ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ಕಾರ್ಯಾಗಾರ,ಸಾರ್ವಜನಿಕ ಸೇವೆಗಳನ್ನು ಕ್ಷೀಪ್ರಗತಿಯಲ್ಲಿ ತಲುಪಿಸುವಲ್ಲಿ ಇ-ಆಡಳಿತ ಸಹಕಾರಿ:ಅಪರ ಜಿಲ್ಲಾಧಿಕಾರಿ ಮಂಜುನಾಥ

0
95

ಬಳ್ಳಾರಿ,ಫೆ.17: ಸರ್ಕಾರದ ಯೋಜನೆಗಳು, ನೀತಿ-ನಿಯಮಗಳು ಹಾಗೂ ಸರ್ಕಾರದ ಸಕಲ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಅತ್ಯಂತ ಕ್ಷೀಪ್ರಗತಿಯಲ್ಲಿ ತಲುಪಿಸುವಲ್ಲಿ ಸೈಬರ್ ವ್ಯವಸ್ಥೆ ಮತ್ತು ಇ-ಆಡಳಿತ ವ್ಯವಸ್ಥೆ ಅತ್ಯಂತ ಸಹಕಾರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಹೇಳಿದರು.
ನಗರದ ಜಿಲ್ಲಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಗ್ರೂಪ್-ಎ ಅಧಿಕಾರಿಗಳಿಗಾಗಿ ಬುಧವಾರ ಏರ್ಪಡಿಸಿದ್ದ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರಕಾರದಲ್ಲಿ ಇತ್ತೀಚಿನ ದಿನಗಳಲ್ಲಿ ಇ-ಆಡಳಿತ ವ್ಯವಸ್ಥೆ ಅತ್ಯಂತ ಪರಿಣಾಮಕಾರಿಯಾಗಿದೆ ಮತ್ತು ಜನರ ಸಮಸ್ಯೆ ಮತ್ತು ಸೇವೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗಿದೆ. ಸೈಬರ್ ವ್ಯವಸ್ಥೆಯಿಂದ ಅನುಕೂಲ ಎಷ್ಟಿದೆಯೋ ಅನಾನುಕೂಲವೂ ಅಷ್ಟೇ ಇದೆ;ಈ ಕುರಿತು ನಾವೆಲ್ಲರೂ ತಿಳಿದುಕೊಳ್ಳಬೇಕಿದೆ ಎಂದು ಹೇಳಿದ ಅಪರ ಜಿಲ್ಲಾಧಿಕಾರಿ ಮಂಜುನಾಥ ಅವರು ಸರಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವೃತ್ತಿಕೌಶಲ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ರೀತಿಯ ತರಬೇತಿಗಳು ಅತ್ಯಂತ ಉಪಯುಕ್ತವಾಗಿದ್ದು,ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದರು.
ಬೆಳೆಯುತ್ತಿರುವ ಆಧುನಿಕ ಯುಗದಲ್ಲಿ ತಂತ್ರಜ್ಞಾನವು ತನ್ನದೇ ಆದ ಮಹತ್ವವನ್ನು ಪಡೆದಿದೆ. ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇಡೀ ಜಗತ್ತು ಒಂದು ಪುಟ್ಟ ಹಳ್ಳಿಯಂತೆ ಭಾಸವಾಗುತ್ತಿದೆ. ಸರ್ಕಾರದ ಇಲಾಖೆಗಳಲ್ಲಿ ಈ ಹಿಂದೆ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಕೇವಲ ಪತ್ರಗಳ ಮುಖಾಂತರ ಮಾತ್ರ ಮಾಹಿತಿ ರವಾನೆಯಾಗುತ್ತಿತ್ತು, ಮುಂದುವರೆದಂತೆ ದೂರವಾಣಿಯ ಅಭಿವೃದ್ಧಿಯಾಯಿತು. ಈಗ ಯಾವುದೇ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಹಂಚಿಕೊಳ್ಳುವಷ್ಟು ತಂತ್ರಜ್ಞಾನ ಬೆಳವಣಿಗೆಯಾಗಿದೆ. ಅಭಿವೃದ್ಧಿಯಾಗಿರುವ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಡಿಮೆ ಸಮಯದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಮಾಡುವ ಉದ್ದೇಶದಿಂದ ಇಂತಹ ಕಾರ್ಯಗಾರಗಳು ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತವೆ ಎಂದರು.
ಸಾರ್ವಜನಿಕರಿಗೆ ಗುಣಮಟ್ಟದ ಸೇವೆಯನ್ನು ಒದಗಿಸುವ ಮೂಲಕ ಸರ್ಕಾರದ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುವುದರ ಜೊತೆಗೆ ಅವರಿಗೆ ಆಯಾ ಇಲಾಖೆಗಳ ಬಗ್ಗೆ ಮನವರಿಕೆ ಮಾಡಿಕೊಳ್ಳುವ ಕೆಲಸವಾಗಲಿ. ಮನುಷ್ಯ ಹುಟ್ಟಿನಿಂದ ಸಾವಿನ ತನಿಖೆ ಕಲಿಕಾ ಪ್ರಕ್ರಿಯೆ ನಿರಂತರವಾಗಿ ಸಾಗುತ್ತದೆ. ಕಲಿಕೆಗೆ ಯಾವುದೇ ರೀತಿಯ ವಯಸ್ಸಿನ ಹಂಗಿಲ್ಲ, ಕಲಿಯುವ ಉತ್ಸಾಹ ಇರಬೇಕು ಅಷ್ಟೇ ಎಂದರು.
ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಾಲ ಕಾಲಕ್ಕೆ ಬದಲಾಗುತ್ತಿರುವ ತಂತ್ರಜ್ಞಾನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಹೆಚ್ಚಿನ ಕೌಶಲ್ಯ ಮತ್ತು ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಿ, ವೈಶಿಷ್ಟ್ಯಕ್ಕೆ ತಕ್ಕಂತೆ ವೃತ್ತಿ ತರಬೇತಿಯನ್ನು ಪಡೆಯಿರಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ರಮೇಶ ಕೋನರೆಡ್ಡಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಎಂ.ಸುನಿತಾ ಅವರು ಮಾತನಾಡಿದರು.
ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತದ ಕುರಿತು ಬಳ್ಳಾರಿ ಎನ್‍ಐಸಿ ಪ್ರಿನ್ಸಿಪಲ್ ಸಿಸ್ಟಮ್ ಅನಾಲಿಸ್ಟ್ ವೆಂಕಟರಮಣ ಹಾಗೂ ತಾಂತ್ರಿಕ ನಿರ್ದೇಶಕ ಶಿವಪ್ರಕಾಶ ವಸ್ತ್ರದ್ ಅವರು ತರಬೇತಿ ನೀಡಿದರು.
ನಂತರ ತರಬೇತಿಯಲ್ಲಿ ಭಾಗವಹಿಸಿದ್ದ ಗ್ರೂಪ್-ಎ ಅಧಿಕಾರಿಗಳಿಗೆ ತರಬೇತಿ ಕೇಂದ್ರದ ವತಿಯಿಂದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ತರಬೇತಿಕೇಂದ್ರದ ನಿವೃತ್ತ ಪ್ರಾಂಶುಪಾಲ ಶ್ರೀ ಹರಿ, ತರಬೇತಿ ಕೇಂದ್ರದ ಉಪಪ್ರಾಚಾರ್ಯ ಸುರೇಶಬಾಬು,ಬೋಧಕರಾದ ಶಿವರಾಜ ಸೇರಿದಂತೆ ತರಬೇತಿ ಕೇಂದ್ರದ ಸಿಬ್ಬಂದಿ ಇದ್ದರು. ತರಬೇತಿಯಲ್ಲಿ ವಿವಿಧ ಇಲಾಖೆಗಳ 40ಕ್ಕೂ ಹೆಚ್ಚು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here