಲ್ಲ.

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ತಮ್ಮ ಸೌಲಭ್ಯಗಳಿಗಾಗಿ ಕೂಡ್ಲಿಗಿಗೇ ಹೋಗಬೇಕು. ಹೀಗಾಗಿ ಬಡ ವಿದ್ಯಾರ್ಥಿಗಳು ಸಣ್ಣ ಸಣ್ಣ ಸರ್ಕಾರದ ಸೌಲಭ್ಯಕ್ಕಾಗಿ ದಿನವೂ ಕೂಡ್ಲಿಗಿಗೇ ಪರದಾಡುವ ಸ್ಥಿತಿ ಬಂದೊದಗಿದೆ. ಅಧಿಕಾರಿಗಳು ತಮ್ಮ ಮನಬಂದಂತೆ ಸಾರ್ವಜನಿಕರನ್ನು, ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಕೊಟ್ಟೂರು ತಾಲ್ಲೂಕಿನ ವ್ಯಾಪ್ತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ, ಕಂದಗಲ್ಲು ಇಲ್ಲಿಯ ಮೂಲಭೂತ ಸೌಕರ್ಯಗಳ ಸರಿಯಿಲ್ಲವೆಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದರು.

ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಯಾಗಿರುವ ಜಗದೀಶ್ ದಿಡಗೂರು ಪರಿಶಿಷ್ಟ ಜನಾಂಗಕ್ಕೆ ಬರುತ್ತಿರುವ ಸರ್ಕಾರದ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ವಿತರಣೆ ಮಾಡುತ್ತಿಲ್ಲ. ಮುಖಂಡರನ್ನು ಕಛೇರಿಯಲ್ಲಿ ಕುಳ್ಳಿರಿಸಿಕೊಂಡು ಬರೀ ಮಾತಿನಲ್ಲಿ ವ್ಯವಹರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅವರಿಗೆ ಸರಿಯಾದ ಭಕ್ಷೀಸು ಕೊಡದಿದ್ದಲ್ಲಿ ತಮ್ಮ ಕೆಲಸವನ್ನು ನೆನೆಗುದಿಗೆ ಹಾಕುತ್ತಾ ತಮಗೆ ಬೇಕಾದವರ ಕೆಲಸ ಮಾತ್ರ ಮಾಡಿಕೊಡುತ್ತಾರೆ. ಈ ರೀತಿ ಸರಿಯಾದ ಕರ್ತವ್ಯ ನಿರ್ವಹಿಸದ ಜಗದೀಶ್ ದಿಡಗೂರ ಮೇಲೆ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ,ಮಾಹಿತಿ ಹಕ್ಕು ಹಾಗೂ ರಕ್ಷಣಾ ವೇದಿಕೆಯ ಎಂ.ಶ್ರೀನಿವಾಸ್ ಪತ್ರಿಕೆಗೆ ತಿಳಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here