ಒಂದು ವಾರ ಲಾಕಡೌನ್ ವಿಸ್ತರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮನವಿ

0
101

ಬೆಳಗಾವಿ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಲಾಕಡೌನ್ ವಿಸ್ತರಿಸುವ ಕುರಿತು ಸಚಿವರು, ತಜ್ಞರು ಹಾಗೂ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ತಿಳಿಸಿದರು.

ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಬೆಳಗಾವಿಯೂ ಸೇರಿದಂತೆ ಎಂಟು ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಗುರುವಾರ (ಜೂ.10) ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ಎಂಟೂ ಜಿಲ್ಲೆಗಳಿಂದ ಲಾಕಡೌನ್ ಮುಂದುವರಿಸಬೇಕು ಎಂಬ ಬೇಡಿಕೆಯಿದೆ. ಲಾಕಡೌನ್ ಮುಂದುವರಿಸುವುದು ಹಾಗೂ ಒಂದು ವೇಳೆ ಲಾಕಡೌನ್ ಮುಂದುವರಿಸಿದರೆ ಯಾವ ರೀತಿಯ ಚಟುವಟಿಕೆಗಳಿಗೆ ವಿನಾಯಿತಿ ನೀಡಬೇಕು ಎಂಬುದರ ಬಗ್ಗೆ ಕೂಲಂಕಷವಾಗಿ ಚರ್ಚಿಸಿದ ಬಳಿಕ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಕೆಲವು ತಾಲೂಕುಗಳಲ್ಲಿ ಲಾಕ್ ಡೌನ್ ಮುಂದುವರಿಸಿ, ಕೆಲವು ತಾಲೂಕುಗಳಲ್ಲಿ ಅನ್ ಲಾಕ್ ಮಾಡುವುದರಿಂದ ಪರಿಸ್ಥಿತಿ ನಿರ್ವಹಣೆ ಹೇಗೆ ನಿರ್ವಹಿಸುತ್ತೀರಿ. ಇದರಿಂದ ಸೋಂಕು ಹರಡುವುದಿಲ್ಲವೇ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಲಾಕಡೌನ್ ಹಿನ್ನೆಲೆಯಲ್ಲಿ ಸೋಂಕು ಪ್ರಮಾಣ ಇಳಿಕೆ ಯಾಗುತ್ತಿದೆ. ಆದರೆ ಬೆಳಗಾವಿ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಸೋಂಕು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ.
ಕೋವಿಡ್ ನಿಯಂತ್ರಣಕ್ಕೆ ಮಾರ್ಗಸೂಚಿ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಗಳಲ್ಲಿ ಕೋವಿಡ್ ನಿರ್ವಹಣೆಗೆ ಎಲ್ಲ ಬಿಗಿಕ್ರಮಗಳನ್ನು ತೆಗೆದುಕೊಳ್ಳಬೇಕು.
ಕೋವಿಡ್ ಪರೀಕ್ಷೆ ಹೆಚ್ಚಿಸುವುದರ ಜತೆಗೆ ಆದಷ್ಟು ಬೇಗನೇ ವರದಿ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಲಸಿಕಾಕರಣ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು. ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಗೊಳಿಸುವುದನ್ನು ಖಾತ್ರಿಪಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು.

ಒಂದು ವಾರ ಲಾಕಡೌನ್ ವಿಸ್ತರಣೆಗೆ ಡಿಸಿಎಂ‌ ಮನವಿ:

ಬೆಳಗಾವಿ ಜಿಲ್ಲೆಯು ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ. ಪಾಸಿಟಿವಿಟಿ ದರ ಶೇ.9 ರ ಆಸುಪಾಸಿನಲ್ಲಿ ಇರುವುದರಿಂದ ಕೆಲವು ಆರ್ಥಿಕ ಚಟುವಟಿಕೆಗಳಿಗೆ ಅನುಮತಿಯೊಂದಿಗೆ ಲಾಕಡೌನ್ ಇನ್ನೊಂದು ವಾರ ಕಾಲ ವಿಸ್ತರಿಸಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಮನವಿ ಮಾಡಿಕೊಂಡರು.

ಆಟೋಮೊಬೈಲ್, ಕಟ್ಟಡ ನಿರ್ಮಾಣದಂತಹ ಪ್ರಮುಖ ಚಟುವಟಿಕೆಗಳಿಗೆ ಅವಕಾಶ ನೀಡುವ ಮೂಲಕ ಇನ್ನೊಂದು ವಾರ ಲಾಕಡೌನ್ ಮುಂದುವರಿಸಬೇಕು.

ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಚುರುಕಿನಿಂದ ನಡೆದಿದೆ. ಜಿಲ್ಲಾ ಮಟ್ಟದಲ್ಲಿ ರೇಷನ್ ಮತ್ತಿತರ ವ್ಯವಸ್ಥೆ ಮಾಡಲಾಗಿದೆ. ಸಂಭವನೀಯ ಮೂರನೇ ಅಲೆಯ ನಿರ್ವಹಣೆಗೆ ಮಕ್ಕಳ ಆಸ್ಪತ್ರೆಯನ್ನು ಕೂಡ ಸಜ್ಜುಗೊಳಿಸಲಾಗುತ್ತಿದೆ ಎಂದು ಸಚಿವ ಕಾರಜೋಳ ವಿವರಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ 135 ತಂಡಗಳನ್ನು ರಚಿಸಿಕೊಂಡು ಇದುವರೆಗೆ 1300 ಕ್ಕೂ ಗ್ರಾಮಗಳಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ರ್ಯಾಟ್) ಮಾಡಲಾಗಿದ್ದು, ಇತರೆ ಪರೀಕ್ಷೆ ಸೇರಿದಂತೆ ಒಟ್ಟಾರೆ ಪಾಸಿಟಿವಿಟಿ ದರ ಶೇ. 8.9 ರಷ್ಟಿದೆ.

ಗಡಿ ಭಾಗದ ದೊಡ್ಡ ಜಿಲ್ಲೆಯಾಗಿರುವುದರಿಂದ ಪಾಸಿಟಿವಿಟಿ ದರ ನಿಯಂತ್ರಣಕ್ಕೆ ಇನ್ನೂ ಒಂದು ವಾರ ಲಾಕಡೌನ್ ಮಾಡಿದರೆ ಮಾತ್ರ ಅನುಕೂಲವಾಗಲಿದೆ. ಆದ್ದರಿಂದ ಲಾಕಡೌನ್ ಮುಂದುವರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿಗಳಿಗೆ ಮನವರಿಕೆಗೆ ಪ್ರಯತ್ನಿಸಿದರು.

ಜಿಲ್ಲೆಯಲ್ಲಿ ಐದು ತಾಲ್ಲೂಕು 5 ಕ್ಕಿಂತ ಕಡಿಮೆ ಇದೆ.
ಇನ್ನುಳಿದ ತಾಲ್ಲೂಕುಗಳಲ್ಲಿ ಶೇ.10 ಹಾಗೂ ಅದಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ದರ ಇದೆ.
ಇನ್ನೊಂದು ವಾರ ಅವಕಾಶ ಸಿಕ್ಕರೆ ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆಗೊಳಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ರ್ಯಾಟ್ ನಲ್ಲಿ ಪಾಸಿಟಿವಿಟಿ ದರ ಶೇ.4 ಕ್ಕಿಂತ ಕಡಿಮೆಯಿದೆ. ಆದರೆ ಆರ್.ಟಿ.-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿ ಕಂಡುಬಂದಿದೆ.
ಇನ್ನೊಂದು ವಾರ ಕಾಲಾವಕಾಶ ಸಿಕ್ಕರೆ ಪಾಸಿಟಿವಿಟಿ ದರ ಕಡಿಮೆಗೊಳಿಸಲು ಸಾಧ್ಯವಾಗಲಿದೆ ಎಂದರು.

ಬೆಳಗಾವಿ, ಮೈಸೂರು, ಮಂಡ್ಯ, ದಕ್ಷಿಣ ಕನ್ನಡ ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಕೋವಿಡ್ ನಿರ್ವಹಣೆ ಕುರಿತು ವಿಡಿಯೋ ಸಂವಾದ ಮೂಲಕ ಮುಖ್ಯಮಂತ್ರಿಗಳು ಮಾಹಿತಿಯನ್ನು ಪಡೆದುಕೊಂಡರು.

ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಸಿಇಓ ಡಾ.ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬಿಮ್ಸ್ ನಿರ್ದೇಶಕ ಡಾ.ಕುಲಕರ್ಣಿ, ಪಾಲಿಕೆಯ ಆಯುಕ್ತ ಜಗದೀಶ್, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here