ವಿದ್ಯಾರ್ಥಿ ವಸತಿನಿಲಯಗಳಲ್ಲಿ ಆಹಾರ ವಿತರಣೆ ಸೇರಿ ಎಲ್ಲದರಲ್ಲೂ ಪಾರದರ್ಶಕತೆ ಇರಲಿ, ಬರುವ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿನಿಯರಿಗೆ ಸೆಲ್ಪ್ ಡಿಫೆನ್ಸ್ ತರಬೇತಿ, ಹಿಂ.ವ.ಕ.ಇ. ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ

0
81

ಧಾರವಾಡ : ಡಿ.21: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಲ್ಲ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಆಯ್ಕೆ, ಆಹಾರ ವಿತರಣೆ, ಅಗತ್ಯ ವಸ್ತುಗಳ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಧಾರವಾಡ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು.

ವಸತಿನಿಲಯಗಳಿಗೆ ದಾಖಲಾಗುವ ವಿದ್ಯಾರ್ಥಿಗಳು ಹೆಮ್ಮೆ ಪಡುವಂತೆ ಮತ್ತು ಸಾರ್ವಜನಿಕರು ವಸತಿನಿಲಯಗಳ ಬಗ್ಗೆ ಅಭಿಮಾನ, ವಿಶ್ವಾಸ ವ್ಯಕ್ತಪಡಿಸುವಂತೆ ಮಾಡಬೇಕು. ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಯೊಂದರಲ್ಲೂ ಪಾರದರ್ಶಕತೆ ಕಾಪಾಡಬೇಕೆಂದು ಸೂಚಿಸಿದರು.

ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿದಿನ ಪಡಿತರ ಧಾನ್ಯ ತೆಗೆದುಕೊಳ್ಳುವುದು, ಆಹಾರ ಹಂಚಿಕೆ ಮಾಡಬೇಕು. ವಿದ್ಯಾರ್ಥಿಗಳ ಬೇಕು ಬೇಡಗಳ ಕುರಿತು ಆಪ್ತ ಸಮಾಲೋಚನೆ ಮಾಡಬೇಕು. ಮತ್ತು ಬರುವ ಶೈಕ್ಷಣಿಕ ವರ್ಷದಿಂದ ಬಿಸಿಎಂ ಹಾಸ್ಟೆಲ್‍ನಲ್ಲಿರುವ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆ (ಸೆಲ್ಫ್ ಡಿಫೆನ್ಸ್) ಕುರಿತು ತರಬೇತಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯ ಇತರ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಸಿಇಓ ಅವರು ಭೇಟಿ ನೀಡಿದಾಗ ಬಿಸಿಎಂ ಹಾಸ್ಟೇಲ್, ಇಲಾಖೆ ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಬಿಸಿಎಂ ಜಿಲ್ಲಾ ಅಧಿಕಾರಿ ಮತ್ತು ತಾಲೂಕಾ ಅಧಿಕಾರಿಗಳು ನಿರಂತರ ಭೇಟಿ ನೀಡಿ, ತಪಾಸಣೆಗೆ ಒಳಪಡಿಸಬೇಕೆಂದು ಪ್ರಧಾನ ಕಾರ್ಯದರ್ಶಿಗಳು ಹೇಳಿದರು.

ವಸತಿನಿಲಯಗಳಿಗೆ ಪ್ರತಿ ವರ್ಷ ಖರೀದಿಸುವ ಆಹಾರ ಪದಾರ್ಥ, ಬೆಡ್, ಕಾಟ್, ತಟ್ಟೆ, ಲೋಟ ಇತ್ಯಾದಿ ಸೇರಿದಂತೆ ಖರೀದಿಸುವ ವಸ್ತುಗಳ ಎಲ್ಲ ಮಾಹಿತಿಯನ್ನು ಸಾರ್ವಜನಿಕವಾಗಿ ಕಾಣುವಂತೆ ಆಯಾ ವಸತಿನಿಲಯಗಳಲ್ಲಿ ಪ್ರದರ್ಶಿಸಬೇಕೆಂದು ಅವರು ಸೂಚಿಸಿದರು. ವಿದ್ಯಾರ್ಥಿಗಳ ಹಾಜರಾತಿಗೆ ಈಗಾಗಲೇ ಬಯೋಮೆಟ್ರಿಕ್ ಅಳವಡಿಸಲಾಗಿದೆ. ಸಿಬ್ಬಂದಿಗಳ ಹಾಜರಾತಿಗೂ ಬಯೋಮೆಟ್ರಿಕ್ ಕಡ್ಡಾಯಗೊಳಿಸಲಾಗಿದೆ. ಕಳಪೆ ಗುಣಮಟ್ಟದ ಆಹಾರ ಪೂರೈಕೆ, ಸಾಮಗ್ರಿ ಖರೀದಿ ಮತ್ತು ವಿದ್ಯಾರ್ಥಿ ಸ್ನೇಹಿಯಾಗಿ ನಡುವಳಿಕೆ ತೋರದ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಲಾಗುವುದು. ಅನಧಿಕೃತ ಗೈರು ಉಳಿಯುವುದು ಸೇರಿದಂತೆ ಕಾನೂನು ಬಾಹಿರವಾಗಿ ವರ್ತಿಸುವವರ ಬಗ್ಗೆ ಜಿಲ್ಲಾ ಅಧಿಕಾರಿಗಳು ವರದಿ ನೀಡಬೇಕೆಂದು ಅವರು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಸರ್ಕಾರವು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅಪಾರವಾದ ಅನುದಾನ ನೀಡುತ್ತಿದೆ. ಅದರ ಸಮರ್ಪಕ ಬಳಕೆ ಮೂಲಕ ನಿಗಧಿತ ಅಭಿವೃದ್ಧಿ ಸಾಧಿಸುವುದು ಇಲಾಖೆಯ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಯ ಜವಾಬ್ದಾರಿ ಆಗಿದೆ ಎಂದು ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ ಹೇಳಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಾತನಾಡಿ, ಧಾರವಾಡ ಶೈಕ್ಷಣಿಕ ಜಿಲ್ಲೆ ಆಗಿರುವುದರಿಂದ ವಸತಿನಿಲಯಗಳಿಗೆ ಪ್ರವೇಶ ಬಯಸಿ ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಅರ್ಜಿ ಹಾಕುತ್ತಾರೆ. ಅವರೆಲ್ಲರಿಗೂ ಅವಕಾಶ ನೀಡಲು ವಿದ್ಯಾರ್ಥಿಗಳು ಪ್ರವೇಶದ ಸಂಖ್ಯೆಯ ಮಿತಿಯನ್ನು ಹೆಚ್ಚಿಸಬೇಕು. ಮತ್ತು ಅನೇಕ ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇವುಗಳಿಗೆ ಈಗಾಗಲೇ ನಿವೇಶನ ನೀಡಲಾಗಿದೆ. ಅನುದಾನ ನೀಡಿದರೆ ಸ್ವಂತ ಕಟ್ಟಡ ಮಾಡಲಾಗುವುದು ಎಂದರು.

ಇಲಾಖೆ ಅನುದಾನದಲ್ಲಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ 66 ಸಮುದಾಯ ಭವನ ನಿರ್ಮಿಸಲು ಅನುಮತಿಸಲಾಗಿದೆ. ಅದರಲ್ಲಿ 16 ಕಟ್ಟಡ ಮುಕ್ತಾಯವಾಗಿದ್ದು, 49 ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿವೆ. ಒಂದು ಸಮುದಾಯ ಭವನ ನಿರ್ಮಾಣದಲ್ಲಿ ಹಣ ದುರ್ಬಳಕೆ ಕಂಡು ಬಂದಿದ್ದರಿಂದ ಸಂಬಂಧಿಸಿದವರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಇಲಾಖೆ ಅನುದಾನ ಮತ್ತು ಆಶಯ ಸದ್ಬಳಕೆ ಆಗುವಂತೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ., ಅವರು ಮಾತನಾಡಿ, ಬಿಸಿಎಂ ಹಾಸ್ಟೇಲ್‍ಗಳಿಗೆ ತಾಲೂಕಾ ಮಟ್ಟದ ಅಧಿಕಾರಿಗಳು ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ವಸತಿನಿಲಯಗಳಿಗೆ ಕಂಪೌಂಡ್ ಗೋಡೆ ನಿರ್ಮಾಣ, ನ್ಯೂಟ್ರಿಶಿಯನ್ ಗಾರ್ಡನ್ ಸೇರಿದಂತೆ ಅನೇಕ ಕಾಮಗಾರಿಗಳನ್ನು ಜಿಲ್ಲಾ ಪಂಚಾಯತ್ ನರೇಗಾ ಯೋಜನೆಯಲ್ಲಿ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಅಗತ್ಯತೆಗೆ ಅನುಗುಣವಾಗಿ ಹೊಸ ಸಾಮಗ್ರಿ ಖರೀದಿಗೆ ಅನುಮತಿಸಲಾಗುತ್ತಿದೆ. ಆರ್ಥಿಕ ಮಿತವ್ಯಯ ಹಾಗೂ ಲಭ್ಯವಿರುವುದನ್ನು ಸಮರ್ಪಕ ಬಳಕೆ ಮಾಡಲು ಅದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ ಸ್ವಾಗತಿಸಿ, ಪ್ರಗತಿ ವರದಿ ಮಂಡಿಸಿದರು. ಮೂರಾರ್ಜಿ ವಸತಿ ಶಾಲೆ ಪ್ರಾಚಾರ್ಯರು ಸೇರಿದಂತೆ ವಿವಿಧ ನಿಗಮ, ಮಂಡಳಿಗಳ ಜಲ್ಲಾ ವ್ಯವಸ್ಥಾಪಕರು, ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here