ಸಂವಿಧಾನ ಜಾಗೃತಿ ಜಾಥಾ: ಸಂಡೂರು ವ್ಯಾಪ್ತಿಯಲ್ಲಿ ಸಂಚಾರ

0
49

ಬಳ್ಳಾರಿ,ಫೆ:ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಶನಿವಾರದಂದು ಸಂಡೂರು ತಾಲ್ಲೂಕಿನ ತೋರಣಗಲ್ಲು, ವಡ್ಡು ಹಾಗೂ ತಾಳೂರು ಗ್ರಾಮ ಪಂಚಾಯಿತಿ ಹಾಗೂ ಕುರೇಕುಪ್ಪ ಪುರಸಭೆ ವ್ಯಾಪ್ತಿಯಲ್ಲಿ ಸಂಚಾರ ನಡೆಸಿತು.

ಜಾಥಾವನ್ನು ತೋರಣಗಲ್ಲು ಗ್ರಾಮದಲ್ಲಿ ವೇಷ ಭೂಷಣ ಧರಿಸಿದ ವಿದ್ಯಾರ್ಥಿಗಳು, ಡೊಳ್ಳು ಕುಣಿತ, ನಂದಿ ಕೋಲು, ಹಲಗೆ ವಾದನ, ತಾಷಾ, ರಾಷ್ಟ್ರ ಧ್ವಜ ಮತ್ತು ನೀಲಿ ಧ್ವಜ ಹಿಡಿದ ಜನರು ಹಾಗೂ ಕಳಶ ಮತ್ತು ಪೂರ್ಣ ಕುಂಭ ಹೊತ್ತ ಮಹಿಳೆಯರ ಸಮ್ಮುಖದಲ್ಲಿ ಸಂಡೂರು ಶಾಸಕ ಈ.ತುಕರಾಂ ಅವರು ಅದ್ದೂರಿಯಾಗಿ ಸ್ವಾಗತಿಸಿ, ಜಾಥಾ ಮೆರವಣಿಗೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ನಮ್ಮ ಸಂವಿಧಾನವು ಹುಟ್ಟಿನಿಂದ ಸಾಯುವವರೆಗೆ ನಮಗೆಲ್ಲರಿಗೂ ಎಲ್ಲಾ ಸೌಲಭ್ಯಗಳನ್ನು ಕೊಟ್ಟಿದೆ ಎಂದರು.
ಸಂವಿಧಾನವು ಮಹತ್ವದ್ದಾಗಿದ್ದು ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಅರಿಯಬೇಕು. ಆ ಮೂಲಕ ನಮ್ಮ ರಾಜ್ಯ ಹಾಗೂ ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯಬಹುದು ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಸಂವಿಧಾನದ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ನುಡಿಮುತ್ತುಗಳನ್ನು ಉದ್ಘೋಷಿಸಿದರು. ಸಾರ್ವಜನಿಕರಿಗೆ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.
ಈ ವೇಳೆ ತಹಶೀಲ್ದಾರ ಅನೀಲ್ ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಷಡಕ್ಷರಯ್ಯ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಕುರೇಕುಪ್ಪ ಗ್ರಾಮ:
ಕುರೇಕುಪ್ಪ ಗ್ರಾಮದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಜಾಥಾವನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಮಾನವ ಹಕ್ಕುಗಳ ಸಂಘಟನೆಯ ಜಿಲ್ಲಾಧ್ಯಕ್ಷ ಮಲಿಯಪ್ಪ ಮಾತನಾಡಿ, ಸಂವಿಧಾನವನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯರ ಮೇಲೆ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಡಿ.ಎಸ್.ಎಸ್. ಮುಖಂಡರಾದ ನಾಗರಾಜ, ಈರಣ್ಣ, ಕಸ್ತೂರಿ ಮಂಜುನಾಥ ಪಾಲ್ಗೊಂಡಿದ್ದರು. ಬಸವಪುರದಿಂದ ವಡ್ಡು ಗ್ರಾಮದವರೆಗೆ ಬೈಕ್ ರ್ಯಾಲಿ ನಡೆಯಿತು.
ಜಾಥಾದಲ್ಲಿ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಿ, ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನದ ಕುರಿತ ವೀಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು ಮತ್ತು ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.

LEAVE A REPLY

Please enter your comment!
Please enter your name here