ಬಳ್ಳಾರಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಆಸ್ತಿ ತೆರಿಗೆ ದರ ಪರಿಷ್ಕರಣೆ: ಸುಧೀರ್ಘ ಚರ್ಚಿಸಿ ನಿರ್ಧಾರ

0
112

ಬಳ್ಳಾರಿ,ಮೇ 18 : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ದರವನ್ನು ಈ ಸಾಲಿನಲ್ಲಿ ಶೇ.3ರಿಂದ ಶೇ.5ರಷ್ಟು ಪರಿಷ್ಕರಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಏಕಾಏಕಿ ನಿರ್ಧಾರ ಕೈಗೊಳ್ಳುವುದರ ಬದಲು ತೆರಿಗೆ,ನಿರ್ಧರಣೆ,ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಕೂಲಂಕುಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ರಾಜೇಶ್ವರಿ ಸುಬ್ಬರಾಯ್ಡು ಅವರ ಅಧ್ಯಕ್ಷತೆಯಲ್ಲಿ ನಗರದ ಜಿಪಂನ ನಜೀರ್‍ಸಾಬ್ ಸಭಾಂಗಣದಲ್ಲಿ ಬುಧವಾರ ನಡೆದ ಬಳ್ಳಾರಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ಸಮ್ಮತಿ ವ್ಯಕ್ತಪಡಿಸಿದರು.
ಆಸ್ತಿ ತೆರಿಗೆ ದರ ಪರಿಷ್ಕರಣೆ ಬಂದಾಗ ಏಕಾಏಕಿ ನಿರ್ಧಾರ ಬೇಡ.ಈಗಾಗಲೇ ಆಸ್ತಿ ತೆರಿಗೆ ಬಹಳಷ್ಟು ಹೊರೆಯಾಗಿದೆ ಎಂಬ ಅಭಿಪ್ರಾಯಗಳು ನಾಗರಿಕರಿಂದ ಕೇಳಿಬರುತ್ತಿವೆ.ಸಾಧ್ಯವಾದಷ್ಟು ಚರ್ಚಿಸಿ ನಿರ್ಧರಿಸೋಣ. ಕಾರ್ಪೋರೇಶನ್ ವ್ಯಾಪ್ತಿಯಲ್ಲಿದ್ದು ಕಾರ್ಪೋರೇಶನ್‍ನ ಎಲ್ಲ ಸೌಲಭ್ಯಗಳನ್ನು ಅನುಭವಿಸುತ್ತಿದ್ದರೂ ತೆರಿಗೆ ಪಾವತಿಸಿದಂತವರನ್ನು ಗುರುತಿಸಿ ತೆರಿಗೆ ವಿಧಿಸುವ ಕೆಲಸ ಮಾಡಬೇಕು. ಪಾಲಿಕೆಯ ಆದಾಯ ವಿಷಯ ಬಂದಾಗ ವಿಶೇಷ ಗಮನಹರಿಸಬೇಕು ಎಂಬ ಅಭಿಪ್ರಾಯವನ್ನು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಪಾಲಿಕೆ ಸದಸ್ಯರಾದ ಇಬ್ರಾಹಿಂಬಾಬು ಸೇರಿದಂತೆ ಅನೇಕರ ಪಾಲಿಕೆ ಸದಸ್ಯರು ಒತ್ತಾಯಿಸಿದರು.
ಪ್ರತಿ ವರ್ಷ ಶೇ.3ರಿಂದ ಶೇ.5ರಷ್ಟು ಆಸ್ತಿ ತೆರಿಗೆ ದರ ಪರಿಷ್ಕರಣೆ ಕುರಿತು ಸರಕಾರದ ಆದೇಶವಾಗಿದ್ದು,ಅದರನುಸಾರ ಕ್ರಮವಹಿಸಲಾಗುವುದು. ಸೌಲಭ್ಯ ಅನುಭವಿಸುತ್ತಿದ್ದರೂ ತೆರಿಗೆ ಕಟ್ಟದವರನ್ನು ಗುರುತಿಸಿ ಆದಾಯ ಹೆಚ್ಚಳಕ್ಕೆ ಚಿಂತನೆ ನಡೆಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಹೇಳಿದರು.
*ಬಳ್ಳಾರಿ ಸಿಟಿಯ ಮನೆಗಳಿಂದಲೇ ಪ್ರತಿನಿತ್ಯ ಹಾನಿಕಾರಕ ತ್ಯಾಜ್ಯ 750ರಿಂದ 1000 ಕೆಜಿ ಉತ್ಪತ್ತಿ!: ಬಳ್ಳಾರಿ ನಗರ ವ್ಯಾಪ್ತಿಯ ಮನೆಗಳಿಂದಲೇ ಪ್ರತಿನಿತ್ಯ 750ರಿಂದ 1000 ಕೆ.ಜಿ ಹಾನಿಕಾರ ತ್ಯಾಜ್ಯ(ಸ್ಯಾನಿಟರಿ ಪ್ಯಾಡ್,ಡೈಪರ್ಸ್,ಮಾಸ್ಕ್ ಇತ್ಯಾದಿ ಬಯೋಮೆಡಿಕಲ್ ತ್ಯಾಜ್ಯ) ಉತ್ಪತ್ತಿಯಾಗುತ್ತಿದೆ. ಅದನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಹೆಚ್ಚಿನ ಉಷ್ಣತೆಯಲ್ಲಿ ಸುಡಲಾಗುತ್ತಿದ್ದು,ಅದನ್ನು ಪ್ರತಿ ಕೆ.ಜಿ.ಗೆ 20 ರೂ.ಗಳಂತೆ ವೆಚ್ಚ ಮಾಡಲಾಗುತ್ತಿದೆ. ವರ್ಷಕ್ಕೆ ಇದರ ಅಂದಾಜು ವೆಚ್ಚ ಗರಿಷ್ಠ ರೂ.55 ಲಕ್ಷಗಳಿಂದ ರೂ.73ಲಕ್ಷಗಳಾಗುತ್ತಿದೆ. ಆಸ್ಪತ್ರೆಗಳು,ಮೆಡಿಕಲ್‍ಗಳು ಹಾಗೂ ಇನ್ನಿತರ ವೈದ್ಯಕೀಯ ಸಂಸ್ಥೆಗಳಿಂದ ಉತ್ಪತ್ತಿಯಾಗುವ ಹಾನಿಕಾರಕ ತ್ಯಾಜ್ಯವೇ ಬೇರೆಯಾಗಿದ್ದು,ಅದಕ್ಕೆ ಪ್ರತ್ಯೇಕ ನಿಯಮಗಳನ್ನು ಅನುಸರಿಸಲಾಗುತ್ತಿದೆ.
ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮ ಮತ್ತು ಸ್ವಚ್ಛ ಭಾರತ ಮಿಷನ್ ಮಾರ್ಗಸೂಚಿಗಳು ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನದ ಅನುಸಾರ ಪಾಲಿಕೆ ವ್ಯಾಪ್ತಿಯಲ್ಲಿ ಮನೆ-ಮನೆಯಿಂದ ಉತ್ಪತ್ತಿಯಾಗುವ ಹಾನಿಕಾರಕ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಹೆಚ್ಚಿನ ಉಷ್ಣತೆಯಲ್ಲಿ ಸುಡಲು ಪರವಾನಿಗೆ ಹೊಂದಿದ ಏಜೆನ್ಸಿಗಳಿಂದ ಅರ್ಜಿ ಅಹ್ವಾನಿಸಲಾಗಿತ್ತು.
ಸೂರ್ಯಕಾಂತ್ ಎನ್ವರಮೆಂಟಲ್ ಟೆಕ್ನಾಲಜಿಸ್ ಅವರು ಅರ್ಜಿ ಸಲ್ಲಿಸಿದ್ದು,ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದಾಗಿದ್ದು,ಅವರಿಗೆ 20 ರೂ.ಗಳಿಗೆ ಕೆಜಿಯಂತೆ ನಿತ್ಯ ಉತ್ಪತ್ತಿಯಾಗುವ 750ರಿಂದ 1000 ಕೆ.ಜಿ ಹಾನಿಕಾರ ತ್ಯಾಜ್ಯವನ್ನು ಸುಟ್ಟು ವಿಲೇವಾರಿ ಮಾಡಲು ಅಂದಾಜು ಗರಿಷ್ಠ ರೂ.55 ಲಕ್ಷಗಳಿಂದ ರೂ.73ಲಕ್ಷಗಳಾಗಲಿದೆ ಎಂದು ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.
80 ಲಕ್ಷ ರೂ.ವೆಚ್ಚದಲ್ಲಿ ಸಕ್ಕಿಂಗ್ ಮಷೀನ್ ಮತ್ತು ಸಾಲೀಡ್ ವೇಸ್ಟ್ ಯಂತ್ರೋಪಕರಣಗಳನ್ನು ಖರೀದಿಸಲು ಸಭೆಯು ಅನುಮೋದನೆ ನೀಡಿತು.
*ಪಾಲಿಕೆ ವಾಣಿಜ್ಯ ಮಳಿಗೆಗಳಿಗೆ ನಿಗದಿಪಡಿಸಿದ ದರಕ್ಕೆ ಸದಸ್ಯರ ಆಕ್ಷೇಪ: ಬಳ್ಳಾರಿ ಮಹಾನಗರ ಪಾಲಿಕೆಯ ವಾಣಿಜ್ಯ ಮಳಿಗೆಗಳಿಗೆ ನಿಗದಿಪಡಿಸಲಾಗುತ್ತಿರುವ ದರ ಕಡಿಮೆಯಾಗಿದ್ದು,ಒಪ್ಪಂದದ ಅವಧಿಯೂ 12 ವರ್ಷಗಳಷ್ಟಾಗಿದೆ;ಇದನ್ನು ಪರಿಷ್ಕರಿಸುವ ಮೂಲಕ ಪಾಲಿಕೆಗೆ ಆದಾಯ ಬರುವಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯ ಗಾದೆಪ್ಪ ಸೇರಿ ಅನೇಕ ಸದಸ್ಯರು ಒತ್ತಾಯಿಸಿದರು.
ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಏಕಮಾತ್ರ ಬಿಡ್ ಆಗಿರುವ ಮಳಿಗೆಗಳಿಗೆ ಧರ ಸಂದಾನ ಮಾಡಿ ಹೆಚ್ಚಿನ ಮೊತ್ತಕ್ಕೆ ಮಳಿಗೆಗಳನ್ನು ಬಾಡಿಗೆಗೆ ನೀಡಲು ಕ್ರಮವಹಿಸಲಾಗಿದ್ದು,ಇನ್ಮುಂದೆ ಕರೆಯುವ ಮಳಿಗೆಗಳ ಹರಾಜು ಸಂದರ್ಭದಲ್ಲಿ ಪಾಲಿಕೆ ಸದಸ್ಯರ ಕಾಳಜಿಯಂತೆ ಕ್ರಮವಹಿಸಲಾಗುವುದು ಎಂದರು.
ಶಿಡಗಿನಮೋಳ ಬಳಿಯ ಜಾನಕಿ ಕಾರ್ಪ್ ಲಿಮಿಟೆಡ್ ಅವರು ಹಗರಿ ನೀರು ಸರಬರಾಜು ಘಟಕದಿಂದ ಪ್ರತಿ ತಿಂಗಳು 5ಲಕ್ಷ ರೂ.ಗಳಂತೆ ಪಾವತಿಸಿ ಕಳೆದ 10 ವರ್ಷಗಳಿಂದ ನೀರು ಸರಬರಾಜು ಮಾಡಿಕೊಳ್ಳುತ್ತಿದ್ದ ಗುತ್ತಿಗೆ ಅವಧಿ ಮುಗಿದಿದ್ದು,ಅದನ್ನು ಇನ್ನೂ 10 ವರ್ಷಗಳ ಕಾಲ ನವೀಕರಣ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದು,ಅದನ್ನು 3 ವರ್ಷಗಳ ಅವಧಿಗೆ ನವೀಕರಿಸಲು ಮತ್ತು ಪ್ರತಿ ತಿಂಗಳ ಪಾವತಿಸುತ್ತಿದ್ದ 5ಲಕ್ಷ ರೂ.ಗಳ ದರವನ್ನು ಪರಿಷ್ಕರಿಸಿ ನೀಡಲು ಸಭೆಯು ಅನುಮೋದನೆ ನೀಡಿತು.
*ರಿಪಬ್ಲಿಕ್ ಸರ್ಕಲ್ ಇನ್ಮುಂದೆ ಭಗವಾನ್ ಮಹಾವೀರ ವೃತ್ತ..?: ಬಳ್ಳಾರಿಯ ಕೋಟೆ ಪ್ರದೇಶದ ಹತ್ತಿರವಿರುವ ರಿಪಬ್ಲಿಕ್ ಸರ್ಕಲ್ ಅನ್ನು ಭಗವಾನ್ ಮಹಾವೀರ ವೃತ್ತ ಅಂತ ನಾಮಕಾರಣ ಮಾಡುವುದಕ್ಕೆ ಸಂಬಂಧಿಸಿದಂತೆ ಪಾಶ್ರ್ವನಾಥ ಜೈನ್,ಶ್ವೇತಾಂಬರ ಸಂಘದವರು ಕೋರಿದ ಮನವಿ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಭಗವಾನ್ ಮಹಾವೀರ ವೃತ್ತ ಅಂತ ನಾಮಕರಣ ಮಾಡಿದರೇ ಸಾಲಲ್ಲ;ನಾಮಕರಣ ಮಾಡಿ ಅದರ ಅಭಿವೃದ್ಧಿಗೆ ಪಾಶ್ರ್ವನಾಥ ಜೈನ್,ಶ್ವೇತಾಂಬರ ಸಂಘದವರು ಏನು ಮಾಡುತ್ತಾರೆ ಎಂಬುದು ಕೂಡ ಮುಖ್ಯ. ಬರಿ ನಾಮಕರಣ ಮಾಡಿ ಕೈತೊಳೆದುಕೊಂಡರೇ ಉಪಯೋಗವಿಲ್ಲ;ಇದೇ ರೀತಿ ಇನ್ನೂ ಅನೇಕ ಸಂಘ-ಸಂಸ್ಥೆಗಳು ಬರುತ್ತವೆ. ಆದ ಕಾರಣ ಆ ಸಂಘದವರನ್ನು ಕರೆಯಿಸಿ ಅವರ ರೂಪುರೇಷೆಗಳನ್ನು ಆಲಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲು ಸದಸ್ಯರು ಸಮ್ಮತಿ ವ್ಯಕ್ತಪಡಿಸಿದರು.
ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆ ಮತ್ತು ದುರ್ಗಮ್ಮ ದೇವಸ್ಥಾನದ ಬಳಿಯ ಅಂಡರ್ ಬ್ರಿಡ್ಜಗಳ ತೆರೆದ ಬಾವಿಗಳ ಹೂಳು ತೆಗೆಯುವುದಕ್ಕೆ ಸಭೆ ಅನುಮೋದನೆ ನೀಡಿತು.
ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಸುಧೀರ್ಘ ಚರ್ಚೆ ನಡೆಯಿತು.
ಮಹಾನಗರ ಪಾಲಿಕೆಯ ಮೇಯರ್ ರಾಜೇಶ್ವರಿ ಸುಬ್ಬರಾಯ್ಡು ಅವರು ಮಾತನಾಡಿ, ಇದು ಮೊದಲನೇ ಸಭೆಯಾಗಿದ್ದು, ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಬಳ್ಳಾರಿ ನಗರದ ಜನರಿಗೆ ಅನುಕೂಲವಾಗಲಿ ಎಂದರು.
ಇದೇ ಸಂದರ್ಭದಲ್ಲಿ ಪಾಲಿಕೆ 4 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ತೆರಿಗೆ ನಿರ್ಧರಣೆ,ಹಣಕಾಸು ಮತ್ತು ಅಫೀಲುಗಳ ಸ್ಥಾಯಿ ಸಮಿತಿ: ರಾಜಶೇಖರ ಎಚ್(ಅಧ್ಯಕ್ಷ), ವಿ.ಕುಬೇರ,ಪಿ.ವಿವೇಕ, ಉಮಾದೇವಿ ಶಿವರಾಜ್, ಕವಿತಾ.ಕೆ.ಎಂ.ನಂದೀಶ,ಕೆ.ಮಂಜುಳ(ಸದಸ್ಯರು).
ಸಾರ್ವಜನಿಕ ಆರೋಗ್ಯ,ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ:ಎಂ.ರಾಮಾಂಜನೇಯ(ಅಧ್ಯಕ್ಷ),ಬಿ.ರತ್ನಮ್ಮ,ನಿಯಾಜ್ ಅಹ್ಮದ್.ಟಿ, ಶ್ವೇತ ಬಿ., ಜಬ್ಬರ್‍ಸಾಬ್, ಬಿ.ಜಾನಕಿ,ಎಂ.ಪ್ರಭಂಜನಕುಮಾರ್(ಸದಸ್ಯರು),
ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ: ಡಿ.ಸುಕುಂ(ಅಧ್ಯಕ್ಷೆ),ಬಿ.ಮುಬೀನ,ನೂರ್ ಮೊಹ್ಮದ್,ಪಿ.ಗಾದೆಪ್ಪ, ತ್ರೀವೆಣಿ.ಡಿ., ಪದ್ಮರೋಜಾ.ಎಂ.ಕೆ.,ಶಶಿಕಲಾ ಪಿ.ಜಗನ್ನಾಥ(ಸದಸ್ಯರು).
ಲೆಕ್ಕಪತ್ರ ಸ್ಥಾಯಿ ಸಮಿತಿ:ಟಿ.ಶ್ರೀನಿವಾಸ್ ಮೋತ್ಕರ್(ಅಧ್ಯಕ್ಷ),ವಿ.ಶ್ರೀನಿವಾಸಲು,ಎನ್.ಎಂ.ಡಿ.ಆಸೀಫ್‍ಭಾಷಾ,ಜ.ಶಿಲ್ಪಾ, ಕೆ.ಚೇತನ ವೇಮಣ್ಣ, ಟಿ.ನಾಗರತ್ನ, ಕೆ.ತಿಲಕ್‍ಕುಮಾರ್(ಸದಸ್ಯರು).
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಮಾಲನ್.ಬಿ ಸೇರಿದಂತೆ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here