ರಾಜ್ಯದಲ್ಲಿರುವ ಅತಿಥಿ ಉಪನ್ಯಾಸಕರ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರ ಕುಟುಂಬಗಳು ಲಾಕ್ಡೌನ್ ನಲ್ಲಿ ಅನುಭವಿಸುತ್ತಿರುವ ಯಾತನೆ ನಿಮಗೊತ್ತಿದಿಯಾ..?

0
219

ಪರಿಹಾರದ ಪ್ಯಾಕೇಜ್ ಇಂತಿವರಿಗೂ ಸಿಗಲಿ : ಸಂಘ-ಸಂಸ್ಥೆಗಳ ಮಾನವೀಯ ನೆರವು ಇರಲಿ
ರಾಜ್ಯದ ವಿವಿಧ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರ ಸಮಸ್ಯೆಗಳು ಕೇಳೊರ್‍ಯಾರು..? ಬದುಕು ನಿರ್ವಹಣೆಗೆಂದು ವಿದ್ಯಾರ್ಥಿ ಜೀವನದ ನಂತರದಲ್ಲಿ ಶಿಕ್ಷಕರಾಗುವ ಇಂತಿವರುಗಳಿಗೆ ನ್ಯಾಯ ಕೊಡುವರಾರು..?
ಈಗಾಗಲೇ ತಪ್ಪು ತಿಳಿವುಗಳ ನಡುವೆ ಸಮಾಜದಲ್ಲಿ ವಿಷಬೀಜ ಬಿತ್ತಲಾಗಿದೆ, ಖಾಸಗಿ ಶಿಕ್ಷಣ ಕ್ಷೇತ್ರ ಆರ್ಥಿಕವಾಗಿ ಬಲಿಷ್ಠವಾಗಿದೆ, ಪೋಷಕರ ಬಳಿ ಹೆಚ್ಚುವರಿ ಹಣ ಲೂಟಿ ಮಾಡುತ್ತದೆ ಹೀಗೆ ಏನೆಲ್ಲಾ ವಾಚಮಗೋಚರವಾಗಿ ನಿಂದಿಸುವ ಮುನ್ನದಿ ಒಂದಿಷ್ಠು ಖಾಸಗಿ ಶಿಕ್ಷಣ ಕ್ಷೇತ್ರಗಳತ್ತ ಅವಲೋಕನದಿ ಅಧ್ಯಯಿಸಬೇಕಾಗುವ ಜರೂರತ್ತಿದೆ,

ಶೇಕಡವಾರು 30% ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರವೇ ಆರ್ಥಿಕವಾಗಿ ಬಲಿಷ್ಠವಾಗಿದೆ, ಇನ್ನುಳಿದ 70% ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಮತೋಲನೆಗಾಗಿ ಹಣಾಹಣಿ ನಡೆಸುತ್ತಿವೆ ಎನ್ನುವ ಸತ್ಯ ಗೊತ್ತು ಮಾಡಿಕೊಳ್ಳಬೇಕಿದೆ, ಮುಖ್ಯವಾಗಿ ಈ ಖಾಸಗಿ ಕ್ಷೇತ್ರಗಳಲ್ಲಿರುವ ಶಿಕ್ಷಕರಿಗೆ ತಿಂಗಳ ಪಗಾರು ಯಾವ ದಿನಗೂಲಿಗಿಂತಲೂ ಕಡಿಮೆ ಎನ್ನುವುದು ಗೊತ್ತಿದಿಯೇ..? ಅದರಲ್ಲೂ ಆರ್ಥಿಕ ಸಂಕಷ್ಠದಲ್ಲಿರುವ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ಪಗಾರು ಕೊಡುವುದಕ್ಕೆ ಅತೀವ ಪೇಚೆಗೆ ಸಿಲುಕಿರುವ ಉದಾಹರಣೆಗಳಿವೆ, ಆರ್ಥಿಕವಾಗಿ ಸಬಲವಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರವೇ ಪೊಗರದಸ್ತಾಗಿರುವುದಕ್ಕೆ ಅಸಲಿ ಕಾರಣವೆನೆಂದರೆ ಬಹುತೇಕ ಪವರ್-ಪೊಲಿಟಿಕಲ್ ಹಿನ್ನಲೆಯಲ್ಲಿ ಕೂಡಿರುತ್ತದೆ, ಕೆಲವು ಮಠಗಳ ಅಧೀನದ ಆಡಳಿತಕ್ಕೊಳಪಟ್ಟಿರುತ್ತದೆ, ಆದರೂ ಇಲ್ಲಿರುವ ಶಿಕ್ಷಕರಿಗೆ ಇಂತಹ ಕೋರೊನಾ ಕಾಲಮಾನದಲ್ಲಿ ಯಾವ ವಿಶೇಷ ಪ್ಯಾಕೇಜುಗಳು ದೊರೆತಿಲ್ಲ, ಬದಲಿಗೆ ಕೇಳುವಂತಿಲ್ಲ, ಹೇಗೋ ಬದುಕಿನ ಬವಣೆಯ ತೀರುವಿಕೆಗೊಂದು ಶಿಕ್ಷಕರಾಗಿದ್ದೇವೆ ಬಂದಷ್ಠರಲ್ಲಿಯೇ ಜೀವನ ಮಾಡಿಕೊಳ್ಳೋಣ ಎನ್ನುವ ಶಿಕ್ಷಕರು ಬಡ-ಮಧ್ಯಮ ಕ್ರಮಾಂಕದಲ್ಲಿರುವವರೇ ಆಗಿದ್ದಾರೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗಿದೆ.

ಇನ್ನೂ 70% ಶಾಲೆಗಳ ಶಿಕ್ಷಕರಿಗೆ ತಿಂಗಳಿಗೆ ಸರಿಯಾಗಿ ಪಗಾರು ಸಿಕ್ಕರೆ ಸಾಕಪ್ಪ, ಯಾವ ಪ್ಯಾಕೇಜ್ ಬೇಡ ಎನ್ನುವಂತಹ ಸ್ಥಿತಿಗಳು ಇವೆ, ಇದನ್ನು ಅರಿತುಕೊಂಡೆ 2020 ರಲ್ಲಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರು ಹೇಳಿಕೆಯನ್ನಿತ್ತು ರಾಜ್ಯದಲ್ಲಿರುವ ಅನುದಾನರಹಿತ 3.5ಲಕ್ಷ ಶಾಲಾ ಶಿಕ್ಷಕರಿಗೆ ಕೋರೊನಾ ನೆರವು ನೀಡುತ್ತೇವೆ ಅವರುಗಳ ಸಂಕಷ್ಠಗಳಿಗೆ ಸ್ಪಂದಿಸುತ್ತೇವೆ ಎಂದಿದ್ದರು,
ಆದರೆ ಈ ಹೇಳಿಕೆ ಹೇಳಿಕೆಯಾಗಿಯೇ ಉಳಿದು ಹೋಯಿತು, ಹೇಳಿ ಶಿಕ್ಷಣ ಸಚಿವರೇ..?ಯಾವ ಶಿಕ್ಷಕರಿಗೆ ಕೋರೊನಾ ವೈರಸ್ ವ್ಯಾದಿಯ ಮೊದಲನೆ ಅಲೆಯಲ್ಲಿ ವಿಶೇಷ ಪ್ಯಾಕೇಜ್ ನೀಡಿದ್ದೀರಿ..? ದಯಮಾಡಿ ಸಾರ್ವಜನಿಕವಾಗಿ ಸ್ಪಷ್ಠಪಡಿಸಿಬಿಡಿ, ಬಡ-ಮಧ್ಯಮ ಕ್ರಮಾಂಕದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನ ಮುಗಿಸಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ನೀವು ಕೊಡುವ ಗ್ರಾಮೀಣಾ ಪಂಚಾಯಿತಿ ಕಾಯ್ದೆಯನ್ವಯ “ಉದ್ಯೋಗಖಾತ್ರಿ” ಯೋಜನೆಯ ದಿನಗೂಲಿಗೂ ವಂಚಿತರಾಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುತ್ತಿದ್ದಾರೆ ಎನ್ನುವುದು ತಮಗೆ ಗೊತ್ತಿದಿಯಾ..? ಇದೀಗ ಎರಡನೇ ಅಲೆ ಬಂದಾಗಿದೆ ಇದೀಗಲೂ ನಿಮ್ಮ ಕಳೆದ ವರುಷದ ಹೇಳಿಕೆಯ ಪ್ಯಾಕೇಜ್ ಬಂದಿಲ್ಲ, ಆದರೂ ಯಾವ ಖಾಸಗಿ ಶಿಕ್ಷಕರು ತಮ್ಮ ವಿರುದ್ದ ಚಕಾರೆತ್ತಿಲ್ಲ, *ನಾಯಿ ಮೊಲೆಗೆ ಹಾಲಿದ್ದರೆ ದೇವ್ರಿಗಿಲ್ಲ ದಿಂಡ್ರಿಗಿಲ್ಲ” ಎನ್ನುವಂತಾಗಿದೆ ನಿಮ್ಮ ಸಚಿವ ಜವಾಬ್ದಾರಿಯ ಪೊಳ್ಳು ನಿರ್ವಹಣೆ ಎನ್ನುವುದೇ ಪ್ರಸ್ತುತ ವಿದ್ಯಮಾನದ ದುರುಂತವಾಗಿದೆ.

ಇನ್ನಾದರೂ ಸರಕಾರ ಚಿಂತನೆ ನಡೆಸಲಿ, ಎಲ್ಲಾ ಶಾಲಾ-ಕಾಲೇಜು ಸಂಸ್ಥೆಗಳು ಮುಚ್ಚಿ ಹೋಗಿವೆ ಆದರೆ ಶಿಕ್ಷಕರು ಆಡಳಿತ ಸಂಸ್ಥೆಯೊಂದಿಗೆ ಸೇರಿ ಆಫ್ ಲೈನ್-ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ, ದಯಮಾಡಿ ಸಂಪೂರ್ಣವಾಗಿ ಕಡಿತಗೊಳಿಸಿದ ಶುಲ್ಕವನ್ನೇ ಹಂತ-ಹಂತವಾಗಿ ಕಟ್ಟಿರಿ ಶಿಕ್ಷಕರಿಗೆ ಪಗಾರ್ ನೀಡಬೇಕೆಂದು ಅವಲತ್ತುಕೊಳ್ಳುತ್ತಿರುವ ಶೇಕಡವಾರು ಆರ್ಥಿಕ ಸಂಕಷ್ಠದಲ್ಲಿರುವ ಶಿಕ್ಷಣ ಸಂಸ್ಥೆಗಳ ಮುಂದಡಿ ಶಿಕ್ಷಕರು ಯಾವುದೇ ದಾರಿಗಾಣದೇ ಮೌನವಹಿಸಿ ಬದುಕಿನ ನೋವುಗಳನ್ನು ನುಂಗಿಕೊಳ್ಳುವ ಪ್ರಸಂಗಗಳಿವೆ.

ಇನ್ನೂ ಮೊನ್ನೆಯಷ್ಠೆ ಮುಗಿದ ಮಸ್ಕಿ-ಬೆಳಗಾವಿ-ಬಳ್ಳಾರಿ ಹಾಗೂ ವಿವಿದೆಡೆಯ ಸ್ಥಳೀಯ ಸಂಸ್ಥೆಯ ಚುನಾವಣೆಗಳ ಕರ್ತವ್ಯದಲ್ಲಿ ಶ್ರಮಿಸಿದ ವಿದ್ಯಾಗಮದಲ್ಲಿ ಪಾಠ ಮಾಡಿದ ಕರ್ನಾಟಕದ 150ಕ್ಕು ಹೆಚ್ಚು ಶಿಕ್ಷಕರು ಕೊರೋನಾ ಸೋಂಕಿನಿಂದ ಮೃತರಾಗಿದ್ದಾರೆ, ಬಹುತೇಕ ಕಡೆಯಲ್ಲಿರುವ ಪಾಠ ಮಾಡಿದ ಶಿಕ್ಷಕರ ಪಾಡು ಏನಾಗಿದಿಯೋ..? ಸದ್ಯಕ್ಕೆ ಸರಿಯಾದ ಅಂಕಿ-ಅಂಶಗಳಿಲ್ಲವಾಗಿದೆ, ಇಂತಹ ಸಂಗತಿಗಳನ್ನು ನೋಡಿದಾಗ ನೆನಪಿಗೆ ಬರುವುದು ನಟ ದರ್ಶನ್ ನಟಿಸಿದ ಚಿತ್ರವೊಂದಲ್ಲಿ ಪಾಠ ಕಲಿಸೋ ಶಿಕ್ಷಕರ ಕಣ್ಣಲ್ಲಿ ನೀರು ಬರಬಾರದು ಅನ್ನ ಕೋಡೋ ರೈತ ನೇಣಿಗೆ ಶರಣಾಗಬಾರದು ಎನ್ನುವ ಡೈಲಾಗ್ ಕೇಳಿದ್ದೇವೆ ಆದರೆ ವಾಸ್ತವದಲ್ಲಿ ಇವರೆಡು ರಂಗದಲ್ಲಿ ಕಣ್ಣಿರು ತುಂಬಿದೆ, ಆತ್ಮಹತ್ಯೆಗಳು ನಡೆಯುತ್ತಿವೆ,

ಇಂತಹ ಬರಪೂರ ಹೇಳಿಕೆಗಳನ್ನು ನೀಡುವ ಸರಕಾರದ ಮಂತ್ರಿಗಳು ಬರೀಯ ಭರವಸೆನ್ನು ನೋವಿನ ಎದೆಗಳಿಗೆ ತುಂಬುತ್ತಿರುವುದು ವಿಪರ್ಯಾಸವಲ್ಲವೇ..? ಇದನ್ನು ಪ್ರಶ್ನಿಸಬೇಕಾದ ಸಂಘಟನೆಗಳು ಕೂಡ ಖಾಸಗಿ ಎಂದ ಕೂಡಲೇ ತಪ್ಪಾಗಿ ಅರ್ಥೈಸಿಕೊಂಡು ಎಲ್ಲವೂ ಆರ್ಥಿಕ ಸಮಬಲಗಳಿವೆ ಎಂದೇ ತುರ್ತಾಗಿ ಗೋಜುಗಳಿಗೆ ತಲುಪಿರುವುದರಿಂದಲೇ ಖಾಸಗಿ ಶಿಕ್ಷಕರ-ಉಪನ್ಯಾಸಕರ ಬವಣೆಗಳ ಕಾವಿಗೆ ಆಡಳಿತ ವ್ಯವಸ್ಥೆಗಳು ಚಳಿ ಕಾಯಿಸಿಕೊಳ್ಳುತ್ತಿದೆ.

ಬಾಳೆಹಣ್ಣು ತಿಂದು ಸಿಪ್ಪೆ ಬೀದಿಗೆಸೆದಂತಾಗಿದೆ ಇಂತಿವರುಗಳು ಬದುಕು, ವಿದ್ಯಾವಂತರಾಗಬೇಕು ಮುಂದಿನ ಪೀಳಿಗೆಗೆ ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸಬೇಕು ಎನ್ನುವ ಮಾತು ಫಲಿಸಬೇಕೆಂದರೆ ನಟ ದರ್ಶನ್ ಹೇಳಿದಂತೆ ಪಾಠ ಹೇಳಿಕೊಡುವ ಶಿಕ್ಷಕರ ಕಣ್ಣಲ್ಲಿ ನೀರು ಬರಬಾರದು ಎಂದು ಮನನ ಮಾಡಿಕೊಳ್ಳಬೇಕು.

ಇದು ಅಪಹಾಸ್ಯಗೈಯುವ ಅಥವಾ ಪೊಳ್ಳು ಭರವಸೆಗಳನ್ನಿತ್ತುವ ದಿನಮಾನವಲ್ಲ ವಿಶ್ವವೇ ತಲ್ಲಣಿಸಿರುವ ಮಹಾಮಾರಿ ಕೋರೊನಾ ವೈರಸ್ ಸಾಂಕ್ರಮಿಕ ವ್ಯಾದಿಯ ಆತಂಕದಲ್ಲಿ ಎಲ್ಲಾ ವ್ಯವಸ್ಥೆಗಳು ಮಿಂದು ಹೋಗಿವೆ, ಬದುಕಿದರೆ ಸಾಕು ಎನ್ನುವಷ್ಟರ ಮಟ್ಟಿಗೆ ಜನಜೀವನ ನಿರ್ಧರಿಸಿದೆ ಇಂತಹ ವಿಷಮಪರಿಸ್ಥಿತಿಯಲ್ಲಿ ಶಿಕ್ಷಕ ವೃತ್ತಿಯನ್ನೇ ನಂಬಿ ಕೂತ ಸೂರುಗಳ ಪರಿಸ್ಥಿತಿ ಕುರಿತಾಗಿ ಮಾನವೀಯ ದೃಷ್ಠಿಯಿಂದ ಅವಲೋಕಿಸಿದ್ದೀರಾ..?

ಹೇಳಿ..? ಸರಕಾರ ಈ ಕೂಡಲೇ ಪರಿಶೀಲಿಸಿ ತ್ವರಿತಗತಿಯಲ್ಲಿ ವಿಶೇಷ ಪ್ಯಾಕೇಜ್ ಗಳನ್ನು ನೀಡಲು ಮುಂದಾಗಬೇಕಿದೆ. ಅಲ್ಲದೆ ಚುನಾವಣೆ ಕೆಲಸಗಳಲ್ಲಿ ಹಾಗೂ ವಿದ್ಯಾಗಮ ಯೋಜನೆಯಲ್ಲಿ ಮೃತರಾದವರಿಗೆ ಆರ್ಥಿಕ ನೆರವು ನೀಡಲಿ ಎನ್ನುವುದು ಈ ಲೇಖನದ ಉದ್ದೇಶವು ಆಗಿದೆ.

ಇದು ಅನುದಾನರಹಿತ ಖಾಸಗಿ ಶಾಲಾ-ಕಾಲೇಜು ಶಿಕ್ಷಕರ ಹಾಗೂ ಉಪನ್ಯಾಸಕರುಗಳ ಕಥಾನಕವಾದರೆ …..
1994 ರಿಂದ ಪ್ರಸ್ತುತ ಅವಧಿಯವರೆಗೆ ಸರಕಾರ ನಿಗದಿಪಡಿಸಿದ ಕೊಂಚ ಸಂಬಳಕ್ಕಾಗಿ ಅತಿಥಿ ಉಪನ್ಯಾಸಕರಾಗಿರುವ 14500ಕ್ಕೂ ಹೆಚ್ಚು ಸೂರುಗಳ ಬವಣೆಗಳು ಕೂಡ ಇಂತಹುದೇ ಅನಾಹುತಗಳಿಗೆ ತಲುಪಿವೆ, ಅಧಿಕೃತವಾಗಿ ದುಡಿಸಿಕೊಳ್ಳುವ ಸರಕಾರಗಳು ಇಂತಹ ಕೋರೊನಾ ಕಾಲದಲ್ಲಿಯಾದರೂ ನ್ಯಾಯಸಮ್ಮತವಾಗಿ ನಡೆದುಕೊಳ್ಳುತ್ತಿಲ್ಲ, ಸರಕಾರದ ಆರ್ಥಿಕ ಸಂಕಷ್ಠಗಳನ್ನು ಹೇಳಿಕೊಂಡು ಸಂಪೂರ್ಣವಾಗಿ ಅತಿಥಿ ಉಪನ್ಯಾಸಕರುಗಳ ಬದುಕಿಗೆ ಕೊಳ್ಳಿ ಮಡಗಿರುವುದು ಅದು ಕಾಡ್ಗಿಚ್ಚಿನಂತೆ ಸುಡುತ್ತಲಿ ಸಾಗುತ್ತಿದೆ ಎನ್ನುವುದು ಸಾರ್ವಜನಿಕವಾಗಿ ಗೊತ್ತು ಮಾಡಿಕೊಳ್ಳಬೇಕಾದ ಅಗತ್ಯತೆಗಳಿವೆ.
ಇಂತಿವರಿಗೂ ಕೋರೊನಾ ಪ್ಯಾಕೆಜ್ ಗಳಿಲ್ಲ, ಯಾವುದೇ ಪರಿಹಾರಗಳಿಲ್ಲ, ಪ್ರತಿ ವರುಷವು ಹತ್ತಾರು ಬೇಡಿಕೆಗಳೊತ್ತು ಸಾಮೂಹಿಕ ಪ್ರತಿಭಟನೆಗಿಳಿಯುವ ಅತಿಥಿ ಉಪನ್ಯಾಸಕರುಗಳು ಕಳೆದ ವರುಷದಿಂದ ಕೋರೊನಾ ಸಂಕಷ್ಠಗಳಿಂದ ಅತೀವವಾಗಿ ಬಳಲುತ್ತಿದ್ದಾರೆ.

ಬದುಕು ಮತ್ತು ಬೆತ್ತಲೆ ಭರವಸೆ:
ಯೂಜಿಸಿ.ನಿಯಮಾನುಸಾರ ಸಂಬಳಕ್ಕಾಗಿ ದಶಕಗಳ ಕಾಲ ಧ್ವನಿ ಎತ್ತುವ ಅತಿಥಿ ಉಪನ್ಯಾಸಕರುಗಳ ಕೂಗು ಯಾವುದೇ ಸರಕಾರಗಳಿಗೂ ಕೇಳಿಸಲಿಲ್ಲವೆ..? ವಸತಿ ಶಿಕ್ಷಣ ಸಂಸ್ಥೆಗಳ ಹಾಸಿಗೆ ದಿಂಬುಗಳ ಖರೀದಿಯಲ್ಲಿ ನಡೆದ 19 ಕೋಟಿ ಅಕ್ರಮ ಅವ್ಯವಹಾರದ ಸಿಐಡಿ ತನಿಖಾ ವರದಿ ಯಾಕಿನ್ನೂ ಬಹಿರಂಗವಾಗಿಲ್ಲ..?
ಅತಿಥಿ ಉಪನ್ಯಾಸಕರ ಮುಂಬಡ್ತಿಗಳನ್ನು ವಂಚಿಸುವ ಪ್ರಾಧಿಕಾರಗಳ ಮೇಲೆ ಶಿಸ್ತುಕ್ರಮ ಜರುಗಿಸಿಲ್ಲವೇಕೆ..? ಬ್ಯಾಕ್‌ಲಾಗ್ ಹುದ್ದೆಗಳ ನೇರ ನೇಮಕಾತಿಗೆ ಮುಂದಾಗದಿರುವ ಸರಕಾರದ ಮುಂದಿನ ನಿಲುವುಗಳೇನು..?

ಇಂತಹ ನೂರಾರು ಪ್ರಶ್ನಾವಳಿಗಳಲ್ಲಿ ಅತಿಥಿ ಉಪನ್ಯಾಸಕರ ಬದುಕು ನಿಂತ ನೀರಾಗಿದೆಯಲ್ಲದೆ – ಶೋಷಿತ ಜೀವನದಂತೆ ರವರವ ನರಳಾಡುತ್ತಿರುವುದು ಅಕ್ಷರಶಃ ಸತ್ಯ ಎನ್ನಬಹುದಾಗಿದೆ.
ಮುಂದುವರೆದಂತೆ ಅತಿಥಿ ಉಪನ್ಯಾಸಕರ ಗೋಳಿಗೆ ಅಂತಿಮವೇ ಇಲ್ಲಿ ಇಲ್ಲವಾಗಿದೆ ಬೇಕಿದ್ರೆ ಕೆಲಸ ಮಾಡಿ ಇಲ್ಲವೇ ಮನೆಗೆ ಹೋಗಿ ಎನ್ನುವ ಸರ್ವಾಧಿಕಾರಿ ದೋರಣೆಗಳು ಅತಿಥಿ ಉಪನ್ಯಾಸಕರ ಬದುಕಿನಲ್ಲಿ ಸರ್ವಕಾಲಕ್ಕೂ ಶಾಶ್ವತವೇ ಆಗಿ ಹೋಗುತ್ತಿದೆ,

ಅತಿಥಿ ಉಪನ್ಯಾಸಕರ ಬದುಕಿನಲ್ಲಿ ಅತಂತ್ರವಾಗಿದ್ದರು ಗುಣಮಟ್ಟ ಶಿಕ್ಷಣ ಮಾನದಂಡಗಳನುಸಾರ ವೃತ್ತಿಯನ್ನು ಆರಂಭಿಸಿ ಬದುಕು ಕಟ್ಟಿಕೊಂಡಿರುವ ರಾಜ್ಯದಲ್ಲಿ 14500 ಕ್ಕೂ ಹೆಚ್ಚು ಉಪನ್ಯಾಸಕರಿದ್ದಾರೆ ಇದರಲ್ಲಿ 9 ಸಾವಿರ ಮಹಿಳಾ ಅತಿಥಿ ಉಪನ್ಯಾಸಕರಿದ್ದಾರೆ ಎಂದು ಹೇಳಲಾಗುತ್ತದೆ.
ಯೂಜಿಸಿ ನಿಯಮನುಸಾರವಾಗಿ ಅತಿಥಿ ಉಪನ್ಯಾಸಕರಿಗೆ ಅರೆಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳುವ ಇಂತಿವರುಗಳಿಗೆ ಎಲ್ಲಿದೆ ಯೂಜಿಸಿ ಅನ್ವಯ ಸಂಬಳವಿಲ್ಲ, 1990 ರಿಂದ 1994 ರ ವರೆಗೆ ಅರೆಕಾಲಿಕ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿಕೊಳ್ಳಲಾ ಗುತ್ತಿಲ್ಲ ಆಗಾಗ್ಗೆ 2000ಕ್ಕೂ ಹೆಚ್ಚು ಹುದ್ದೆಗಳನ್ನು ಹೊಸದಾಗಿ ನೇಮಕಾತಿ ಮಾಡಲು ಕಾಲೇಜು ಶಿಕ್ಷಣ ಇಲಾಖೆ 3 ಭಾರಿ ತಿದ್ದುಪಡಿ ಮಾಡಿ ಅದಿಸೂಚನೆ ಹೊರಡಿಸಿದ್ದರು ಅರೆಕಾಲಿಕ ಉಪನ್ಯಾಸಕರನ್ನೇ ಗಣನೆಗೆ ತೆಗೆದುಕೊಂಡು ಖಾಯಂ ಗೊಳಿಸಲು ಹೆಣಗಾಡುತ್ತಿರುವ ಉನ್ನತ ಶಿಕ್ಷಣ ಮಂಡಳಿ ಕೆಟ್ಟು ಕೆರ ಹಿಡಿಯುತ್ತಿದೆ.

ಸಾಕಷ್ಟು ನ್ಯೂನ್ಯತೆ, ಗೊಂದಲಗಳಿಗೆ ಕಾರಣವಾಗುತ್ತಿರುವ ಸಿಇಟಿ ನೇಮಕಾತಿ ಬಿಟ್ಟು ಉನ್ನತ ಶಿಕ್ಷಣದ ಗುಣಮಟ್ಟದ ಕಾಪಾಡುವ ದೃಷ್ಠಿಯಿಂದ 1994 ರ ಹಿಂದಿನಿಂದಲೂ ಅತಿಥಿ ಉಪನ್ಯಾಸಕ ವೃತ್ತಿಯಲ್ಲಿ ತೊಡಗಿರುವವರು ಭೊದನಾ ಅನುಭವ ಹೊಂದಿದ್ದರು ಸೇವಾಹಿರಿತನದ ಆಧಾರದ ಮೇಲೆ ಹಂತ ಹಂತವಾಗಿ ಖಾಯಂ ಮಾಡಿಕೊಂಡು ಯೂಜಿಸಿ ರಿತ್ಯಾ ಸಂಬಳವನ್ನು ನೀಡಲಾಗದ ಯಾವುದೇ ಅಧಿಕಾರಿಗಳು ಇಂದಿಗೂ ಅತಿಥಿ ಉಪನ್ಯಾಸಕರ ಬದುಕನ್ನು ಅಪಹಾಸ್ಯಕ್ಕೆ ತಳ್ಳುತ್ತಿದ್ದಾರೆ ಎನ್ನುವುದು ಸಾರ್ವಜನಿಕವಾಗಿ ಇನ್ನೂ ತಿಳಿದಿರದ ಸಂಗತಿ.

ಮೊದಲಿನಿಂದಲೂ ಸಿಇಟಿ ಎಂಬುವ ಅವೈಜ್ಞಾನಿಕ ನೇಮಕಾತಿ ಪದ್ದತಿ ಹಾಗೂ ಅರಕಾಲಿಕ ಉಪನ್ಯಾಸಕರನ್ನೆ ಖಾಯಂ ಮಾಡಿಕೊಳ್ಳಬೇಕೆಂಬ ಕೂಗು ಪ್ರತಿ ವರುಷವೂ ಧರಣಿ ಪ್ರತಿಭಟನೆಯ ಮೂಲಕ ಆಡಳಿತ ಸರ್ಕಾರದ ಯಾವ ಮೊಗಸಾಲೆಗಳಲ್ಲೂ ಪ್ರತಿಧ್ವನಿಸಲೇ ಇಲ್ಲ ಇಂತಿವರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಯಾವ ವಿಧ್ಯಾರ್ಥಿ ಸಂಘಟನೆಗಳಾಗಲಿ ಜನಪರ ಸಂಘಟನೆಗಳಾಗಲಿ ಅರೆಕಾಲಿಕ ಉಪನ್ಯಾಸಕರಿಗೆ ಬೆಂಬಲಿಸಲೇ ಇಲ್ಲ, ಯಾರಿಗೂ ಬೇಡದ ಬದುಕಿನ ಅತಂತ್ರದಲ್ಲಿ ವೃತ್ತಿ ಜೀವನದಲ್ಲೇ ತೆವಳುಕೊಂಡು ಸಾಗುತ್ತಿರುವ ಅತಿಥಿ ಉಪನ್ಯಾಸಕರಿಗೆ ಸಾಮಾಜಿಕ ನ್ಯಾಯ ಕೊಡುವ ಹಿತ ಸರ್ಕಾರದ ಆಡಳಿತ ಎಲ್ಲಿದೆ..? ಎನ್ನುವ ನೂರು ಪ್ರಶ್ನೆಗಳು ಅತಿಥಿ ಉಪನ್ಯಾಸಕರ ಅಡ್ಡೆಯಲ್ಲಿ ಪ್ರತಿಧ್ವನಿಸುತ್ತಿದೆ,

ಸಿಇಟಿ ನೇಮಕಾತಿ ಪ್ರಕ್ರೀಯೇಯ ಗೊಂದಲ..?
ಸಿಇಟಿ ಸಂದರ್ಶನಕ್ಕೂ ಕಾಲೇಜು ಶಿಕ್ಷಣ ಇಲಾಖೆಗೂ ಅಕ್ರಮ ಸಂಬಂಧಗಳಿವೆ ಹೀಗಾಗಿಯೇ ರಾಜ್ಯದಲ್ಲಿ ಸೇವಾ ಹಿರಿತನ ಹಾಗೂ ಸೇವ ಭದ್ರತೆ ಸೇರಿದಂತೆ ಶಿಕ್ಷಣ ಗುಣಮಟ್ಟವನ್ನು ಕಾಯ್ದುಕೊಳ್ಳುವ ಅರ್ಹತೆ ಹೊಂದಿರುವ 14500 ಅತಿಥಿ ಉಪನ್ಯಾಸಕರನ್ನು ಗಣನೆಗೆ ತೆಗೆದುಕೊಳ್ಳದೆ ಸಿ,ಇ.ಟಿ ನೇಮಕಾತಿಗೆ ಮುಂದಾಗಿದೆ,
ಹೌದು 2014-2015 ರ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ 2000ಕ್ಕೂ ಹೆಚ್ಚು ಹುದ್ದೆಗಳನ್ನು ಸಿ.ಇ.ಟಿ ನೇಮಕಾತಿ ಮೂಲಕ ತುಂಬಿಕೊಳ್ಳುವ ಯತ್ನದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಶಾಮಿಲಾಗಿದ್ದಾರೆ ಎನ್ನುವ ನಿಖರತೆಗಳಿದ್ದವು.
ಹೀಗಾಗಿಯೇ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಲೆ ನಿಲ್ಲುತ್ತಿಲ್ಲ ಎಂಬುವುದು ಇಲ್ಲಿ ಸಾಬೀತಾಗುತ್ತದೆ ಇದುವರೆಗೂ ಈ ಪ್ರಕ್ರೀಯೇಯಲ್ಲಿ ಉಲ್ಬಣವಾಗುತ್ತಿರುವ ಗೊಂದಲಗಳು ಮೇರೆ ಮೀರಿವೆ.

ಸಾಲದಕ್ಕೆ ಕಾಲೇಜು ಶಿಕ್ಷಣ ಇಲಾಖೆಯ ಸೇವೆಯಲ್ಲಿರುವ ಅಧ್ಯಾಪಕೇತರ ನೌಕರರಿಗೆ ಶೇಕಡ 4 ರಷ್ಟು ಹುದ್ದೆಗಳ ಮೀಸಲು ನಿಯಮಗಳನ್ನು ಅನುಸರಿಸಲಾಗಿಲ್ಲ ಇಲ್ಲಿ ಪ್ರಮುಖವಾಗಿ ಹಾಲಿ ಸೇವಾ ಹುದ್ದೆಯಲ್ಲಿರುವ ಅತಿಥಿ ಉಪನ್ಯಾಸಕರನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಇಲ್ಲಿ ಸಿಇಟಿ ಸಂದರ್ಶ ನಕ್ಕೆ ಎಡತಾಕುವವರು ಎನ್‌ಇಟಿ, ಪಿಹೆಚ್‌ಡಿ, ಎಸ್‌ಎಲ್‌ಟಿ,ಎಂಫಿಲ್ ರ್‍ಯಾಂಕ್ ಪಡೆದವರ ಪಟ್ಟಿಯಲ್ಲಿ ಶೇಕಡ ಮುಕ್ಕಾಲು ಭಾಗ ಹೊರರಾಜ್ಯದ ಕರೆಸ್ಪಾಂಡೆನ್ಸ್ ಯುನಿರ್ವಸಿಟಿ ಗಳ ಮಾನ್ಯತೆ ಪತ್ರ ಹೊಂದಿರುವುದು ನೋಡಿದರೆ ಇಂತಿವೆಲ್ಲಾ ನಕಲಿ ಸರ್ಟಿಪಿಕೆಟ್ ಎಂಬುವ ವರಾತಗಳು ಕಂಡು ಬಂದಿದೆ. ಹೀಗಿದ್ದರೂ ಸಿಇಟಿ ಸಂದರ್ಶನವೇ ಅಗತ್ಯ ಎನ್ನುವ ಈ ಮಖೇಡಿ ಉನ್ನತಾಧಿಕಾರಿಗಳ ತೆಕ್ಕೆಗೆ ಕೋಟಿ ಕೋಟಿ ಹಣ ಸೇರುತ್ತಿರುವುದು ಈ ಮೇಲ್ನೋಟಕ್ಕೆ ಕಾಣಬರುತ್ತಿದೆ.

ಇಂತಹ ಸಿಇಟಿ ಸಂದರ್ಶನದ ಬಾನಗಡಿಯ ಹಿಂದೆ.ಗುತ್ತಿಗೆ ಆಧಾರಿತ ಉಪನ್ಯಾಸಕರಾಗಿ ಸಂದರ್ಶನ ನೇಮಕಾತಿಯಾಗುತ್ತಿದ್ದವರು 1990 ರಿಂದ ಹಂಗಾಮಿ ಅರೆಕಾಲಿಕಾ ಉಪನ್ಯಾಸಕರಾಗಿ ವೃತ್ತಿಯನ್ನು ಮುಂದುವರೆಸುತ್ತಿದ್ದವರಿಗೆ ಆದಾಗಿನಿಂದ ನೀಡುತ್ತಿದ್ದ ಸಂಬಳ 1200 ನಂತರ 2500 ತದನಂತರ 4000 ಈ ನಂತರದಲ್ಲಿ ಪರಿಸ್ಥಿತಿಯನ್ನು ಮನಗಂಡು ಅತಿಥಿ ಉಪನ್ಯಾಸಕರ ಗೋಳಿನ ಬದುಕಿಗೆ ಆಸರೆಯಾಗಿದ್ದು ಮಾಜೀ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಅವರು ಸಿಎಂ ಆಗಿದ್ದ ವರುಷದಲ್ಲಿ 10000 ಸಾವಿರ ಸಂಬಳ ನೀಡುವಂತೆ ಆದೇಶಿಸಿದ್ದರು.
ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಬದಲಾವಣೆಗಳು ಬೇಡಿಕೆಗಳು ಈಡೇರದೇ ಅತಿಥಿ ಉಪನ್ಯಾಸಕರು ಬಳಲುತ್ತಿರುವುದು ಪ್ರಸ್ತುತ ಬಿಜೆಪಿ ನೇತೃತ್ವದ ಸರಕಾರಕ್ಕಾಗಲಿ ಇನ್ನೂ ಮನವರಿಕೆಯಾಗಿಲ್ಲ.

ಯಾಕಿಷ್ಟು ವಿಸ್ತೃತ ವಿವರಣೆಗಳು ಅಗತ್ಯವಿತ್ತೇ..? ಎನ್ನುವ ಪ್ರಶ್ನೆಗಳು ಬರಬಹುದು ಆದರೆ ಯಾವ ಸಂಗತಿಗಳು ಅಧ್ಯಯನಶೀಲವಲ್ಲದೆ ಅಲ್ಲಿನ ಸಂಕಟಗಳು ಅರ್ಥವಾಗುವುದಿಲ್ಲ ಬದಲಿಗೆ ಅದು ಹಾಗೆಯೇ ಗೋರಿಕಟ್ಟಿಕೊಂಡು ಬಿಡುತ್ತದೆ, ಹೀಗಾಗಿ ಅಯಾ ಕಾಲಘಟ್ಟದಲ್ಲಿಯ ವಿವರಗಳನ್ನು ಇಲ್ಲಿ ಲಗತ್ತಿಸಲೇ ಬೇಕಾದ ಪ್ರಮೇಯವಿತ್ತು ಎಂದು ಭಾವಿಸಿ ಬವಣೆಗಳಲ್ಲಿ ತೊಳಲಾಡುತ್ತಿರುವ ಸಾಕಷ್ಟು ವಿವಿಧ ಸ್ತರದ ಶಿಕ್ಷಕರನ್ನು ಹಾಗೂ ಉಪನ್ಯಾಸಕರನ್ನು ಮಾತನಾಡಿಸಿದ್ದೇನೆ, ನಿಜಕ್ಕೂ ವಿದ್ಯಾವಂತರಾಗಿ, ಪ್ರಬುದ್ದ ಸ್ವಾಭಿಮಾನಿ ವರ್ಗವಿದು ಎಂದೆನಿಸಿತು, ಅವರ ಸಂಕಟಗಳಲ್ಲಿಯೇ ನಕ್ಕು ನಮ್ಮಗಳ ಹಣೆಬರಹ ಎನ್ನುವಾಗ ಅಳಿದುಳಿದ ಬದುಕು ದೂಡಿ ನಿರಾಯಸವಾಗಿ ಕಣ್ಣು ಮುಚ್ಚುವುದಷ್ಟೆ ಉಳಿದಿರುವುದು ಎನ್ನುವ ಭಾವ ಆ ಮಾತಿನಲ್ಲಿ ಅಡಗಿತ್ತು,

ಒಟ್ಟಿನಲ್ಲಿ ಮಾನವೀಯತೆಗಳು ಇನ್ನೂ ಸಮಾಜದಲ್ಲಿ ಬದುಕುಳಿದಿದೆ ಎನ್ನುವುದು ಹೌದು ಆದರೆ ಅಂತಹ ಮಾನವೀಯ ಮನಸುಗಳಿಗೆ ಇಂತಿವರ ನೋವು-ಸಂಕಟ, ದುಃಖ ದುಮ್ಮಾನಗಳ ಅರಿವು ಉಂಟಾದರೆ ನಿಜಕ್ಕೂ ಈ ಕೋರೊನಾ ಕಾಲಮಾನದಲ್ಲಿ ಅವರ ನೆರವಿಗೆ ದೌಡಾಯಿಸುತ್ತಾರೆ ಎನ್ನುವ ಅಂಬೋಣದೊಂದಿಗೆ ವಾಸ್ತವ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಗಾರಾ.ಶ್ರೀನಿವಾಸ್

LEAVE A REPLY

Please enter your comment!
Please enter your name here