ಎಸ್ಸೆಂ.ಕೃಷ್ಣ ಅವರನ್ನು ಬದಿಗೆ ಸರಿಸಿ ಮೊಯ್ಲಿ ಮುಖ್ಯಮಂತ್ರಿಯಾದ ಕತೆ

0
203

ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸಾರೆಕೊಪ್ಪ ಬಂಗಾರಪ್ಪ ರಾಜೀನಾಮೆ ಸಲ್ಲಿಸಿದ್ದರು.

ಪ್ರಧಾನಿ ನರಸಿಂಹರಾಯರ ಆಕ್ರೋಶಕ್ಕೆ ಗುರಿಯಾಗಿ ಅವರು ರಾಜೀನಾಮೆ ನೀಡಿದ ಮೇಲೆ ಆ ಜಾಗಕ್ಕೆ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ಬಂದು ಕೂರುವುದು ಬಹುತೇಕ ನಿಕ್ಕಿಯಾಗಿತ್ತು.

ಅವತ್ತು ಶಾಸಕಾಂಗ ಪಕ್ಷದಲ್ಲಿ ಕೃಷ್ಣ ಅವರಿಗಿದ್ದ ಬಲ,ಬೇರೆ ನಾಯಕರಿಗಿಂತ ಹೆಚ್ಚಾಗಿದ್ದುದರಿಂದ ಇನ್ನೇನು,ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಮಾತು ಹೈಕಮಾಂಡ್ ಬೌಂಡರಿಯಿಂದಲೇ ಕೇಳಿಬರುತ್ತಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ಪಿ.ವಿ.ನರಸಿಂಹರಾಯರಿಗೆ ಆಪ್ತರಾಗಿದ್ದ ಎಸ್.ಎಂ.ಕೃಷ್ಣ ಅವರಿಗೆ ತಾವೇ ಮುಂದಿನ ಮುಖ್ಯಮಂತ್ರಿ ಎಂಬ ವಿಷಯದಲ್ಲಿ ಯಾವುದೇ ಅನುಮಾನವಿರಲಿಲ್ಲ.

ಹೀಗಾಗಿಯೇ ಬಂಗಾರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ತಾವೇ ನಿಯೋಜಿತ ಮುಖ್ಯಮಂತ್ರಿ ಎಂಬ ನಂಬಿಕೆಯಿಂದ ಕೆಲ ಪೋಲೀಸ್ ಅಧಿಕಾರಿಗಳನ್ನು ಕರೆದುಕೊಂಡು ಮಲೆಮಹದೇಶ್ವರ ಬೆಟ್ಟಕ್ಕೆಹೋಗಿ ಸ್ವಾಮಿಯ ದರ್ಶನ ಮಾಡಿಕೊಂಡು ಬಂದಿದ್ದರು ಕೃಷ್ಣ.

ಕುತೂಹಲದ ಸಂಗತಿ ಎಂದರೆ ಬಂಗಾರಪ್ಪ ಅವರನ್ನು ಪದಚ್ಯುತಗೊಳಿಸಬೇಕು ಎಂಬ ಕೂಗು ಶುರುವಾದ ಸಂದರ್ಭದಲ್ಲಿ ಕೃಷ್ಣ ಎಷ್ಟು ಜಾಣ್ಮೆಯಿಂದ ವರ್ತಿಸಿದ್ದರೆಂದರೆ,ಬಂಗಾರಪ್ಪ ಅವರ ವಿರುದ್ಧದ ಬಂಡಾಯಕ್ಕೆ ಸಪೋರ್ಟು ಮಾಡಿದ್ದರೂ ಖುಲ್ಲಂ ಖುಲ್ಲಾ ಬೀದಿಗೆ ಬಂದು ನಿಂತಿರಲಿಲ್ಲ.

ಕಾರಣ?ಬಂಗಾರಪ್ಪ ಪದಚ್ಯುತರಾದರೆ ತಮಗೆ ಮುಖ್ಯಮಂತ್ರಿ ಹುದ್ದೆ ಒಲಿಯುತ್ತದೆ ಎಂಬ ನಂಬಿಕೆ ಅವರಿಗಿತ್ತು.ಅದೇ ರೀತಿ ಬಂಗಾರಪ್ಪ ವಿರುದ್ಧದ ಬೀದಿ ಹೋರಾಟಕ್ಕೆ ಸಪೋರ್ಟು ಮಾಡದೆ,ರಹಸ್ಯ ಹೋರಾಟಗಳಿಗೆ ಬೆಂಬಲ ನೀಡುತ್ತಾ ಹೋಗಬೇಕು ಎಂಬ ಎಚ್ಚರಿಕೆಯೂ ಇತ್ತು.

ಅಂದ ಹಾಗೆ ಬಂಗಾರಪ್ಪ ಅವರ ವಿರುದ್ಧದ ಬಂಡಾಯಕ್ಕೆ ತುಂಬ ದೊಡ್ಡ ಮಟ್ಟದ ಕಾರಣಗಳೇನೂ ಇರಲಿಲ್ಲ.ನೀವು ಅಧಿಕಾರಕ್ಕೆ ಬರಲು ಬೆಂಬಲ ನೀಡಿದ ಗುಂಪಿನವರಿಗೆ ಮಂತ್ರಿ ಸ್ಥಾನ ನೀಡಿಲ್ಲ ಎಂದು ರಾಜ್ಯ ಕಾಂಗ್ರೆಸ್ ನ ಒಂದು ಗುಂಪು ಮುಖ್ಯಮಂತ್ರಿ ಬಂಗಾರಪ್ಪ ಅವರ ಮನೆಗೆ ಹೋಗಿ ಆಕ್ಷೇಪ ಮಾಡಿತು.

ಅವತ್ತು ಹೈಗ್ರೌಂಡ್ಸ್ ನ ಕಾವೇರಿ ಬಂಗಲೆಯಲ್ಲಿ ವಾಸವಿದ್ದ ಬಂಗಾರಪ್ಪ ಅವರು ಈ ಶಾಸಕರೊಂದಿಗೆ ಸಮಾಧಾನದಿಂದ ಮಾತನಾಡಿದ್ದರೆ ಮುಗಿದು ಹೋಗುತ್ತಿತ್ತು.ಆದರೆ ಅವತ್ತು ತಮ್ಮ ಬಳಿ ಬಂದು ನಿಂತ ಕೆ.ಎನ್.ನಾಗೇಗೌಡ,ಹೆಚ್.ವಿಶ್ವನಾಥ್,ಪೆರಿಕಲ್ ಮಲ್ಲಪ್ಪ ಅವರಂತವರಿದ್ದ ತಂಡದ ಆಕ್ಷೇಪದಿಂದ ಬಂಗಾರಪ್ಪ ಕೆರಳಿ ಬಿಟ್ಟರು.

ರೀ,ನಾನು ಸಿಎಂ ಆಗಲು ನೀವು ಸಪೋರ್ಟು ಮಾಡಿದಿರಿ ಅಂತ ನಿಮ್ಮನ್ನೆಲ್ಲ ಮಿನಿಸ್ಟರ್ಸ್ ಮಾಡಕ್ಕಾಗುತ್ತೇನ್ರೀ?ಸಿಕ್ಕ,ಸಿಕ್ಕಂತೆ ಎಲ್ಲರನ್ನೂ ಮಂತ್ರಿ ಮಾಡುತ್ತಾ ಹೋದರೆ ಸರ್ಕಾರದ ಗತಿ ಏನಾಗಬೇಕು?ಎಂದವರು ಅಬ್ಬರಿಸಿದಾಗ ಎದುರಿಗಿದ್ದವರಿಗೆ ಸಿಟ್ಟು ಬಂತು.

ಹಾಗಂತಲೇ ಅವರು ತಮ್ಮ ವಾದವನ್ನು ಮಂಡಿಸತೊಡಗಿದಾಗ ಬಂಗಾರಪ್ಪ ತಾಳ್ಮೆ ಕಳೆದುಕೊಂಡರು.ಮನೆಯಲ್ಲಿದ್ದ ಗನ್ ಮ್ಯಾನ್ ಗಳನ್ನು ಕರೆದು ಎಲ್ಲರನ್ನೂ ಬಲವಂತವಾಗಿ ಹೊರಗೆ ಕಳಿಸಿ ಬಾಗಿಲು ಹಾಕಿಸಿಬಿಟ್ಟರು.

ಯಾವಾಗ ಈ ಬೆಳವಣಿಗೆ ನಡೆಯಿತೋ?ಆಗ ಕ್ರುದ್ಧಗೊಂಡ ಶಾಸಕರ ಪಡೆ ಬಂಗಾರಪ್ಪ ಅವರ ವಿರುದ್ಧ ತಿರುಗಿ ಬೀಳಲು ನಿರ್ಧರಿಸಿತು.ಈ ಸಂದರ್ಭದಲ್ಲಿ ಭಿನ್ನಮತೀಯ ಶಾಸಕರ ಚಟುವಟಿಕೆಗಳಿಗೆ ಅಡ್ಡೆಯಾಗಿದ್ದು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿದ್ದ ಜಗದೀಶ್ ಎಂಬುವವರ ತೋಟದ ಮನೆ.

ಶುರು-ಶುರುವಿನಲ್ಲಿ ತುಂಬ ಶಾಸಕರೇನೂ ಬಂಡಾಯ ಸಭೆಗಳಿಗೆ ಬರುತ್ತಿರಲಿಲ್ಲ.ಆದರೆ ಕಡ್ಡಿಯನ್ನು ಗುಡ್ಡ ಮಾಡುವ ವಿಷಯದಲ್ಲಿ ಚತುರರಾಗಿದ್ದ ಹೆಚ್.ವಿಶ್ವನಾಥ್ ಹಾಗೂ ಕೆ.ಎನ್.ನಾಗೇಗೌಡ ಅದ್ಹೇಗೋ ಮಾಡಿ,ಇಂಟಲಿಜೆನ್ಸ್ ಅಧಿಕಾರಿಗಳು ಈ ಸಭೆ ನಡೆಯುವ ಜಾಗಕ್ಕೆ ಬರುವಂತೆ ಮಾಡುತ್ತಿದ್ದರು.

ಅಷ್ಟೇ ಅಲ್ಲ,ಒಳಗೆ ನಾಲ್ಕು ಶಾಸಕರಿರಲಿ,ಐದು ಶಾಸಕರಿರಲಿ,ತಾವಿಬ್ಬರೂ ಮಾತ್ರ ಸಭೆ ನಡೆಯುತ್ತಿದ್ದ ತೋಟದ ಮನೆಯಿಂದ ಹೊರಬಂದು,ಇಂದಿನ ಸಭೆಯಲ್ಲಿ ನಲವತ್ತು ಶಾಸಕರಿದ್ದರು,ಐವತ್ತು ಶಾಸಕರಿದ್ದರು ಎಂಬ ಮಾಹಿತಿಯನ್ನು ಅವರ ಕಿವಿಗೆ ತಲುಪಿಸುತ್ತಿದ್ದರು.

ಹೀಗೆ ಇಂಟಲಿಜೆನ್ಸ್ ಅಧಿಕಾರಿಗಳ ಕಿವಿಗೆ ಈ ಸುದ್ಧಿ ಹಾಕುವಾಗ:ನಾವು ಹೇಳಿದೆವು ಅಂತ ಯಾರಿಗೂ ಹೇಳಬೇಡಿ,ಕೊನೆಗೆ ಒಳಗಿದ್ದವರು ನಮ್ಮ ಮೇಲೆ ತಪ್ಪು ತಿಳಿದುಕೊಳ್ಳುತ್ತಾರೆ ಎಂದು ಮುಖದಲ್ಲಿ ಆತಂಕ ಮೂಡಿಸಿಕೊಳ್ಳುತ್ತಿದ್ದರು.

ಇಂಟಲಿಜೆನ್ಸ್ ಅಧಿಕಾರಿಗಳಿಗೂ ಪತ್ರಿಕೆಯವರಿಗೂ ಒಂದು ಅವಿನಾಭಾವ ಸಂಬಂಧ ಇರುತ್ತದೆ.ಸುದ್ದಿಗಾಗಿ ಪರಸ್ಪರರನ್ನು ಅವಲಂಬಿಸುವುದು ಇದಕ್ಕೆ ಮುಖ್ಯ ಕಾರಣ,ಸರಿ,ಭಿನ್ನಮತೀಯ ಸಭೆಗಳ ವಿವರವನ್ನು ಇಂಟಲಿಜೆನ್ಸ್ ಅಧಿಕಾರಿಗಳು ಗುಟ್ಟಾಗಿ ಹಲ ಪತ್ರಿಕೆಗಳಲ್ಲಿರುವ ಮುಖ್ಯವರದಿಗಾರರಿಗೋ,ರಾಜಕೀಯ ವರದಿಗಾರರಿಗೋ ತಲುಪಿಸುತ್ತಿದ್ದರು.

ಮರುದಿನ ಅದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು.ಬಂಗಾರಪ್ಪ ಅವರ ವಿರುದ್ಧ ನಲವತ್ತು,ಐವತ್ತು ಶಾಸಕರು ಸಭೆ ಸೇರುವುದೆಂದರೆ ತಮಾಷೆಯ ಮಾತೇ?ಹೀಗಾಗಿ ಕೆಲವರೇ ಆರಂಭಿಸಿದ ಭಿನ್ನಮತೀಯ ಚಟುವಟಿಕೆಗಳಿಗೆ ಪ್ರಚಾರದ ಬಲ ಸಿಗತೊಡಗಿತು.

ಯಾವಾಗ ಇಂತಹ ಸಭೆಗಳಿಗೆ ಹದಿನೈದಕ್ಕೂ ಹೆಚ್ಚು ಶಾಸಕರು ಸೇರತೊಡಗಿದರೋ?ಆಗ ವಿಶ್ವನಾಥ್,ನಾಗೇಗೌಡ ಅವರೆಲ್ಲ ಈ ಚಟುವಟಿಕೆಯನ್ನು ದಿಲ್ಲಿಗೆ ವಿಸ್ತರಿಸಿದರು.ಒಂದು ಸಲ ಅಲ್ಲಿನ ಕರ್ನಾಟಕ ಭವನದಲ್ಲಿ ಸಭೆ ನಡೆಸಿ ದಿಲ್ಲಿಯ ಕಾಲ್ ರಿಡ್ಜಸ್ ಹೋಟೆಲಿನಲ್ಲಿ ತಂಗಿದ್ದ ಒಬ್ಬ ನಾಯಕರನ್ನು ಭೇಟಿ ಮಾಡಿದರು.

ಅವರ ಹೆಸರು ಎಸ್.ಎಂ.ಕೃಷ್ಣ.

ಅವತ್ತು ವಿಧಾನಸಭೆಯ ಸ್ಪೀಕರ್ ಆಗಿದ್ದ ಎಸ್.ಎಂ.ಕೃಷ್ಣ ಅವರಿಗೆ ತಾವು ಮುಖ್ಯಮಂತ್ರಿಯಾಗಬೇಕು ಎಂಬ ಆಸೆಯಿತ್ತು.ಇದನ್ನು ಬಲ್ಲ ಭಿನ್ನಮತೀಯ ಶಾಸಕರು ಕೃಷ್ಣ ಅವರು ತಂಗಿದ್ದ ಹೋಟೆಲ್ಲಿಗ ಹೋಗಿ,ಬಂಡಾಯದ ನೇತೃತ್ವವನ್ನು ನೀವೇ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಅವರ ಮಾತು ಕೃಷ್ಣ ಅವರಿಗಿದ್ದ ತಾಖತ್ತಿನ ಸಂಕೇತವೂ ಆಗಿತ್ತು.ಯಾವುದೇ ಬಂಡಾಯದ ನೇತೃತ್ವವನ್ನು ಪರ್ಯಾಯ ನಾಯಕ ಎನಿಸಿಕೊಳ್ಳಬಲ್ಲವರು ವಹಿಸಿಕೊಂಡರೆ ಅದಕ್ಕೆ ಶಕ್ತಿ.ಅದೇ ಲೆಕ್ಕಾಚಾರದೊಂದಿಗೆ ಈ ಶಾಸಕರ ಪಡೆ ಹೋಗಿ ಮನವಿ ಮಾಡಿಕೊಂಡಿತು.

ಆ ಕ್ಷಣದಲ್ಲಿ ಬಂಡಾಯದ ನೇತೃತ್ವ ವಹಿಸಿಕೊಳ್ಳಲು ಕೃಷ್ಣ ಒಪ್ಪಿದರಾದರೂ ದಿಲ್ಲಿಯಿಂದ ಬೆಂಗಳೂರಿಗೆ ಬಂದ ಕೂಡಲೇ ಹಿಂದೆ ಸರಿದುಬಿಟ್ಟರು.ತಮಗೆ ಮುಂದಿನ ಮುಖ್ಯಮಂತ್ರಿಯಾಗಲು ಅಗತ್ಯದ ಶಾಸಕ ಬಲ ಇರುವಾಗ ನಾನೇಕೆ ಬಹಿರಂಗವಾಗಿ ಬಂಡಾಯವೇಳಲಿ ಎಂಬುದು ಅವರ ಲೆಕ್ಕಾಚಾರವಾಗಿತ್ತು.

ಆದರೆ ಕೃಷ್ಣ ಹಿಂದೆ ಸರಿದರೂ ಬಂಡಾಯ ಶಾಸಕರಿಗೆ ಅವರ ಬೆಂಬಲ ಮುಂದುವರಿಯಿತು.ಅಷ್ಟೇ ಅಲ್ಲ,ಈ ಸಂದರ್ಭದಲ್ಲಿ ಬಂಡಾಯ ಶಾಸಕರ ಜತೆ ಹಿರಿಯ ನಾಯಕ ವೀರಪ್ಪ ಮೊಯ್ಲಿ ಸೇರಿಕೊಂಡರು,ರಾಜಶೇಖರಮೂರ್ತಿ,ಕೆ.ಹೆಚ್.ರಂಗನಾಥ್,ಹಾರ್ನಹಳ್ಳಿ ರಾಮಸ್ವಾಮಿ ಸೇರಿದಂತೆ ಘಟಾನುಘಟಿ ನಾಯಕರು ಸಾಥ್ ಕೊಡುತ್ತಾ ಬಂಗಾರಪ್ಪ ವಿರುದ್ಧದ ಭಿನ್ನಮತ ತಾರಕಕ್ಕೇರುವಂತೆ ನೋಡಿಕೊಂಡರು.

ಮುಂದೆ ಈ ಭಿನ್ನಮತೀಯ ಶಾಶಕರಿಗೆ ಬಂಗಾರಪ್ಪ ವಿರುದ್ಧ ಆರೋಪ ಮಾಡಲು ಹಲವು ವಿಷಯಗಳು ಸಿಕ್ಕವು.ಕ್ಲಾಸಿಕ್ ಕಂಪ್ಯೂಟರ್ ಹಗರಣ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಭಿನ್ನಮತೀಯರು ನಡೆಸಿದ ಧಾಳಿ ಫಲ ನೀಡಿತು.

ಕೊನೆಗೆ ಒಂದು ಮಾಧ್ಯಮ ಸಂದರ್ಶನದ ಮೂಲಕ ಬಂಗಾರಪ್ಪ ಅವರ ವಿರುದ್ಧ ಪ್ರಧಾನಿ ಪಿ.ವಿ.ನರಸಿಂಹರಾಯರು ಸಿಡಿದು ಬೀಳುವುದರೊಂದಿಗೆ ಆಟಕ್ಕೆ ತೆರೆ ಬಿತ್ತು.ಬಂಗಾರಪ್ಪ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದರು.

ಇದಾದ ನಂತರ ತಾವೇ ಸಿಎಂ ಎಂಬ ಲೆಕ್ಕಾಚಾರಕ್ಕೆ ಬಂದ ಕೃಷ್ಣ ಅವರಿಗೆ ದಿಲ್ಲಿಯಿಂದ ಬರುತ್ತಿದ್ದ ವರ್ತಮಾನಗಳೂ ಪಾಸಿಟಿವ್ ಆಗಿದ್ದವು.ಹೀಗಾಗಿ ಶಾಸಕಾಂಗ ಸಭೆಯ ಮುಂದಿನ ನಾಯಕ ಯಾರು?ಎಂಬುದನ್ನು ನಿರ್ಧರಿಸಲು ಸಭೆ ಕರೆದಾಗ ಕೃಷ್ಣ ಖುಷಿ-ಖುಷಿಯಾಗಿದ್ದರು.

ಅಷ್ಟೇ ಅಲ್ಲ,ಮಂಡ್ಯ,ಮೈಸೂರು ಭಾಗದಿಂದ ತಮ್ಮ ಅಸಂಖ್ಯಾತ ಬೆಂಬಲಿಗರು ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದ ವಿಧಾನಸೌಧದ ಸುತ್ತ ಬಂದು ನಿಲ್ಲುವಂತೆ ನೋಡಿಕೊಂಡರು.

ಸರಿ,ಮುಂದಿನ ಶಾಸಕಾಂಗ ನಾಯಕನನ್ನು ಆರಿಸಲು ಕರೆದಿದ್ದ ಸಭೆ ಶುರುವಾಯಿತು.ಈ ಸಭೆಗೆ ದಿಲ್ಲಿಯಿಂದ ಹೈಕಮಾಂಡ್ ಸಂದೇಶವನ್ನು ಹೊತ್ತ ಲಕೋಟೆಯೊಂದಿಗೆ ಹೈಕಮಾಂಡ್ ನಾಯಕ ನವಲ್ ಕಿಶೋರ್ ಶರ್ಮಾ ಬಂದಿದ್ದರು.

ರಾಜಸ್ತಾನದ ಹಿರಿಯ ನಾಯಕರಾಗಿದ್ದ ನವಲ್ ಕಿಶೋರ್ ಶರ್ಮಾ ಅವರು ಪ್ರಧಾನಿ ನರಸಿಂಹರಾಯರ ಆಪ್ತರು.ಹೀಗಾಗಿ ಶಾಸಕಾಂಗ ಸಭೆಯಲ್ಲಿ ಅವರು ಮಾತು ಆರಂಭಿಸಿದಾಗ ಎಲ್ಲರೂ ಮೌನವಾಗಿ ಕೇಳತೊಡಗಿದರು.

ಮಾತು ಆರಂಭಿಸಿದ ನವಲ್ ಕಿಶೋರ್ ಶರ್ಮಾ,ಕಾಂಗ್ರೆಸ್ ಪಕ್ಷ ಒಂದು ತತ್ವನಿಷ್ಟ ಪಕ್ಷ,ನಾಯಕನ ಆಯ್ಕೆ ವಿಷಯದಲ್ಲಿ ಯಾವ ಗೊಂದಲಕ್ಕೂ ಆಸ್ಪದ ನೀಡದಂತೆ ಹೆಜ್ಜೆ ಇಡುವ ಪಕ್ಷ.ಇಲ್ಲಿ ಹೈಕಮಾಂಡ್ ಸೂಚನೆಯನ್ನು ಯಾರೂ ವಿರೋಧಿಸುವುದಿಲ್ಲ ಎಂದಾಗ ಸಭೆಯಲ್ಲಿದ್ದವರೆಲ್ಲ ಹೌದು,ಹೌದು ಎಂದರು.

ಈ ನಂಬಿಕೆಯೊಂದಿಗೇ ಹೈಕಮಾಂಡ್ ಮುಂದಿನ ನಾಯಕ ಯಾರಾಗಬೇಕು?ಅಂತ ಸಂದೇಶ ಕಳಿಸಿದೆ ಎಂದು ತಮ್ಮ ಜೇಬಿನಿಂದ ಲಕೋಟೆ ಹೊರತೆಗೆದ ನವಲ್ ಕಿಶೋರ್ ಶರ್ಮಾ,ನಿಮ್ಮೆಲ್ಲರ ಸಹಮತವಿದ್ದರೆ ಈ ಲಕೋಟೆಯನ್ನು ತೆರೆದು ಹೆಸರು ಓದುತ್ತೇನೆ.ಯಾರದಾದರೂ ತಕರಾರು ಇದ್ದರೆ ಈಗಲೇ ಹೇಳಿ ಎಂದರು.

ಇನ್ನೇನು ತಾವು ಮುಖ್ಯಮಂತ್ರಿಯಾಗುವ ಘಳಿಗೆ ಹತ್ತಿರ ಬಂತು ಎಂದು ಖುಷಿಯಾದ ಕೃಷ್ಣ ಅವರೂ ಸೇರಿದಂತೆ ಶಾಸಕಾಂಗ ಪಕ್ಷದ ಸಭೆಯಲ್ಲಿದ್ದವರೆಲ್ಲ,ಲಕೋಟೆ ತೆರೆದು ಹೈಕಮಾಂಡ್ ಸಂದೇಶವೇನು ಅಂತ ಹೇಳಿ ಅಂತ ಒಮ್ಮತದಿಂದ ಕೂಗಿದರು.

ಎಲ್ಲರೂ ಹೀಗೆ ಸಹಮತ ವ್ಯಕ್ತಪಡಿಸಿದ್ದೇ ತಡ,ಮುಖದಲ್ಲಿ ಸಂತೃಪ್ತಿಯ ಭಾವ ತುಳುಕಿಸಿದ ನವಲ್ ಕಿಶೋರ್ ಶರ್ಮಾ ಲಕೋಟೆ ತೆರೆದು ಓದತೊಡಗಿದರು,ಶೋಷಿತ ವರ್ಗಗಳಿಗೆ ಬ ಲ ತುಂಬುತ್ತಾ ಬಂದ ಕಾಂಗ್ರೆಸ್ ಪಕ್ಷ ತನ್ನ ನೀತಿ,ಸಿದ್ಧಾಂತಕ್ಕೆ ಪೂರಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಎಂ.ವೀರಪ್ಪ ಮೊಯ್ಲಿ ಅವರನ್ನು ಶಾಸಕಾಂಗ ನಾಯಕನನ್ನಾಗಿ ಆಯ್ಕೆ ಮಾಡಿದೆ ಎಂದು ಘೋಷಿಸಿಬಿಟ್ಟರು.

ಯಾವಾಗ ಅವರು ವೀರಪ್ಪ ಮೊಯ್ಲಿ ಅವರ ಹೆಸರನ್ನು ಪ್ರಕಟಿಸಿದರೋ?ಆಗ ಕೃಷ್ಣ ಮತ್ತವರ ಬೆಂಬಲಿಗರ ಬಾಯಿ ಕಟ್ಟಿ ಹೋಯಿತು.

ಅಂದ ಹಾಗೆ ಕೃಷ್ಣ ಅವರ ಜಾಗದಲ್ಲಿ ವೀರಪ್ಪ ಮೊಯ್ಲಿ ಅವರ ಹೆಸರು ಬರಲು ಒಂದು ಕಾರಣವಿತ್ತು.ಅದೆಂದರೆ,ವೀರಪ್ಪ ಮೊಯ್ಲಿ ಅವರ ಆಪ್ತರಾಗಿದ್ದ ಕೇರಳದ ಕೆ.ಕರುಣಾಕರನ್ ಅವರು ತಮಿಳ್ನಾಡಿನ ಪ್ರಮುಖ ನಾಯಕಿ ಮರಗತಂ ಚಂದ್ರಶೇಖರ್ ಅವರ ಮೂಲಕ ಪ್ರಧಾನಿ ನರಸಿಂಹರಾಯರ ಕಿವಿಗೆ ಒಂದು ಸೂತ್ರ ಬೀಳುವಂತೆ ನೋಡಿಕೊಂಡಿದ್ದರು.

ಹಿಂದುಳಿದ ವರ್ಗದ ನಾಯಕ ಬಂಗಾರಪ್ಪ ಅವರ ಜಾಗಕ್ಕೆ ಅದೇ ವರ್ಗಕ್ಕೆ ಸೇರಿದ ವೀರಪ್ಪ ಮೊಯ್ಲಿ ಅವರನ್ನು ನೇಮಕ ಮಾಡಿದರೆ ಕರ್ನಾಟಕ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಲ್ಲುತ್ತದೆ ಎಂಬುದು ಈ ಸೂತ್ರ.

ಯಾವಾಗ ನೆಹರೂ,ಲಾಲ್ ಬಹಾದ್ದೂರ್ ಶಾಸ್ತ್ರಿ,ಇಂದಿರಾಗಾಂಧಿ,ರಾಜೀವ್ ಗಾಂಧಿ ಅವರಿಗೆಲ್ಲ ಅತ್ಯಾಪ್ತರಾಗಿದ್ದ ಮರಗತಂ ಚಂದ್ರಶೇಖರ್ ತಮ್ಮ ಬಳಿ ಮಾತುಕತೆ ನಡೆಸಿ,ಈ ಸೂತ್ರವನ್ನು ವಿವರಿಸಿದರೋ?ಆಗ ನರಸಿಂಹರಾವ್ ಬೇರೆ ಯೋಚನೆ ಮಾಡದೆ ವೀರಪ್ಪ ಮೊಯ್ಲಿ ಹೆಸರಿಗೆ ಗ್ರೀನ್ ಸಿಗ್ನಲ್ ನೀಡಿದರು.

ಪರಿಣಾಮ?ಇನ್ನೇನು ತಾವೇ ಮುಂದಿನ ಮುಖ್ಯಮಂತ್ರಿ ಎಂದು ಒಳಗೊಳಗೇ ಖುಷಿಪಡುತ್ತಿದ್ದ ಎಸ್.ಎಂ.ಕೃಷ್ಣ ತನ್ನಿಂತಾನೇ ಸೈಡಿಗೆ ಸರಿದು ಹೋದರು.

ಆರ್.ಟಿ.ವಿಠ್ಠಲಮೂರ್ತಿ
ತಾರಾಪ್ರಭ ಮೀಡಿಯಾ ಹೌಸ್

LEAVE A REPLY

Please enter your comment!
Please enter your name here