ಅನಂತ್ ಗೂಡಿನ ಹಕ್ಕಿಗಳು ದಿಕ್ಕಾಪಾಲಾದವು

0
78

ಒಂದು ಕಾಲದಲ್ಲಿ ರಾಜ್ಯ ಬಿಜೆಪಿಯನ್ನು ಆವರಿಸಿ ಪ್ರಭಾವಿಯಾಗಿದ್ದ ಅನಂತಕುಮಾರ್ ಬಣ ಈಗ‌ ನಿಟ್ಟುಸಿರು‌ ಬಿಡುತ್ತಿದೆ.
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಲು ಶ್ರಮಿಸಿದ ಮತ್ತು ರಾಷ್ಟ್ರ ರಾಜಕಾರಣದ ಎತ್ತರಕ್ಕೇರಿದ ಅನಂತಕುಮಾರ್ ಅವರಿದ್ದಿದ್ದರೆ ಈ ಬಣ ಹತಾಶ ಸ್ಥಿತಿಗೆ ತಲುಪಲು ಕಾರಣವೇ ಇರಲಿಲ್ಲ.
ಆದರೆ ನರೇಂದ್ರಮೋದಿ ಅವರ ಸಂಪುಟದಲ್ಲಿದ್ದ ಅನಂತಕುಮಾರ್ ತೀರಿಕೊಂಡರು.ಅವರು ತೀರಿಕೊಂಡಿದ್ದೇ ತಡ,ರಾಜ್ಯ ಬಿಜೆಪಿಯ ಪ್ರಮುಖ ಜಾಗಗಳಲ್ಲಿದ್ದವರು ಮೂಲೆಗುಂಪಾಗುತ್ತಾ ಹೋದರು.
ಅನಂತಕುಮಾರ್ ಅವರ ಜತೆಗಿದ್ದವರನ್ನು ಹೀಗೆ ಮೂಲೆಗುಂಪು ಮಾಡುವ ಕಾಯಕ ಎಷ್ಟು ಯಶಸ್ವಿಯಾಗಿ ನಡೆಯುತ್ತಾ ಹೋಯಿತೆಂದರೆ ಇವತ್ತು ಪಕ್ಷದ ಮಟ್ಟದಲ್ಲಿ ಅನಂತಕುಮಾರ್ ಅವರ ಹೆಸರನ್ನು ಗಟ್ಟಿಯಾಗಿ ಹೇಳುವವರೇ ಇಲ್ಲದಂತಾಗಿದ್ದಾರೆ.
ಅಲ್ಲೇನಿದ್ದರೂ ಈಗ ಬಿ.ಎಲ್.ಸಂತೋಷ್ ಅವರದ್ದೇ ಸಂಪೂರ್ಣ ಪಾರಮ್ಯ.
ಉಳಿದಂತೆ ಸರ್ಕಾರದ ಮಟ್ಟದಲ್ಲಿ ಇಂತವರದೇ ಪಾರಮ್ಯ ಎಂದು ಹೇಳಲಾಗದಿದ್ದರೂ ಅಲ್ಲಿ ಸ್ಪಷ್ಟವಾಗಿ ಕಾಣುತ್ತಿರುವುದು ಫಿಫ್ಟಿ-ಫಿಪ್ಟಿ ಷೇರ್ ಮಾರ್ಕೆಟ್ಟು.
ಅರ್ಥಾತ್,ಈ ಹಿಂದೆ ಅನಂತಕುಮಾರ್ ಜತೆಗಿದ್ದರೂ ಸನ್ನಿವೇಶಕ್ಕೆ ತಕ್ಕಂತೆ ಸಂತೋಷ್ ಅವರ ಜತೆ ಸೇರಿಕೊಂಡವರು ಸರ್ಕಾರದ ಮಟ್ಟದಲ್ಲಿ ಉಳಿದುಕೊಂಡಿದ್ದಾರೆ.
ಅದೇ ರೀತಿ ಯಡಿಯೂರಪ್ಪ ಅವರ ಜತೆಗಿದ್ದವರು ಕೂಡಾ ದೊಡ್ಡ ಮಟ್ಟದಲ್ಲಿ ಉಳಿದುಕೊಂಡಿದ್ದಾರೆ.
ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಏನಿದೆ?ಅದು ಬಿ.ಎಲ್.ಸಂತೋಷ್ ಹಾಗೂ ಯಡಿಯೂರಪ್ಪ ಅವರ ಫಿಫ್ಟಿ-ಫಿಫ್ಟಿ ಷೇರು ಇರುವ ಸರ್ಕಾರ.
ಅಂದ ಹಾಗೆ ಅನಂತಕುಮಾರ್ ಅವರ ಪ್ರಭಾವ ಹೆಚ್ಚಿದ್ದ ಕಾಲದಲ್ಲಿ ಅವರ ಆಸ್ಥಾನದ ತ್ರಿಮೂರ್ತಿಗಳು ಎಂದು ಗುರುತಿಸಲ್ಪಡುತ್ತಿದ್ದವರು ಸುಬ್ಬಣ್ಣ,ಎಂ.ಹೆಚ್.ಶ್ರೀಧರ್ ಮತ್ತು ಪ್ರಕಾಶ್.
ತಮ್ಮ ಬಳಿ ಬರುವವರನ್ನು ಪ್ರಾಥಮಿಕ ಹಂತದಲ್ಲಿ ಈ ಮೂವರ ಮೂಲಕ ಅನಂತಕುಮಾರ್ ಸ್ಕ್ಯಾನ್ ಮಾಡುತ್ತಿದ್ದರು.
ಈ ಪೈಕಿ ಸುಬ್ಬಣ್ಣ ಅವರನ್ನು ಎದುರು ಹಾಕಿಕೊಂಡರೆ ರಾಜಧಾನಿಯ ರಾಜಕೀಯದಲ್ಲಿ ಮೇಲೇಳುವುದು ಕಷ್ಟ ಎಂಬ ಮಾತು ಜನಜನಿತವಾಗಿತ್ತು.
ಇನ್ನು ಎಂ.ಹೆಚ್.ಶ್ರೀಧರ್ ಅಲಿಯಾಸ್ ಗಡ್ಡ ಶ್ರೀಧರ್ ಎಂದರೆ ಬಿಜೆಪಿಯ ಶಾಸಕರಾಗಿದ್ದವರೂ ಹೆದರುವ ಸ್ಥಿತಿ ಇತ್ತು.
ಒಂದು ಕಾಲದಲ್ಲಿ ಶ್ರೀಧರ್ ಎಷ್ಟು ಪ್ರಭಾವಿಯಾಗಿದ್ದರು ಎಂದರೆ,ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆ ನಡೆಯುತ್ತಿದೆ ಎಂದರೆ ಭಿನ್ನಮತೀಯರಿದ್ದ ಜಾಗಕ್ಕೇ ಅವರು‌ ನುಗ್ಗಿ ಬಿಡುತ್ತಿದ್ದರು.
ಇದೇ ಕಾರಣಕ್ಕಾಗಿ ಎಷ್ಟೋ ಕಾಲ ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆ ನಡೆಸುತ್ತಿದ್ದ ಶಾಸಕರು,ತಮ್ಮ ಸಭೆಗಳನ್ನು ನಡೆಸುವುದಕ್ಕಿಂತ ಮುಂಚೆ ಶ್ರೀಧರ್ ಅವರ ಚಲನ ವಲನಗಳ ಮೇಲೆ‌ ಕಣ್ಣಿಡುತ್ತಿದ್ದರು.
ಯಾಕೆಂದರೆ ಅವರೆಂದರೆ ಅನಂತಕುಮಾರ್ ಅವರ ಕಿವಿ ಎಂಬ ಭಾವನೆ ಬಹುತೇಕ ಶಾಸಕರಲ್ಲಿತ್ತು.
ಆಗೆಲ್ಲ ರಾಜಕಾರಣದಲ್ಲಿ ಮನಾಮನಿ ದುಡ್ಡು ಹರಿಯುತ್ತಿರಲಿಲ್ಲವಲ್ಲ?ಹೀಗಾಗಿ ಬಿಜೆಪಿಯಲ್ಲಿ ಏನೇ ಭಿನ್ನಮತೀಯ ಚಟುವಟಿಕೆಗಳನ್ನು ನಡೆಸಬೇಕೆಂದರೂ ಭಿನ್ನಮತೀಯ ಎಮ್ಮೆಲ್ಲೆಗಳು ಶಾಸಕರ ಭವನವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು.
ಹಲವು ಸಲ ಇಂತಹ ಸಭೆಗಳ ವಾಸನೆ ಬರುತ್ತಿದ್ದಂತೆಯೇ ಶ್ರೀಧರ್ ಏಕಾಏಕಿಯಾಗಿ ಶಾಸಕರ ಭವನಕ್ಕೆ ನುಗ್ಗಿ ಬಿಡುತ್ತಿದ್ದರು.
ಅವರು ಒಳಗೆ ನುಗ್ಗುತ್ತಿದ್ದಾರೆ ಎಂಬ ಸುದ್ದಿ ಸಿಕ್ಕುವುದೇ ತಡ,ಭಿನ್ನಮತೀಯ ಶಾಸಕರು ತರಗೆಲೆಗಳಂತೆ ಚೆಲ್ಲಾಪಿಲ್ಲಿಯಾಗಿ ಬಿಡುತ್ತಿದ್ದರು.
ಹೀಗಾಗಿ ಅವತ್ತು ಶಾಸಕರ ಭವನದ ಪಡಸಾಲೆಗಳಲ್ಲಿ ಶ್ರೀಧರ್ ಬಂದರು ದಾರಿ ಬಿಡಿ ಎಂಬುದು ಪಾಪ್ಯುಲರ್ ಸ್ಲೋಗನ್ನೇ ಆಗಿತ್ತು.
ಇನ್ನು ಬೆಂಗಳೂರು ನಗರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಎಸ್.ಪ್ರಕಾಶ್ ಅವರು ತಮಗಿದ್ದ ಸಂಪರ್ಕ ಸೇತುವನ್ನು ಬಳಸಿಕೊಂಡು ಮಾಧ್ಯಮಗಳಲ್ಲಿ ಪಕ್ಷದ ಇಮೇಜು ಹೆಚ್ಚಾಗುವಂತೆ ನೋಡಿಕೊಂಡವರು.
ಅನಂತಕುಮಾರ್ ಗ್ಯಾಂಗಿನ ಫ್ರಂಟ್ ಲೈನಿನಲ್ಲಿದ್ದ ಪ್ರಕಾಶ್ ಯಾವಾಗ ಮಾಧ್ಯಮ ವಿಭಾಗವನ್ನು ಕೈಗೆ ತೆಗೆದುಕೊಂಡರೋ?ಅದಾದ ನಂತರ ಬಿಜೆಪಿಯ ಚಟುವಟಿಕೆಗಳಿಗೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಸಿಗತೊಡಗಿತು.
ಒಂದು‌ ಕಾಲದಲ್ಲಿ ಬಿಜೆಪಿ ನಾಯಕರು ಪತ್ರಿಕಾಗೋಷ್ಟಿ ನಡೆಸಿದರೆ ಪತ್ರಿಕೆಯ ಯಾವುದೋ ಒಂದು‌ ಮೂಲೆಯಲ್ಲಿ ಸುದ್ದಿ ಬಂದರೂ ಇದು ಭಾಗ್ಯ,ಇದು ಭಾಗ್ಯ,ಇದು ಭಾಗ್ಯವಯ್ಯ ಎನ್ನುವ ಸ್ಥಿತಿ‌ ಇತ್ತು.
ಆದರೆ ಹುಬ್ಬಳ್ಳಿಯ ಈದ್ಗಾ ಮೈದಾನದ ಎಪಿಸೋಡಿನ ನಂತರ ಮಾಧ್ಯಮಗಳಲ್ಲಿ ಬಿಜೆಪಿಗೆ ಸಂಬಂಧಿಸಿದ ಸುದ್ದಿಗಳು ಲಕ ಲಕ ಎನ್ನತೊಡಗಿದವು.
2004 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎಪ್ಪತ್ತೊಂಭತ್ತು ಸ್ಥಾನಗಳನ್ನು ಪಡೆದು ಅತ್ಯಂತ ದೊಡ್ಡ ಶಕ್ತಿಯಾಗಿ‌ ಹೊರ ಹೊಮ್ಮಿತಲ್ಲ?ಆ ಸಂದರ್ಭದಲ್ಲಿ ಮಾಧ್ಯಮ‌ ನಿರ್ವಹಣೆಯ ವಿಷಯದಲ್ಲಿ ಪ್ರಕಾಶ್ ಅವರ ಹೆಸರಿಗೆ ಹೊಳಪು ತಗಲಿತು.
ಇದೇ ರೀತಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಾಗಲೇ ಇರಬಹುದು,2008 ರಲ್ಲಿ ಯಡಿಯೂರಪ್ಪ ಅವರ ಸರ್ಕಾರ ಬಂದ ಮೇಲೇ ಇರಬಹುದು.ಮಾಧ್ಯಮ‌ ನಿರ್ವಹಣೆಯ ವಿಷಯ ಬಂದರೆ ಪ್ರಕಾಶ್ ಬಹುತೇಕ ನಾಯಕರ ಪಾಲಿಗೆ ಅನಿವಾರ್ಯವಾಗಿದ್ದರು.
ಆದರೆ ಅನಂತಕುಮಾರ್ ಅವರ ಕಣ್ಮರೆಯ ನಂತರ ಸುಬ್ಬಣ್ಣ,ಶ್ರೀಧರ್,ಪ್ರಕಾಶ್ ಮೂರು ದಿಕ್ಕಿನಲ್ಲಿ ಸರಿದು ಹೋಗಿದ್ದಾರೆ.
ಸುಬ್ಬಣ್ಣ ಅವರಿಗೆ ಪಕ್ಷದಲ್ಲಿ ಅಲುಗಾಡುವ ಕಾಲಿನ ಖುರ್ಚಿ ಕೊಡಲಾಗಿದ್ದರೆ,ಶ್ರೀಧರ್ ತಮ್ಮ ಅನುಭವವನ್ನು ಬಳಸಿಕೊಂಡು ಕೆಲ ನಾಯಕರ ಪರ್ಸನಲ್ ಅಡ್ವೈಸರ್ ಆಗಿದ್ದಾರೆ.
ಪ್ರಕಾಶ್ ಅವರಿಗೂ ಮಲ್ಲೇಶ್ವರದ ಬಿಜೆಪಿ‌ ಕಚೇರಿಗೂ ನಂಟೇ ಇಲ್ಲದಂತಾಗಿ,ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಇನ್ನು ಅನಂತಕುಮಾರ್ ಗ್ಯಾಂಗಿನ‌ ಬ್ರಿಗೇಡಿಯರುಗಳಲ್ಲಿ ಪ್ರಮುಖರಾದ ರಘುನಾಥರಾವ್ ಮಲ್ಕಾಪುರೆ ಸೈಲೆಂಟಾಗಿ ಸೈಡಿಗೆ ಸರಿದಿದ್ದಾರೆ.
ಒಂದು ಬಾರಿ ಎಮ್ಮೆಲ್ಸಿಯಾಗಿದ್ದ ರಘುನಾಥರಾವ್ ಮಲ್ಕಾಪುರೆ 2004 ರಲ್ಲಿ ಅನಂತಕುಮಾರ್ ಅವರ ಬಿ ಪ್ಲಾನ್ ಅನ್ನು ಯಶಸ್ಸಿನ ದಾರಿಯಲ್ಲಿ‌ ಕೊಂಡೊಯ್ದಿದ್ದರು.
ಅಂದರೆ?ಆ ಸಂದರ್ಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿತಲ್ಲ?ಅವತ್ತು ಮೈತ್ರಿ ಸರ್ಕಾರ ರಚಿಸಲು ಮೊದಲ ಟ್ರೈ ಕೊಟ್ಟವರು ಅನಂತಕುಮಾರ್.
ಅವತ್ತು ಈ ಸಂಜೆ‌ ಪತ್ರಿಕೆಯ ಸಂಪಾದಕರಾದ ಟಿ.ವೆಂಕಟೇಶ್ ಅವರ ಮನೆಯಲ್ಲಿ ಏರ್ಪಾಟಾಗಿದ್ದ ಸಭೆಯಲ್ಲಿ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದ ಅನಂತಕುಮಾರ್,ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಬಯಸಿದ್ದರು.
ಆದರೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ದೇವೇಗೌಡರ ಸಹಮತ ಇರದ ಕಾರಣ ಅನಂತಕುಮಾರ್ ಅವರ ಎ ಪ್ಲಾನ್ ವಿಫಲವಾಗಿತ್ತು.
ಯಾವಾಗ ಅನಂತಕುಮಾರ್ ಅವರ ಎ ಪ್ಲಾನ್ ವಿಫಲವಾಯಿತೋ?ಇದಾದ ನಂತರ ಅವರು ಬಿ ಪ್ಲಾನ್ ಅನ್ನು ಕೈಗೆತ್ತಿಕೊಂಡರು.
ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಲು ದೇವೇಗೌಡರು ಬಯಸದೆ ಇರಬಹುದು.ಆದರೆ ಅದೇ‌ ಕಾಲಕ್ಕೆ ತಮಗೆ ಸಿಎಂ ಸೀಟು ಸಿಗುವುದಿಲ್ಲ ಎಂದು ಹತಾಶರಾಗಿದ್ದ ಜೆಡಿಎಸ್ ನಾಯಕ ಸಿದ್ಧರಾಮಯ್ಯ ಅವರ ಜತೆ ಕೈ ಜೋಡಿಸಿ ಸರ್ಕಾರ ಮಾಡುವುದು ಅನಂತಕುಮಾರ್ ಅವರ ಬಿ ಪ್ಲಾನು.
ಅವರ ಈ ಪ್ಲಾನಿಗೆ ಸಾಥ್ ಕೊಟ್ಟವರು ರಘುನಾಥರಾವ್ ಮಲ್ಕಾಪುರೆ.ಅಷ್ಟೊತ್ತಿಗಾಗಲೇ ರಾಜ್ಯ ಕುರುಬರ ಸಂಘದ ಪ್ರಮುಖರಾಗಿದ್ದ ಮಲ್ಕಾಪುರೆ ಸಹಜವಾಗಿಯೇ ಸಿದ್ಧರಾಮಯ್ಯ ಅವರ ಲಿಂಕಿನಲ್ಲಿದ್ದರು.
ಹೀಗಾಗಿ ಸಿದ್ಧರಾಮಯ್ಯ ಅವರನ್ನು ಸಂಪರ್ಕಿಸಿ,ಬೆಂಗಳೂರಿನ ಅಶೋಕಾ ಹೋಟೆಲಿನಲ್ಲಿ ಸಭೆ ನಡೆಯಲು ದಾರಿ ಮಾಡಿ ಕೊಟ್ಟರು.
ಅವತ್ತು ಸಿದ್ಧರಾಮಯ್ಯ ಮತ್ತು ಅನಂತಕುಮಾರ್ ಸಭೆ ಸೇರಿದಾಗ ಅನಂತ್ ಕುಮಾರ್ ಬಣದ ಮಲ್ಕಾಪುರೆ,ತ್ರಿವಿಕ್ರಮ ಜೋಷಿ ಮತ್ತು ಸಿದ್ಧರಾಮಯ್ಯ ಅವರ ಆಪ್ತರಾದ ಯಶೋಧರ ನಾಯ್ಕ್ ಇದ್ದರು.
ಹೇಗಿದ್ದರೂ ಬಿಜೆಪಿಗೆ ಸ್ವಂತದ ಎಪ್ಪತ್ತೊಂಭತ್ತು,ಮಿತ್ರ ಪಕ್ಷದ ಐದು ಸೀಟು ಸೇರಿದಂತೆ ಎಂಭತ್ನಾಲ್ಕು ಮಂದಿಯ ಬಲವಿದೆ.ನೀವು ಜೆಡಿಎಸ್ ನಲ್ಲಿರುವವರ ಪೈಕಿ ಮೂವತ್ತು ಮಂದಿಯನ್ನು ಕರೆತಂದರೆ ಸರ್ಕಾರ ರಚಿಸಬಹುದು ಎಂಬುದು ಅನಂತಕುಮಾರ್ ಪ್ರಪೋಸಲ್ ಆಗಿತ್ತು.
ಆದರೆ ತಕ್ಷಣಕ್ಕೆ ಎಂದರೆ ಇದು ಕಷ್ಟ.ನಾಲ್ಕು ದಿನ ಟೈಮು ಸಿಕ್ಕರೆ ಪ್ರಯತ್ನಿಸಬಹುದು ಎಂಬುದು ಸಿದ್ಧರಾಮಯ್ಯ ಸಿಗ್ನಲ್ಲಾಗಿತ್ತು.
ಸರಿ,ಈ ಮಾತುಕತೆಯ ವಿವರ ತಲುಪಿದಾಗ ದಿಲ್ಲಿಯ ಬಿಜೆಪಿ ನಾಯಕರು:ಇವತ್ತು ಸಂಜೆಯೇ ದಿಲ್ಲಿಗೆ ಹೊರಟು ಬನ್ನಿ ಅಂತ ಅನಂತಕುಮಾರ್ ಅವರಿಗೆ ಬುಲಾವ್ ಕೊಟ್ಟರು.
ಇನ್ನೇನು,ಮುಂದಿನ ಕಾರ್ಯತಂತ್ರ ರೂಪಿಸಲು ಅನಂತಕುಮಾರ್ ದಿಲ್ಲಿಗೆ ಹೋಗಲು ರೆಡಿಯಾಗಬೇಕು ಅನ್ನುವಷ್ಟರಲ್ಲಿ ದೇವೇಗೌಡರ ಕುಸುರಿ ಕೆಲಸ ಯಶಸ್ವಿಯಾಗಿತ್ತು.
ಧರ್ಮಸಿಂಗ್ ಸಿಎಂ,ಸಿದ್ಧರಾಮಯ್ಯ ಡಿಸಿಎಂ ಎಂಬ ಸೂತ್ರದಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರದ ಘೋಷಣೆ ಹೊರಬಿತ್ತು.
ಒಂದು ವೇಳೆ ಅನಂತಕುಮಾರ್ ಅವರ ಬಿ ಪ್ಲಾನ್ ಯಶಸ್ವಿಯಾಗಿದ್ದರೆ ಅವರ ಗ್ಯಾಂಗಿನ ಬಹುತೇಕರು ರಾಜಕೀಯವಾಗಿ ಸೆಟ್ಲ್ ಆಗುತ್ತಿದ್ದರು.ಆದರೆ ಅದು ಸಾಧ್ಯವಾಗಲಿಲ್ಲ.
ಇಷ್ಟಾದರೂ ರಾಷ್ಟ್ರ ರಾಜಕಾರಣದಲ್ಲಿ ಏಗಿದ ಅನಂತಕುಮಾರ್ 2014 ರ ನಂತರ ಫ್ರಂಟ್ ಲೈನಿಗೆ ಬಂದರು.ರಾಜ್ಯದಲ್ಲಿ ತಮ್ಮ ಆಪ್ತರ ಅಸ್ತಿತ್ವ ಮುಂದುವರಿಯುವಂತೆ ನೋಡಿಕೊಂಡರು.
ಆದರೆ _ಯಾವಾಗ ಅವರು ತೀರಿಕೊಂಡರೋ?ಆನಂತರದ ದಿನಗಳಲ್ಲಿ ಅವರ ಬಣದ ಎಲ್ಲರನ್ನೂ ಸೈಡ್ ಲೈನಿಗೆ ತಳ್ಳುವ ಕೆಲಸ ಸಾಂಗೋಪಾಂಗವಾಗಿ ನಡೆಯಿತು.
ಹೀಗಾಗಿ ಒಂದು ಕಾಲದಲ್ಲಿ ಸಂಸತ್ತಿಗೆ ಹೋಗುವ ಕನಸು ಕಾಣುತ್ತಿದ್ದ ಅನಂತ್ ಕುಮಾರ್ ಗ್ಯಾಂಗಿನ ಅಶ್ವಥ್ಥನಾರಾಯಣ್ ಈಗ ಬೆಂಗಳೂರು ಬಿಟ್ಟು ಇನ್ನೆಲ್ಲಿಯದೋ ಜವಾಬ್ದಾರಿ ಹೊತ್ತು ಸುಸ್ತಾಗಿದ್ದಾರೆ.
ಇದೇ ರೀತಿ ಹುಬ್ಬಳ್ಳಿಯ ರಂಗಾಬದ್ಧಿ,ಬೆಂಗಳೂರಿನ ಸದಾಶಿವ,ಹರೀಶ್,ಇಂದ್ರಕುಮಾರ್,ಗುಲ್ಬರ್ಗದ ವಿದ್ಯಾ ಸಾಗರ್ ಕುಲಕರ್ಣಿ,ಬಿಜಾಪುರದ ಶಿವಾನಂದ ಕಲ್ಲೂರು,ಬಳ್ಳಾರಿಯ ಮೃತ್ಯುಂಜಯ ಜಿನಗಾ,ಶಿವಮೊಗ್ಗದ ಗಿರೀಶ್ ಪಟೇಲ್,ಚಿಕ್ಕಬಳ್ಳಾಪುರದಹನುಮಂತರಾಯಪ್ಪ,ಬೆಳಗಾಂನ ಗುರುರಾಜ ಕುಲಕರ್ಣಿ,ರಾಮಚಂದ್ರ ಜೋಷಿ ಅವರಂತಹ ಅನೇಕರು ಫೀಲ್ಡಿನ ಪಕ್ಕ ನಿಲ್ಲುವ ಸ್ಥಿತಿ ಬಂದಿದೆ.
ಇನ್ನು ಶಾಸಕರಾದ ಎ.ರಾಮದಾಸ್,ಅಪ್ಪಚ್ಚುರಂಜನ್,ಅಭಯ ಪಾಟೀಲ್ ಅವರಂತವರು ಅನಂತಕುಮಾರ್ ಬಣದವರು ಎಂಬ ಕಾರಣಕ್ಕಾಗಿ ಮಂತ್ರಿಗಳಾಗಲು ಸಾಧ್ಯವಾಗುತ್ತಿಲ್ಲ.
ಇನ್ನು ಅನಂತಕುಮಾರ್ ಜತೆಗಿದ್ದ ಬಿ.ಸಿ.ನಾಗೇಶ್,ಸುನೀಲ್ ಕುಮಾರ್ ಸಕಾಲಕ್ಕೆ ಸಂತೋಷ್ ಅವರ ಕ್ಯಾಂಪಿಗೆ ನುಗ್ಗಿ ಮಂತ್ರಿಗಳಾದರೆ,ಗೋವಿಂದ ಕಾರಜೋಳ್ ಅವರು ಯಡಿಯೂರಪ್ಪ ಕ್ಯಾಂಪಿಗೆ‌ ನುಗ್ಗಿ‌ ಮಂತ್ರಿ ಮಂಡಲದಲ್ಲಿ ಸೆಟ್ಲಾದರು.
ಇನ್ನು ಅನಂತಕುಮಾರ್ ಅವರ ಪರಮಾಪ್ತ ಎಂಬ ಕಾರಣಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮಂತ್ರಿಗಿರಿ ನಿರಾಕರಿಸಿ ಸ್ಪೀಕರ್ ಹುದ್ದೆಯ ಮೇಲೆ ಕೂರಿಸಲಾಯಿತಾದರೆ,ಇನ್ನು ಕೆಲವರು ಹಿಮ್ಮುಖವಾಗಿ ಚಲಿಸುತ್ತಿದ್ದಾರೆ.
ಇವತ್ತು ಪಕ್ಷದಲ್ಲಿ ದೊಡ್ಡ ಸ್ಥಾನಮಾನ ಪಡೆದ ಸಿ.ಟಿ.ರವಿ ಅವರೂ ಅನಂತ್ ಕುಮಾರ್ ಬಳಗದವರೇ.ಆದರೆ ಟೈಮು ನೋಡಿ ಸಂತೋಷ್ ಬಣಕ್ಕೆ ನುಗ್ಗಿದ್ದರಿಂದ ಅವರು ಸೇಫ್ ಆಗಿದ್ದಾರೆ.
ಹೀಗೆ ಸನ್ನಿವೇಶಕ್ಕೆ ತಕ್ಕಂತೆ ಯಡಿಯೂರಪ್ಪ ಮತ್ತು ಸಂತೋಷ್ ಅವರ ಜತೆ ಸೇರಿಕೊಂಡ ಅನಂತ್ ಕುಮಾರ್ ಬಣದವರು ಬಚಾವಾಗಿದ್ದರೆ,ಸೇರದೆ ಹೋದವರು ಅತಂತ್ರರಾಗಿದ್ದಾರೆ.
ಅಷ್ಟೇ ಅಲ್ಲ,ಎಲ್ಲಿಗೋ ಪಯಣಾ,ಯಾವುದೋ ದಾರಿ,ಏಕಾಂಗಿ ಸಂಚಾರಿ ಅಂತ ನಿಟ್ಟುಸಿರು ಬಿಡುತ್ತಿದ್ದಾರೆ.

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here