ತಾಲ್ಲೂಕು ಟಾಸ್ಕ್ ಫೋರ್ಸ್ ಸಭೆ : ಕೋವಿಡ್ ಪರೀಕ್ಷೆ ಹಾಗೂ ಲಸಿಕಾಕರಣ ಹೆಚ್ಚಿಸಲು ನಿರ್ಣಯ

0
88

ದಾವಣಗೆರೆ ಮಾ.12: ಪ್ರಸ್ತುತ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಕಡಿಮೆಯಿದ್ದು, ಆದರೂ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕಿನಲ್ಲಿ ಕೋವಿಡ್ ಪರೀಕ್ಷಾ ಸಂಖ್ಯೆಯನ್ನು ಹೆಚ್ಚಿಸಲು ತಾಲ್ಲೂಕು ಟಾಸ್ಕ್‍ಫೋರ್ಸ್ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ತಾಲ್ಲೂಕು ತಹಸಿಲ್ದಾರರ ಕಚೇರಿಯಲ್ಲಿ ಶುಕ್ರವಾರ ಏರ್ಪಡಸಲಾಗಿದ್ದ ತಾಲ್ಲೂಕು ಮಟ್ಟದ ಟಾಸ್ಕ್‍ಫೋರ್ಸ್ ಸಭೆಯಲ್ಲಿ ಭಾಗವಹಿಸಿ ಮಾತಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಎಲ್.ಡಿ. ಅವರು, ಈಗಾಗಲೇ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೋವಿಡ್‍ನ ಹೆಚ್ಚು ಪ್ರಕರಣಗಳು ಕಂಡು ಬರುತ್ತಿದ್ದು, ಹೊರ ರಾಜ್ಯಗಳಿಂದ ಬರುವಂತಹ ಪ್ರಯಾಣಿಕರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಬೇಕು. ಮುಂದಾಗುವ ಅನಾಹುತವನ್ನು ತಡೆಗಟ್ಟಲು ಮಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ನಮ್ಮ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಕಡಿಮೆ ಇದ್ದು ಯಥಾಸ್ಥಿತಿಯಲ್ಲಿ ನೋಡಿಕೊಳ್ಳಲು ಎಲ್ಲರ ಸಹಕಾರ ಬೇಕಿದೆ. ಶಿಕ್ಷಣ ಇಲಾಖೆಯವರು ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್-19 ಪರೀಕ್ಷೆ ಮಾಡಿಸಬೇಕು, ಅದೇ ರೀತಿ ವಸತಿ ನಿಲಯಗಳು ಆರಂಭವಾಗಿರುದರಿಂದ ಎಲ್ಲಾ ವಸತಿ ನಿಲಯದ ವಿದ್ಯಾರ್ಥಿಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲು ಸಮಾಜ ಕಲ್ಯಾಣ ಇಲಾಖೆ ಕ್ರಮ ವಹಿಸಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಎಲ್ಲಾ ನೌಕರರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಬೇಕು. ಆಯಾ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಯೋಗಶಾಲಾ ತಂತ್ರಜ್ಞರು ಇದ್ದು ಅಲ್ಲಿಯೇ ಕೋವಿಡ್-19 ಪರೀಕ್ಷೆಯನ್ನು ಮಾಡಿಸಲು ತಾಲ್ಲೂಕು ಪಂಚಾಯತ್ ಅಧಿಕಾರಿಗಳಿಗೆ ಕೋರಿದರು. ಅತೀ ಹೆಚ್ಚು ಕೋವಿಡ್-19 ಪರೀಕ್ಷೆಗಳು ನಡೆಯಬೇಕು ಅದರಂತೆ ನಗರ ಪ್ರದೇಶಗಳಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತೀ ದಿನ ಕೋವಿಡ್-19 ಗಂಟಲು ಮಾದರಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಅಲ್ಲಿಗೆ ನಗರದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು, ಶಾಲೆಗಳಲ್ಲಿ ಬಿಸಿ ಊಟ ತಯಾರಿಸುವ ಸಹಾಯಕರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಬೇಕು. ಈಗಾಗಲೇ 45ವರ್ಷ ಮೇಲ್ಪಟ್ಟು 60 ವರ್ಷದ ಒಳಗೆ ಇರುವ ಫಲಾನುಭವಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಲಸಿಕೆಯನ್ನು ನೀಡಲಾಗುತ್ತಿದ್ದು ಇವರ ಸದರುಪಯೋಗವನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ವಿವಿಧ ಇಲಾಖೆಯ ಸಹಕಾರವು ಅತೀ ಮುಖ್ಯವಾಗಿರುತ್ತದೆ. ಮುಖ್ಯವಾಗಿ ರಕ್ತದ ಒತ್ತಡ & ಮಧುಮೇಹ ಇರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಡಾ. ವೆಂಕಟೇಶ್ ತಿಳಿಸಿದರು.
ಈಗಾಗಲೇ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಪ್ರಥಮ ಹಂತದಲ್ಲಿ ಶೇಕಡಾ 80% ಲಸಿಕೆಯನ್ನು ನೀಡಲಾಗಿದ್ದು ಅದೇ ರೀತಿ 2ನೇ ಹಂತದಲ್ಲಿ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಮತ್ತು ಮಹಾನಗರಪಾಲಿಕೆ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗಿದ್ದು 1 & 2 ನೇ ಹಂತದಲ್ಲಿ ಬಿಟ್ಟುಹೋದ ಸಿಬ್ಬಂದಿಗೆ ಲಸಿಕೆಯನ್ನು ನೀಡಲಾಗುತ್ತಿದ್ದು, 03 ನೇ ಹಂತವು ಮಾರ್ಚ್-01 ರಿಂದ ಪ್ರಾರಂಭವಾಗಿದ್ದು ಎಲ್ಲಾ ಇಲಾಖಾ ಸಿಬ್ಬಂದಿಯವರು ಲಸಿಕೆಯನ್ನು ಪಡೆಯಲು ಸಭೆಯಲ್ಲಿ ತಿಳಿಸಲಾಯಿತು. ಆಯಾ ಇಲಾಖೆಯವರು ತಮ್ಮ ಸಿಬ್ಬಂದಿಗಳ ವಿವರದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ದಾವಣಗೆರೆ ಇಲ್ಲಿ ಸಲ್ಲಿಸಲು ಸೂಚಿಸಲಾಯಿತು.
ಗ್ರೇಡ್-2 ತಹಶೀಲ್ದಾರ್ ದೇವರಾಜ್ ಮಾತನಾಡಿ, ಎಲ್ಲ ಇಲಾಖೆಯವರು ತಮ್ಮ ಇಲಾಖೆ ಸಿಬ್ಬಂದಿಯವರ ಮಾಹಿತಿಯನ್ನು ಸಿದ್ಧಪಡಿಸಿ ಲಸಿಕೆಯನ್ನು ಪಡೆಯಲು ಮುಂದಾಗಬೇಕು. 2ನೇ ಹಂತದ ಅಲೆಯು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಾಖೆ, ಕಂದಾಯ ಇಲಾಖೆ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here