ಏಪ್ರಿಲ್ ಕೂಲ್ ಕಾರ್ಯಕ್ರಮದ ಹೆಸರಿನಲ್ಲಿ ಪಕ್ಷಿ ಸಂಕುಲಗಳ ರಕ್ಷಣೆಗೆ ಮುಂದಾಗುತ್ತಿರುವ ವನಸಿರಿ ಫೌಂಡೇಶನ್

0
235

ನಾನು, ನನ್ನದು ಎಂಬ ಸ್ವಾರ್ಥಪರ ಜನರ ನಡುವೆ ಪ್ರಾಣಿ-ಪಕ್ಷಿ ಸಂಕುಲ ವಿನಾಶದ ಅಂಚಿಕೆ ತಲುಪುತ್ತಿವೆ. ಬಿರುಬೇಸಿಗೆಯಲ್ಲಿ ಕೆರೆ-ಕಟ್ಟೆಗಳು ಒಣಗಿ ನಿಂತಿವೆ. ಜನ-ಜಾನುವಾರು ನೀರಿಗೆ ಪರಿತಪಿಸುತ್ತಿವೆ. ಇಂತಹ ಬಿಸಿಲ ಬೇಗೆಯಲ್ಲೂ ಪ್ರಾಣಿ-ಪಕ್ಷಿ ಪ್ರಿಯರು ಪರಿಸರ ಪ್ರೇಮಿಗಳು ಆಹಾರ, ನೀರು ಒದಗಿಸುತ್ತಾ ಮಾದರಿಯಾಗಿದ್ದಾರೆ. ಪ್ರಕೃತಿಯ ಅವಿಭಾಜ್ಯ ಅಂಗವಾಗಿರುವ ಪ್ರಾಣಿ-ಪಕ್ಷಿಗಳ ಸಂಕುಲ ಇಂದು ಬರಗಾಲದ ಪರಿಸ್ಥಿತಿಯಲ್ಲಿ ಆಹಾರ, ನೀರು, ನೆಲೆಗಳಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ ಸಂಗತಿಯಾಗಿದೆ.

ಇಂತಹ ಸನ್ನಿವೇಶಗಳನ್ನು ಗಮನಿಸಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ಇದೇ ಏಪ್ರಿಲ್ ಒಂದರಿಂದ ಕಲ್ಯಾಣ ಕರ್ನಾಟಕದಲ್ಲಿ ಎಪ್ರಿಲ್ ಕೂಲ್ ಎಂಬ ಹೆಸರಲ್ಲಿ ಪಕ್ಷಿ ಸಂಕುಲದ ಉಳಿವಿಗಾಗಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ನಿರ್ಮಿಸುವ ಮೂಲಕ ಮಾನವೀಯತೆ ಮೆರೆದು ಆಹಾರ, ನೀರನ್ನು ಒದಗಿಸುವ ಕಾರ್ಯವನ್ನು ಸಿಂಧನೂರಿನ ಸರಕಾರಿ ಮಹಾವಿದ್ಯಾಲಯದಲ್ಲಿ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ರಾಜಕೀಯ ಪಕ್ಷಗಳ ಮುಖಂಡರು ಅವರು ಕಾರ್ಯಕ್ಕೆ ಶುಭಕೋರಿ ಬೆಂಬಲವಾಗಿ ನಿಂತಿದ್ದಾರೆ.

ಪ್ರಕೃತಿಯೇ ಪ್ರಾಣಿ-ಪಕ್ಷಿ ಹಾಗೂ ಜೀವರಾಶಿಗಳಿಗೆ ಆಹಾರ, ನೀರು ಮತ್ತು ತಾಣಗಳನ್ನು ಒದಗಿಸಿದೆ. ಆದರೆ, ಕಾಲ ಬದಲಾದಂತೆ ಮನುಷ್ಯನ ದುರಾಸೆಗಳು ಹೆಚ್ಚಾಗಿ ಪ್ರಕೃತಿ ಮೇಲೆ ಹಲವಾರು ರೀತಿಯಲ್ಲಿ ಕೃತ್ಯಗಳನ್ನು ಎಸಗುತ್ತ ವಿಕೋಪ ಉಂಟಾಗುವ ಹಾಗೆ ಮಾಡುತ್ತಿದ್ದಾನೆ. ಇದರಿಂದ ನೈಸರ್ಗಿಕವಾಗಿ ಜೀವರಾಶಿಗಳಿಗೆ ದೊರಕುತ್ತಿದ್ದ ನೀರು, ಆಹಾರ ಸಿಗದಂತಹ ದುಸ್ಥಿತಿ ಒದಗಿ ಬಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ಬೆಳವಣಿಗೆಯಿಂದ ವಾತಾವರಣದಲ್ಲಿ ಪಕ್ಷಿಗಳು ಜೀವ ಉಳಿಸಿಕೊಳ್ಳಲು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪಕ್ಷಿಗಳ ಸಂಕುಲ ಕ್ಷೀಣಿಸಿವೆ. ಕೆಲವು ಕಡೆ ಪಕ್ಷಿಗಳಿಗೆ ನೀರು, ಆಹಾರವನ್ನು ಮನುಷ್ಯನೇ ಒದಗಿಸುವಂತಹ ಮನೋಭಾವನೆ ಬೆಳೆಸಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಈ ಬಿರು ಬೇಸಿಗೆ ಸಂದರ್ಭದಲ್ಲಿ ನೀರಿಗಾಗಿ ಹಾಹಾಕಾರದ ಮಧ್ಯೆಯೂ ಪಕ್ಷಿಗಳಿಗಾಗಿ ಪ್ರತ್ಯೇಕವಾದ ನೀರಿನ ಅರವಟ್ಟಿಗೆ ನಿರ್ಮಿಸಿ ದಿನನಿತ್ಯ ಶುದ್ಧ ನೀರನ್ನು ತುಂಬಿಸಿ ಪಕ್ಷಿಗಳ ದಾಹ ನೀಗಿಸಲು ಮುಂದಾಗಿರುವ ವನಸಿರಿ ಫೌಂಡೇಶನ್ ಇದರ ಜತೆಗೆ ಸುತ್ತಮುತ್ತಲಿನಲ್ಲಿಯೂ ಮಣ್ಣಿನ ಮಡಕೆಗಳನ್ನು ಅಲ್ಲಲ್ಲಿ ಇರಿಸಿ ಅವುಗಳಿಗೆ ನೀರು ತುಂಬಿಸಿ ಸಣ್ಣ ಸಣ್ಣ ಪಕ್ಷಿ ಸಂಕುಲಗಳಿಗೆ ಅನುಕೂಲ ಮಾಡಿಕೊಡುವ ಯೋಜನೆಯಲ್ಲಿದ್ದಾರೆ.

ಪ್ರತಿಯೊಬ್ಬರೂ ತಮ್ಮ ಊರುಗಳಲ್ಲಿ, ತೋಟ-ಹೊಲಗಳಲ್ಲಿ, ತಮ್ಮ ಮನೆಯ ಮೇಲ್ಬಾಗ, ಮುಂಭಾಗದಲ್ಲಿ ಈ ರೀತಿಯ ನೀರಿನ ವ್ಯವಸ್ಥೆ ಕಲ್ಪಿಸಿದಲ್ಲಿ ಪಕ್ಷಿ, ಪ್ರಾಣಿಗಳು ತಮ್ಮ ದಾಹ ನೀಗಿಸಿಕೊಂಡು ನೆಮ್ಮದಿಯೊಂದಿಗೆ ಸಂತತಿಯನ್ನು ವೃದ್ಧಿಸಿಕೊಂಡು ಹೋಗಲು ಅನುಕೂಲವಾಗುತ್ತದೆ.

ಈ ರೀತಿಯ ತೊಟ್ಟಿ ಅಥವಾ ಪಾತ್ರೆಗಳಲ್ಲಿ ನೀರನ್ನು ತುಂಬಿಸಿದರೆ ಮೂಕ ಪ್ರಾಣಿ-ಪಕ್ಷಿಗಳು ನೀರನ್ನು ಕುಡಿದು ಬದುಕುಳಿಯಲು ಸಹಕಾರಿಯಾಗುತ್ತದೆ. ಇವುಗಳ ನೀರನ್ನು ಕುಡಿದು ದಾಹ ನೀಗಿಸಿಕೊಂಡು ಸಂತೃಪ್ತವಾಗುವ ದೃಶ್ಯವನ್ನು ನೋಡಿದಾಗ ನನಗೆ ತುಂಬ ಆನಂದವಾಗುತ್ತದೆ ಎಂದು ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ಹೇಳಿದರು..

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here