ರಾಜೀನಾಮೆ ನೀಡಿದರೂ ಹೊಸ ಪಕ್ಷ ಕಟ್ಟುವ ಯೋಚನೆ ಮಾಡಲ್ಲ-ಏಕೆ?: ಬಿಎಸ್​ವೈ

0
149

ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಕಾಲ ಸನ್ನಿಹಿತವಾಗಿದೆ ಎಂಬುದು ಬಹುತೇಕ ಪಕ್ಕಾ ಆಗಿದೆ. ತುಂಬ ದಿನ ದೂರವಿಲ್ಲ..ಇನ್ನು ಎರಡು-ಮೂರು ದಿನಗಳಲ್ಲಿ ಈ ಬಗ್ಗೆ ಒಂದು ಸ್ಪಷ್ಟತೆ ಸಿಗಲಿದೆ. ಅದೇನೇ ಆದರೂ..ಇಂದು ಬಿ.ಎಸ್​. ಯಡಿಯೂರಪ್ಪನವರ ಮಾತು ಕೇಳಿದ ಮೇಲೆ ಅವರು ಶೀಘ್ರದಲ್ಲೇ ಹುದ್ದೆ ತೊರೆಯುತ್ತಾರೆ ಎಂಬುದೇ ರಾಜಕೀಯ ವಿಶ್ಲೇಷಕರ ಬಲವಾದ ಅಭಿಪ್ರಾಯ. ಇಂದು ಹೈಕಮಾಂಡ್​ ಸೂಚನೆಗೆ ಬದ್ಧನಾಗಿರುತ್ತೇನೆ..ಏನೇ ಆದರೂ ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಬಿ.ಎಸ್​.ಯಡಿಯೂರಪ್ಪನವರು ತುಂಬ ಮೃದುವಾಗಿಯೇ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ. ಇನ್ನೊಂದೆಂದರೆ ಯಡಿಯೂರಪ್ಪನವರು ಒಟ್ಟು ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾದರೂ ಒಮ್ಮೆಯೂ ಪೂರ್ತಿಯಾಗಿ 5ವರ್ಷ ಅಧಿಕಾರ ನಡೆಸಲು ಸಾಧ್ಯವಾಗುತ್ತಿಲ್ಲ.

ಅದಲ್ಲ ಸಮಸ್ಯೆ..ಹಿಂದೊಮ್ಮೆ (2011)ರಲ್ಲಿ ತಮ್ಮನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಬಿಜೆಪಿ ಹೈಕಮಾಂಡ್​ ವಿರುದ್ಧ ಸಿಡಿದೆದ್ದಿದ್ದ ಬಿ.ಎಸ್​.ಯಡಿಯೂರಪ್ಪ ಹೊಸದಾದ ಕರ್ನಾಟಕ ಜನತಾ ಪಕ್ಷ (ಕೆಜೆಪಿ)ವನ್ನೇ ಕಟ್ಟಿದ್ದರು. ಇದರಿಂದ ನಷ್ಟವಾಗಿದ್ದು ರಾಷ್ಟ್ರೀಯ ಪಕ್ಷ ಬಿಜೆಪಿಗೆ ಆಗಿತ್ತು. ಈಗಲೂ ಏನಾದರೂ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಬಿಜೆಪಿ ರಿಸ್ಕ್​ ತೆಗೆದುಕೊಳ್ಳುತ್ತಿದೆಯಾ? ಯಡಿಯೂರಪ್ಪ ಮತ್ತೊಮ್ಮೆ ಇನ್ನೊಂದು ಪಕ್ಷವನ್ನು ಕಟ್ಟೋದಿಲ್ಲ ಎಂದು ನಂಬುವುದು ಹೇಗೆ? ಅಪಾರ ಜನಬೆಂಬಲ, ಅಭಿಮಾನಿಗಳು, ಫಾಲೋವರ್ಸ್​​ನ್ನು ಹೊಂದಿರುವ, ಕರ್ನಾಟಕದಲ್ಲಿ ಇನ್ಯಾವ ರಾಜಕಾರಣಿಯೂ ಹೊಂದಿರದಷ್ಟು ಲಿಂಗಾಯತರ ಬಲ ಇರುವ ಬಿಎಸ್​ವೈಗೆ ಈಗಲೂ ಇನ್ನೊಂದು ಪಕ್ಷ ಕಟ್ಟಿ, ಸಂಘಟನೆ ಮಾಡಿ ಬೆಳೆಸುವ ಶಕ್ತಿ ಇದೆಯಾ? ಇಂಥ ಹತ್ತು ಹಲವು ಪ್ರಶ್ನೆಗಳು ಮೂಡದೇ ಇರದು.

ಬೇರೆ ಪಕ್ಷ ಕಟ್ಟುವ ಸಾಧ್ಯತೆ ಎಷ್ಟಿದೆ?
ಬಿ.ಎಸ್​.ಯಡಿಯೂರಪ್ಪ ಇನ್ನೊಮ್ಮೆ ಇಂಥ ಸಾಹಸಕ್ಕೆ ಕೈಹಾಕಲಾರರು ಎಂಬುದು ಬಲವಾಗಿ ಕೇಳಿಬರುತ್ತಿರುವ ಮಾತು. ಹಿಂದೆ 2012ರಲ್ಲಿ ಅವರು ಕೆಜೆಪಿ ಕಟ್ಟಿದಾಗ ಬಿಜೆಪಿಗೆ ಎಷ್ಟು ನಷ್ಟವಾಯಿತೋ..ಅಷ್ಟೇ ಪಾಠವನ್ನು ಬಿಎಸ್​ವೈ ಕೂಡ ಕಲಿತಿದ್ದಾರೆ.

2008ರಲ್ಲಿ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿಎಸ್​ವೈ ಎರಡು ವರ್ಷಗಳ ನಂತರ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದರು. ಅದು 2006ರಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಸರ್ಕಾರವಿದ್ದಾಗ ಜನಾರ್ಧನ್​ ರೆಡ್ಡಿಯವರು, ಅಂದಿನ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ವಿರುದ್ಧ ಮಾಡಿದ್ದ ಜಂತಕಲ್​ ಗಣಿಗಾರಿಕೆ ಪ್ರಕರಣ. ಈ ಸಂಬಂಧ ಯಡಿಯೂರಪ್ಪನವರ ಇಡೀ ಕುಟುಂಬದ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಅದಾದ ನಂತರ ಲೋಕಾಯುಕ್ತ ನೀಡಿದ ವರದಿಯಲ್ಲಿ ಬಿ.ಎಸ್​. ಯಡಿಯೂರಪ್ಪನವರ ಹೆಸರೂ ಇತ್ತು. ಹೀಗಾಗಿ ಬಿ.ಎಸ್.ಯಡಿಯೂರಪ್ಪನವರನ್ನು ಬಿಜೆಪಿ ಹೈಕಮಾಂಡ್​ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿತ್ತು. ಇದರಿಂದ ಕೋಪ, ಅಸಮಾಧಾನಗೊಂಡಿದ್ದ ಬಿ.ಎಸ್​.ಯಡಿಯೂರಪ್ಪ 2012ರ ಡಿಸೆಂಬರ್​ 9ರಂದು ಹೊಸ ಪಕ್ಷ ಕೆಜೆಪಿಯನ್ನು ಕಟ್ಟಿದರು. ಬೆಂಗಳೂರಿನ ಶಾಂತಿನಗರದಲ್ಲಿ ಅದರ ಪ್ರಧಾನ ಕಚೇರಿಯಿತ್ತು. ಆದರೆ ಯಡಿಯೂರಪ್ಪನವರ ಈ ನಡೆಯಿಂದ 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಬಿತ್ತು. ಅಲ್ಲಿ ಬಿಜೆಪಿ -ಕೆಜೆಪಿ ಮುನಿಸಿನ ನಡುವೆ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಬಿಜೆಪಿ ಮತ್ತು ಜೆಡಿಎಸ್​ಗಳು ತಲಾ 40 ಸೀಟ್​​ ಗೆದ್ದಿದ್ದರೆ, ಕೆಜೆಪಿ 6 ಸೀಟ್ ಪಡೆದಿತ್ತು. ಹಾಗೇ ಕಾಂಗ್ರೆಸ್​ 122 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಕಡಿಮೆ ಸಾಧನೆಯಲ್ಲ

ಯಡಿಯೂರಪ್ಪನವರ ಕಿಚ್ಚು, ರಾಜಕೀಯ ನೈಪುಣ್ಯತೆಗೆ ಕೆಜೆಪಿ ಪಕ್ಷವೇ ಒಂದು ಉದಾಹರಣೆ ಎಂದರೂ ತಪ್ಪಿಲ್ಲ. ಸ್ಥಾಪನೆಯಾದ ಕೆಲವೇ ದಿನಗಳಲ್ಲಿ ಚುನಾವಣೆ ಎದುರಿಸಿದರೂ ಶೇ.10ರಷ್ಟು ಮತ ಪಡೆದು, ಆರು ಸೀಟುಗಳನ್ನು ಗೆದ್ದಿದ್ದು ಖಂಡಿತ ಕಡಿಮೆ ಸಾಧನೆಯಲ್ಲ. ಅದು ಯಡಿಯೂರಪ್ಪನವರಿಗೆ ಇರುವ ಜನಬೆಂಬಲವನ್ನು ತೋರಿಸುತ್ತದೆ. ಇನ್ನೊಂದೆಡೆ ಬಿಜೆಪಿ ಒಂದು ಪ್ರಾದೇಶಿಕ ಪಕ್ಷ ಜೆಡಿಎಸ್​ಗೆ ಸಮಾನವಾಗಿ ಸೀಟು ಗೆದ್ದಿದ್ದು ಆ ರಾಷ್ಟ್ರೀಯ ಪಕ್ಷಕ್ಕೆ ಎದುರಾದ ಮುಜುಗರ. ಅಲ್ಲಿಂದಲೇ ಬಿ.ಎಸ್​.ಯಡಿಯೂರಪ್ಪನವರನ್ನು ಮತ್ತೆ ಬಿಜೆಪಿಗೆ ಕರೆತರುವ ಪ್ರಯತ್ನ ಶುರುವಾಗಿ ಅಂತೂ 2014ರಲ್ಲಿ ಮತ್ತೆ ಕೆಜೆಪಿ ಬಿಜೆಪಿಯೊಂದಿಗೆ ಸಮ್ಮಿಳಿತಗೊಂಡಿತು. ಯಡಿಯೂರಪ್ಪನವರ ರಾಜಕೀಯ ಶಕ್ತಿ ಅರಿತ ಬಿಜೆಪಿ ಹೈಕಮಾಂಡ್​ ಈ ಬಾರಿ 75ವರ್ಷವಾದರೂ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿತು. ಅವರಿಗೆ ಒಂದೇ ಬಾರಿಗೆ ನಿರಾಸೆ ಮಾಡದೆ, ಸ್ವಲ್ಪ ಕಾಲ ಅಧಿಕಾರ ನಡೆಸಲಿ ಎಂದು ಬಿಟ್ಟಿಬಿಟ್ಟಿತು.

ಯಡಿಯೂರಪ್ಪ ಕಲಿತ ಪಾಠವೇನು?
ಕೆಜೆಪಿ ಕಟ್ಟಿದಾಕ್ಷಣ ಯಡಿಯೂರಪ್ಪನವರ ದಾರಿಯೂ ಸುಗಮವಾಗಿರಲಿಲ್ಲ. ಎಷ್ಟೆಂದರೂ ಅದು ಪ್ರಾದೇಶಿಕ ಪಕ್ಷವಾಗಿರುತ್ತದೆ. ಸ್ವಂತವಾಗಿ ಸರ್ಕಾರ ರಚನೆ ಮಾಡಲು ಸಾಧ್ಯವೂ ಇಲ್ಲ ಎಂಬುದು ರಾಜಕೀಯದಲ್ಲಿ ಚತುರರಾಗಿದ್ದ ಅವರಿಗೆ ತಿಳಿದಿತ್ತು. ಹಾಗೇ, 2013ರಲ್ಲಿ ಬಿಜೆಪಿ-ಕೆಜೆಪಿ ಜಗಳದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದ್ದೂ ಒಂದು ಪಾಠವೇ ಆಯಿತು. ಅದರೊಂದಿಗೆ ತಮ್ಮ ಮಕ್ಕಳ ರಾಜಕೀಯ ಭವಿಷ್ಯ ಚೆನ್ನಾಗಿ ಇರಬೇಕೆಂದರೆ ರಾಷ್ಟ್ರೀಯ ಪಕ್ಷದಲ್ಲೇ ಇರಬೇಕು ಎಂಬ ಸತ್ಯವನ್ನೂ ಅವರು ಅರಿತಂತೆ ಕಾಣುತ್ತದೆ. ಈಗಾಗಲೇ ಬಿ.ವೈ.ವಿಜಯೇಂದ್ರ ರಾಷ್ಟ್ರಮಟ್ಟದ ರಾಜಕಾರಣದಲ್ಲೂ ಸದ್ದು ಮಾಡುತ್ತಿದ್ದಾರೆ. ಒಂದು ಚಾಪು ಮೂಡಿಸಿಕೊಂಡಿದ್ದಾರೆ. ಈಗೇನಾದರೂ ತಾವು ಸ್ವಲ್ಪ ಎಡವಿದರೂ ಮಕ್ಕಳ ಭವಿಷ್ಯವೂ ಹಾಳಾಗುತ್ತದೆ ಎಂಬುದು ರಾಜಕಾರಣದಲ್ಲಿ ಪಳಗಿರುವ ಯಡಿಯೂರಪ್ಪನವರಿಗೂ ಅರ್ಥವಾಗದ ವಿಷಯವಲ್ಲ. ಹಾಗಾಗಿ ಈ ಬಾರಿ ಅವರು ಬಿಜೆಪಿ ತೊರೆದರೂ ಇನ್ನೊಂದು ಪಕ್ಷ ಕಟ್ಟುವ ಸಾಧ್ಯತೆ ತುಂಬ ಕಡಿಮೆ. ಇಲ್ಲೇ ಇದ್ದು, ತಮ್ಮ ಮಕ್ಕಳ ರಾಜಕೀಯ ಭವಿಷ್ಯ ರೂಪಿಸುವ ಯೋಜನೆಯೂ ಅವರಿಗೆ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಈಗ ಬಿಜೆಪಿ ಹೈಕಮಾಂಡ್​ ಸ್ಟ್ರಾಂಗ್​
2010ರಲ್ಲಿ ಬಿಜೆಪಿ ಹೈಕಮಾಂಡ್ ಅಷ್ಟೆಲ್ಲ ಬಲವಾಗಿರಲಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಪ್ರತಿಪಕ್ಷ ಬಿಜೆಪಿಯಲ್ಲಿ ಎಲ್.ಕೆ.ಆಡ್ವಾಣಿ, ಅರುಣ್​ ಜೇಟ್ಲಿಯಂಥ ನಾಯಕರಿದ್ದರೂ ರಾಷ್ಟ್ರ ಬಿಜೆಪಿ ಹಲವು ವಿಚಾರಗಳಲ್ಲಿ ದುರ್ಬಲವಾಗಿಯೇ ಇತ್ತು. ಆದರೆ ಈಗ ಹಾಗಿಲ್ಲ..ಪ್ರಧಾನಿ ಮೋದಿಯವರ ಮುಖ ನೋಡಿ ಕರ್ನಾಟಕದಲ್ಲಿ ಬಿಜೆಪಿಗೆ ಮತ ಹಾಕುವವರ ದಂಡೂ ದೊಡ್ಡದಿದೆ. ಅಮಿತ್​ ಶಾ, ಜೆ.ಪಿ.ನಡ್ಡಾರಂತಹ ದಿಗ್ಗಜರು ಪ್ರತಿ ರಾಜ್ಯ ಮಟ್ಟದ ಪಕ್ಷ ಸಂಘಟನೆ, ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ತುಂಬ ಆಳವಾಗಿ ಹಸ್ತಕ್ಷೇಪ ಮಾಡುತ್ತಾರೆ. ಈಗ ಹೈಕಮಾಂಡ್ ವಿರುದ್ಧ ನಿಲ್ಲುವುದೂ ತುಸು ಕಷ್ಟದ ಸಂಗತಿಯೇ ಆಗಿದೆ. ​

2019ರಲ್ಲಿ ಮುಖ್ಯಮಂತ್ರಿ ಸ್ಥಾನ
ಬಿ.ಎಸ್​.ಯಡಿಯೂರಪ್ಪನವರು 2019ರ ಜುಲೈನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದಾರೆ. ಹಿಂದೆ ಇದ್ದ ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಮುರಿದ ಬಳಿಕ ಬಿಜೆಪಿ ಅಧಿಕಾರ ಹಿಡಿಯಲು ಸುಗಮವಾಯಿತು. ಅಂದು ಮುಖ್ಯಮಂತ್ರಿ ಹುದ್ದೆಗೆ ಏರುವಾಗ ಯಡಿಯೂರಪ್ಪನವರಿಗೆ 76 ವರ್ಷ. ಬಿಜೆಪಿಯ ನೂತನ ನಿಯಮದ ಪ್ರಕಾರ 75 ವರ್ಷ ಮೇಲ್ಪಟ್ಟವರಿಗೆ ಪ್ರಮುಖ ಹುದ್ದೆಗಳನ್ನು ನೀಡುವುದಿಲ್ಲ. ಆದರೆ ನಾನು ಮುಖ್ಯಮಂತ್ರಿಯಾಗಲೇ ಬೇಕು ಎಂಬ ಆಸೆಯ ತುತ್ತತುದಿಯಲ್ಲಿದ್ದಾಗ ಅವರನ್ನು ಕೆಳಗಿಳಿಸಿದರೆ ಮತ್ತೊಮ್ಮೆ ಇತಿಹಾಸ ಮರುಕಳಿಸಬಹುದು ಎಂಬ ಸಹಜ ಆತಂಕ ಬಲಿಷ್ಠ ಹೈಕಮಾಂಡ್​ಗೂ ಇದ್ದಿದ್ದರಿಂದಲೇ ಆಗ ಮೌನ ವಹಿಸಿತು. ಇದೀಗ ಎರಡು ವರ್ಷ ಬಿಎಸ್​ವೈ ಆಡಳಿತ ನಡೆಸಿದ್ದಾರೆ. ಅವರಿಗೂ ವಯಸ್ಸಾಗಿದೆ..ಪಕ್ಷದ ಬೇರೆಯವರಿಗೂ ಅವಕಾಶ ನೀಡಬೇಕು ಎಂಬಿತ್ಯಾದಿ ಕಾರಣಕ್ಕೆ ಬಹಳ ಸೂಕ್ಷ್ಮವಾಗಿಯೇ ಬಿಜೆಪಿ ನಾಯಕರು ಕರ್ನಾಟಕ ಮುಖ್ಯಮಂತ್ರಿ ಬದಲಾವಣೆಗೆ ನಾಂದಿ ಹಾಡಿದ್ದಾರೆ.

LEAVE A REPLY

Please enter your comment!
Please enter your name here