ಅಂತರ್ಜಲವನ್ನು ವೃದ್ಧಿಸಿ, ಸಂರಕ್ಷಿಸಲು ಅಟಲ್ ಭೂಜಲ ಯೋಜನೆ ಜಾರಿ –ಜೆ.ಸಿ.ಮಾಧುಸ್ವಾಮಿ

0
166

ಕೋಲಾರ : ಅಂತರ್ಜಲವನ್ನು ವೃದ್ಧಿಸಿ, ನೀರನ್ನು ಸಂರಕ್ಷಿಸಲು ಅಟಲ್ ಭೂಜಲ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಮಾನ್ಯ ಪ್ರಧಾನಮಂತ್ರಿಗಳು ಈ ಯೋಜನೆಗೆ ಚಾಲನೆ ನೀಡಿದ್ದಾರೆ ಎಂದು ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ, ಎಸ್.ಪಿ.ಎಮ್.ಯು. ಅಟಲ್ ಭೂಜಲ ಯೋಜನೆ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ್ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸುಸ್ಥಿರ ಅಂತರ್ಜಲ ನಿರ್ವಹಣೆಗಾಗಿ ಅಟಲ್ ಭೂಜಲ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟವು 1000 ದಿಂದ 1200 ಅಡಿಗಳಿಗೆ ಇಳಿದಿದೆ. ಕೋಲಾರ ಜಿಲ್ಲೆಯಲ್ಲಿಯೂ ಇದೇ ಪರಿಸ್ಥಿತಿ ಇದೆ. ಅಂತರ್ಜಲವನ್ನು 200 ರಿಂದ 300 ಅಡಿಗೆ ತರುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಅಂತರ್ಜಲವನ್ನು ಹೆಚ್ಚಿಸಲು ಯಾವ ಕಾಮಗಾರಿಗಳನ್ನು ಮಾಡಬೇಕು ಎಂಬುದನ್ನು ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡಲಾಗುವುದು. ಯೋಜನೆಯನ್ನು 3 ಹಂತಗಳಲ್ಲಿ ಅನುಷ್ಠಾನ ಮಾಡಲಾಗುವುದು. ಮೊದಲ ಹಂತದಲ್ಲಿ ನೀರಿನ ಲಭ್ಯತೆಯ ಬಗ್ಗೆ ಅಧ್ಯಯನ ನಡೆಸಿ ಅವಶ್ಯಕತೆಗೆ ಅನುಗುಣವಾಗಿ ಒಳಸುವಂತೆ ಮಾಡುವುದು. ಎರಡನೇ ಹಂತದಲ್ಲಿ ಕೃಷಿ ಹೊಂಡ, ಚೆಕ್ ಡ್ಯಾಂ, ಕುಂಟೆಗಳು, ನಿರ್ಮಾಣ ಮಾಡಿ ಸಂರಕ್ಷಣೆ ಮಾಡುವುದು. ನೀರಿನ ಆವಿ ಪ್ರಮಾಣ ತಗ್ಗಿಸುವುದು ಹಾಗೂ ವಾತಾವರಣದಲ್ಲಿ ತೇವಾಂಶವನ್ನು ಕಾಪಾಡುವುದು. ಮೂರನೆಯದಾಗಿ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ನೀರಿನ ಬಳಕೆ ಕಡಿಮೆ ಮಾಡಬಹುದಾಗಿದೆ ಎಂದರು.

ಹನಿ ನೀರಾವರಿ ಪದ್ದತಿಗಳ ಅಳವಡಿಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಎತ್ತಿನ ಹೊಳೆ ಯೋಜನೆಯ ಮೂಲಕ 24 ಟಿ.ಎಂ.ಸಿ ನೀರನ್ನು ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಒದಗಿಸಲಾಗುವುದು. ಕೃಷ್ಣ ಜಲಾನಯನ ಪ್ರದೇಶಕ್ಕೆ ಹರಿಯುವ ವ್ಯರ್ಥ ನೀರನ್ನು ತಡೆದು ಇಂಗುವಂತೆ ಮಾಡುವ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್. ಮುನಿಸ್ವಾಮಿ ರವರು ಮಾತನಾಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ನೀರಿಗಾಗಿ ತುಂಬಾ ಕಷ್ಟ ಪಡುತ್ತಿದ್ದಾರೆ. ಕೆಲವು ಕಡೆ ಕೆ. ಸಿ. ವ್ಯಾಲಿ ನೀರು ಹರಿಸಿರುವುದರಿಂದ ಸ್ವಲ್ಪ ಮಟ್ಟಿಗೆ ಅಂರ್ತಜಲ ವೃದ್ಧಿಸಿದೆ. ಕೆರೆ ಕುಂಟೆ ಕಾಲುವೆಗಳನ್ನು ಸಂರಕ್ಷಿಸಿಬೇಕು. ಚೆಕ್ ಡ್ಯಾಮ್ ನಿರ್ಮಿಸಿ ನೀರು ಹರಿಯದಂತೆ ತಡೆದು ಅಂತರ್ಜಲ ವೃದ್ಧಿಸಬೇಕು. ರೈತರಿಗೆ ಅನುಕೂಲವಾಗುವಂತೆ ಅವರ ಆದಾಯ ದ್ವಿಗುಣಗೊಳಿಸುವ ಕಾರ್ಯ ಎಲ್ಲರೂ ಒಟ್ಟಾಗಿ ಮಾಡಬೇಕು. ಕೃಷಿಯಲ್ಲಿ ಕೋಲಾರ ಜಿಲ್ಲೆ ಇಸ್ರೇಲ್‍ಗೆ ಮಾದರಿಯಾಗುವಂತೆ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಹರಿಸುವ ಎತ್ತಿನ ಹೊಳೆ ಯೋಜನೆಯ ಎಲ್ಲಾ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಆರ್. ರಮೇಶ್ ಕುಮಾರ್ ರವರು ಮಾತನಾಡಿ ಸರ್ಕಾರ ನೀರನ್ನು ಖನಿಜ ಎಂದು ಪರಿಗಣಿಸಿ ಘೋಷಣೆ ಮಾಡಬೇಕು. ಹನಿ ನೀರಾವರಿ ಪದ್ದತಿಯನ್ನು ಕಡ್ಡಾಯ ಮಾಡಬೇಕು. ಎಲ್ಲಾ ಕಲ್ಯಾಣಿಗಳನ್ನು ಪುರ್ನಜೀವಗೊಳಿಸಬೇಕು. ಕೆರೆ, ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಬೇಕು. ನೀಲಗಿರಿ ಅಕೇಶಿಯಾ, ಬಳ್ಳಾರಿ ಜಾಲಿ, ಕರಿ ಜಾಲಿ, ಪಾರ್ಥೇನಿಯಂ ಗಿಡಗಳನ್ನು ತೆಗಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಗ್ರಾಮ ಸಭೆಯಲ್ಲಿ ಗ್ರಾಮದ ಹಿತ ಇರಬೇಕು ಪಾರದರ್ಶಕವಾಗಿ ನೀರನ್ನು ತಡೆದು ಅಂತರ್ಜಲ ವೃದ್ಧಿಸಿ ರೈತರಿಗೆ ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನೀರು ಇರುವಲ್ಲಿ ನೀರು ವ್ಯರ್ಥ ಮಾಡುತ್ತೇವೆ, ನೀರು ಇಲ್ಲದ ಕಡೆ ನೀರಿಗೆ ಪರದಾಡುತ್ತೇವೆ ಎಂದು ಅವರು ತಿಳಿಸಿದರು.
ಕೆ.ಜಿ.ಫ್ ವಿಧಾನಸಭಾ ಕ್ಷೇತ್ರದ ಶಾಸಕಾರದ ರೂಪ ಕಲಾ ಶಶಿಧರ್ ರವರು ಮಾತನಾಡಿ ಜಿಲ್ಲೆಯ ರೈತರು ಕೃಷಿ ಮತ್ತು ಹೈನುಗಾರಿಕೆಯನ್ನು ನಂಬಿಕೊಂಡಿದ್ದಾರೆ. ಬಹಳ ವರ್ಷಗಳಿಂದ ನೀರು ಬರುತ್ತದ್ದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಅವರಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕು ಭೂ ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ರೈತರು ಒಳ್ಳೆಯ ಜೀವನ ಕಟ್ಟಿಕೊಳ್ಳುವ ಸನ್ನಿವೇಶ ನಿರ್ಮಿಸಬೇಕು ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯರಾದ ವೈ. ಎ. ನಾರಾಯಣಸ್ವಾಮಿ ರವರು ಮಾತನಾಡಿ ರೈತರ ಜೀವನ ಹಸನಾಗಿಸಬೇಕು. ಅಂತರ್ಜಾಲ ಹೆಚ್ಚಿಸಿ ಜಿಲ್ಲೆಯ ಜನತೆಯ ಆಶಯ ಈಡೇರಿಸಬೇಕು. ಜಿಲ್ಲೆಯ ರೈತರು ಸುಮಾರು 1400 ಅಡಿಗಳ ಆಳದಿಂದ ನೀರು ತಂದು ಬೆಳೆ ಬೆಳೆದು ಬದಕು ಕಟ್ಟಿ ತೋರಿಸಿದ್ದಾರೆ. ನೀರನ್ನು ತುಪ್ಪದಂತೆ ಬಳಸಬೇಕು ಜೇನಿನಂತೆ ಸವಿಯಬೇಕು ಎಂದ ಅವರು ಕೆ ಸಿ ವ್ಯಾಲಿ 2ನೇ ಹಂತದ ನೀರನ್ನು ಶೀಘ್ರವಾಗಿ ಜಿಲ್ಲೆಗೆ ಹರಿಸಿ ಎಂದು ಸಚಿವರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ನಾಗೇಶ್, ವಿಧಾನಪರಿಷತ್ ಸದಸ್ಯರಾದ ಗೋವಿಂದರಾಜ್, ನಜೀರ್ ಅಹಮ್ಮದ್, ಸಣ್ಣ ನೀರಾವರಿ ಮತ್ತು ಅಂರ್ತಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಮೃತ್ಯಂಜಯ, ಜಿಲ್ಲಾಧಿಕಾರಿಗಳಾದ ಡಾ|| ಆರ್. ಸೆಲ್ವಮಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಾದ ಎನ್.ಎಂ.ನಾಗರಾಜ್, ತಹಶೀಲ್ದಾರರಾದ ಶೋಭಿತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here