ಆಪರೇಷನ್ ತಾವರೆಯ ರೋಚಕ ಕಥನ ‘ದಿ ಬಾಂಬೆ ಡೇಸ್’

0
130

ಈ ಕತೆಯ ನಾಯಕ ರಾಮನಾಥ.

ರಾಜಕಾರಣಿ ರಾಮನಾಥ್ ಅವರು ರಾಜ್ಯದ ರೈತ ಪಕ್ಷದ ನಾಯಕರಾಗಿರುತ್ತಾರೆ.ಸನ್ನಿವೇಶ ಆ ಪಕ್ಷದ ಕೈ ಹಿಡಿದು ಷಣ್ಮುಖಸ್ವಾಮಿ ಅವರ ನೇತೃತ್ವದಲ್ಲಿ ಸರ್ಕಾರವೂ ರಚನೆಯಾಗಿರುತ್ತದೆ.
ಹಾಗೆ ನೋಡಿದರೆ ರಾಮನಾಥ್ ಅವರು ರೈತ ಪಕ್ಷಕ್ಕೆ ಬಂದಿದ್ದರ ಹಿಂದೆ ಒಂದು ಕತೆಯಿದೆ.ಮುಂಚೆ ಕೈ ಪಕ್ಷದಲ್ಲಿದ್ದ ಅವರು ಮೂರು ದಶಕಗಳ ಕಾಲ ಆ ಪಕ್ಷದ ತತ್ವ,ಸಿದ್ದಾಂತವನ್ನು ನಂಬಿ ಕೆಲಸ ಮಾಡಿರುತ್ತಾರೆ.
ಅಲ್ಲಿರುವಾಗಲೇ ಒಂದು ಸಲ ರಾಮನಾಥರಿಗೆ ಸ್ವಕುಲದವರಾದ, ಜನನಾಯಕ ನಿದ್ದೆರಾಮಯ್ಯ ಅವರ ಭೇಟಿಯಾಗುತ್ತದೆ.ಈ ಭೇಟಿಯ ಸಂದರ್ಭದಲ್ಲಿ ನಿದ್ದೆರಾಮಯ್ಯ ಅವರು ತಮ್ಮ ರಾಜಕೀಯ ಸಂದಿಗ್ಧಗಳ ಕುರಿತು ಕಣ್ಣೀರಿಟ್ಟು:ನಾನು ರಾಜಕೀಯದಿಂದ ನಿವೃತ್ತಿಯಾಗಿ ಹೊಲ-ಮನೆ ನೋಡಿಕೊಂಡಿರುತ್ತೇನೆ ಎಂದು ವೈರಾಗ್ಯದ ಮಾತುಗಳನ್ನಾಡುತ್ತಾರೆ.
ಅವರ ಮಾತು ಕೇಳಿ ಸಂಕಟಪಡುವ ರಾಮನಾಥ ಶತಪ್ರಯತ್ನ ಮಾಡಿ ತಾವಿರುವ ಕೈ ಪಕ್ಷಕ್ಕೆ ಸೇರಲು ಅವರಿಗೆ ನೆರವು ನೀಡುತ್ತಾರೆ.ಮುಂದೆ ಕೈ ಪಕ್ಷ ಅಧಿಕಾರಕ್ಕೆ ಬಂದು ನಿದ್ದೆರಾಮಯ್ಯ ಮುಖ್ಯಮಂತ್ರಿಯೂ ಆಗುತ್ತಾರೆ.
ಆದರೆ ಅಧಿಕಾರ ಬಂದ ಕೂಡಲೇ ಹೊಗಳುವವರ ಗುಂಪಿನಲ್ಲಿ ಸೇರಿ ಹೋಗುವ ನಿದ್ದೆರಾಮಯ್ಯ ತಮ್ಮ ಕೈ ಹಿಡಿದಿದ್ದ ರಾಮನಾಥರನ್ನೇ ಅಸಹಾಯಕರನ್ನಾಗಿಸುತ್ತಾರೆ.ನೋಡ,ನೋಡುತ್ತಿದ್ದಂತೆಯೇ ರಾಮನಾಥರ ಜತೆಗಿದ್ದವರೆಲ್ಲ ನಿದ್ದೆರಾಮಯ್ಯ ಅವರ ಕಡೆ ಸೇರಿಬಿಟ್ಟಿರುತ್ತಾರೆ.
ಪರಿಣಾಮ?ರಾಮನಾಥರಿಗೆ ಸಂಕಟವಾಗುತ್ತದೆ.ಹೀಗಾಗಿ ಕೈ ಪಕ್ಷದಲ್ಲಿ ಅವರಿಗೆ ಇರಲಾಗದ ಸ್ಥಿತಿ.ಚುನಾವಣೆಯಲ್ಲಿ ಕೈ ಪಕ್ಷದ ಟಿಕೆಟ್ ತಮಗೆ ದಕ್ಕಲು ನಿದ್ದೆರಾಮಯ್ಯ ಬಿಡುವುದಿಲ್ಲ ಎಂಬುದು ರಾಮನಾಥರಿಗೆ ಖಚಿತವಾಗುತ್ತದೆ.
ಇಂತಹ ದಿನಗಳಲ್ಲೇ ದೇಶದ ಪ್ರಧಾನಿಯಾದ ದೊಡ್ಡಗೌಡರ ದೃಷ್ಟಿ ರಾಮನಾಥರ ಮೇಲೆ ಬೀಳುತ್ತದೆ.ವಸ್ತುಸ್ಥಿತಿ ಎಂದರೆ ನಿದ್ದೆರಾಮಯ್ಯ ಅವರು ದೊಡ್ಡವರ ಹಳೆ ಶಿಷ್ಯ.ರಾಜಕೀಯ ಜಂಜಾಟದ ನಡುವೆ ತಮ್ಮಿಂದ ದೂರವಾದ ಈ ಶಿಷ್ಯನನ್ನು ಮಟ್ಟ ಹಾಕುವುದು ದೊಡ್ಡವರ ಲೆಕ್ಕಾಚಾರ.
ಎಷ್ಟೇ ಆದರೂ ನಿದ್ದೆರಾಮಯ್ಯ ಮತ್ತು ರಾಮನಾಥ ಇಬ್ಬರೂ ಮೈಸೂರು ಭಾಗದವರು.ಹೀಗಾಗಿ ದೊಡ್ಡವರು ರಾಮನಾಥ್‍ರನ್ನು ಪಕ್ಷಕ್ಕೆ ಸೆಳೆದು ಬೆಣಸೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಲು ಯೋಚಿಸುತ್ತಾರೆ.ಅವರ ಈ ಲೆಕ್ಕಾಚಾರ ದೊಡ್ಡ ಮಗ ದೇವಣ್ಣನವರಿಗೆ ಅಚ್ಚರಿ ತರುತ್ತದೆಯಾದರೆ,ಚಿಕ್ಕಮಗ ಷಣ್ಮುಖಸ್ವಾಮಿ ಮಾತ್ರ ಪಕ್ಷದಲ್ಲಿ ವಿದ್ಯಾವಂತರು,ಅನುಭವಿಗಳು ಇದ್ದರೆ ಒಳ್ಳೆಯದು ಎಂದು ಒಪ್ಪಿಕೊಳ್ಳುತ್ತಾರೆ.
ಇಷ್ಟೊತ್ತಿಗಾಗಲೇ ರಾಮನಾಥರಿಗೆ ತಾವರೆ ಪಕ್ಷದವರ ಆಹ್ವಾನವೂ ಬಂದಿರುತ್ತದೆ.ಆದರೆ ರಾಮನಾಥ್ ಅದನ್ನೊಪ್ಪದೆ ದೊಡ್ಡ ಗೌಡರ ಪ್ರಾದೇಶಿಕ ಪಕ್ಷಕ್ಕೆ ಹೋಗುತ್ತಾರೆ.ಬೆಣಸೂರು ವಿಧಾನಸಭಾ ಕ್ಷೇತ್ರದಲ್ಲಿ ನಿಂತು ಗೆದ್ದೂ ಬಿಡುತ್ತಾರೆ.
ಇದು ಒಂದು ಕಡೆಗಾದರೆ ಮತ್ತೊಂದು ಕಡೆ ಚುನಾವಣೆಗಳು ರಾಜ್ಯದಲ್ಲಿ ಅತಂತ್ರ ಸ್ಥಿತಿಯ ನಿರ್ಮಾಣಕ್ಕೆ ಕಾರಣವಾಗಿರುತ್ತವೆ.ಅತ್ಯಂತ ದೊಡ್ಡ ಶಕ್ತಿಯಾಗಿ ತಾವರೆ ಪಕ್ಷ ಹೊರಹೊಮ್ಮಿದರೂ,ಅದರ ನಾಯಕ ಒಡಿಯೂರಪ್ಪ ಅವರು ಕೂದಲೆಳೆಯಷ್ಟು ಅಂತರದಲ್ಲಿ ಸಿಂಹಾಸನದ ಹೊಸ್ತಿಲಲ್ಲಿ ಎಡವಿ ಬೀಳುತ್ತಾರೆ.
ತಾವರೆ ಪಕ್ಷ ಇನ್ನು ಕೆಲವೇ ಸ್ಥಾನಗಳನ್ನು ಗಳಿಸಿದ್ದಿದ್ದರೆ ನಿಶ್ಚಿತವಾಗಿ ಒಡಿಯೂರಪ್ಪನವರೇ ಸಿಎಂ ಆಗಿರುತ್ತಿದ್ದರು.ಮಂಡ್ಯದ ಮಾವಿನಕರೆಯ ಬಸ್‍ ಸ್ಟ್ಯಾಂಡಿನಲ್ಲಿ ಲಿಂಬೆಹಣ್ಣು ಮಾರುತ್ತಿದ್ದ ದಿನಗಳಿಂದಲೂ ಅವರು ಛಲವಾದಿ.ಹಿಡಿದ ಪಟ್ಟನ್ನು ಬಿಡುವವರಲ್ಲ.
ಈ ಗುಣಗಳೇ ಅವರು ಬದುಕಿನಲ್ಲಿ ಮೇಲೇರುವಂತೆ ಮಾಡಿದ್ದು,ಲಿಂಬೆ ಹಣ್ಣು ಮಾರುವ ದಿನಗಳಿಂದ ರೈಸ್‍ಮಿಲ್ಲುಗಳ ಒಡೆಯರಾಗುವವರೆಗೆ,ಬಡತನದಿಂದ ದೊಡ್ಡ ಸಂಸಾರ ಬೆಳೆಸುವವರೆಗೆ ಎಲ್ಲವೂ ಅವರ ಈ ಛಲದಿಂದಲೇ ದಕ್ಕಿದ್ದು.
ಹಾಗಂತ ಅವರೇನೂ ಇತ್ತೀಚಿನ ದಶಕಗಳವರೆಗೆ ದಂಡಿಯಾಗಿ ದುಡ್ಡು ನೋಡಿದವರಲ್ಲ,ತಾವರೆ ಪಕ್ಷಕ್ಕೆ ಬಳ್ಳಾರಿಯ ಗಣಿಧೂಳಿನ ಕೆಸರು ಮೆತ್ತಿದ ಮೇಲೆಯೇ ಅವರು ದುಡ್ಡು ನೋಡಿದ್ದು.ಅಲ್ಲಿಂದ ಹರಿದ ಹೊಳೆಯ ನೀರಿನ ರುಚಿಯನ್ನು ಅವರ ಮನೆಯವರು ಸವಿದಿದ್ದು.ಇದರ ಮಧ್ಯೆ ಅವರ ಆಪ್ತರೂ ದಾಹ ಇಂಗಿಸಿಕೊಂಡಿದ್ದೂ ನಿಜ.
ಅರ್ಥಾತ್,ಒಡಿಯೂರಪ್ಪನವರಿಗೆ ಈಗ ಎಲ್ಲವೂ ಇದೆ.ಆದರೆ ಅಧಿಕಾರ?ಇದೇ ಅವರಿಗಿದ್ದ ಕಡೆಯ ಅವಕಾಶ.ಯಾಕೆಂದರೆ ಅವರಿಗೀಗ ಎಪ್ಪತ್ತು ವರ್ಷ ದಾಟಿದೆ.ಇಷ್ಟಾದ ಮೇಲೆ ಕಾಯುವುದು ಕಷ್ಟ.ಯಾಕೆಂದರೆ ಅವರೇನೋ ಕಾಯಬಹುದು.ಆದರೆ ವಯಸ್ಸು ಕಾಯಬೇಕಲ್ಲ?
ಅಷ್ಟೇ ಅಲ್ಲದೆ ಈಗ ಅಧಿಕಾರ ಹಿಡಿದರೆ ತಾನೇ ಮಕ್ಕಳಿಗೆ ಉತ್ತರಾಧಿಕಾರ ನೀಡುವುದು?ನಂಬಿದವರನ್ನು ದಡ ಸೇರಿಸುವುದು?ಆದರೆ ಅವರ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿ ರೈತ ಪಕ್ಷದ ಷಣ್ಮುಖಸ್ವಾಮಿ ಮತ್ತು ಕೈ ಪಕ್ಷದ ನಿದ್ದೆರಾಮಯ್ಯ ಪರಸ್ಪರ ಕೈಗೂಡಿಸಿ ಸಮ್ಮಿಶ್ರ ಸರ್ಕಾರ ರಚಿಸಿಬಿಟ್ಟರು.
ಈ ಕಾಂಬಿನೇಷನ್ನು ಪುನ: ರಾಮನಾಥರ ಕನಸನ್ನು ಭಗ್ನಗೊಳಿಸಿತು.ಯಾಕೆಂದರೆ ಷಣ್ಮುಖಸ್ವಾಮಿ ಮತ್ತು ನಿದ್ದೆರಾಮಯ್ಯ ಸೇರಿ ರಾಮನಾಥರನ್ನು ಮಂತ್ರಿ ಮಂಡಲದಿಂದ ದೂರಿವಿಟ್ಟರು.ಅಷ್ಟೇ ಅಲ್ಲ,ರೈತ ಪಕ್ಷದಲ್ಲಿ ರಾಮನಾಥರ ಮಾತಿಗೆ ಬೆಲೆಯೇ ಇಲ್ಲದಂತಾಯಿತು.
ಇಂತಹ ಸಂದರ್ಭದಲ್ಲೇ ಒಂದು ದಿನ ರಾಮನಾಥ್ ಅವರು ಕೆಲಸವೊಂದರ ನಿಮಿತ್ತ ಮುಖ್ಯಮಂತ್ರಿ ಷಣ್ಮುಖಸ್ವಾಮಿ ಅವರನ್ನು ನೋಡಲು ತಾಜ್ ಹೋಟೆಲ್ಲಿಗೆ ಹೋದರು.ಷಣ್ಮುಖಸ್ವಾಮಿಯವರ ವ್ಯವಹಾರಗಳೆಲ್ಲದರ ಕೇಂದ್ರ ಬಿಂದು ತಾಜ್ ಹೋಟೆಲ್.
ಆದರೆ ತುಂಬ ಹೊತ್ತು ರಾಮನಾಥರನ್ನು ಕಾಯಿಸಿದ ಷಣ್ಮುಖಸ್ವಾಮಿ ಅವರು ಕೊನೆಗೊಮ್ಮೆ ಹೊರಗೆ ಬಂದರು.ರಾಮನಾಥ್ ಅವರು ತಮಗೆ ಆಗಬೇಕಾದ ಕೆಲಸದ ಬಗ್ಗೆ ಹೇಳಿದಾಗ ರಾಂಗ್ ಆಗಿ ಮಾತನಾಡಿದರು.ಆದರೆ ರಾಮನಾಥ್ ಅವರು ಪಟ್ಟು ಬಿಡದೆ ಹೋದಾಗ ಕೋಪಗೊಂಡ ಷಣ್ಮುಖಸ್ವಾಮಿ:ಮಿಸ್ಟರ್ ರಾಮನಾಥ್,ನೆನಪಿರಲಿ,ನೀವು ನಮ್ಮ ಋಣದಲ್ಲಿದ್ದೀರಿ ಎಂದರು.
ಮುಖ್ಯಮಂತ್ರಿಗಳ ಮಾತಿನಿಂದ ರಾಮನಾಥ್ ಅವರಿಗೆ ಕೋಪ ಬಂತು.ಹಾಗಂತಲೇ:ಮಿಸ್ಟರ್ ಚೀಫ್ ಮಿನಿಸ್ಟರ್,ನಾನು ನಿಮ್ಮ ಋಣದಲ್ಲಿಲ್ಲ.ಜನರ ಋಣದಲ್ಲಿದ್ದೇನೆ.ನನ್ನ ನಿಷ್ಟೆ ಏನಿದ್ದರೂ ದೊಡ್ಡವರಿಗೆ ಮೀಸಲು.ಅವರನ್ನು ದೇವಸ್ಥಾನದಲ್ಲಿಡುತ್ತೇನಲ್ಲದೆ ಬೇರೆಯವರನ್ನಲ್ಲ ಎಂದು ಗುಡುಗುತ್ತಾರೆ.
ಅಷ್ಟೇ ಅಲ್ಲ,ಮುಖ್ಯಮಂತ್ರಿಗಳಿಂದ ತಮಗಾದ ಅವಮಾನವನ್ನು ಸಹಿಸಲಾಗದೆ ನೇರವಾಗಿ ಕಮಲನಾಭ ನಗರದಲ್ಲಿರುವ ದೊಡ್ಡ ಗೌಡರ ಮನೆಗೆ ಹೋಗುತ್ತಾರೆ.ಹೀಗೆ ಹೋದವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ರಾಜೀನಾಮೆ ಸಲ್ಲಿಸುತ್ತಾರೆ.
ಆದರೆ ನಡೆದ ಘಟನೆಯ ವಿವರ ಪಡೆದ ದೊಡ್ಡಗೌಡರು:ನಾಳೆ ಬೆಳಿಗ್ಗೆಯವರೆಗೆ ಮೌನವಾಗಿರಿ ಎಂದು ಸೂಚಿಸುತ್ತಾರೆ.ಆದರೆ ಮರು ದಿನ ಬೆಳಿಗ್ಗೆಯ ವೇಳೆಗೆ ಯಾವ ಪವಾಡವೂ ನಡೆಯುವುದಿಲ್ಲ.ಬದಲಿಗೆ ದೊಡ್ಡವರ ಸಲಹೆಯನ್ನು ಮಗ ಷಣ್ಮುಖಸ್ವಾಮಿ ಸ್ವೀಕರಿಸದ ಪರಿಣಾಮವಾಗಿ ರಾಮನಾಥರ ರಾಜೀನಾಮೆ ಅಂಗೀಕಾರವಾಗುತ್ತದೆ.
ಇದರಿಂದ ರಾಮನಾಥ್ ಕುದ್ದು ಹೋಗುತ್ತಾರೆ.ಕೈ ಪಕ್ಷದಲ್ಲಿ ಕತೆ ಹಾಗಾಯಿತು.ರೈತ ಪಕ್ಷದಲ್ಲಿ ಹೀಗಾಯಿತು ಎಂಬ ನೋವು ಅವರನ್ನು ಕಾಡುತ್ತಿರುವಾಗಲೇ ಅವರಿಗೊಂದು ದೂರವಾಣಿ ಕರೆ ಬರುತ್ತದೆ.ಈ ಕರೆ ಮಾಡಿದವರು ದೇವರಾಜನಗರದ ಸಂಸದರಾದ ವೆಂಕಟೇಶ್ ಪ್ರಸಾದ್.
ತುರ್ತಾಗಿ ತಮ್ಮ ಮನೆಗೆ ಬರುವಂತೆ ವೆಂಕಟೇಶ್ ಪ್ರಸಾದ್ ಅವರು ಹೇಳಿದಾಗ ರಾಮನಾಥರು ದುಸುರಾ ಮಾತನಾಡದೆ ಹೋಗುತ್ತಾರೆ.ಯಾಕೆಂದರೆ ಇಬ್ಬರದೂ ಹಲವು ದಶಕಗಳ ಸ್ನೇಹ.ಚುನಾವಣೆಗಳಲ್ಲಿ ಪರಸ್ಪರರಿಗೆ ಸಹಕಾರ ನೀಡಿದ ಹಿನ್ನೆಲೆ ಬೇರೆ.ಹೀಗೆ ಅವರು ವೆಂಕಟೇಶ್ ಪ್ರಸಾದ್ ಅವರ ಮನೆಗೆ ಹೋದಾಗ ಅವರು ಒಂದು ಆಫರ್ ಕೊಡುತ್ತಾರೆ.
ರಾಮನಾಥ್,ಇತ್ತೀಚಿನ ಬೆಳವಣಿಗೆಗಳನ್ನು ನಾನು ಗಮನಿಸುತ್ತಿದ್ದೇನೆ.ಈಗಿರುವ ಪಕ್ಷದಲ್ಲೂ ನೀವು ಸಮಾಧಾನಿಯಾಗಿಲ್ಲ.ಹೀಗಾಗಿ ಬಹುಕಾಲದ ಸ್ನೇಹಿತನಾಗಿ ನಾನು ನಿಮ್ಮ ಬಳಿ ಸಲುಗೆಯಿಂದ ಒಂದು ಮಾತು ಹೇಳುತ್ತೇನೆ.ನೀವು ನಡೆಸಿಕೊಡಬೇಕು ಎಂದು ಹೇಳುತ್ತಾರೆ.
ರಾಮನಾಥ್ ನೀವು ಹಿರಿಯರು,ವಿವೇಕಿಗಳು,ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತಾವರೆ ಪಕ್ಷದ ಕತೆ ಕೈ ಜೋಡಿಸಿ,ಕೈ ಪಕ್ಷದ ಹಲವು ಶಾಸಕರೂ ರಾಜೀನಾಮೆ ಕೊಡಲು ಸಿದ್ಧವಾಗಿದ್ದಾರೆ.ಇಲ್ಲಿಗೆ ಬಂದರೆ ನಿಮ್ಮನ್ನು ಉಪಚುನಾವಣೆಯಲ್ಲಿ ಗೆಲ್ಲಿಸುವ ಭಾರ ನಮ್ಮದು.ಇದನ್ನು ನಿಮಗೇಕೆ ಹೇಳುತ್ತಿದ್ದೇನೆ ಎಂದರೆ ನೀವು ಬಂದರೆ,ನಿಮ್ಮ ಜತೆಗೆ ಬರಲು ಹಲ ಶಾಸಕರು ಸಜ್ಜಾಗುತ್ತಾರೆ.ಹೀಗೆ ನೀವೆಲ್ಲ ಬಂದು ಒಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪಟ್ಟದ ಮೇಲೇರಿಸಿ ಎನ್ನುತ್ತಾರೆ.
ವಸ್ತುಸ್ಥಿತಿ ಎಂದರೆ ರಾಮನಾಥರ ಮೇಲೆ ವೆಂಕಟೇಶ್ ಪ್ರಸಾದ್ ಬಲೆ ಬೀಸಲು ಒಡಿಯೂರಪ್ಪ ಅವರೇ ಕಾರಣ.ಎಷ್ಟೇ ಆದರೂ ಇಬ್ಬರ ಮಧ್ಯೆ ಹಲವು ದಶಕಗಳ ಸ್ನೇಹವಿದೆ.ಹೀಗಿರುವಾಗ ವೆಂಕಟೇಶ್ ಪ್ರಸಾದ್ ಹೇಳಿದರೆ ರಾಮನಾಥ್ ಇಲ್ಲ ಎನ್ನುವುದಿಲ್ಲ ಅಂತ ಅವರಿಗೆ ಗೊತ್ತಿರುತ್ತದೆ.
ಅದೇ ರೀತಿ ಒಂದು ಪರ್ಯಾಯ ಸರ್ಕಾರವೇ ತಮ್ಮ ನೆರವಿನಿಂದ ರಚನೆಯಾಗುವುದಾದರೆ ಆಗಲಿ ಎಂಬುದು ವೆಂಕಟೇಶ್ ಪ್ರಸಾದ್ ಅವರ ಬಯಕೆಯೂ ಆಗಿರುತ್ತದೆ.ಹೀಗಾಗಿ ಅವರು ರಾಮನಾಥರಿಗೆ ಈ ಆಫರ್ ಕೊಟ್ಟಿರುತ್ತಾರೆ.
ಈ ಮಾತನ್ನು ತಕ್ಷಣ ಒಪ್ಪಲು ರಾಮನಾಥ್ ಹಿಂಜರಿದರೂ ವೆಂಕಟೇಶ್ ಪ್ರಸಾದ್ ಅವರು ವಸ್ತುಸ್ಥಿತಿಯನ್ನು ವಿವರಿಸಿ ಒಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರ ಬರಬೇಕಾದ ಅನಿವಾರ್ಯತೆಯ ಕುರಿತು ಹೇಳುತ್ತಾರೆ.ಅಂತಿಮವಾಗಿ ಇದಕ್ಕೆ ರಾಮನಾಥರು ಒಪ್ಪುತ್ತಾರೆ.
ಅವರು ಒಪ್ಪಿದ್ದೇ ತಡ,ರಾಮನಾಥ್ ಅವರನ್ನು ರವಿವಾರ ಪತ್ರಿಕೆಯ ಮಹೇಶ್ ಪ್ರಸಾದ್ ಅವರ ಜತೆಗೆ ಬೆಂಗಳೂರಿನ ಈಶ್ವರಾನಂದ ಸರ್ಕಲ್ ಹಿಂಭಾಗದಲ್ಲಿರುವ ಅಪಾರ್ಟ್‍ಮೆಂಟ್ ಒಂದಕ್ಕೆ ಕಳಿಸಿಕೊಡುತ್ತಾರೆ ವೆಂಕಟೇಶ್ ಪ್ರಸಾದ್.
ಅಂದ ಹಾಗೆ ಈಶ್ವರಾನಂದ ಸರ್ಕಲ್ ಹಿಂಭಾಗದಲ್ಲಿರುವುದು ಒಡಿಯೂರಪ್ಪ ಅವರ ಅಪಾರ್ಟ್‍ಮೆಂಟ್.ಅಲ್ಲಿಗೆ ಮಹೇಶ್ ಪ್ರಸಾದ್ ಅವರ ಜತೆ ರಾಮನಾಥ್ ಹೋಗುತ್ತಾರೆ.ಅಲ್ಲಿ ಖುದ್ದು ಒಡಿಯೂರಪ್ಪ ಅವರೇ ಇವರಿಗಾಗಿ ಕಾದು ಕುಳಿತಿದ್ದಾರೆ.
ಸರಿ,ಇವರನ್ನು ನೋಡಿದ ಕೂಡಲೇ ಎದ್ದು ಬಂದು ಅವರು ಸ್ವಾಗತಿಸಿ ಕೂರಿಸಿದರು.ಅಲ್ಲಿ ಒಡಿಯೂರಪ್ಪ ಮಾತ್ರವಲ್ಲದೆ ಅವರ ಮಗ ಸುಜಯೇಂದ್ರ ಕೂಡಾ ಇದ್ದಾರೆ.ತಮ್ಮ ತಂದೆ ನಾಡದೊರೆಯಾಗಲಿ ಎಂಬುದು ಸುಜಯೇಂದ್ರರ ಬಯಕೆ.ಅಷ್ಟರಲ್ಲೇ ಮಾತುಕತೆ ಆರಂಭವಾಗುತ್ತದೆ.ರಾಮನಾಥ್ ಹಾಗೂ ಒಡಿಯೂರಪ್ಪ ಅವರಿಬ್ಬರೂ ಹಳೆಯ ಕತೆಗಳನ್ನು ನೆನಪಿಸಿಕೊಳ್ಳುತ್ತಾರೆ.ಇದರ ನಡುವೆಯೇ ರಾಮನಾಥರನ್ನು ತಾವರೆ ಪಕ್ಷಕ್ಕೆ ಆಹ್ವಾನಿಸುವ ಒಡಿಯೂರಪ್ಪನವರು ಹಾಲು,ಹಣ್ಣು ನೀಡುತ್ತಾರೆ.
ಅವರ ಮಾತನ್ನು ಒಪ್ಪಿ ರಾಮನಾಥ್ ಎದ್ದು ನಿಂತಾಗ,ಮಗ ಸುಜಯೇಂದ್ರ ಅವರ ಕಡೆ ತಿರುಗಿ ನೋಡುವ ಒಡಿಯೂರಪ್ಪ:ಯೇ,ಇವರ ಕಡೆ ನೋಡಪ್ಪ ಎನ್ನುತ್ತಾರೆ.ರಾಮನಾಥ್ ಅವರಿಗೆ ಇದು ಹಣದ ಆಫರ್ ಅಂತ ಗೊತ್ತಾಗುತ್ತದೆ.ಯೇ ಇವೆಲ್ಲ ಬೇಡ ಸಾರ್ ಎನ್ನುತ್ತಾರೆ.
ನೋ,ನೋ,ನಿಮಗಲ್ಲದಿದ್ದರೂ ಮಕ್ಕಳು,ಮರಿ ಅಂತ ಇರ್ತಾರಲ್ಲ ರಾಮನಾಥ್? ಅವರಿಗಾಗಿ ಎಂದು ಒಡಿಯೂರಪ್ಪ ಹೇಳಿದರೆ,ಛೇ,ಛೇ ಬೇಡ ಸಾರ್,ನಾನು ರೈತ ಪಕ್ಷದಲ್ಲಾದ ಅವಮಾನದಿಂದ ನೊಂದಿದ್ದೇನೆ.ಹೀಗಾಗಿ ನಿಮ್ಮ ಜತೆ ಬರಲು ಒಪ್ಪಿದ್ದೇನೆ ಎಂದಾಗ ಸುಜಯೇಂದ್ರ:ಸಾರ್,ಅಪಾರ್ಟ್ ಮೆಂಟ್ ಕೆಳಗಿರುವ ನಿಮ್ಮ ಕಾರಿನ ಡಿಕ್ಕಿಯಲ್ಲಿ ಎಲ್ಲ ಇಡುತ್ತೇನೆ ಎನ್ನುತ್ತಾರೆ.
ಆದರೆ ರಾಮನಾಥ್,ನೋ,ಯಾವ ಕಾರಣಕ್ಕೂ ಹಣ ಬೇಡ,ಒಂದು ಮನ್ನಣೆಯ ಬಯಕೆ,ಗೌರವದ ಬಯಕೆಯಿಂದ ನಾನು ನಿಮ್ಮ ಜತೆ ಬರುತ್ತಿದ್ದೇನೆ.ಹಣಕ್ಕಾಗಿ ಅಲ್ಲ ಎಂದಾಗ ದಂಗಾದ ಸುಜಯೇಂದ್ರ ಅಲ್ಲೇ ರಾಮನಾಥರ ಕಾಲಿಗೆ ಎರಗಿ,ಸಾರ್,ನಾವು ಇಷ್ಟನ್ನು ಕೊಟ್ಟರೂ ಅದು ಸಾಲುವುದಿಲ್ಲ ಎನ್ನುವವರೇ ಹೆಚ್ಚಿರುವಾಗ ದುಡ್ಡೇ ಬೇಡ ಎನ್ನುವ ನಿಮ್ಮ ದೊಡ್ಡತನಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಸಾರ್ ಎನ್ನುತ್ತಾರೆ.
ಇಷ್ಟಾದ ನಂತರ ಹಲವು ಶಾಸಕರು ತಾವರೆ ಪಕ್ಷದ ಜತೆ ಕೈ ಜೋಡಿಸುತ್ತಾರೆ.ಅವರೆಲ್ಲರನ್ನೂ ಸೇಫ್ ಆಗಿಡಬೇಕಲ್ಲ?ಆಗ ಆ ರೋಚಕ ದಿನಗಳು ಶುರುವಾಗುತ್ತವೆ.
ಅದೇ ಬಾಂಬೆಯ ದಿನಗಳು.
****
ಅಂದ ಹಾಗೆ ಇಂತಹ ಹಲವು ರೋಚಕ ಅಂಶಗಳನ್ನೊಳಗೊಂಡಿರುವ ಕೃತಿಯ ಹೆಸರು “ದಿ ಬಾಂಬೆ ಡೇಸ್”
ಇದನ್ನು ಬರೆದವರು ನಾಡಿನ ಹಿರಿಯ ರಾಜಕಾರಣಿ,ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್,2019 ರ ಜೂನ್ ತಿಂಗಳಿನಿಂದ 2021 ರ ಜುಲೈ ತಿಂಗಳವರೆಗಿನ ಕಾಲಘಟ್ಟದಲ್ಲಿ ನಡೆಯುವ ಇಲ್ಲಿನ ಕತೆ ರಾಜಕಾರಣದ ಅತ್ಯಪರೂಪದ ಸಂಗತಿಗಳನ್ನು ಹೇಳುತ್ತಾ ಹೋಗುತ್ತದೆ.
ಕನ್ನಡದಲ್ಲಿ ರಾಜಕೀಯ ಸಾಹಿತ್ಯ ಎಂಬುದು ನಿರ್ಲಕ್ಷಿತ ಕ್ಷೇತ್ರ.ಆದರೆ ಅದು ಬಿಚ್ಚಿಕೊಳ್ಳತೊಡಗಿದರೆ ಹಿಮಾಲಯ ಸದೃಶವಾಗಿ ನಿಲ್ಲಬಲ್ಲದು ಎಂಬುದಕ್ಕೆ ವಿಶ್ವನಾಥ್ ಅವರ ಕೃತಿಯೇ ಸಾಕ್ಷಿ.ಅಂದ ಹಾಗೆ ಬದುಕಿನ ಎಲ್ಲ ರಂಗಗಳನ್ನು ಆವರಿಸುವ ಶಕ್ತಿ ಇರುವುದು ರಾಜಕೀಯಕ್ಕೆ.ಆದರೆ ರಾಜಕಾರಣ ಎಂದರೆ ಮೂಗು ಮುರಿಯುವ ಒಂದು ವಿಚಿತ್ರ ಸನ್ನಿವೇಶ ಈ ವ್ಯವಸ್ಥೆಯಲ್ಲಿ ಮನೆ ಮಾಡಿದೆ.ರಾಜಕೀಯದಿಂದ ದೂರವಿರುವುದು ಗೌರವದ ಸಂಕೇತ ಎಂಬ ಕೀಳರಿಮೆ ಇದೆ.
ಈ ಕೀಳರಿಮೆಯನ್ನು ಹೊರತುಪಡಿಸಿ ರಾಜಕಾರಣದ ಹೊಸ್ತಿಲಿಗೆ ಬಂದರೆ,ಒಳನುಗ್ಗಿದರೆ,ಅಲ್ಲಿ ನಡೆಯುವುದನ್ನು ಗ್ರಹಿಸತೊಡಗಿದರೆ ಅದ್ಭುತ ಜಗತ್ತೊಂದು ತೆರೆದುಕೊಳ್ಳುತ್ತದೆ.ಮತ್ತು ನಮ್ಮ ಬದುಕನ್ನು ನಿಯಂತ್ರಿಸುವ ಒಂದು ವಿಶಿಷ್ಟ ಶಕ್ತಿ ರಾಜಕೀಯಕ್ಕಿದೆ ಎಂಬುದು ಸ್ಪಷ್ಟವಾಗುತ್ತದೆ.
ಎರಡು ವರ್ಷಗಳ ಬೆಳವಣಿಗೆಗಳನ್ನು ಕೇಂದ್ರವಾಗಿಟ್ಟುಕೊಂಡು ಎಚ್.ವಿಶ್ವನಾಥ್ ಅವರು ಬರೆದ ದಿ ಬಾಂಬೆ ಡೇಸ್ ಕೃತಿ ಹೊರಬದುಕಿಗೆ ಗೊತ್ತಿಲ್ಲದ ಒಂದು ಲೋಕವನ್ನು ನಿಮ್ಮ ಮುಂದೆ ತೆರೆದಿಡುತ್ತದೆ.ಅಷ್ಟೇ ಅಲ್ಲ,ಒಂದು ಕಾಲಘಟ್ಟದ ರಾಜ್ಯ ರಾಜಕಾರಣವನ್ನು ಗ್ರಹಿಸಲು ನೆರವು ನೀಡುವ ದಾಖಲೆಯೂ ಆಗುತ್ತದೆ.
ಸಧ್ಯದಲ್ಲೇ ಹೊರಬರಲಿರುವ ಈ ಕೃತಿಯ ಸಾರ್ಥಕತೆ ಇರುವುದೇ ಅದರ ಈ ಗುಣದಲ್ಲಿ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here