ಸ್ವಾತಂತ್ರ್ಯದ ಅಮೃತ ಮಹೋತ್ಸವ: ಸರದಾರ ವಲ್ಲಭಭಾಯಿ ಪಟೇಲ್ ಛಾಯಾಚಿತ್ರ ಪ್ರದರ್ಶನ

0
149

ಬೆಳಗಾವಿ,ಮಾ.12 : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶಿಕ್ಷಣ ಇಲಾಖೆಯ ವತಿಯಿಂದ ನಗರದ ಸರದಾರ ಪ್ರೌಢಶಾಲೆಯಲ್ಲಿ ಸರದಾರ ವಲ್ಲಭಭಾಯಿ ಪಟೇಲ್ ಅವರ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಶುಕ್ರವಾರ (ಮಾ.12) ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನಗೈದ ಮಹನೀಯರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಸ್ವಾತಂತ್ರ್ಯೋತ್ಸವದ 75 ವರ್ಷಾಚರಣೆ ಸಂದರ್ಭದಲ್ಲಿ ಇಂದಿನ ಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಹಾಗೂ ದೇಶಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿದ ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸ್ವತಂತ್ರ ಸಂಸ್ಥಾನಗಳನ್ನು ಒಗ್ಗೂಡಿಸಿ ಒಂದು ಭಾರತ ದೇಶ ನಿರ್ಮಾಣದಲ್ಲಿ ಸರದಾರ ವಲ್ಲಭಭಾಯಿ ಪಟೇಲ್ ಅವರ ಪಾತ್ರ ಪ್ರಮುಖವಾಗಿದೆ. ಆದ್ದರಿಂದ ಅವರ ಜೀವನಸಾಧನೆಯನ್ನು ಅಪರೂಪದ ಛಾಯಾಚಿತ್ರಗಳ ಮೂಲಕ ತಿಳಿಸಿಕೊಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ಹೇಳಿದರು.

ಛಾಯಾಚಿತ್ರ ಪ್ರದರ್ಶನ ಕುರಿತು ಮಾಹಿತಿಯನ್ನು ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಬಿ.ಪುಂಡಲೀಕ, ಸರದಾರ ವಲ್ಲಭಭಾಯಿ ಪಟೇಲ್ ಅವರ ಜೀವನದ ಪ್ರಮುಖ ಘಟ್ಟಗಳನ್ನು ಪರಿಚಯಿಸುವ 160 ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.

ಇದಲ್ಲದೇ ಅವರ ಜೀವನ ಕುರಿತ ವಿಡಿಯೋ ಪ್ರದರ್ಶನ ಕೂಡ ನಡೆಸಲಾಗುತ್ತಿದೆ. ನಗರದ ಸರದಾರ ಹೈಸ್ಕೂಲಿನಲ್ಲಿ ನಾಲ್ಕು ದಿನಗಳ ಕಾಲ ಪ್ರದರ್ಶನ ನಡೆಯಲಿದ್ದು, ನಂತರದ ದಿನಗಳಲ್ಲಿ ವಿವಿಧ ತಾಲ್ಲೂಕುಗಳಲ್ಲಿ ಕೂಡ ಪ್ರದರ್ಶನ ನಡೆಸಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರಾಜಶೇಖರ್ ಪಟ್ಟಣಶೆಟ್ಟಿ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here