ಬೆಳೆ ಸಮೀಕ್ಷೆ ಚುರುಕುಗೊಳಿಸಿ: ಚಾರುಲತಾ ಸೋಮಲ್.

0
109

ಮಡಿಕೇರಿ ಆ.25 :-ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಯು ಮಂದಗತಿಯಲ್ಲಿ ನಡೆಯುತ್ತಿದ್ದು, ಬೆಳೆ ಸಮೀಕ್ಷೆಯನ್ನು ಚುರುಕುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳೆ ಸಮೀಕ್ಷೆ ಪ್ರಗತಿ, ರಸಗೊಬ್ಬರ ಪೂರೈಕೆ ಮತ್ತಿತರ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 2.62 ಲಕ್ಷ ಸರ್ವೇ ನಂಬರ್‍ನಲ್ಲಿ ಬೆಳೆ ಸಮೀಕ್ಷೆಯಾಗಬೇಕಿದ್ದು, ಇದರಲ್ಲಿ 1,762 ಸರ್ವೇ ನಂಬರ್‍ನಲ್ಲಿ ಬೆಳೆ ಸಮೀಕ್ಷೆ ಆಗಿದೆ. ಆದ್ದರಿಂದ ಸಹಕಾರ ಸಂಘಗಳು, ಸಹಕಾರ ಬ್ಯಾಂಕುಗಳು, ಕಾಫಿ ಮಂಡಳಿ, ಮತ್ತಿತರ ಕೃಷಿ, ತೋಟಗಾರಿಕೆ ಸಂಬಂಧಿಸಿದ ಸಂಘ ಸಂಸ್ಥೆಗಳು ಕೈಜೋಡಿಸಿ ಬೆಳೆ ಸಮೀಕ್ಷೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಅವರು ಸ್ಪಷ್ಟ ನಿರ್ದೇಶನ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಆರ್‍ಟಿಸಿಯಲ್ಲಿ ಹಲವರ ಹೆಸರು ಇದ್ದು, ಜಂಟಿ ಖಾತೆಯಲ್ಲಿರುತ್ತದೆ. ಆದ್ದರಿಂದ ಬೆಳೆ ಸಮೀಕ್ಷೆ ಮಾಡುವಾಗ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ಅವರು ಆರ್‍ಟಿಸಿಯಲ್ಲಿ ಜಂಟಿ ಖಾತೆ ಇದ್ದರೂ ಸಹ, ಕುಟುಂಬದ ಒಬ್ಬರ ಹೆಸರಿನಲ್ಲಿ ಬೆಳೆ ಸಮೀಕ್ಷೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ಸಹಕಾರ ಸಂಘಗಳ ಉಪ ನಿಬಂಧಕರಾದ ಬಿ.ಕೆ.ಸಲೀಂ ಅವರು ಜಿಲ್ಲೆಯಲ್ಲಿ 73 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ಬೆಳೆ ಸಮೀಕ್ಷೆಗೆ ಕೈಜೋಡಿಸಲಿವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ನಾರಾಯಣ ರೆಡ್ಡಿ ಅವರು ಬೆಳೆ ಸಮೀಕ್ಷೆ ಸಂಬಂಧಿಸಿದಂತೆ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು, ಕೃಷಿಕರೇ ಬೆಳೆ ಸಮೀಕ್ಷೆ ಕೈಗೊಳ್ಳಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ ಡಿಎಪಿ, ಎಂಒಪಿ, ಕಾಂಪ್ಲೆಕ್ಸ್ ಮತ್ತಿತರ ರಸಗೊಬ್ಬರಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜೊತೆಗೆ ಯೂರಿಯಾ, ರಾಕ್ ಪಾಸ್ಟರ್, ಎಸ್‍ಎಸ್‍ಪಿ ಮತ್ತಿತರ ರಸಗೊಬ್ಬರಗಳಿಗೆ ಬೇಡಿಕೆ ಇದೆ. ಈ ರಸಗೊಬ್ಬರಗಳನ್ನು ಹೆಚ್ಚಾಗಿ ದಾಸ್ತಾನಿಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ಅವರು 39,990 ಗುರಿಯಲ್ಲಿ 32,082 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಯಾಗಿದೆ ಎಂದು ತಿಳಿಸಿದರು.
ಮೈಸೂರು, ಹಾಸನ ಹಾಗೂ ಮಂಗಳೂರು ಕಡೆಯಿಂದ ರಸಗೊಬ್ಬರ ಪೂರೈಕೆಯಾಗಲಿದೆ. ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಫಿ ಮಂಡಳಿ ಉಪ ನಿರ್ದೇಶಕರಾದ ಶಿವಕುಮಾರಸ್ವಾಮಿ ಅವರು ವಿವಿಧ ರಸಗೊಬ್ಬರಗಳನ್ನು ಮಿಶ್ರಣ ಮಾಡಿ ಬಳಸಬಹುದಾಗಿದೆ ಎಂದು ತಿಳಿಸಿದರು.
ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ಪೂರೈಕೆ, ಬೇಡಿಕೆ ಮತ್ತಿತರ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. ಒಂದು ಜಿಲ್ಲೆ, ಒಂದು ಬೆಳೆ(ಒಡಿಒಪಿ) ಯೋಜನೆಯಡಿ ಕಾಫಿ ಬೆಳೆ ಆಯ್ಕೆಯಾಗಿದ್ದು, ಆ ನಿಟ್ಟಿನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ ಅವರು ಹಲವು ಮಾಹಿತಿ ನೀಡಿದರು. ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ನಾರಾಯಣ ರೆಡ್ಡಿ ಅವರು ಬೆಳೆ ಸಮೀಕ್ಷೆ, ರಸಗೊಬ್ಬರ ಪೂರೈಕೆ ಮತ್ತಿತರ ಬಗ್ಗೆ ಹಲವು ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಎಚ್.ಶಶಿಧರ, ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.

LEAVE A REPLY

Please enter your comment!
Please enter your name here