ಗಾಂಧಿವಾದದ ಅಗತ್ಯವನ್ನು ಮನಗಾಣಿಸುತ್ತಿರುವ ಕೊರೋನಾ

0
120

ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿದ್ದ ಮಹಾತ್ಮಾಗಾಂಧಿ ಒಮ್ಮೆ ರಾಷ್ಟ್ರೀಯ ಕಾಂಗ್ರೆಸ್‌ ಅಧಿವೇಶನಕ್ಕಾಗಿ ಕರ್ನಾಟಕದ ಬೆಳಗಾವಿಗೆ ಬರುತ್ತಾರೆ,
ಆ ಸಂದರ್ಭದಲ್ಲಿ ಊಟಕ್ಕೆ ಅಂತ ಕುಳಿತವರು ಹಸಿಗಡಲೆ ಹಾಗೂ ಹಾಲು ಸೇವಿಸುತ್ತಿರುತ್ತಾರೆ.ಅದನ್ನು ನೋಡಿದ ಹುಡುಗನೊಬ್ಬ:ತಾತಾ,ನೀವೇಕೆ ರೊಟ್ಟಿ,ಪಲ್ಯ ತಿನ್ನುವುದಿಲ್ಲ?ಎಂದು ಪ್ರಶ್ನಿಸುತ್ತಾನೆ.
ಅದಕ್ಕುತ್ತರವಾಗಿ ಗಾಂಧಿ:ನಾವು ಬಡವರು ಮಗು.ರೊಟ್ಟಿ,ಪಲ್ಯ ತಿನ್ನುವಷ್ಟು ಶಕ್ತಿ ನಮಗಿಲ್ಲ.ಹೀಗಾಗಿ ಹಸಿಗಡಲೆ ತಿಂದು ಹಾಲು ಕುಡಿಯುತ್ತಿದ್ದೇನೆ ಎನ್ನುತ್ತಾರೆ.ಆ ಹುಡುಗನೂ ಕಡುಬಡವನೇ.ಅವನಿಗೆ ಗಾಂಧಿ ಹೇಳಿದ ಮಾತು ಅಚ್ಚರಿ ಹುಟ್ಟಿಸುತ್ತದೆ.
ಹಾಗಂತಲೇ ಮನೆಗೆ ಹೋದವನು ತನ್ನ ತಾಯಿಯ ಬಳಿ,ಮಾ,ಗಾಂಧಿ ಕೂಡಾ ನಮ್ಮಂತೆಯೇ ಬಡವರಿದ್ದಾರೆ ಎಂದು ಘಟನೆಯನ್ನು ವಿವರಿಸುತ್ತಾನೆ.ಆಗ ತಾಯಿ ವಿಷಾದದ ನಗೆ ನಕ್ಕು:ಗಾಂಧೀಜಿಯವರ ಬಡತನಕ್ಕೊಂದು ಭದ್ರತೆಯಿದೆ.ಆದರೆ ನಮ್ಮ ಬಡತನಕ್ಕೆ ಭದ್ರತೆಯಿಲ್ಲ ಬಾಳಾ ಎನ್ನುತ್ತಾಳೆ.
ಈ ಘಟನೆಯನ್ನು ಸಾಂಕೇತಿಕವಾಗಿ ಗಮನಿಸುತ್ತಾ ನಾವು ಮುಖ್ಯ ವಿಷಯಕ್ಕೆ ಬರೋಣ.ಅಂದ ಹಾಗೆ ಬಡತನಕ್ಕೆ ಸಂಬಂಧಿಸಿದಂತೆ ಆ ತಾಯಿ ಮಾಡುವ ವ್ಯಾಖ್ಯಾನ ಅದ್ಭುತವಾದದ್ದು.ಯಾಕೆಂದರೆ ಗಾಂಧಿಯವರ ಬೆನ್ನ ಹಿಂದಿದ್ದವರು ಯಾರು?ಟಾಟಾ,ಬಿರ್ಲಾರಂತಹ ಮಹಾನ್‌ ಉದ್ಯಮಿಗಳು.
ಮನಸ್ಸು ಮಾಡಿದ್ದರೆ ಗಾಂಧೀಜಿ ಐಷಾರಾಮಿ ಜೀವನ ಸಾಗಿಸಬಹುದಿತ್ತು.ಆದರೆ ಅದನ್ನೊಪ್ಪದೆ ಗಾಂಧಿ ಬಡತನವನ್ನು ಆಚರಿಸಿದರು.ಮುಂದೆ ಸ್ವಾತಂತ್ರ್ಯ ಬಂದ ನಂತರ ಈ ದೇಶದಲ್ಲಿ ಗಾಂಧಿವಾದದ ವಿರುದ್ಧ ಪಾಶ್ವಾತ್ಯವಾದ ಎದ್ದು ನಿಂತಿತು.ಇದೀಗ ಅದು ಜಾಗತೀಕರಣದ ರೂಪದಲ್ಲಿ ತನ್ನೆಲ್ಲ ಶಕ್ತಿಯೊಂದಿಗೆ ಅಸ್ತಿತ್ವದಲ್ಲಿದೆ.
ಆದರೆ ಕೊರೋನಾ ಎಂಬ ಮಾರಕ ರೋಗ ಜಗತ್ತಿನುದ್ದ ಹರಡುತ್ತಿರುವ ಈ ಸನ್ನಿವೇಶದಲ್ಲಿ ಮತ್ತೆ ಗಾಂಧಿವಾದಕ್ಕೆ ಶಕ್ತಿ ಬಂದಿದೆ.ಗಾಂಧಿವಾದವನ್ನು ಅನುಸರಿಸದೆ ಈ ವ್ಯವಸ್ಥೆಗೆ ಶಕ್ತಿಯಿಲ್ಲ ಎಂಬಂತಾಗಿದೆ.
ಗಾಂಧಿವಾದ ಕೂಡಾ ಬಹಳ ಸರಳವಾದದ್ದು.ಅವರೇನು ಹೇಳಿದ್ದಾರೋ?ಅದನ್ನೇ ಮೂರು ಸಾವಿರ ವರ್ಷಗಳಿಗೂ ಮುನ್ನ ಯಹೂದಿಯರ ಪ್ರವಾದಿ ಮೋಶೆ ಹೇಳಿದ್ದರು.ಬದುಕು ನೆಮ್ಮದಿಯಾಗಿರಲು ಪೂರಕವಾಗಿ ಅವರು ನೀಡಿದ ಹತ್ತು ಆಜ್ಞೆಗಳನ್ನು ಸಂಕ್ಷಿಪ್ತವಾಗಿ ಜಗತ್ತಿನ ಮೊಟ್ಟ ಮೊದಲ ಸಂವಿಧಾನ ಅನ್ನಬಹುದು.
ಮೋಶೆಯವರು ಹೇಳಿದ್ದನ್ನೇ ಹಲ ಶತಮಾನಗಳ ನಂತರ ಬಂದ ಬುದ್ದ ವಿಸ್ತರಿಸುತ್ತಾನೆ.ಆಸೆಯೇ ದು:ಖಕ್ಕೆ ಕಾರಣ ಎಂಬುದರಿಂದ ಹಿಡಿದು ಬುದ್ಧ ಹೇಳುವ ಹಲವು ಮಾತುಗಳು ಕೂಡಾ ಮನುಷ್ಯನ ಬದುಕಿಗೆ ಅಗತ್ಯವಾದ ಸಂವಿಧಾನವೇ.
ಮುಂದೆ ಇದು ಯೇಸು ಕ್ರಿಸ್ತರು,ಮಹಮ್ಮದ್‌ ಪೈಗಂಬರ್‌ ಅವರ ಕಾಲದಲ್ಲಿ ವಿಸ್ತ್ರತವಾಗುತ್ತದೆ.ಕ್ರಿಸ್ತಶಕ ಹನ್ನೆರಡನೇ ಶತಮಾನದಲ್ಲಿ ಬಂದ ಬಸವಣ್ಣ ಅದಕ್ಕೆ ಮತ್ತಷ್ಟು ವ್ಯವಸ್ಥಿತ ರೂಪ ನೀಡುತ್ತಾರೆ.ಮೋಶೆ ಹಾಗೂ ಬಸವಣ್ಣನವರನ್ನು ಒಟ್ಟಿಗೆ ನಿಲ್ಲಿಸಿಕೊಂಡು ನೋಡಿದರೆ ವಿಸ್ಮಯವಾಗುತ್ತದೆ.
ಕಳಬೇಡ,ಕೊಲಬೇಡ,ಹುಸಿಯ ನುಡಿಯಲು ಬೇಡ,ಇದಿರ ಹಳಿಯಲು ಬೇಡ,ತನ್ನ ಬಣ್ಣಿಸಬೇಡ,ಇದೇ ಕೂಡಲಸಂಗಮನನ್ನೊಲಿಸುವ ಪರಿ ಎಂದು ಬಸವಣ್ಣ ಏನು ಹೇಳುತ್ತಾರೋ?ಇದರ ಮೂಲದಲ್ಲಿ ಮೋಶೆಯವರ ಧ್ವನಿಯಿದೆ.ಅಂದ ಹಾಗೆ ಮೋಶೆ ಹಾಗೂ ಬಸವಣ್ಣನವರ ನಡುವಣ ಕಾಲದ ಅಂತರ ಸುಮಾರು ಇಪ್ಪತ್ನಾಲ್ಕು ಶತಮಾನ.
ಈ ಎಲ್ಲ ಮಹಾನುಭಾವರನ್ನು ಅರಿತಿದ್ದ ಗಾಂಧಿ,ಅವರು ಹೇಳಿದ್ದನ್ನೇ ಇನ್ನಷ್ಟು ವ್ಯವಸ್ಥಿತವಾಗಿ ಹೇಳಿದರು.ಅಂದರೆ ಗಾಂಧಿವಾದ ಎಂಬುದು ಸ್ವಯಂ ಆಗಿ ಈ ಜಗತ್ತಿನ ವಿಶೇಷ ವಾದವಲ್ಲ,ಅದು ಜ್ಞಾನದ ಮುಂದುವರಿದ ಭಾಗ.
ಆದರೆ ಗಾಂಧಿವಾದವನ್ನು ಸಾಕಷ್ಟು ಅಪಮಾನಕ್ಕೆ ಗುರಿ ಮಾಡಲಾಯಿತು.ಅದೊಂದು ಪೊಳ್ಳುವಾದ ಎಂದು ಜರಿಯಲಾಯಿತು.ಆದರೆ ಯಾರೇನೇ ಉಪೇಕ್ಷೆ ಮಾಡಿದರೂ ಗಾಂಧಿವಾದ ಎಂಬುದು ಸೂರ್ಯನಷ್ಟೇ ಪ್ರಖರ.ಮನುಷ್ಯನ ಬದುಕಿಗೆ ಅಗತ್ಯವಾದದ್ದನ್ನು ಹೇಳುವ ಗಾಂಧಿವಾದವನ್ನು ಅನುಸರಿಸುವುದು ಅನಿವಾರ್ಯ ಎಂಬುದು ಕಾಲ ಕಾಲಕ್ಕೆ ಅರಿವಿಗೆ ಬರುತ್ತಲೇ ಇದೆ.
ನೀನೂ ಬದುಕು,ಮತ್ತೊಬ್ಬರನ್ನು ಬದುಕಲು ಬಿಡು,ಸರಳವಾಗಿದ್ದಷ್ಟೂ ನೆಮ್ಮದಿಯಿಂದಿರುವೆ ಎನ್ನುವಂತಹ ಪ್ರಾಥಮಿಕ ಅಂಶಗಳಿಂದ ಹಿಡಿದು ಗಾಂಧಿ ಏನು ಹೇಳಿದರೋ?ಅದು ಈ ಜಗತ್ತು ಕಂಡ ಅನೇಕ ಮಹಾನುಭಾವರು ಹೇಳಿದ ಮಾತುಗಳಾದ್ದರಿಂದ ಗಾಂಧಿವಾದ ಎಂಬುದು ಸತ್ಯದ ಮುಂದುವರಿಕೆ ಮಾತ್ರ.
ಇರಲಿ,ಈಗ ಕೊರೋನಾ ಎಂಬ ಮಹಾಮಾರಿಯ ವಿಷಯಕ್ಕೆ ಬರೋಣ.ತನ್ನ ಆಕ್ಟೋಪಸ್‌ ಹಿಡಿತದಿಂದ ಇಡೀ ಜಗತ್ತು ತಲ್ಲಣಗೊಳ್ಳುವಂತೆ ಮಾಡಿರುವ ಕೊರೋನಾ ಇವತ್ತು ಜಗತ್ತಿನ ಆರ್ಥಿಕತೆಗೇ ಹೊಡೆತ ನೀಡಿದೆ.ಸಹಜವಾಗಿ ಕರ್ನಾಟಕದ ಆರ್ಥಿಕತೆಯೂ ತಳ ಕಚ್ಚುವ ಸ್ಥಿತಿಗೆ ತಲುಪಿದೆ.
ಅಂದ ಹಾಗೆ ರಾಜ್ಯದ ಬಜೆಟ್‌ ಗಾತ್ರ ಎರಡು ಲಕ್ಷದ ನಲವತ್ತು ಸಾವಿರ ಕೋಟಿ.ಇಷ್ಟು ಹಣದ ಬಹುದೊಡ್ಡ ಮೂಲವೆಂದರೆ ಸ್ವಂತ ಶಕ್ತಿಯಿಂದ ಸಂಗ್ರಹಿಸುವ ತೆರಿಗೆ ಮತ್ತು ಸಾಲ ಎತ್ತುವುದು.
ಮುಂದಿನ ಸಾಲಿಗೆ ಸಂಬಂಧಿಸಿದಂತೆ ವಿವಿಧ ಮೂಲಗಳಿಂದ ರಾಜ್ಯ ಮಾಡಲಿರುವ ಸಾಲದ ಪ್ರಮಾಣ ಎಪ್ಪತ್ತೊಂದು ಸಾವಿರ ಕೋಟಿ ರೂಪಾಯಿ.ಅದಕ್ಕೇಕೆ ಈ ಪರಿಸ್ಥಿತಿ ಬಂತು?ಎಂದರೆ ಕೇಂದ್ರ ಸರ್ಕಾರ ಜಿಎಸ್‌ಟಿ ಬಾಬ್ತಿನಲ್ಲಿ,ಜಿಎಸ್‌ಟಿ ಪರಿಹಾರದ ರೂಪದಲ್ಲಿ ರಾಜ್ಯಕ್ಕೆ ನೀಡಬೇಕಾದ ಹತ್ತತ್ತಿರ ಹನ್ನೆರಡು ಸಾವಿರ ಕೋಟಿ ರೂಪಾಯಿಗಳಷ್ಟು ಹಣವನ್ನು ಕೊಟ್ಟಿಲ್ಲ.ಹದಿನೈದನೇ ಹಣಕಾಸು ಆಯೋಗ ನಮಗೆ ನಿಗದಿ ಮಾಡಿದ ಹಣದಲ್ಲಿ ಖೋತಾ ಮಾಡಿರುವುದರಿಂದ ಮತ್ತು ವಿವಿಧ ಯೋಜನೆಗಳಿಗೆ ಒದಗಿಸುವ ಅನುದಾನವನ್ನು ಕಡಿಮೆ ಮಾಡಿರುವುದರಿಂದ ಸುಮಾರು ಮೂವತ್ತು ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಕಡಿತವಾಗಿದೆ.
ಇದೇ ಕಾಲಕ್ಕೆ ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನದ ಪ್ರಮಾಣ ಕುಸಿದಿದೆ.ಇದನ್ನು ಇನ್ನಷ್ಟು ವಿಸ್ತಾರವಾಗಿ ನೋಡೋಣ.ಈಗ ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನದ ಪ್ರಮಾಣ ನೂರು ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು ಎಂದರೆ ಅದರಲ್ಲಿ ಶೇಕಡಾ ಇಪ್ಪತ್ತಕ್ಕಿಂತ ಹೆಚ್ಚು ಪ್ರಮಾಣದ ಕೊರತೆ ಆಗುವುದು ಎಂದರ್ಥ.
ಜಿಡಿಪಿಯಲ್ಲಿ ಇಂತಹ ಕೊರತೆಯಾಯಿತು ಎಂದರೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ತೆರಿಗೆಯ ರೂಪದಲ್ಲಿ ಬರುವ ಹಣದ ಪ್ರಮಾಣ ಕಡಿಮೆಯಾಗುತ್ತದೆ.ಹೀಗಾಗಿ ಬಜೆಟ್‌ಗೆ ಕೊರತೆ ಬೀಳುವ ಹಣವನ್ನು ಸಾಲದ ರೂಪದಲ್ಲಿ ಸರಿದೂಗಿಸಬೇಕಾಗುತ್ತದೆ.ಹೀಗೆ ಅದು ಮಾಡಲಿರುವ ಸಾಲದ ಪ್ರಮಾಣ ಎಪ್ಪತ್ತೊಂದು ಸಾವಿರ ಕೋಟಿ ರೂಪಾಯಿ.
ಇದು ಕೊರೋನಾ ಹೊಡೆತಕ್ಕೆ ವ್ಯವಸ್ಥೆ ತಲ್ಲಣಿಸಿದ ನಂತರದ ಪರಿಸ್ಥಿತಿ.ಆದರ ಪ್ರಕಾರ ಈಗಿನ ಸ್ಥಿತಿ ನೋಡಿದರೆ ಆರ್ಥಿಕ ಪರಿಸ್ಥಿತಿ ಇನ್ನೂ ದೊಡ್ಡ ಮಟ್ಟದಲ್ಲಿ ಹೊಡೆತ ತಿನ್ನಲಿದೆ.
ಇದರ ಪರಿಣಾಮವಾಗಿ ಸರ್ಕಾರ ಒಂದೇ ವರ್ಷದಲ್ಲಿ ಎಪ್ಪತ್ತೊಂದು ಸಾವಿರ ಕೋಟಿ ರೂಪಾಯಿಗಳ ಬದಲು ಒಂದು ಲಕ್ಷ ಕೋಟಿ ರೂಪಾಯಿಗಳಿಗಿಂತ ಅಧಿಕ ಸಾಲ ಮಾಡಬೇಕಾಗಬಹುದು.
ಒಂದು ಬಜೆಟ್‌ನ ಶೇಕಡಾ ನಲವತ್ತರಷ್ಟು ಹಣವನ್ನು ಸಾಲ ಮಾಡಿ ಸರಿದೂಗಿಸಬೇಕಾಗುತ್ತದೆ ಎಂದರೆ ಪರಿಸ್ಥಿತಿ ಮತ್ತಷ್ಟು ಹೀನಾಯವಾಗಲಿದೆ.ಇಂತಹ ಪರಿಸ್ಥಿತಿಯನ್ನು ಸರಿದೂಗಿಸುವುದು ಹೇಗೆ?ಅನ್ನುವ ಪ್ರಶ್ನೆ ಎದುರಾದರೆ ಸರ್ಕಾರ ಮುಖ ಮುಚ್ಚಿಕೊಳ್ಳಬೇಕಾದ ಸ್ಥಿತಿ ಬರುತ್ತದೆ.
ಗಾಂಧಿವಾದ ಹೆಚ್ಚು ಪ್ರಸ್ತುತವಾಗುವುದು ಇಂತಲ್ಲಿ.ಸರ್ಕಾರಗಳು ದುರ್ಬಲವಾದ ಸನ್ನಿವೇಶದಲ್ಲಿ ಇದು ಅನಿವಾರ್ಯ ಕೂಡಾ.ಹೀಗಾಗಿ ಸರಳ ಬದುಕನ್ನು ಅಪ್ಪಿಕೊಳ್ಳಬೇಕು ಎಂಬುದನ್ನು ಹೊರತುಪಡಿಸಿ ಬೇರೆ ಆಯ್ಕೆಗಳು ವ್ಯವಸ್ಥೆಯ ಮುಂದಿಲ್ಲ.
ಅರ್ಥಾತ್‌,ಆರ್ಥಿಕವಾಗಿ ಮೇಲು ಹಂತದಲ್ಲಿರುವ,ಮೇಲ್ಮಧ್ಯಮ ಹಂತದಲ್ಲಿರುವ ಜನ ಕೆಳ ಮಧ್ಯಮ ಹಾಗೂ ತಳಹಂತದ ಜನರ ಮಧ್ಯೆ ಹೆಚ್ಚು ಜವಾಬ್ದಾರಿಯಿಂದ ಬದುಕಬೇಕಾಗುತ್ತದೆ.
ಜಾಗತೀಕರಣದ ಕಾಲಘಟ್ಟದಲ್ಲಿ ಆಮಿಷಗಳ ನಡುವೆ ಬದುಕುತ್ತಿರುವ ಜನಸಮುದಾಯವನ್ನು ಅಂತಹ ಆಮಿಷಗಳಿಂದ ದೂರವಿರಿಸಲು ಪೂರಕವಾಗುವಂತೆ ಹಣವಿದ್ದವರೂ ಬದುಕಬೇಕು.ಇಲ್ಲದೆ ಹೋದರೆ ಉಳ್ಳವರು,ಇಲ್ಲದವರ ನಡುವಣ ತಾರತಮ್ಯ ಅತಿಯಾಗಿ ವ್ಯವಸ್ಥೆ ಅವ್ಯವಸ್ಥೆಯ ಕೂಪಕ್ಕೆ ತಲುಪುತ್ತದೆ.
ಅಂತಹ ಸನ್ನಿವೇಶದಲ್ಲಿ ಸಮಾಜ ಸಂಘರ್ಷಕ್ಕೆ ಮುಖಾಮುಖಿಯಾಗಬೇಕಾಗುತ್ತದೆ.ಸಂಘರ್ಷವಿಲ್ಲದೆ ಬದುಕಬೇಕು ಎಂದರೆ ಉಳ್ಳವರು,ಇಲ್ಲದವರು ಎಲ್ಲರೂ ಸೇರಿ ಸರಳವಾಗಿ ಬದುಕುವ ಅನಿವಾರ್ಯತೆ ಇದೆ.ಮತ್ತು ಪರಸ್ಪರರನ್ನು ಅವಲಂಬಿಸಿ ಮುನ್ನಡೆಯಬೇಕಾಗಿದೆ.
ಇದನ್ನು ಪರಿಣಾಮಕಾರಿಯಾಗಿ ಹೇಳಬಲ್ಲ ಶಕ್ತಿ ಇರುವುದು ಗಾಂಧಿ ಮಾರ್ಗಕ್ಕೆ.ಒಂದು ವ್ಯವಸ್ಥೆ ಆರ್ಥಿಕವಾಗಿ ಪಾತಲಕ್ಕೆ ಕುಸಿದಾಗ ಅದರ ನೆಮ್ಮದಿಗೆ ಬೇಕಿರುವುದೇ ಅದು.ಹೀಗಾಗಿ ಎಲ್ಲರೂ ಆ ಬಗ್ಗೆ ಚಿಂತಿಸಬೇಕಾದ ಅಗತ್ಯವಿದೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here