ಚದುರಂಗದಲ್ಲಿ ಹೋರಾಡುವುದಷ್ಟೇ ಅಲ್ಲ ರಾಜನಿಗೆ ಘಾಸಿಯಾಗದಂತೆ ನೋಡಿಕೊಳ್ಳಿ

0
113

ಕೆಟ್ಟ ಕನಸು ಬಿದ್ದಂತಾಗಿ ನಾನು ಇದ್ದಕ್ಕಿದ್ದಂತೆ ರಪ್ಪಂತ ಎದ್ದು ಕುಳಿತೆ!
ಅಂತಹ ಚಳಿಯಲ್ಲೂ ಹಣೆಯಲ್ಲಿ ಬೆವರಿನ ಸರಮಾಲೆ.ಕನಸಿಗೂ,ಮನಸಿಗೂ ಸಂಬಂಧವಿದೆಯೇ?ಗೊತ್ತಿಲ್ಲ.ಸುಪ್ತವಾಗಿ ಮನಸ್ಸಿನ ಕೋಶದಲ್ಲಿ ಕುಳಿತಿದ್ದುದು ಕನಸಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಮನ:ಶ್ಯಾಸ್ತ್ರಜ್ಞರೇನೋ ಹೇಳುತ್ತಾರೆ.
ಇರಬಹುದೇನೋ?ಆದರೆ ಅವತ್ತು ಬಿದ್ದ ಕನಸಿಗೆ ಪೂರಕವಾದದ್ದನ್ನು ನಾನು ಹಿಂದೆಂದೂ ನನಸಿನಲ್ಲೂ ಎಣಿಸಿರಲಿಲ್ಲ.ಅಂತಹ ಕನಸು ಅದು.ಬೆಚ್ಚಿ ಬಿದ್ದು ಎದ್ದು ಕುಳಿತೆ.ಆಮೇಲೆ ನಿದ್ರೆ ಮಾಡಲು ಯತ್ನಿಸುತ್ತೇನೆ.ಊಹೂಂ,ಜಪ್ಪಯ್ಯ ಅಂದರೂ ನಿದ್ರೆ ಬರುತ್ತಿಲ್ಲ,ಅಂತಹ ಕ್ಷಣದಲ್ಲೇ ಫೋನು ಬಂತು.ಅರೇ,ಬೆಳಗಿನ ಜಾವ ಐದು ಗಂಟೆಗೆ ಫೋನು ಮಾಡುವವರು ಯಾರು?ಹಾಗಂತ ಯೋಚಿಸುತ್ತಲೇ ಫೋನೆತ್ತಿಕೊಂಡೆ.ಆ ಕಡೆಯಿಂದ ರವಿ ಬೆಳಗೆರೆ ಮಾತನಾಡುತ್ತಿದ್ದರು.
ವಿಠ್ಲ್ ಮೂರ್ತಿ.ನಾನಪ್ಪ,ರವಿ ಬೆಳಗೆರೆ ಎಂಬ ಧ್ವನಿ ನಾನು ಅಲರ್ಟ್ ಆಗುತ್ತಾ:ಅಣ್ಣಾ ಹೇಳಿ.ಇದೇಕೆ ನಿದ್ದೆ ಮಾಡಲಿಲ್ಲವೇ?ಎಂದೆ.ಅದಕ್ಕವರು:ನಿದ್ರೆಯ ಮಾತು ಅತ್ಲಾಗಿರಲಿ ವಿಠ್ಲ್ ಮೂರ್ತಿ.ಇಲ್ಲಿ ಮನೆಯ ಸುತ್ತ ಐವತ್ತು ಪೋಲೀಸರು ಬಂದು ನಿಂತಿದ್ದಾರೆ ಎಂದರು.
ನಾನು ಮತ್ತಷ್ಟು ಬೆಚ್ಚಿ ಬಿದ್ದು,ಯಾಕಣ್ಣಾ,ಈ ಹೊತ್ತಿನಲ್ಲಿ?ಎಂದೆ.ಅದಕ್ಕವರು,ನನ್ನನ್ನು ಆರೆಸ್ಟ್ ಮಾಡಲು ಬಂದಿದ್ದಾರೆ.ಈ ಟೈಮಿನಲ್ಲಿ ಏನಾದರೂ ಮಾಡದಿದ್ದರೆ ಕಷ್ಟ ಎದುರಾಗಬಹುದು ಎಂದರು.
ಆ ಹೊತ್ತಿಗಾಗಲೇ ನನಗೆ ವಿಷಯದ ಗಾಂಭೀರ್ಯ ಅರ್ಥವಾಗತೊಡಗಿತ್ತು.ಹಾಗಂತ ಫುಲ್ ಅಲರ್ಟ್ ಆದೆ.ರವಿ ಬೆಳಗೆರೆ ಹೇಳುತ್ತಾ ಹೋದರು.ವಿಠ್ಲ್ ಮೂರ್ತಿ.ಹರಪನಹಳ್ಳಿ ಕೇಸು ಗೊತ್ತಲ್ಲ?ಆ ಕೇಸಿನಲ್ಲಿ ತಪ್ಪು ಮಾಡಿದವನೇ ನನ್ನ ವಿರುದ್ಧ ದೂರು ಕೊಟ್ಟಿದ್ದಾನೆ.ಅದರ ಆಧಾರದ ಮೇಲೆ ಪೋಲೀಸರು ನನ್ನನ್ನು ಆರೆಸ್ಟ್ ಮಾಡಲು ಬಂದಿದ್ದಾರೆ.
ಎಚ್ಚರದಿಂದ ಕೇಳು ವಿಠ್ಲ್ ಮೂರ್ತಿ.ಈ ರೀತಿ ಪೋಲೀಸರು ಬಂದು ನಿಂತಿರುವುದರ ಹಿಂದೆ ಡಿ.ಕೆ.ಶಿವಕುಮಾರ್ ಇದ್ದಾರೆ.ಮೊದಲೇ ಮುಖ್ಯಮಂತ್ರಿಗಳಿಗೆ ಪರಮಾಪ್ತ.ನಾವು ಪತ್ರಿಕೆಯಲ್ಲಿ ಬರೆದಿದ್ದನ್ನು ಸಹಿಸಲಾಗದೆ ನನ್ನನ್ನು ಬಂಧಿಸಲು ಹೊರಟಿದ್ದಾರೆ.ತಕ್ಷಣ,ನಾವು ರೆಡಿ ಆಗದಿದ್ದರೆ ಆರೆಸ್ಟ್ ಆಗುವುದು ಗ್ಯಾರಂಟಿ ಎಂದರು.
ನನ್ನ ನಿದ್ರೆಯ ಮನ:ಸ್ಥಿತಿ ಚಲ್ಲಂತ ಹಾರಿ ಹೋಯಿತು.ಹಾಗಂತಲೇ,ಅಣ್ಣ,ಒಂದು ಕೆಲಸ ಮಾಡಿ.ಲಾ ಅಂಡ್ ಆರ್ಡರ್ ನೋಡಿಕೊಳ್ಳುವ ಅಧಿಕಾರಿ ನಿಮಗೆ ಹೇಗೂ ಗೊತ್ತು.ಒಂದು ಮಾತು ಹೇಳಿ ಎಂದೆ.ಅದಕ್ಕವರು,ಹೇಳಿದೆ.ಆದರೆ ಈ ಪ್ರಕರಣದಲ್ಲಿ ಸಿಎಂ ಮತ್ತು ಡಿ.ಕೆ.ಶಿವಕುಮಾರ್ ಇನ್ ವಾಲ್ವ್ ಆಗಿದ್ದಾರೆ.ಹೀಗಾಗಿ ಐ ಯಾಮ್ ಹೆಲ್ಟ್ ಲೆಸ್ ಅಂದರು ಎಂದು ಹೇಳಿದರು.
ಅರೇ,ಲಾ ಅಂಡ್ ಆರ್ಡರ್ ನೋಡಿಕೊಳ್ಳುವ ಅಧಿಕಾರಿಯೇ ಕೈ ಎತ್ತಿದರೆ ಏನು ಮಾಡುವುದು?ಅಂದೆ.ಅದಕ್ಕವರು:ಏನು ಮಾಡುತ್ತೀಯೋ ನನಗೆ ಗೊತ್ತಿಲ್ಲ ವಿಠ್ಲ್ ಮೂರ್ತಿ.ತಕ್ಷಣ ಏನಾದರೂ ಮಾಡಬೇಕು.ಇಲ್ಲದಿದ್ದರೆ ಕಷ್ಟದ ಸ್ಥಿತಿ ಬರಬಹುದು ಅಂತ ಹೇಳಿ ಫೋನಿಟ್ಟರು.
ನನಗೆ ತಕ್ಷಣ ಜೆ.ಹೆಚ್.ಪಟೇಲರು ಹೇಳಿದ್ದು ನೆನಪಿಗೆ ಬಂತು.ಅವತ್ತು (97-98) ಅವರು ಕರ್ನಾಟಕದ ಮುಖ್ಯಮಂತ್ರಿ.ಅವರನ್ನು ಕೆಳಗಿಳಿಸಲು ದೇವೇಗೌಡರು ದೊಡ್ಡ ಮಟ್ಟದ ರಣತಂತ್ರ ಹೂಡಿದ್ದರು.ಆದರೆ ಅವರೇನೇ ಮಾಡಿದರೂ ಪಟೇಲರು ಅಲುಗಾಡಲಿಲ್ಲ.
ಆ ದಿನಗಳಲ್ಲೇ ನಾನು ಅವರ ಸರ್ಕಾರಿ ನಿವಾಸ ಕಾವೇರಿಗೆ ಹೋದಾಗ ಒಂದು ಮಾತು ಕೇಳಿದ್ದೆ.ಸಾರ್.ಈ ಬಂಡಾಯದ ಟೈಮಿನಲ್ಲಿ ನೀವು ವಿಚಲಿತರಾಗಿದ್ದನ್ನು ನಾನು ನೋಡಲಿಲ್ಲ.ನಿಮಗೆ ಅದು ಹೇಗೆ ಸಾಧ್ಯವಾಯಿತು?ಪಟೇಲರು ಸಣ್ಣಗೆ ನಕ್ಕು ಹೇಳಿದರು:ವಿಠ್ಢಲಮೂರ್ತಿ,ನಿಮಗೆ ಚೆಸ್ ಆಡಲು ಬರುತ್ತಾ?ಎಂದರು.
ಚೆಸ್ ವಿಷಯದಲ್ಲಿ ನಾನು ಮಾಸ್ಟರ್ ಮೈಂಡ್ ಅಲ್ಲ ಸಾರ್.ಆದರೆ ಒಂದಂತೂ ನಿಶ್ಚಿತ.ಚದುರಂಗದಾಟದಲ್ಲಿ ಯೋಧನ ನಡೆ ಏನು?ಗಜ ಪಡೆಯ ನಡೆ ಏನು?ಅಶ್ವದಳ ಯಾವ ರೀತಿ ಚಲಿಸುತ್ತದೆ?ಒಂಟೆಯ ಪಯಣ ಹೇಗೆ ಎಂಬುದು ನನಗೆ ಗೊತ್ತು.ಮಂತ್ರಿಗಿರುವ ಶಕ್ತಿಯೂ ಗೊತ್ತು ಎಂದೆ.
ಪಟೇಲರು ನಕ್ಕರು.ಈ ಆಟದಲ್ಲಿ ರಾಜ,ಮಿತಿ ಮೀರಿ ಚಲಿಸುವುದನ್ನು ನೀವು ನೋಡಿದ್ದೀರಾ?ಎಂದರು.ಇಲ್ಲ ಸಾರ್.ಕಡೇ ಘಳಿಗೆಯ ತನಕ ರಾಜ,ವಿನಾ ಕಾರಣ ತಿರುಗುವುದನ್ನು ನೋಡಿಲ್ಲ ಎಂದೆ.ಆಗ ಪಟೇಲರು ಗಂಭೀರವಾಗಿ,ಇದೂ ಹಾಗೆಯೇ,ರಾಜ ತುಂಬ ಚಲಿಸಬಾರದು.ಯಾಕೆಂದರೆ ಎದುರಾಳಿಯನ್ನು ಹೊಡೆಯಲು ಯೋಧರಿಂದ ಹಿಡಿದು,ಎಲ್ಲ ದಳಗಳು ತಮ್ಮದೇ ಯತ್ನ ನಡೆಸುತ್ತಿರುತ್ತವೆ.ಯಾರಿಂದಲೂ ಆಗದಿದ್ದಾಗ ರಾಜ ಹೋರಾಡುವುದು ಅನಿವಾರ್ಯ ಎಂದರು.
ನಾನು ಕುತೂಹಲದಿಂದ,ನಿಜ ಸಾರ್,ಆದರೆ ಅದಕ್ಕೂ ಇದಕ್ಕೂ ಏನು ಸಂಬಂಧ?ಎಂದೆ.ಅದಕ್ಕುತ್ತರಿಸಿದ ಪಟೇಲರು:ರಣರಂಗದಲ್ಲಿ ಹೋರಾಡುವುದಷ್ಟೇ ಯೋಧನ ಕೆಲಸವಲ್ಲ ವಿಠ್ಠಲಮೂರ್ತಿ.ಎದುರಾಳಿಯ ಹೊಡೆತದಿಂದ ರಾಜನಿಗೆ ಘಾಸಿಯಾಗದಂತೆ ನೋಡಿಕೊಳ್ಳುವುದೂ ಅವನ ಕೆಲಸ.ನನ್ನ ವಿಷಯದಲ್ಲಿ ಆಗಿದ್ದೂ ಅಷ್ಟೇ.ಹಲ ಪ್ರಮುಖ ಯೋಧರಿದ್ದ ಸೈನ್ಯ ಹೋರಾಡಿತು.ನನ್ನನ್ನುಳಿಸಿಕೊಂಡಿತು ಎಂದರು.
ನನಗದು ಪಾಠದಂತೆ ಕೇಳತೊಡಗಿತು.ರಾಜನಿಗೆ ಘಾಸಿಯಾಗದಂತೆ ನೋಡಿಕೊಳ್ಳುವುದು ಯೋಧನ ಕೆಲಸ.ಅರ್ಥಾತ್ ಯೋಧನಿರಲಿ,ಸೈನ್ಯದ ಯಾವುದೇ ವಿಭಾಗವಿರಲಿ.ರಾಜನಿಗೆ ಘಾಸಿಯಾಗದಂತೆ ನೋಡಿಕೊಳ್ಳುವುದು ಆತನ ಕರ್ತವ್ಯ.ಹಾಗೇನಾದರೂ ರಾಜ ಔಟ್ ಆದ ಎಂದರೆ ಸೈನ್ಯ ದೊಡ್ಡ ಪ್ರಮಾಣದಲ್ಲಿ ಉಳಿದರೂ ಸಾಮ್ರಾಜ್ಯ ಉಳಿಯುವುದಿಲ್ಲ.ಅದರಿಂದ ಸೇನೆಗಾಗುವ ಹಾನಿ ದೊಡ್ಡದು ವಿಠ್ಠಲಮೂರ್ತಿ ಎಂದರು ಪಟೇಲ್.
ಹೀಗೆ ಅವತ್ತು ಪಟೇಲರು ಹೇಳಿದ ಚದುರಂಗದಾಟದ ವಿವರ ತಕ್ಷಣವೇ ಕಣ್ಣ ಮುಂದೆ ಸುಳಿಯಿತು.ಪತ್ರಿಕೆ ಇರಲಿ,ಯಾವುದೇ ರಂಗವಿರಲಿ.ಅಲ್ಲಿ ಮಾಲೀಕನೇ ರಾಜ.ಆತ ಉರುಳಿದರೆ ತನಗೆ ತಾನೇ ಸೈನ್ಯ ನಿರ್ನಾಮವಾದಂತೆ.ಯಾಕೆಂದರೆ ಭರವಸೆಯ ಕೇಂದ್ರವೇ ಹೋದ ಮೇಲೆ ಸೈನ್ಯ ಉಳಿದರೂ ಸಾಮ್ರಾಜ್ಯಕ್ಕೇನು ಲಾಭ?
ಅದು ನೆನಪಿಗೆ ಬಂದಿದ್ದೇ ತಡ,ನಾನು ಧಡಕ್ಕಂತ ಎದ್ದೆ.ಟೈಮು ನೋಡಿದರೆ ಬೆಳಗಿನ ಜಾವ ಐದೂವರೆ ಗಂಟೆ.ತಕ್ಷಣವೇ ರೆಡಿ ಆದೆ.ಅಷ್ಟೊತ್ತಿಗಾಗಲೇ ಮನಸ್ಸು ಸ್ಪಷ್ಟವಾಗಿ ಹೇಳುತ್ತಿತ್ತು.ಈ ವಿಷಯದಲ್ಲಿ ನಮಗೆ ಸಹಾಯ ಅಂತ ಮಾಡುವುದಿದ್ದರೆ ಒಬ್ಬರೇ.ಅದು ಈ ರಾಜ್ಯದ ಗೃಹ ಸಚಿವರು.ಅವರ ಹೆಸರು ಮಲ್ಲಿಕಾರ್ಜುನ ಖರ್ಗೆ.
ಅವರನ್ನು ಹೊರತುಪಡಿಸಿ,ನೆರವು ಕೊಡಲು ಇನ್ಯಾವ ಶಕ್ತಿಗಳೂ ನಮ್ಮ ಜತೆಗಿಲ್ಲ.ಯಾವಾಗ ಲಾ ಅಂಡ್ ಆರ್ಡರ್ ವಿಭಾಗದ ಎಡಿಜಿಪಿ ಈ ವಿಷಯದಲ್ಲಿ ಅಸಹಾಯಕರೋ?ಆಗ ಉಳಿದಿರುವ ಏಕೈಕ ದಾರಿ ಎಂದರೆ ಗೃಹ ಸಚಿವರು ಮಾತ್ರ.ಸಿಎಂ ಹತ್ತಿರ ತಲುಪುವ ಮಾರ್ಗಗಳು ಇದ್ದವಾದರೂ,ಈ ಟೈಮಿನಲ್ಲಿ ನೋಡುವುದು ಹೇಗೆ?ಅದರಲ್ಲೂ ಡಿ.ಕೆ.ಶಿವಕುಮಾರ್ ಅವರಿಗೆ ಆಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಪರಮಾಪ್ತರಾಗಿದ್ದರು.ಹೀಗಿರುವಾಗ ನಮಗೆ ಅವರು ಸಹಾಯ ಮಾಡುವ ಲಕ್ಷಣಗಳ್ಯಾವುವೂ ಇರಲಿಲ್ಲ.
ಹೀಗಾಗಿ ಸಟ ಸಟನೆ ರೆಡಿ ಆದವನೇ ಸೀದಾ ರೇಸ್ ಕೋರ್ಸ್ ಎದುರಿಗಿದ್ದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಹೋದೆ.ಅವರ ಮನೆ ತಲುಪುವ ವೇಳೆಗಾಗಲೇ ಬೆಳಗಿನ ಜಾವ ಆರು ಗಂಟೆ.ಆ ಹೊತ್ತಿಗಾಗಲೇ ಖರ್ಗೆ ಅವರು ಎದ್ದು ವಾಕಿಂಗ್ ಮಾಡುತ್ತಿದ್ದರು.
ನನ್ನನ್ನು ನೋಡುತ್ತಲೇ,ಇದೇನು ಇಷ್ಟೊತ್ತಿಗೇ ಮನೆಗೆ ಬಂದಿದೀಯ?ಎಂದರು.ನಾನು ವಿಷಯ ಹೇಳಿದೆ.ಅದಕ್ಕವರು:ಇದಕ್ಕೆ ನಾನೇನು ಮಾಡಲಾಗುತ್ತದೆ?ಕಾನೂನಿನ ಪ್ರಕಾರ ಕ್ರಮವಾಗುತ್ತದೆ ಎಂದರು.ನಾನು,ಹಾಗಲ್ಲ ಸಾರ್,ಇದು ಬೇಕೆಂತಲೇ ಮಾಡುತ್ತಿರುವ ಕೆಲಸ ಎಂದೆ.
ಅದಕ್ಕವರು,ನಿನಗೇನಾದರೂ ತೊಂದರೆಯಾಗಿದೆಯೇ?ಎಂದರು.ಆಗ ನಾನು,ಇಲ್ಲ ಸಾರ್,ಆದರೆ ನೂರಾರು ಮಂದಿಯ ಜೀವನದ ಪ್ರಶ್ನೆ ಇದೆ.ಈ ವಿಷಯದಲ್ಲಿ ಹೆಲ್ಟು ಮಾಡಿ ಎಂದೆ.ಅವರು ಸ್ವಲ್ಪ ಹೊತ್ತು ಮಾತನಾಡಲಿಲ್ಲ.ಬದಲಿಗೆ ಅಲ್ಲೇ ಇದ್ದ ಕಟ್ಟೆಯ ಮೇಲೆ ಕೂರುವಂತೆ ಸೂಚಿಸಿ,ತಮ್ಮ ಆಪ್ತ ಸಹಾಯಕರನ್ನು ಕರೆದರು.
ಖರ್ಗೆ ಅವರು ಕರೆದ ಕೂಡಲೆ ಆಪ್ತ ಸಹಾಯಕರು ಓಡಿ ಬಂದರು.ಅವರನ್ನು ನೋಡುತ್ತಲೇ ಖರ್ಗೆ ಅವರು,ಆ ಲಾ ಎಂಡ್ ಆರ್ಡರ್ ಎಡಿಜಿಪಿ ಅವರ ನಂಬರು ತಗೋ ಎಂದರು.ತಕ್ಷಣವೇ ಅವರು ಕೈಲಿದ್ದ ಫೋನಿನಿಂದ ಎಡಿಜಿಪಿ ಅವರಿಗೆ ರಿಂಗುಣಿಸಿದ್ದೇ ಖರ್ಗೆ ಅವರ ಕೈಲಿಟ್ಟರು.
ಖರ್ಗೆ ನೋಡಲು ಎಷ್ಟು ಗಂಭೀರವೋ?ಮಾತೂ ಅಷ್ಟೇ ಗಂಭೀರ.ಎತ್ತಿದ ಮಾತಿಗೇ,ಎಡಿಜಿಪಿಯ ಹೆಸರು ತೆಗೆದುಕೊಂಡು:ಅದೇನು ಆ ಹಾಯ್ ಬೆಂಗಳೂರ್ ಎಡಿಟರ್ ರವಿ ಬೆಳಗೆರಿ ಮನೆ ಸುತ್ತ ಐವತ್ತು ಪೋಲೀಸರನ್ನು ಕಳಿಸಿದೀರಂತೆ ಎಂದರು.
ಅದಕ್ಕವರು ಏನು ಹೇಳಿದರೋ?ಆದರೆ ಖರ್ಗೆ ಅವರ ಮುಖ ಗಡುಸಾಯಿತು.ಅಲ್ರೀ.ಅವರೇನು ಕಳ್ಳತನ ಮಾಡಿದ್ದಾರಾ?ದರೋಡೆ ಮಾಡಿದ್ದಾರಾ?ಐವತ್ತು ಜನ ಪೋಲೀಸರು ಹೋಗಿ ಅವರ ಮನೆ ಸುತ್ತುವರಿದಿದ್ದಾರೆ ಎಂದರೆ ಏನರ್ಥ?ಅಂದರು.
ಫೈನಲಿ,ಅವರದು ಟಫ್ ಮಾತು.ನೋಡ್ರೀ.ಕಾನೂನು ಪ್ರಕಾರ ಹೋಗಿ.ಆದರೆ ಈ ತರ ಕಿರುಕುಳ ಕೊಡುವ ಅಗತ್ಯವಿಲ್ಲ.ಇನ್ನರ್ಧ ಗಂಟೆಯಲ್ಲಿ ಅಲ್ಲಿರುವ ಎಲ್ಲ ಪೋಲೀಸರೂ ವಾಪಸ್ಸು ಬಂದು ಬಿಡಬೇಕು.ಅವರು ವಾಪಸ್ಸು ಆಗಿದ್ದಾರೆ ಅಂತ ನೀವೇ ಮೆಸೇಜು ಕೊಡಬೇಕು ಎಂದವರೇ ಫೋನು ಕಟ್ ಮಾಡಿದರು.
ಇದಾದ ಹತ್ತೇ ನಿಮಿಷದಲ್ಲಿ ಬಂತು ಫೋನು.ಅದು ಲಾ ಅಂಡ್ ಆರ್ಡರ್ ಎಡಿಜಿಪಿ ಅವರದಲ್ಲ.ರವಿ ಬೆಳಗೆರೆ ಅವರದು.ವಿಠ್ಲ್ ಮೂರ್ತಿ.ಎಲ್ಲ ಪೋಲೀಸರೂ ಜಾಗ ಖಾಲಿ ಮಾಡಿದ್ದಾರಪ್ಪಾ,ಇನ್ನೇನೂ ಆರೆಸ್ಟ್ ಪ್ಲಾಬ್ಲಂ ಇಲ್ಲ ಎಂದರು.ನಾನು ಸಮಾಧಾನದ ನಿಟ್ಟುಸಿರು ಬಿಟ್ಟೆ.
ಹಾಗೆ ನಿಟ್ಟುಸಿರು ಬಿಡುತ್ತಲೇ,ಖರ್ಗೆಯವರಿಗೆ ಧನ್ಯವಾದ ಹೇಳಿದೆ.ಅದಕ್ಕವರು,ಬರೀ ಥ್ಯಾಂಕ್ಸ್ ಹೇಳಿದರೆ?ಮಾಡಿಟ್ಟಿರುವ ಟೀ ಕುಡಿಯುವವರು ಯಾರು?ಕುಡಿದು ಹೋಗು ಎಂದು ಹೇಳಿದರು.ನಾನು ನೆಮ್ಮದಿಯಿಂದ ಟೀ ಕುಡಿದೆ.
ಯಾವುದೇ ಪತ್ರಿಕೆಗೆ ಅದರ ಮಾಲೀಕನೇ ರಾಜ.ಈ ರಾಜನಿಗೆ ಘಾಸಿಯಾಯಿತು ಎಂದರೆ ನಂಬಿಕೊಂಡವರ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿ ಬಿಡುತ್ತದೆ.ಅವತ್ತು ಅಂತಹ ಅಲ್ಲೋಲ ಕಲ್ಲೋಲವೊಂದು ತಪ್ಪಿದಂತಾಗಿತ್ತು.ಫೈನಲಿ,ರಾಜನಿಗೆ ಘಾಸಿಯಾಗಿರಲಿಲ್ಲ.ಹೀಗಾಗಿ ಸೈನ್ಯಕ್ಕೆ ತೊಂದರೆಯಾಗುವ ಲಕ್ಷಣಗಳೂ ಇರಲಿಲ್ಲ.
ಅಂದ ಹಾಗೆ ಇದನ್ನೇಕೆ ಹೇಳಿದೆನೆಂದರೆ,ಹೆಚ್ಚು ಕಡಿಮೆ ಬಹುತೇಕರ ಬೆನ್ನ ಹಿಂದೆ ಇಂತಹ ರಾಜರು ಇದ್ದೇ ಇರುತ್ತಾರೆ.ಕ್ಷೇತ್ರ ಯಾವುದೇ ಇರಲಿ.ಆದರೆ ಅಲ್ಲಿ ಕೆಲಸ ಮಾಡುವಾಗ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ.ಯುದ್ಧ ಅನಿವಾರ್ಯವಾದಾಗ ರಾಜನಿಗೆ ಘಾಸಿಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಿಮ್ಮ ಮೇಲೂ ಬರಬಹುದು.
ಅದಕ್ಕೆ ರೆಡಿಯಾಗಿರಿ,ಪಟೇಲರು ಹೇಳಿದಂತೆ ಯೋಧನೇ ಇರಬಹುದು.ಯಾವುದೇ ದಳವಿರಬಹುದು.ನೀವೆಲ್ಲೇ ಇರಿ.ಆದರೆ ರಣರಂಗದಲ್ಲಿ ಎದುರಾಳಿಯ ವಿರುದ್ಧ ಹೋರಾಡುವುದು ಎಷ್ಟು ಮುಖ್ಯವೋ?ಅದೇ ರೀತಿ ರಾಜನಿಗೆ ಘಾಸಿಯಾಗದಂತೆ ನೋಡಿಕೊಳ್ಳುವುದೂ ಮುಖ್ಯ.ಅಲ್ಲವೇ?

ಆರ್.ಟಿ.ವಿಠ್ಠಲಮೂರ್ತಿ

                                                                                     

LEAVE A REPLY

Please enter your comment!
Please enter your name here