ಬಳ್ಳಾರಿಯಲ್ಲಿ ನರೇಗಾ ದಿನ ಆಚರಣೆ,ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಒಳ್ಳೆಯ ಕಾರ್ಯ ಮಾಡಿ:ಜಿಪಂ ಸಿಇಒ ಕೆ.ಆರ್.ನಂದಿನಿ.

0
101

.

ಬಳ್ಳಾರಿ,ಫೆ.10 : ಗ್ರಾಮೀಣ ಜನರ ದಿನನಿತ್ಯದ ಅಗತ್ಯತೆ, ಜೀವನ ವಿಧಾನವನ್ನು ಬದಲಾಯಿಸುವಲ್ಲಿ ಗ್ರಾಮೀಣ ಮಟ್ಟದ ಅಧಿಕಾರಿಗಳ ಶ್ರಮ ತುಂಬಾ ಮುಖ್ಯ. ಹಳ್ಳಿಯ ಜನ ನಮ್ಮ ಮಾತು ಕೇಳುವುದಿಲ್ಲ ಎನ್ನುವ ಮನೋಭಾವನೆಯನ್ನು ಬಿಡಿ, ಪ್ರೀತಿಯಿಂದ ಹೇಳಿದ್ರೆ ಎಲ್ರೂ ಕೆಲಸ ಮಾಡ್ತಾರೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಒಳ್ಳೆಯ ಕಾರ್ಯ ಮಾಡಿ ಎಂದು ಜಿಪಂ ಸಿಇಒ ನಂದಿನಿ ಕೆ.ಆರ್ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಬಳ್ಳಾರಿ ಜಿಪಂ ವತಿಯಿಂದ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಉದ್ಯೋಗ ಖಾತರಿ ಯೋಜನೆಯ 2020-21ರ ಜಿಲ್ಲಾಮಟ್ಟದ ನರೇಗಾ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಉತ್ತಮ ಸಾಧನೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದು ಅತ್ಯುತ್ತಮ ತಂಡದಿಂದ ಉತ್ತಮ ಕೆಲಸ ಮೂಡಿ ಬರಲು ಸಾಧ್ಯ. ಗ್ರಾಮೀಣ ಮಟ್ಟದ ಅಧಿಕಾರಿಗಳ ಕಠಿಣ ಪರಿಶ್ರಮ, ಸತತ ಪ್ರಯತ್ನದಿಂದ ಆಯಾ ಗ್ರಾಮಗಳ ಜನರ ಜೀವನ ವಿಧಾನವನ್ನು ಬದಲಾಯಿಸಬಹುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತಿ ವಹಿಸಿ ಜನರಿಗೆ ನರೇಗಾದ ಎಲ್ಲಾ ಪ್ರಯೋಜನೆಗಳನ್ನು ಜನರಿಗೆ ತಲುಪಿಸಿ. ನರೇಗಾ ಎಂದರೆ ಮಾಡಿದ ಕೆಲಸಕ್ಕೆ ಸರಿಯಾಗಿ ಕೂಲಿ ಬರಲ್ಲ ಎನ್ನುವ ತಪ್ಪು ಕಲ್ಪನೆ ಜನರಲ್ಲಿದೆ. ಅದನ್ನು ದೂರ ಮಾಡಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಇನ್ನೂ ಹೆಚ್ಚಿನ ಜನರು ಇದರ ಭಾಗಿಯಾಗುವಂತೆ ಮಾಡಿ ಎಂದರು.
ನರೇಗಾ ಯೋಜನೆಯಡಿಯಲ್ಲಿ ನಮ್ಮ ಜಿಲ್ಲೆಯಲ್ಲಿ ನಿರ್ಮಾಣವಾದ ಗ್ರಂಥಾಲಯ,ಅಂಗನವಾಡಿ ಕೆಂದ್ರ, ಶಾಲೆಯ ಆವರಣ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಬೇರೆ ಬೇರೆ ರಾಜ್ಯಗಳು ಮಾದರಿಯಾಗಿ ತೆಗೆದುಕೊಳ್ಳುತ್ತಿವೆ. ಬಳ್ಳಾರಿ ಜಿಲ್ಲೆಯ ಇಡೀ ದೇಶಕ್ಕೆ ಮಾದರಿ ಎಂದು ಅವರು ಹೇಳಿದರು.
ಬಳ್ಳಾರಿ ಜಿಪಂ 99 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಆರು ತಿಂಗಳ ವ್ಯಾಪ್ತಿಯಲ್ಲಿ ಅನೇಕ ಕೆಲಸಗಳನ್ನು ಮಾಡಲಾಗಿದೆ. 14ನೇ ಹಣಕಾಸು ಯೋಜನೆಯ ಬಾಕಿ ಉಳಿದ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸದೆ ಆ ಉಳಿದ ಹಣ ಮತ್ತು ಅದರ ಬಡ್ಡಿ ಹಣವನ್ನು ಗ್ರಾಮೀಣ ಭಾಗದಲ್ಲಿ ಶಾಲೆ, ಅಂಗನವಾಡಿ ಮತ್ತು ಗ್ರಂಥಾಲಯ ನಿರ್ಮಾಣ ಮಾಡಲಾಗುತ್ತದೆ. ಕಾರ್ಯಕ್ರಮದ ಮೂಲಕ ನರೇಗಾ ಯೋಜನೆಯಡಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದವರಿಗೆ ಪ್ರಶಂಸೆ ಪತ್ರ ಮತ್ತು ಕಿಟ್ ವಿತರಿಸಲಾಗುತ್ತದೆ. ಈ ಮೂಲಕ ಇನ್ನೂ ಹೆಚ್ಚಿನ ಜನರು ನರೇಗಾ ಯೋಜನೆಯಲ್ಲಿ ಗುಣಮಟ್ಟದ ಕಾರ್ಯವನ್ನು ಮಾಡಲು ಪ್ರೇರೇಪಿಸಲಾಗುತ್ತಿದೆ ಎಂದರು.
ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ್ ಅವರು ಮಾತನಾಡಿ, ನರೇಗಾ ಯೋಜನೆ ಗ್ರಾಮೀಣ ಜನರಿಗೆ ಒಂದು ವರದಾನದಂತೆ ಮಾರ್ಪಾಡಾಗಿದೆ. ಹಳ್ಳಿಯ ಬಡ ಜನರು ಹೊಟ್ಟೆಪಾಡಿಗಾಗಿ ತಮ್ಮ ಊರುಗಳನ್ನು ಬೇರೆಡೆ ಹೋಗಿ ದುಡಿದು ಬದುಕುವ ಸ್ಥಿತಿ ಇತ್ತು; ಈಗ ನರೇಗಾದಿಂದ ಈ ಕೆಲಸಕ್ಕೆ ಬ್ರೇಕ್ ಬಿದ್ದಿದೆ. ಅವರನ್ನ ತಮ್ಮ ಗ್ರಾಮಗಳಲ್ಲಿಯೇ ಉಳಿಸಿ ಅವರ ಜೀವನ ಸಾಗಿಸಲು ಕೆಲಸ ನೀಡುವ ಮೂಲಕ ಅಪರೂಪದ ಕೆಲಸವನ್ನು ನರೇಗಾ ಮೂಲಕ ಮಾಡಲಾಗುತ್ತಿದೆ ಎಂದರು.
ನರೇಗಾ ಯೋಜನೆ ಎಲ್ಲಾ ಸಾರ್ವಜನಿಕರಿಗೆ ತಲುಪುವ ನಿಟ್ಟಿನಲ್ಲಿ ಆಯಾ ಗ್ರಾಮ ಪಂಚಾಯತಿಯ ಅಧಿಕಾರಿಗಳು ಕಾರ್ಯನಿರ್ವಹಿಸಲಿ. ನರೇಗಾ ದಿನಾಚರಣೆ ಪ್ರಯುಕ್ತ ಪ್ರಶಂಸೆ ಪತ್ರವನ್ನು ನೀಡಿ ಗೌರವಿಸುವುದರ ಮೂಲಕ ಇನ್ನೂ ಹೆಚ್ಚಿನ ಜನರು ಸಕ್ರಿಯವಾಗಿ ಈ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ. ಇದು ಇತರರಿಗೂ ಮಾದರಿಯಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 1ಲಕ್ಷದ 80 ಸಾವಿರ ಕುಟುಂಬಗಳು ಕಾರ್ಯ: ನರೇಗಾ ಯೋಜನೆ ತಳಮಟ್ಟದಿಂದ ಯಶಸ್ವಿಯಾಗಲು ಕಾಯಕ ಬಂಧುಗಳ ಕಾರ್ಯ ತುಂಬಾ ಮುಖ್ಯ. ಜಿಲ್ಲೆಯಲ್ಲಿ 1 ಲಕ್ಷದ 80 ಸಾವಿರ ಕುಟುಂಬಗಳು ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸಿವೆ. ಇದರಲ್ಲಿ 12ಸಾವಿರ ಕುಟುಂಬಗಳು 100 ಸಾವಿರ ಕಾಯಕ ದಿನಗಳನ್ನು ಪೂರ್ಣಗೊಳಿಸುವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರು ಇದರ ಪ್ರಯೋಜನೆ ಪಡೆದುಕೊಳ್ಳುವಂತಾಗಬೇಕು ಎಂದು ಜಿಪಂ ಸಹಾಯಕ ಕಾರ್ಯದರ್ಶಿ ಕುಮಾರ ಆರ್.ಕೆ. ಅವರು ತಿಳಿಸಿದರು.
ಗಂಡು – ಹೆಣ್ಣು ಸಮಾನರು ಎನ್ನುವ ಉದ್ದೇಶದಿಂದ ನರೇಗಾದಲ್ಲಿ ಸಮಾನ ಕೂಲಿ ನೀಡಲಾಗುತ್ತದೆ.ಇದರಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ಅವರು ದುಡಿಯುವ ಕೈಗಳಾಗಿ ಪರಿವರ್ತನೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿಗಳಾದ ಶರಣಬಸಪ್ಪ, ಅಶೋಕ ತೋಟದ್, ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಜಿಪಂ ಸಹಾಯಕ ಕಾರ್ಯದರ್ಶಿ ಪ್ರಮೋದ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶರಣಪ್ಪ ಪಿ.ಬೋಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶರಣಪ್ಪ ಮುದಗಲ್, ರೇಷ್ಮೆ ಇಲಾಖೆಯ ಉಪ ನಿರ್ದೇಶಕರಾದ ಸುದೀರ್, ಜಿಪಂ ಸದಸ್ಯರಾದ ಎ.ಮಾನಯ್ಯ, ಕೋಟೇಶ್ವರ ರೆಡ್ಡಿ, ಅಲ್ಲಂ ಪ್ರಶಾಂತ್, ರಾಧಾಧರಪ್ಪ ನಾಯಕ್, ರತ್ನ ಪ್ರಕಾಶ ಮತ್ತು ಜಿಪಂ ಸಿಬ್ಬಂದಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here