ಐತಿಹಾಸಿಕ ಪ್ರಸಿದ್ದ ಬಂಡೇ ರಂಗನಾಥಸ್ವಾಮಿ ಕ್ಷೇತ್ರದಲ್ಲಿ ನಂದಿಪುರ ಶ್ರೀಗಳ ನೇತೃತ್ವದಲ್ಲಿ ಬೃಹತ್ ಸ್ವಚ್ಚತಾ ಕಾರ್ಯ ಆರಂಭ.

0
441

—ಹುಳ್ಳಿಪ್ರಕಾಶ

ಹಗರಿಬೊಮ್ಮನಹಳ್ಳಿ; ಫೆ.27
ಹಗರಿಬೊಮ್ಮನಹಳ್ಳಿ ತಾಲೂಕಿನ ಉತ್ತರ ತಂಬ್ರಹಳ್ಳಿ ಗ್ರಾಮದ ಬಳಿ ಇರುವ ಐತಿಹಾಸಿಕ ಪ್ರಸಿದ್ಧವಾದ ಶ್ರೀ ಬಂಡೇ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದ ಸುತ್ತಮುತ್ತಲಿನ ಪರಿಸರದಲ್ಲಿ ಶ್ರೀಕ್ಷೇತ್ರ ನಂದಿಪುರದ ಮಹೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಸ್ವಯಂ ಪ್ರೇರಿತ ಸ್ವಚ್ಚತಾ ಕಾರ್ಯಕ್ರಮ ಜರುಗಿತು.

ದೇವಸ್ಥಾನ ಸಮಿತಿಯವರು, ಸರ್ಕಾರಿ, ಅರೇ ಸರ್ಕಾರಿ ನೌಕರರು, ಯುವಕರು ಸೇರಿದಂತೆ ಹಲವು ಸ್ವಯಂ ಪ್ರೇರಿತರಾಗಿ ಬಂದು ಶ್ರಮದಾನದ ಮೂಲಕ ದೇವಸ್ಥಾನದ ಸುತ್ತಲಿನ ಪರಿಸರವನ್ನು ಅಂದ, ಚೆಂದಗೊಳಿಸಲು ಶ್ರಮಿಸಿದರು.

ಪ್ರತಿ ವರ್ಷದಂತೆ ಈ ಸಲ ಮಾರ್ಚ್, 18 ರಂದು ಬಂಡೇ ರಂಗನಾಥಸ್ವಾಮಿ ರಥೋತ್ಸವ ಜರುಗಲಿದೆ.ದೇವಸ್ಥಾನದ ಹಿಂದೆ, ಮುಂದೆ ಹಾಗೂ ಸುತ್ತಲಿನ ಪರಿಸರದಲ್ಲಿ ಅನವಶ್ಯಕವಾಗಿ ಬೆಳೆದಿರುವ ಗಿಡ, ಗಂಟಿಗಳನ್ನು ಕಿತ್ತು ಹಾಕಿ, ಕಸಗೂಡಿಸಿ ದೇವಳದ ಪರಿಸರವನ್ನು ಶುಭ್ರವಾಗಿಸುವ ಕೆಲಸ ನಿನ್ನೆ ಯಿಂದಲೇ ಶುರುವಾಗಿದೆ ಎಂದು ಮಹೇಶ್ವರಶ್ರೀಗಳು ಅಭಿಪ್ರಾಯಿಸಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಬಸರಕೋಡು ಲಕ್ಷ್ಮಣ, ಬೆಟ್ಟದ ರಂಗಪ್ಪನ ಜಾತ್ರೆ ಸುತ್ತೂರಿನಲ್ಲೂ ಬಹು ಹಿಂದಿನಿಂದಲೂ ಬಲು ಫೇಮಸ್ ಆಗಿದೆ. ಇದು ಗ್ರಾಮೀಣಾ ಸೊಗಡಿನ ಜಾತ್ರೆ ಆಗಿದೆ. ಬಳ್ಳಾರಿ, ವಿಜಯನಗರ ಸೇರಿದಂತೆ ಕೊಪ್ಪಳ, ದಾವಣಗೆರೆ, ಗದಗ, ಹಾವೇರಿ, ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದಲೂ ಭಕ್ತರು ಆಗಮಿಸುತ್ತಾರೆ. ಶ್ರೀಗಳ ಸಾರಥ್ಯದಲ್ಲಿ ದೇವಾಲಯದ ಪರಿಸರವನ್ನು ರಥೋತ್ಸವ ಆರಂಭದೊಳಗೆ ಇನ್ನು ಮೂರ್ನಾಕು ಸಲ ಸ್ವಚ್ಛಗೊಳಿಸುತ್ತೇವೆಂದರು.

ಕಳೆದ ಎರಡು ವರ್ಷ ಕೊರೊನಾದಿಂದಾಗಿ ರಥೋತ್ಸವ ಕಳೆಗುಂದಿತ್ತು. ಈ ಸಲ ವಿಜೃಂಭಣೆಯಿಂದ ನೇರವೇರಿಸಲಾಗುವುದು. ಜಾತ್ರೆ ನಿಮಿತ್ತ ಎರಡು ದಿನ ನಾಟಕ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ದೇವಿಪ್ರಸಾದ್ ಹೇಳಿದರು.

ಪ್ರಗತಿಪರ ಚಿಂತಕ ಬಿ.ಶ್ರೀನಿವಾಸ, ಬಂಡೇ ರಂಗನಾಥಸ್ವಾಮಿ ದೇವಸ್ಥಾನ ವಿಜಯನಗರ ಕಾಲದ ಶೈಲಿಯಲ್ಲಿ ನಿರ್ಮಿಸಲಾಗಿದೆ. ಹರಪನಹಳ್ಳಿ ಪಾಳೆಗಾರರ ಸಾಮಾಂತರಾಗಿದ್ದ ಒಬಳಪ್ಪ ನಾಯಕ ಈ ದೇವಾಲಯವನ್ನು ನಿರ್ಮಿಸಿದನೆನ್ನುವ ಇತಿಹಾಸವಿದೆ. ಬಂಡೇಯೊಂದರಲ್ಲಿ ಒಡಮೂಡಿರುವ ರಂಗಪ್ಪನನ್ನು ಬಂಡೇ ರಂಗನಾಥ, ಬಂಡೇ ರಂಗಪ್ಪ ನೆಂದು ವಿವಿಧ ಹೆಸರುಗಳಿಂದ ನಮ್ಮ ಜನಪದರು ಪೂಜಿಸಿಕೊಂಡು ಬರುತ್ತಿದ್ದಾರೆ. ಒನ್ ಡೇ ಪಿಕ್ ನಿಕ್ ಗೆ ಹೇಳಿ ಮಾಡಿಸಿದ ತಾಣವಿದು. ಸರ್ಕಾರ ಪ್ರವಾಸಿತಾಣವಾಗಿ ಅಭಿವೃದ್ಧಿಗೊಳಿಸ ಬೇಕೆಂದರು.

ದೇವಸ್ಥಾನ ಸಮಿತಿ ಅಧ್ಯಕ್ಷರಾದ ಬಸರಕೋಡು ಲಕ್ಷ್ಮಣ, ಕಾರ್ಯದರ್ಶಿ ಸುಣಗಾರ ರಾಮು, ಖಜಾಂಚಿ ದೇವಿಪ್ರಸಾದ್, ಧರ್ಮದರ್ಶಿ ಉದಯ ಭಾಸ್ಕರ್ ರಾವ್, ಸದಸ್ಯರಾದ ಏಣಗಿ ರಾಮಣ್ಣ, ಕಡ್ಡಿ ಚೆನ್ನಪ್ಪ, ಪ್ರಮುಖರಾದ ಹೊಳಗುಂದಿ ಮಹಾಬಲೇಶ್ವರಪ್ಪ, ಹೆಚ್.ಎಂ.ಕರಿಬಸಯ್ಯ, ನಿಂಗಪ್ಪ, ಹಸೂಳಿ ಲಕ್ಷ್ಮಣ, ಬಸರಕೋಡು ಶ್ರೀನಿವಾಸ, ಸುಣಗಾರ ಮಂಜುನಾಥ, ಗ್ರಂಥಾಲಯದ ಪಾಂಡುರಂಗ, ಶಿಕ್ಷಕರಾದ ರಾಜಶೇಖರ, ಏಣಿಗಿ ನಾಗರಾಜ, ತಳವಾರ ಸೇರಿದಂತೆ ಹಿರಿಯರು, ಯುವಕರು ಸ್ವಯಂ ಪ್ರೇರಿತರಾಗಿ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿ ಶ್ರಮದಾನ ಮಾಡಿದರು.

LEAVE A REPLY

Please enter your comment!
Please enter your name here