ಅಕ್ರಮ ಗೋವು ಸಾಗಾಟವಾಗದಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಸೂಚನೆ

0
163

ಹಾಸನ ಸೆ.07 :- ಗೋಹತ್ಯೆ ನಿಷೇಧ ಕಾಯ್ದೆಯಡಿ ಜಿಲ್ಲೆಯಲ್ಲಿ ಗೋವುಗಳನ್ನು ಅಕ್ರಮ ಸಾಗಾಟ ಮಾಡುವುದರ ಬಗ್ಗೆ ಹೆಚ್ಚಿನ ನಿಗಾವಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಜಿಲ್ಲಾ ಪ್ರಾಣಿ ದಯಾ ಸಂಘ ಸಭೆಯನ್ನು ನಡೆಸಿ ಮಾತನಾಡಿದ ಅವರು ಗೋವುಗಳನ್ನು ಎ.ಪಿ.ಎಂ.ಸಿ ಸಂತೆಯ ಮೂಲಕವೇ ಮಾರಾಟವಾಗಬೇಕು ಹಾಗೂ ಕಸಾಯಿ ಖಾನೆಗೆ ಹೋಗದಂತೆ ಕಟ್ಟುನಿಟ್ಟಿನ ಎಚ್ಚರವಹಿಸಬೇಕು ಎಂದರು.

ಪ್ರತಿ ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸಲು ಸರ್ಕಾರ ಆದೇಶಿಸಿದ್ದು, ಈ ಹಿನ್ನಲೆಯಲ್ಲಿ ಸರ್ಕಾರ ವತಿಯಿಂದಲೇ ಗೋಶಾಲೆ ಪ್ರಾರಂಭಿಸುವುದು ಅಥವಾ ಸರ್ಕಾರೇತರ ಸಂಸ್ಥೆಯೊಂದಿಗೆ ಪಿ.ಪಿ.ಪಿ ಮಾದರಿಯಲ್ಲಿ ನಿರ್ಮಾಣ ಮಾಡಿಕೊಂಡು ನಿರ್ವಹಿಸುವ ಕುರಿತು ಚರ್ಚಿಸಲಾಯಿತು.

ಹಾಲಿ ಸರ್ಕಾರದಿಂದ ಧನಸಹಾಯ ಪಡೆಯುತ್ತಿರುವ ಗೋಶಾಲೆಗಳು ಮುಂದೆ ಬಂದಲ್ಲಿ ಅವರ ಸಾಮಥ್ರ್ಯ ಪರಿಶೀಲಿಸಿ ನಂತರ ಗೋಶಾಲೆ ನಿರ್ಮಾಣಕ್ಕೆ ನಿರ್ಧರಿಸಲಾಗುವುದು ಎಂದು ಸಭೆಯಲ್ಲಿ ಸೂಚಿಸಲಾಯಿತು.

ಗೋಶಾಲೆಗಳನ್ನು ಸ್ಥಾಪಿಸುವಾಗ ಬಂಡವಾಳ ವೆಚ್ಚದೊಂದಿಗೆ ಜೈವಿಕ ಬೇಲಿ ನಿರ್ಮಾಣ, ದನದ ಕೊಟ್ಟಿಗೆ, ಕೃಷಿಹೊಂಡ, ಮೇವು ಉತ್ಪಾದನೆ ಇತ್ಯಾದಿ ಯೋಜನೆಗಳನ್ನು ಹಾಗೂ ಚಿಕ್ಕ ಮರಗಳು ಮತ್ತು ಪೊದೆಗಳು ಸೇರಿದಂತೆ ಮೇವನ್ನು ನಿರಂತರವಾಗಿ ಬೆಳೆಯುವಂತೆ ಯೋಜಿಸಲಾಗುವುದು ಎಂದರಲ್ಲದೆ ಗೋಶಾಲೆಯಲ್ಲಿ 5 ಸಾವಿರ ಹಸುಗಳನ್ನು ಸಾಕುವಂತಹ ಸಾಮರ್ಥವುಳ್ಳ ಸರ್ಕಾರರೇತರ ಸಂಸ್ಥೆಗೆ ವಹಿಸಲಾಗುವುದು ಎಂದರು.

ಶ್ರೀ ಭಗವಾನ್ ಮಹಾವೀರ್ ಗೋಶಾಲೆ ಟ್ರಸ್ಟ್ ಮತ್ತು ಕಸ್ತೂರ ಬಾ ಗಾಂಧಿ ಸ್ಮಾರಕ ಸಂಸ್ಥೆ ಇವರುಗಳಿಗೆ ಸಹಾಯಧನ ಮಂಜೂರಾಗಿರುವ ಕುರಿತು ಚರ್ಚೆ ನಡೆಸಲಾಯಿತು.

ಶ್ರೀ ಭಗವಾನ್ ಮಹಾವೀರ್ ಗೋಶಾಲೆಗೆ ನೀರಿನ ಸಮಸ್ಯೆಯಾಗಿದ್ದು, ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ. ರಮೇಶ್, ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯರುಗಳು ಹಾಗೂ ಗೋಶಾಲೆ ಸದಸ್ಯರುಗಳು ಹಾಜರಿದ್ದರು.

LEAVE A REPLY

Please enter your comment!
Please enter your name here